ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಕಳೆದ ಐವತ್ತಾರು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಿರೀಟ ವೇಷ ಮತ್ತು ನಾಟಕೀಯ ವೇಷಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಗುರುತಿಸಿ ಗೌರವಿಸಿದ್ದಾರೆ. ಆಳಂಗ, ಸ್ವರಭಾರ, ಪಾತ್ರದ ಸ್ವಭಾವವನ್ನು ಅರಿತು ಅಭಿನಯಿಸುವ ಸಾಮರ್ಥ್ಯ, ಕನ್ನಡ ಮತ್ತು ತುಳು ಭಾಷೆಗಳ ಮೇಲಿರುವ ಹಿಡಿತ, ಅಧ್ಯಯನ, ಇವೆಲ್ಲವೂ ಕೊಳ್ತಿಗೆ ನಾರಾಯಣ ಗೌಡರನ್ನು ಒಬ್ಬ ಉತ್ತಮ ಕಲಾವಿದನನ್ನಾಗಿ ರೂಪಿಸಿತು. ಹಿರಿಯ ಶ್ರೇಷ್ಠ ಕಲಾವಿದರ ಒಡನಾಟವೂ ಇವರಿಗೆ ಸಿಕ್ಕಿತ್ತು. ಇವರು ಪುರಾಣ ಪ್ರಸಂಗಗಳಲ್ಲದೆ, ತುಳು ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳಲ್ಲಿ ಅಭಿನಯಿಸಿದ ಅನುಭವೀ ಕಲಾವಿದರು. ಪೀಠಿಕೆ ವೇಷಗಳನ್ನೂ ಸೊಗಸಾಗಿ ಮಾಡಬಲ್ಲರು.
ಎದುರು ವೇಷಗಳನ್ನೂ ಮಾಡಬಲ್ಲರು. ಮಾತುಗಾರಿಕೆ ಮತ್ತು ನಾಟ್ಯಗಳೆಂಬ ಉಭಯ ವಿಭಾಗಗಳಲ್ಲೂ ಹಿಡಿತವನ್ನು ಹೊಂದಿದ ಕಲಾವಿದರಿವರು. ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ನಾಯಕ ಮತ್ತು ಪ್ರತಿನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಾರನ್ನೂ ಅನುಕರಿಸದೆ, ನೋಡಿ, ಕೇಳಿ ತಿಳಿದು, ಪುರಾಣ ಮತ್ತು ತುಳು ಪ್ರಸಂಗಗಳ ಸವ್ಯಸಾಚಿ ಕೊಳ್ತಿಗೆ ಶ್ರೀ ನಾರಾಯಣ ಗೌಡರು ಪ್ರತಿಭಾ ಸಾಮರ್ಥ್ಯದಿಂದ ತನ್ನದೇ ಶೈಲಿಯಲ್ಲಿ ವೇಷಗಳನ್ನು ಚಿತ್ರಿಸುತ್ತಾರೆ. ಮೊದಲು ಪಾತ್ರದ ಸ್ವಭಾವವನ್ನು ಅರಿತು, ಸಿದ್ಧತೆಯೊಂದಿಗೆ ಅಭಿನಯಿಸುವ ರೂಢಿಯನ್ನು ಎಳವೆಯಿಂದಲೇ ಮಾಡಿಕೊಂಡು ಬಂದವರು. ಆದುದರಿಂದಲೇ ಕೊಳ್ತಿಗೆಯವರು ನಿರ್ವಹಿಸುವ ಪ್ರತಿಯೊಂದು ಪಾತ್ರಗಳೂ ರಂಗದಲ್ಲಿ ಸೋಲದೆ ಗೆಲ್ಲುತ್ತವೆ.
ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಶ್ರೀ ನಾರಾಯಣ ಗೌಡರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸಮೀಪದ ಕೊಳ್ತಿಗೆ. 1947ನೇ ಇಸವಿ ಜುಲೈ 18ರಂದು ಜನನ. ತಂದೆ ಕೊಳ್ತಿಗೆ ಶ್ರೀ ತಿಮ್ಮಪ್ಪ ಗೌಡ. ತಾಯಿ ಶ್ರೀಮತಿ ಕಮಲ. ಇವರದು ಕೃಷಿ ಕುಟುಂಬ. ತಿಮ್ಮಪ್ಪ ಗೌಡರು ಕಲಾವಿದರಲ್ಲದಿದ್ದರೂ ಯಕ್ಷಗಾನಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುವ ಹವ್ಯಾಸವಿತ್ತು. ಅಲ್ಲದೆ ಮನೆಯಲ್ಲಿ ನವರಾತ್ರಿಯ ಎಲ್ಲಾ ದಿನಗಳಲ್ಲಿ ಶ್ರೀ ದೇವಿಯನ್ನು ಆರಾಧಿಸಿ, ಕೊನೆಯ ದಿನ ರಾತ್ರೆಯಿಂದ ಬೆಳಗಿನ ತನಕವೂ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಅರ್ಥಧಾರಿಗಳು ಕೇವಲ ಮಾತಿನ ಮೂಲಕವೇ ಪಾತ್ರಗಳನ್ನು ಚಿತ್ರಿಸುವ ರೀತಿಯನ್ನು ನಾರಾಯಣ ಗೌಡರು ಕುತೂಹಲದಿಂದ ನೋಡುತ್ತಿದ್ದರು.
ಸಂಭಾಷಣೆಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಆಗಲೇ ಇವರು ಕಲೆಯತ್ತ ಆಕರ್ಷಿತರಾಗಿದ್ದರು. ಆದರೆ ಮಕ್ಕಳು ಯಕ್ಷಗಾನ ಕಲಾವಿದರಾಗುವುದು ತಿಮ್ಮಪ್ಪ ಗೌಡರಿಗೆ ಇಷ್ಟವಿರಲಿಲ್ಲ. ಆ ವಿಚಾರದಲ್ಲಿ ಆಕ್ಷೇಪಿಸುತ್ತಿದ್ದರು. ಹಾಗೆಂದು ಯಕ್ಷಗಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಮನೆಯವರ ಸಮ್ಮತಿಯಿಲ್ಲದಿದ್ದರೂ, ಕೊಳ್ತಿಗೆ ನಾರಾಯಣ ಗೌಡರು ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿದ್ದರು. ಸಮಾಜವು, ಅವರನ್ನು ಯಕ್ಷಗಾನ ಕಲಾವಿದ ಎಂದೇ ಗುರುತಿಸಿತು. ಗೌರವಿಸಿತು. ಬಹುಷಃ ಕಲಾಮಾತೆಯ ನಿರ್ಣಯವೇ ಇದಕ್ಕೆ ಕಾರಣವಿರಬೇಕು. ಕೊಳ್ತಿಗೆ ಶ್ರೀ ನಾರಾಯಣ ಗೌಡ ಅವರು ಓದಿದ್ದು 7ನೇ ತರಗತಿಯ ವರೇಗೆ. ನೆಟ್ಟಾರು ಶಾಲೆಯಲ್ಲಿ.
ನೆಟ್ಟಾರು ಪರಿಸರದಲ್ಲಿ ಕೂಡ್ಲು ಮೇಳ ಮತ್ತು ಬಳ್ಳಂಬೆಟ್ಟು ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಅದನ್ನು ಬೆಳಗಿನ ವರೆಗೂ ನೋಡುತ್ತಿದ್ದರು. 6ನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನದಲ್ಲಿ ಮೊದಲ ಬಾರಿಗೆ ವೇಷ ಮಾಡುವ ಅವಕಾಶ ಒದಗಿ ಬಂದಿತ್ತು. ಶಾಲಾ ವಾರ್ಷಿಕೋತ್ಸವದ ಸಂದರ್ಭ. ಅಧ್ಯಾಪಕರಾದ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಶಾಲಾ ಮಕ್ಕಳಿಂದಲೇ ಪ್ರದರ್ಶನ ನಡೆಯಬೇಕೆಂದು ನಿರ್ಣಯಿಸಿದ್ದರು. ಅವರು ಕಲಾಸಕ್ತರಾಗಿ ಭಾಗವತಿಕೆಯನ್ನೂ ಮಾಡುತ್ತಿದ್ದರು. ಮಕ್ಕಳ ತಂಡದ ಪ್ರದರ್ಶನಕ್ಕೆ ತರಬೇತಿಯನ್ನು ನೀಡಲು, ಕರ್ನಾಟಕ ಮೇಳದ ತರುಣ ಕಲಾವಿದರಾಗಿದ್ದ ಬೆಳ್ಳಾರೆ ವಿಶ್ವನಾಥ ರೈಗಳನ್ನು ಕರೆಸಿಕೊಂಡಿದ್ದರು. ಬೆಳ್ಳಾರೆಯವರ ನಟನಾ ಸಾಮರ್ಥ್ಯದ ಅರಿವಿದ್ದ ಅಧ್ಯಾಪಕರು ತರಬೇತಿಗೆ ಅವರನ್ನೇ ಆಯ್ಕೆ ಮಾಡಿದ್ದರು.
ಕೇವಲ ಎರಡು ತಿಂಗಳ ತರಬೇತಿ. ‘ಮಾಗಧ ವಧೆ’ ಪ್ರಸಂಗ. ಅಧ್ಯಾಪಕ ಗಿಲ್ಕಿಂಜ ಶ್ರೀ ರಾಮಕೃಷ್ಣ ಭಟ್ಟರು ಮತ್ತು ಶ್ರೀ ಬೆಳ್ಳಾರೆ ವಿಶ್ವನಾಥ ರೈಗಳು ಬಾಲಕನಾದ ಕೊಳ್ತಿಗೆಯವರಿಗೆ ಮಾಗಧನ ಪಾತ್ರವನ್ನು ನೀಡಿದ್ದರು. ಜರಾಸಂಧನಾಗಿ ರಂಗಪ್ರವೇಶ. ಅವರ ನಿರ್ವಹಣೆಗೆ ಪ್ರೇಕ್ಷಕರಿಂದ ಪ್ರಶಂಸೆಯೂ ಸಿಕ್ಕಿತ್ತು. ಈ ಕಾರಣದಿಂದಲೇ ಕಲಾಸಕ್ತಿಯೂ ಕೆರಳಿತು. ‘‘ಯಕ್ಷಗಾನ ನಾಟ್ಯದ ವಿಚಾರದಲ್ಲಿ ಬೆಳ್ಳಾರೆ ವಿಶ್ವನಾಥ ರೈಗಳಿಂದ ಎರಡು ತಿಂಗಳು ಕಲಿತುದೇ ತನ್ನ ಕಲಾ ಬದುಕಿಗೆ ಮೂಲ ಬಂಡವಾಳ’’ ಎಂದು ಕೊಳ್ತಿಗೆಯವರು ಹೇಳುತ್ತಾರೆ. ಶಾಲಾ ಕಲಿಕೆಯತ್ತ ಗಮನವೂ ಕಡಿಮೆಯಾಗಿತ್ತು. ಕಾರಣ ಯಕ್ಷಗಾನ ಎಂಬ ಶ್ರೇಷ್ಠ ಕಲೆಯ ಸೆಳೆತ. ಮನೆಯವರ ಒತ್ತಾಯಕ್ಕೆ 7ನೇ ತರಗತಿ ಮುಗಿಸಿದ್ದರು. ಬೆಳ್ಳಾರೆ ಶಾಲೆಯಲ್ಲಿ 8ನೇ ತರಗತಿಯಲ್ಲಿ ಮೂರು ತಿಂಗಳು ಓದಿ, ಅಧ್ಯಾಪಕರಿಗೆ, ಮನೆಯವರಿಗೆ ಹೇಳದೆಯೇ, ಉಟ್ಟ ಬಟ್ಟೆಯಲ್ಲಿಯೇ ತೆರಳಿದ್ದರು. ನಾಲ್ಕು ತಿಂಗಳ ಕಾಲ ದೂರದ ನೆಂಟರ ಮನೆಯಲ್ಲಿಯೇ ಉಳಿದಿದ್ದರು.
ಈ ಸಂದರ್ಭಗಳಲ್ಲಿ ಬಳ್ಳಂಬೆಟ್ಟು ಮೇಳದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಮನೆಯವರು ಇವರನ್ನು ಹುಡುಕುತ್ತಿದ್ದರು. ಮೇಳದ ತಿರುಗಾಟವನ್ನು ಮಾಡಿ ಕಲಾವಿದನಾಗಿಯೇ ಬದುಕುವ ದೃಢ ನಿರ್ಣಯವನ್ನು ಕೊಳ್ತಿಗೆಯವರು ಕೈಗೊಂಡಿದ್ದರು. ಕೊಳ್ತಿಗೆ ನಾರಾಯಣ ಗೌಡರ ಮೊದಲ ತಿರುಗಾಟ ಬಳ್ಳಂಬೆಟ್ಟು ಮೇಳದಲ್ಲಿ. 1961ರ ಸುಮಾರಿಗೆ ಇರಬಹುದು. ಮೇಳದ ಸಂಚಾಲಕತ್ವ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳದ್ದು. ಮೇಳದ ನೇಪಥ್ಯದ ಕೆಲಸದ ಜತೆಗೆ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಿದ್ದರು. ದಿನಪತ್ರಿಕೆ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವೂ ಇತ್ತು. ‘‘ಯಕ್ಷಗಾನ ಕಲಾವಿದನಿಗೆ ಓದು, ಕಲಿಕೆ ಅತ್ಯಗತ್ಯ. ಭಾಷಾಶುದ್ಧಿ ಮತ್ತು ಉತ್ತಮ ವಿಚಾರಗಳ ಸಂಗ್ರಹಕ್ಕೆ ಇದರಿಂದ ಅನುಕೂಲವಾಗುತ್ತದೆ. ಪಾತ್ರಗಳನ್ನು ನಿರ್ವಹಿಸುವಲ್ಲಿ ಉಚ್ಛಾರ ದೋಷವಿರಬಾರದು.’’ ಕೊಳ್ತಿಗೆಯವರ ಈ ಮಾತುಗಳಲ್ಲಿ ಕಲಿಕಾಸಕ್ತರಿಗೆ ಸಂದೇಶವಿದೆ.
ತಮ್ಮ ಕೆಲಸವಾದ ಮೇಲೆ ನಿದ್ದೆ ಮಾಡದೆ ಹಿರಿಯ ಕಲಾವಿದರ ವೇಷಗಳನ್ನು ನೋಡುತ್ತಿದ್ದರು. ಆದಕಾರಣ 2ನೇ ವರ್ಷವೇ ಪೋಷಕ ಪಾತ್ರಗಳನ್ನು ಮಾಡುವಷ್ಟು ಬೆಳೆಯುವ ಹಾಗಾಗಿತ್ತು. ಕಿರೀಟ ವೇಷಗಳತ್ತ ಒಲವು ಮೂಡಿತ್ತು. ಬಳ್ಳಂಬೆಟ್ಟು ಮೇಳದಲ್ಲಿ ಮೂರು ವರ್ಷಗಳ ತಿರುಗಾಟ. ಬಳಿಕ ಶೀನಪ್ಪ ಭಂಡಾರಿಗಳು ಆದಿ ಸುಬ್ರಹ್ಮಣ್ಯ ಮೇಳದ ಸಂಚಾಲಕರಾದಾಗ ಸದ್ರಿ ಮೇಳದಲ್ಲಿ ಹತ್ತು ವರ್ಷಗಳ ತಿರುಗಾಟ. ಈ ಸಮಯಗಳಲ್ಲಿ ಅವಕಾಶಗಳೂ ಸಿಕ್ಕಿತ್ತು. ಕಲಾವಿದನಾಗಿ ಬೆಳೆಯಲು ಕೊಳ್ತಿಗೆಯವರಿಗೆ ಇದರಿಂದ ಅನುಕೂಲವಾಗಿತ್ತು. ‘‘ಆಗ ಕಲಾವಿದರ ಸಂಖ್ಯೆಯೂ ಕಡಿಮೆಯಿತ್ತು. ಪ್ರತಿಯೊಬ್ಬ ಕಲಾವಿದನೂ ಬೆಳಗಿನ ವರೇಗೆ ವೇಷಗಳನ್ನು ಮಾಡಬೇಕಾಗಿತ್ತು. ಪ್ರದರ್ಶನದ ಗೆಲುವಿಗಾಗಿ ಹಿರಿಯ ಕಲಾವಿದರು ಕಿರಿಯರಿಗೆ ಹೇಳಿಕೊಟ್ಟು ವೇಷ ಮಾಡಿಸುತ್ತಿದ್ದರು.
ಶೀನಪ್ಪ ಭಂಡಾರಿಗಳ ನೇತೃತ್ವದ ಆದಿ ಸುಬ್ರಹ್ಮಣ್ಯ ಮೇಳವು ಕಲಾವಿದರನ್ನು ಸಿದ್ದಗೊಳಿಸುವ ಕಾರ್ಖಾನೆಯಾಗಿತ್ತು’’. ಇದು ಕೊಳ್ತಿಗೆಯವರು ಅನುಭವಿಸಿ ಆಡುವ ಮಾತುಗಳು. ಆರಂಭದ ವರ್ಷಗಳಲ್ಲಿ ಕಳಿಯೂರು ಶ್ರೀ ನಾರಾಯಣ ಆಚಾರ್ಯ ಭಾಗವತರಾಗಿದ್ದರು. ನಂತರದ ವರ್ಷಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ಒಡನಾಟವೂ ದೊರೆತಿತ್ತು. ಉಜಿರೆ ಸುಂದರ ರೈ, ತೊಕ್ಕೊಟ್ಟು ಲೋಕಯ್ಯ, ಪುತ್ರಕಳ ತಿಮ್ಮಪ್ಪ ರೈ, ಬಂಗ ಭಂಡಾರಿ ಮೊದಲಾದ ಕಲಾವಿದರ ಒಡನಾಟವೂ ಸಿಕ್ಕಿತ್ತು. ಪೀಠಿಕೆ ವೇಷಧಾರಿಯಾಗಿ ಆಗಲೇ ಕೊಳ್ತಿಗೆಯವರು ಗುರುತಿಸಿಕೊಂಡಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಅರ್ಜುನನ ಪಾತ್ರವನ್ನು ಬೆಳಗಿನ ವರೆಗೂ ಒಬ್ಬನೇ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು.
ಅರ್ಜುನ, ದೇವೇಂದ್ರ, ಶತ್ರುಘ್ನ, ಮಕರಾಕ್ಷ ಮೊದಲಾದ ಪಾತ್ರಗಳನ್ನು ಮಾಡಿದರು. ಯಕ್ಷಗಾನಕ್ಕೆ ತುಳು ಪ್ರಸಂಗಗಳು ಪ್ರವೇಶಿಸಿದ ಸಮಯ ಅದು. ಕೋಟಿ-ಚೆನ್ನಯ ಮತ್ತು ಸಿರಿಮಹಾತ್ಮೆ ಎಂಬ ಎರಡು ಪ್ರಸಂಗಗಳು. ಕೋಟಿ-ಚೆನ್ನಯ ಪ್ರಸಂಗದಲ್ಲಿ ಮಂಜು ಪೆರ್ಗಡೆ ಮತ್ತು ಕೇಮರ ಬಲ್ಲಾಳ ಪಾತ್ರಗಳನ್ನೂ, ಸಿರಿಮಹಾತ್ಮೆ ಪ್ರಸಂಗದಲ್ಲಿ ಭೈರವನ ಪಾತ್ರವನ್ನೂ ನಿರ್ವಹಿಸುವ ಅವಕಾಶವಾಗಿತ್ತು. ಮತ್ತೆ 5 ವರ್ಷಗಳ ಕಾಲ ಕೊಳ್ತಿಗೆಯವರು ಕುಂಬಳೆ ಸೇಸಪ್ಪ ಅವರ ನಾಯಕತ್ವದ ಅಮ್ಟಾಡಿ ಮೇಳದಲ್ಲಿ ತಿರುಗಾಟ.
ಕೊಳ್ತಿಗೆಯವರು ಬಳಿಕ ಕಲಾಸೇವೆ ಮಾಡಿದ್ದು ಕೊಲ್ಲೂರು ಮೇಳದಲ್ಲಿ. ಶ್ರೇಷ್ಠ ಕಲಾವಿದರನ್ನು ಹೊಂದಿದ ತಂಡವದು. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಮಲ್ಪೆ ಶ್ರೀ ಶಂಕರನಾರಾಯಣ ಸಾಮಗರು, ವೇಷಧಾರಿ ಪೆರುವಡಿ ನಾರಾಯಣ ಭಟ್ಟ, ಕ್ರಿಶ್ಚನ್ ಬಾಬು ಮೊದಲಾದ ಕಲಾವಿದರಿಂದ ಪ್ರದರ್ಶನಗಳು ರಂಜಿಸುತ್ತಿತ್ತು. ಈ ಮೇಳದಲ್ಲಿ ಪೀಠಿಕೆ ಮತ್ತು ಎದುರು ವೇಷಗಳನ್ನು ಮಾಡಿ
ಕೊಳ್ತಿಗೆಯವರು ಕಾಣಿಸಿಕೊಂಡರು. ಅಲ್ಲದೆ ಅನಿವಾರ್ಯಕ್ಕೆ ಅಭಿಮನ್ಯು, ಪರಶುರಾಮ, ಜಮದಗ್ನಿ ಮೊದಲಾದ ಪುಂಡುವೇಷಗಳನ್ನೂ ಮಾಡಿದ್ದಾರೆ. ಆದರೆ ಕಿರೀಟ ವೇಷಗಳತ್ತಲೇ ಇವರ ಆಸಕ್ತಿ. ರಾಣಿ ಚಿತ್ರಾಂಗದೆ ಪ್ರಸಂಗದಲ್ಲಿ ಕ್ರಿಶ್ಚನ್ ಬಾಬು ಅವರ ಬಭ್ರುವಾಹನ ಮತ್ತು ಕೊಳ್ತಿಗೆಯವರ ಅರ್ಜುನ. ಅನೇಕ ಪ್ರಸಂಗಗಳಲ್ಲಿ ಕೊಳ್ತಿಗೆ-ಕ್ರಿಶ್ಚನ್ ಬಾಬು ಜತೆಯನ್ನು ಜನರು ಗುರುತಿಸುವಂತಾಗಿತ್ತು.
ಆಗ ನಾಟಕೀಯ ವೇಷಗಳು ಯಕ್ಷಗಾನ ಕ್ಷೇತ್ರಕ್ಕೆ ಬಂದು ರಂಜಿಸುತ್ತಿದ್ದ ಕಾಲ. ಕೊಳ್ತಿಗೆಯವರೂ ಅಂತಹ ವೇಷಗಳತ್ತ ಆಕರ್ಷಿತರಾಗಿದ್ದರು. ವೇಷ ಕಟ್ಟುವುದರಿಂದ ತೊಡಗಿ, ಪಾತ್ರನಿರ್ವಹಣೆಯ ವರೆಗೆ, ಆ ವಿಚಾರದಲ್ಲಿ ಅನುಭವಗಳನ್ನು ಗಳಿಸಿ ಕಂಸ, ಕಂಹಾಸುರ, ಹಿರಣ್ಯಕಶ್ಯಪ, ಭಸ್ಮಾಸುರ, ರಾವಣ ಮೊದಲಾದ ವೇಷಗಳನ್ನು ಮಾಡಿದರು. ಅತಿಕಾಯ, ತಾಮ್ರಧ್ವಜ, ಇಂದ್ರಜಿತು, ಶಿಶುಪಾಲ ಮೊದಲಾದ ಕಿರೀಟ ವೇಷಗಳನ್ನೂ ಮಾಡಿದರು. ಅಗರಿ ಭಾಗವತರ ಸಮರ್ಥ ನಿರ್ದೇಶನವೂ ಕೊಳ್ತಿಗೆ ಅವರಿಗೆ ಸಿಕ್ಕಿತ್ತು. ಪ್ರತಿ ವೇಷಕ್ಕೂ ಮಲ್ಪೆ ಶಂಕರನಾರಾಯಣ ಸಾಮಗರು ಸಂಭಾಷಣೆಗಳನ್ನು ಹೇಳಿಕೊಡುವುದರ ಜತೆಗೆ, ತಪ್ಪಿದರೆ ತಿದ್ದಿ ಮುನ್ನಡೆಸಿದ್ದರು.
‘‘ದೊಡ್ಡ ಸಾಮಗರು ಕೇಳಿದವರಿಗೆ ಪ್ರೀತಿಯಿಂದ ಹೇಳಿಕೊಡುತ್ತಾರೆ. ಕಲಿಕಾಸಕ್ತ ಕಲಾವಿದರನ್ನು ಪ್ರೀತಿಸುತ್ತಾರೆ. ಸಂತೆಯಲ್ಲಿ ಭಗವದ್ಗೀತೆ ಓದಬಾರದು. ಅಯೋಗ್ಯರಲ್ಲಿ ಸಂಭಾಷಿಸಬಾರದು. ಗಂಧ ಮಾರುವವನ ಜತೆ ಹೊಡೆದಾಡಿದರೂ ಗೊಬ್ಬರ ಮಾರುವವನನ್ನು ಅಪ್ಪಬಾರದು ಎಂಬ ಮಾತುಗಳನ್ನು ಹೇಳುತ್ತಿದ್ದರು ಮತ್ತು ತಮ್ಮ ಬದುಕಿನಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಅವರ ಒಡನಾಟವು ಮರೆಯಲಾಗದ ಅನುಭವ. ಅವರಿಂದಾಗಿ ನಾನು ತಪ್ಪುಗಳನ್ನು ತಿದ್ದಿಕೊಂಡು ಸ್ವಲ್ಪವಾದರೂ ಕಲಿತೆ. ಸಾಗರವು ಜಲನಿಧಿ ಎಂದೇ ಪ್ರಸಿದ್ಧ. ನಾವು ಕೊಂಡುಹೋದ ಪಾತ್ರೆಯ ಅಳತೆಯಷ್ಟೇ ನೀರು ನಮಗೆ ದೊರೆಯುತ್ತದೆ.’’ ಇದು ದೊಡ್ಡ ಸಾಮಗರಿಗೆ ಕೊಳ್ತಿಗೆಯವರು ಅರ್ಪಿಸುವ ನುಡಿನಮನಗಳು.
ಕೊಲ್ಲೂರು ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಕರ್ನಾಟಕ ಮೇಳದಲ್ಲಿ 2 ವರ್ಷಗಳ ತಿರುಗಾಟ. ಬಳಿಕ ಕದ್ರಿ, ಬಪ್ಪನಾಡು, ಪೆರ್ಡೂರು ಮತ್ತು ಉಪ್ಪಳ ಮೇಳಗಳಲ್ಲಿ ಕಲಾಸೇವೆ. ಮತ್ತೆ ಕಲ್ಲಾಡಿ ಶ್ರೀ ದೇವೀಪ್ರಸಾದ ಶೆಟ್ಟರ ಕರ್ನಾಟಕ ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಕೊಳ್ತಿಗೆಯವರಿಗೆ ಒಳ್ಳೆಯ ಹೆಸರನ್ನು ನೀಡಿತ್ತು. 1982ರಲ್ಲಿ ಪೆರ್ಲಂಪಾಡಿ ಆನಡ್ಕದ ಶ್ರೀ ಪೆರ್ಗಡೆ ಗೌಡ ಮತ್ತು ಅಕ್ಕಯ್ಯ ದಂಪತಿಗಳ ಪುತ್ರಿ ದೇವಕಿ ಅವರ ಜತೆ ವಿವಾಹ.
ಸುಮಾರು ಮೂವತ್ತೇಳು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆ. ಕೊಳ್ತಿಗೆಯವರು ತಾವು ಕಲಾವಿದನಾಗಿ ಬೆಳೆದು ಬಂದ ದಾರಿಯನ್ನು ಆಗಾಗ ನೆನಪಿಸುತ್ತಾರೆ. ಪೆರ್ಲಂಪಾಡಿಯಲ್ಲಿ ನಡೆದ ದಕ್ಷಯಜ್ಞ ಪ್ರಸಂಗ. ಇವರದು ವೀರಭದ್ರನ ಪಾತ್ರ. ನಿನಗದನ್ನು ನಿರ್ವಹಿಸಲು ಸಾಧ್ಯವಾಗದು. ನಿನಗೆ ಅಲ್ಲಿಯವರೆಗೆ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿ ಕೆಲವರು ಉತ್ಸಾಹ ಭಂಗವೆಸಗಿದ್ದರು. ಇವನನ್ನು ನಮ್ಮವನೆಂದು ಹೇಳಲು ನಾಚಿಕೆಯಾಗುತ್ತದೆ ಎಂದು ಹೇಳಿದವರೂ ಇದ್ದರಂತೆ. ‘‘ಈ ಕೆರಳಿಕೆಯ ಟೀಕೆಗಳು ನನಗೆ ಕಲಿಯುವುದಕ್ಕೆ ಪ್ರೇರಣೆಯನ್ನು ನೀಡಿತು. ಕಲಾಭಿಮಾನಿಗಳು ಗುರುತಿಸಿದ್ದಾರೆ ಎಂಬ ಸಮಾಧಾನವಿದೆ.’’ ಇದು ಕೊಳ್ತಿಗೆಯವರ ಅಂತರಂಗದ ಮಾತುಗಳು.
ಕಲಾಬದುಕಿನಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಸೇರಿ ಸುಮಾರು 300ಕ್ಕಿಂತಲೂ ಹೆಚ್ಚು ಕಲಾವಿದರುಗಳು ಕೊಳ್ತಿಗೆಯವರಿಗೆ ಒಡನಾಡಿಗಳಾಗಿ ಒದಗಿದ್ದಾರೆ. ಹಿರಣ್ಯಕಶ್ಯಪ, ರಕ್ತಬೀಜ, ರಾವಣ, ಅತಿಕಾಯ, ಇಂದ್ರಜಿತು, ಕಂಡಾಸುರ, ಕಂಸ, ವಾಲಿ, ಕರ್ಣ, ಅರ್ಜುನ, ಶತ್ರುಘ್ನ, ದಾರಿಕಾಸುರ, ಕಾರ್ತವೀರ್ಯ, ಜಮದಗ್ನಿ, ಕೌರವ, ಭೀಮ, ಭೀಷ್ಮ, ಸಾಲ್ವ, ಶಕುನಿ, ಬಪ್ಪಬ್ಯಾರಿ ಮೊದಲಾದ ಪುರಾಣ ಪ್ರಸಂಗಗಳ ಪಾತ್ರಗಳು, ಬಿರುಮಾಳ್ವ, ಕೊಡ್ಸರಾಳ್ವ, ಬುದ್ಧಿವಂತ, ಕೋಟಿ-ಚೆನ್ನಯ, ಚಂದುಗಿಡಿ, ಬಲಾಂಡಿ, ಭೈರವರಸ, ಬಬ್ಬು ಮೊದಲಾದ ತುಳು ಪ್ರಸಂಗಗಳ ಪಾತ್ರಗಳಲ್ಲಿ ಅಭಿನಯಿಸಿ ಕಾಣಿಸಿಕೊಂಡರು. ಅಲ್ಲದೆ ಕೊಳ್ತಿಗೆಯವರು ಮಂಗಳೂರು ಆಕಾಶವಾಣಿಯ ‘ಎ ಗ್ರೇಡ್’ ಗ್ರೂಪಿನ ಕಲಾವಿದ. ‘ಯಕ್ಷಪಯಣ’ ಎಂಬ ಆತ್ಮಕಥನವನ್ನೂ ಬರೆದಿರುತ್ತಾರೆ.
ತಾಳಮದ್ದಳೆಯಲ್ಲೂ ಭಾಗವಹಿಸುತ್ತಾರೆ. ಧಾರ್ಮಿಕ ಪ್ರವಚನ ಮತ್ತು ಭಾಷಣವನ್ನೂ ಹವ್ಯಾಸವಾಗಿರಿಸಿಕೊಂಡಿದ್ದಾರೆ. ಸುಮಾರು ನೂರರ ಹತ್ತಿರ ಆಡಿಯೋ ಕ್ಯಾಸೆಟ್ ಮತ್ತು ಎಪ್ಪತ್ತರಷ್ಟು ವೀಡಿಯೋ ಕ್ಯಾಸೆಟ್‍ಗಳಲ್ಲಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಸುಮಾರು ಇಪ್ಪತ್ತನಾಲ್ಕು ಪ್ರಶಸ್ತಿಗಳನ್ನು ಪಡೆದುದಲ್ಲದೆ ಇನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಪಡೆದುಕೊಂಡಿದ್ದಾರೆ.
ಕಲಾಬದುಕಿನುದ್ದಕ್ಕೂ ಪತ್ನಿಮಕ್ಕಳ ಸಹಕಾರವಿತ್ತು. ಕೊಳ್ತಿಗೆ ನಾರಾಯಣ ಗೌಡ ಮತ್ತು ದೇವಕಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಜಗದೀಪ್ ಡಿಪ್ಲೊಮಾ ಇಂಜಿನಿಯರ್. ಅರಬ್ ದೇಶದ ರಿಯಾದ್‍ನಲ್ಲಿ ಉದ್ಯೋಗಿ. ವಿವಾಹಿತ. ಪತ್ನಿ ಶ್ರೀಮತಿ ಮಮತಾ ಜಗದೀಪ್ ಇನ್ಫೋಸಿಸ್ ಉದ್ಯೋಗಸ್ಥೆ. ಕಿರಿಯ ಪುತ್ರ ಜಯದೀಪ್ ಮೈಸೂರಿನ CAVA ದಲ್ಲಿ ಕಲಿತು (BFA) ಬೆಂಗಳೂರಿನಲ್ಲಿ ಉದ್ಯೋಗಿ. ಪುತ್ರಿ ದೀಪ್ತಿ ವಿವಾಹಿತೆ. ಇವರ ಪತಿ ಅಜೇಯಪ್ರಭು ಸ್ವಂತ ಉದ್ದಿಮೆಯನ್ನು ನಡೆಸುತ್ತಿದ್ದಾರೆ.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ