Saturday, January 18, 2025
Homeಯಕ್ಷಗಾನಶಂಕರ ಭಾಗವತ ಯಲ್ಲಾಪುರ - ಬಡಗುತಿಟ್ಟಿನ ಅನುಭವೀ ನಾದೋಪಾಸಕ

ಶಂಕರ ಭಾಗವತ ಯಲ್ಲಾಪುರ – ಬಡಗುತಿಟ್ಟಿನ ಅನುಭವೀ ನಾದೋಪಾಸಕ

ಶ್ರೀ ಶಂಕರ ಭಾಗವತ ಯಲ್ಲಾಪುರ ಅವರು ಬಡಗುತಿಟ್ಟಿನ ಹಿರಿಯ ಮದ್ದಳೆಗಾರರು. ಯಕ್ಷಗಾನದ ಅನುಭವೀ ನಾದೋಪಾಸಕರು. ಸುಮಾರು ನಲುವತ್ತೆಂಟು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶಿರಸಿಯಲ್ಲಿ
ನಾದಶಂಕರ ಕಲಾಶಾಲೆಯನ್ನು ನಡೆಸುತ್ತಾ ಯಕ್ಷಗಾನ ಮದ್ದಳೆಗಾರಿಕೆ ಮತ್ತು ತಬಲಾವಾದನದ ತರಬೇತಿಯನ್ನು ಕಲಿಕಾಸಕ್ತರಿಗೆ ಮಾಡುತ್ತಿದ್ದಾರೆ. ಕಲಾಬದುಕಿನುದ್ದಕ್ಕೂ ನೆಬ್ಬೂರು, ಉಪ್ಪೂರರು, ಕಡತೋಕಾ ಮಂಜುನಾಥ
ಭಾಗವತ, ಕಡತೋಕಾ ಕೃಷ್ಣ ಭಾಗವತ, ನರಸಿಂಹದಾಸ ಭಾಗವತ, ಕಡತೋಕಾ ಲಕ್ಷ್ಮೀನಾರಾಯಣ ಭಾಗವತ, ಕಾಳಿಂಗ ನಾವಡ, ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ವಿದ್ವಾನ್ ಗಣಪತಿ ಭಟ್ಟರು ಮೊದಲಾದವರ ಭಾಗವತಿಕೆಗೆ ಮದ್ದಳೆ ನುಡಿಸಿದ ಅನುಭವಿಗಳು. ತೆಂಕುತಿಟ್ಟು ಯಕ್ಷಗಾನದ ಗಾಯಕರಾದ ಶ್ರೀ ದಿನೇಶ್ ಅಮ್ಮಣ್ಣಾಯ ಮತ್ತು ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರ ಹಾಡುಗಾರಿಕೆಗೂ ಸಾಥಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಡಗುತಿಟ್ಟಿನ ಅನೇಕ ಯುವ ಭಾಗವತರುಗಳ ಜತೆಗೂ ಪ್ರದರ್ಶನಗಳಲ್ಲಿ ಮದ್ದಳೆಗಾರರಾಗಿ ಸಹಕರಿಸುತ್ತಿದ್ದಾರೆ. ಬಡಗುತಿಟ್ಟಿನ ಹಿರಿಯ ಮದ್ದಳೆಗಾರರಾದ ತಿಮ್ಮಪ್ಪ ನಾೈಕ, ಗುಡಿಗಾರರು, ಕಿನ್ನೀರು ನಾರಾಯಣ ಹೆಗಡೆ, ಕಟ್ಟೆ ಶ್ರೀನಿವಾಸ ಆಚಾರ್ಯ, ಕೋಟ ಮಹಾಬಲ ಕಾರಂತ ಮೊದಲಾದವರೊಂದಿಗೆ ಸಹಕಲಾವಿದನಾಗಿ ಪಳಗಿದವರು. ಅಲ್ಲದೆ ಅನೇಕ ಯುವ ಕಲಾವಿದರೊಂದಿಗೆ, ಹಿರಿಯನಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಂಕುತಿಟ್ಟಿನ ಮದ್ದಳೆಗಾರರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ದೇಲಂತಮಜಲು, ಕೃಷ್ಣಪ್ರಕಾಶ ಉಳಿತ್ತಾಯ ಮೊದಲಾದವರೊಂದಿಗೂ ನುಡಿಸಾಣಿಕೆಯಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಯಲ್ಲಾಪುರ ಶಂಕರ ಭಾಗವತರ ಅನೇಕ ಶಿಷ್ಯಂದಿರು ಇಂದು ಉದಯೋನ್ಮುಖ ಮದ್ದಳೆಗಾರರಾಗಿ ಬಡಗುತಿಟ್ಟು ಯಕ್ಷಗಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಶಂಕರ ಭಾಗವತರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮ. ಶ್ರೀ ರಾಮಚಂದ್ರ ಭಾಗವತ ಮತ್ತು ಶ್ರೀಮತಿ ಕಮಲಾ ಆರ್. ಭಾಗವತ ದಂಪತಿಗಳ ಪುತ್ರನಾಗಿ 1955ನೇ ಇಸವಿ ಒಕ್ಟೋಬರ್ ಒಂದನೇ ತಾರೀಕಿನಂದು ಜನನ. ಆನಗೋಡ ಶಾಲೆಯಲ್ಲಿ ಏಳನೇ ತರಗತಿ ವರೆಗೆ ವಿದ್ಯಾರ್ಜನೆ. ಇವರು ಜನಿಸಿದ್ದು ಯಕ್ಷಗಾನ ಹಿನ್ನೆಲೆಯುಳ್ಳ ಕುಟುಂಬದಲ್ಲಿ. ತಂದೆಯವರು ಮದ್ದಳೆವಾದಕರಾಗಿದ್ದರು. ಚಿಕ್ಕಪ್ಪ ನಾರಾಯಣ
ಭಾಗವತರೂ ಮದ್ದಳೆಗಾರರಾಗಿದ್ದರು. ಸುಮಾರು ನಲುವತ್ತೈದು ಸದಸ್ಯರಿದ್ದ ಕೂಡುಕುಟುಂಬ ಇವರದು. ಶಂಕರ ಭಾಗವತರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಾನೊಬ್ಬ ಮದ್ದಳೆಗಾರನಾಗಬೇಕೆಂಬ ಆಸೆಯೂ
ಹುಟ್ಟಿಕೊಂಡಿತ್ತು. ಬಾಲಕನಾಗಿದ್ದಾಗಲೇ ವಾದನ ಕಲೆಯತ್ತ ಆಕರ್ಷಿತರಾಗಿದ್ದರು. ಸರಿಯಾಗಿ ಕಲಿಯುವ ಮೊದಲೇ ಸೊಗಸಾಗಿ ಮದ್ದಳೆ ಬಾರಿಸುತ್ತಿದ್ದರು. ಮದ್ದಳೆ ನುಡಿಸುವ ಕಲೆಯು ಇವರಿಗೆ ರಕ್ತಗತವಾಗಿಯೇ ಒಲಿದಿತ್ತು. ಪ್ರದರ್ಶನಗಳನ್ನು ನೋಡುತ್ತಿದ್ದು, ಉಪ್ಪೂರ ಭಾಗವತರ ಹಾಡಿಗೆ ಸಾಥಿಯಾಗಿದ್ದ ತಿಮ್ಮಪ್ಪ ನಾೈಕರ ವಾದನ ಕುಶಲತೆಗೆ ಮನಸೋತಿದ್ದರು. ಶಂಕರ ಭಾಗವತರು ತನ್ನ ಮನೆಯಲ್ಲಿಯೇ ಕುಳಿತು ಮದ್ದಳೆ ನುಡಿಸುವುದನ್ನು ಅವರ ಕುಟುಂಬದ ಸದಸ್ಯನೇ ಆಗಿದ್ದ ಕಬ್ಬಿನಗದ್ದೆ ಮಹಾಬಲ ಭಾಗವತರು ಗಮನಿಸಿದ್ದರು. ಅವರೂ ಮದ್ದಳೆಗಾರರಾಗಿದ್ದರು. ಮನೆಯಲ್ಲಿಯೇ ಶಂಕರ ಭಾಗವತರಿಗೆ ಮಹಾಬಲ ಭಾಗವತರು ನುಡಿಸಾಣಿಕೆಯ ತರಬೇತಿಯನ್ನೂ ನೀಡಿದ್ದರು.

ಒಮ್ಮೆ ಗೋಕರ್ಣ ಕ್ಷೇತ್ರವನ್ನು ಸಂದರ್ಶಿಸಲು ಶಂಕರ ಭಾಗವತರು ತೆರಳಿದ್ದರು. ಕಟ್ಟೆಯಲ್ಲಿ ಇಬ್ಬರು ಮಾತನಾಡುತ್ತಾ ಕುಳಿತಿರುವುದನ್ನು ನೋಡಿದ್ದರು. ಶಂಕರ ಭಾಗವತರಿಗೆ ಅವರನ್ನು ಎಲ್ಲೋ ನೋಡಿದ ನೆನಪು. ಹತ್ತಿರ ಹೋಗಿ ಮಾತನಾಡಿದಾಗ ಅವರಾರೆಂದು ತಿಳಿದು ಸಂತೋಷವಾಗಿತ್ತು. ಆ ಕಟ್ಟೆಯಲ್ಲಿ ಕುಳಿತಿದ್ದವರು ಬೇರಾರೂ ಅಲ್ಲ. ಖ್ಯಾತ ಮದ್ದಳೆಗಾರ ತಿಮ್ಮಪ್ಪ ನಾೈಕರು ಮತ್ತು ಪ್ರಸಿದ್ಧ ಕಲಾವಿದರಾದ ಏಕ್ಟರ್ ಗಜಾನನ ಜೋಷಿಯವರು. ಮದ್ದಳೆ ಕಲಿಸಬೇಕು ಎಂದು ಕೇಳಿಕೊಂಡಾಗ ತಿಮ್ಮಪ್ಪ ನಾೈಕರು, ಹಂಗಾರಕಟ್ಟೆಯ ತರಬೇತಿ ಕೇಂದ್ರಕ್ಕೆ ಬರುವಂತೆ ಸೂಚಿಸಿದ್ದರು. ಹಂಗಾರಕಟ್ಟೆ ತರಬೇತಿ ಕೇಂದ್ರದ ಸಂದರ್ಶನದಲ್ಲಿ ಶಂಕರ ಭಾಗವತರು ಉತ್ತೀರ್ಣರಾಗಿದ್ದರು. ಬೆಳ್ಳಂಜೆ ತಿಮ್ಮಪ್ಪ ನಾೈಕರ ಶಿಷ್ಯನಾಗಿ ಮದ್ದಳೆ ಕಲಿತರು. ಕವ್ವಾಳೆ ಗಣಪತಿ ಭಾಗವತರು ಕಲಿಕಾ ಕೇಂದ್ರದಲ್ಲಿ ಇವರ
ಸಹಪಾಠಿಯಾಗಿದ್ದರು. ಕವ್ವಾಳೆ ಅವರು ಬಡಗುತಿಟ್ಟಿನ ವಾದನಕ್ರಮದಲ್ಲಿ ನುರಿತು ಹೆಸರನ್ನು ಗಳಿಸಿದವರು. ಶಂಕರ ಭಾಗವತರ ಮೊದಲ ತಿರುಗಾಟ ಕೆರೆಮನೆ ಶಿವರಾಮ ಹೆಗಡೆ ಅವರ ಕೆರೆಮನೆ ಮೇಳದಲ್ಲಿ. ನೆಬ್ಬೂರು, ಕೆಪ್ಪೆಕೆರೆ ಸುಬ್ರಾಯ ಭಾಗವತ, ಕೊಗ್ಗ ಆಚಾರಿ ಕೊಲ್ಲೂರು, ಕೆರೆಮನೆಯ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ, ಮೂರೂರು ದೇವರು ಹೆಗಡೆ, ಕೊಕ್ಕಡ ಈಶ್ವರ ಭಟ್ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟವು ದೊರಕಿತ್ತು. ಮೊದಲ ತಿರುಗಾಟದ ನಂತರ ಮಳೆಗಾಲದಲ್ಲಿ ಮತ್ತೆ ತರಬೇತಿಗಾಗಿ ಹಂಗಾರಕಟ್ಟೆ ಕೇಂದ್ರಕ್ಕೆ ತೆರಳಿದ್ದರು. ಮುಂದಿನ ವರ್ಷ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ. ನಾರ್ಣಪ್ಪ ಉಪ್ಪೂರ ಮತ್ತು ಕೆಪ್ಪೆಕೆರೆ ಅವರುಗಳ ಭಾಗವತಿಕೆ. ದುರ್ಗಪ್ಪ ಗುಡಿಗಾರರ ಜತೆ ತಿರುಗಾಟ. ಏಕ್ಟರ್ ಜೋಷಿ, ಮಲ್ಪೆ ಶ್ರೀ ವಾಸುದೇವ ಸಾಮಗರು, ಎಂ. ಎ. ನಾಯ್ಕ, ಕೋಟ ವೈಕುಂಠ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುರುಗಿಕಟ್ಟೆ ಹಿರಿಯ, ಸಾಲ್ಕೋಡು ಗಣಪತಿ ಹೆಗಡೆ (ಹಾಸ್ಯಗಾರರು), ನಗರ ಜಗನ್ನಾಥ ಶೆಟ್ಟಿ ಮೊದಲಾದವರ ಒಡನಾಟ. ಅಮೃತೇಶ್ವರೀ ಮೇಳದಲ್ಲಿ 2 ವರ್ಷಗಳ ತಿರುಗಾಟ.

ಮಳೆಗಾಲದಲ್ಲಿ ತರಬೇತಿಗಾಗಿ ಮತ್ತೆ ಹಂಗಾರಕಟ್ಟೆ ಕಲಿಕಾಕೇಂದ್ರಕ್ಕೆ. ಅದೇ ಸಂದರ್ಭದಲ್ಲಿ ಕಾಳಿಂಗ ನಾವಡರ ಗೆಳೆತನವಾಗಿತ್ತು. ಆಗ ನಾವಡರು ಅಮೃತೇಶ್ವರೀ ಮೇಳದಲ್ಲಿ ಸಂಗೀತ ಭಾಗವತರಾಗಿದ್ದರು. ಮುಂದೆ ಕಾಳಿಂಗ ನಾವಡರ ಜತೆ ಸಾಲಿಗ್ರಾಮ ಮೇಳ ಸೇರಿದ್ದರು. ಹದಿನೈದು ವರ್ಷಗಳ ಕಾಲ ಕಾಳಿಂಗ ನಾವಡರಿಗೆ ಜತೆಯಾಗಿ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಕಿಶನ್ ಹೆಗ್ಡೆಯವರ ನೇತೃತ್ವದ ಸಾಲಿಗ್ರಾಮ ಮೇಳದಲ್ಲಿ ಶ್ರೀ ನಾರಾಯಣ ಶಬರಾಯರ ಜತೆಗೂ 4 ವರ್ಷ ತಿರುಗಾಟ ನಡೆಸಿದ್ದರು. ಶಿರಸಿಯ ಪಂಚಲಿಂಗೇಶ್ವರ ಮತ್ತು ಮಾರಿಕಾಂಬಾ ಮೇಳಗಳಲ್ಲಿ ಕೆಪ್ಪೆಕೆರೆ ಸುಬ್ರಾಯ ಭಾಗವತರು ಮತ್ತು ಕೆ. ಪಿ. ಹೆಗಡೆಯವರ ಜತೆ 5 ವರ್ಷಗಳ ಕಲಾಸೇವೆ. ಶಂಕರ ಭಾಗವತರಿಗೆ ಖ್ಯಾತ ಕಲಾವಿದ ಪಿ. ವಿ. ಹಾಸ್ಯಗಾರರ ಒಡನಾಟವೂ ದೊರಕಿತ್ತು. ಪೆರ್ಡೂರು ಮೇಳದಲ್ಲಿ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ಜತೆ ಒಂದು ವರ್ಷ ತಿರುಗಾಟ. ಬಳಿಕ ಶಂಕರ ಭಾಗವತರು ಮೇಳದ ತಿರುಗಾಟದಿಂದ ದೂರ ಉಳಿದಿದ್ದರು. ಸಾಲಿಗ್ರಾಮ ಮೇಳದ ತಿರುಗಾಟದ ವೇಳೆಯಲ್ಲಿ ಶ್ರೀ ಜಿ. ಆರ್. ಹೆಗಡೆ, ಮತ್ತಿಗಾರ ದೊಡ್ಮನೆ ಅವರಿಂದ ತಬಲಾ ಕಲಿತಿದ್ದರು. ತಬಲಾ ಕಲಿಕೆಯು ಯಕ್ಷಗಾನ ಮದ್ದಳೆವಾದನಕ್ಕೆ ಅನುಕೂಲವಾಗಿತ್ತೆಂಬುದು ಶಂಕರ ಭಾಗವತರು ಅನುಭವಿಸಿದ ಸತ್ಯ. ‘‘ಮದ್ದಳೆಗಾರರಿಗೆ ಪ್ರಸಂಗಜ್ಞಾನವು ಬೇಕು. ಕಥೆಯ ನಡೆಯು ತಿಳಿದಿರಬೇಕು. ಮಾತನಾಡುವುದೂ ಒಂದು ಕಲೆ. ಎಲ್ಲಿ ಪ್ರತಿಕ್ರಯಿಸಬೇಕು ಎಂದು ಗೊತ್ತಿಲ್ಲದಿದ್ದರೆ ಅವನು ಮಾತುಗಾರನಾಗಲು ಅಸಾಧ್ಯ. ಮೃದಂಗವಾದಕನಿಗೂ ಭಾಗವತನ ಹಾಡಿಗೆ, ವೇಷಧಾರಿಗಳ ಕ್ರಿಯೆ ಮತ್ತು ಸಂಭಾಷಣೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ತಿಳಿದಿರಬೇಕು. ಅರ್ಥಜ್ಞಾನವನ್ನೂ ಹೊಂದಿರಬೇಕು. ಪ್ರದರ್ಶನವು ವಿಜೃಂಭಿಸುವಲ್ಲಿ ಹೊಂದಾಣಿಕೆಯ ಗುಣವೂ ಅತ್ಯಗತ್ಯ. ಹೀಗಿದ್ದರೆ ಮಾತ್ರ ಆತ ಯಶಸ್ವೀ ಪ್ರದರ್ಶನಕ್ಕೆ ತಾನೂ ಕೊಡುಗೆಯನ್ನು ನೀಡಿದಂತಾಗುತ್ತದೆ.’’ ಮದ್ದಳೆಗಾರರು ಹೇಗಿರಬೇಕೆಂಬ ಪ್ರಶ್ನೆಗೆ ಶಂಕರ ಭಾಗವತರ ಉತ್ತರವಿದು.

ಹಂಗಾರಕಟ್ಟೆ ಕಲಿಕಾ ಕೇಂದ್ರದ ನಾಟ್ಯಗುರುವಾಗಿದ್ದ ವೀರಭದ್ರ ನಾಯಕರೂ ಶಂಕರ ಭಾಗವತರನ್ನು ಪ್ರೋತ್ಸಾಹಿಸಿದ್ದರು. ಕೆರೆಮನೆ ಮೇಳದಲ್ಲಿ ಖ್ಯಾತ ಮದ್ದಳೆಗಾರ ಕಿನ್ನೀರ ನಾರಾಯಣ ಹೆಗಡೆಯವರ
ಮತ್ತು ಸಾಲಿಗ್ರಾಮ ಮೇಳದಲ್ಲಿ ಕಟ್ಟೆ ಶ್ರೀನಿವಾಸ ಆಚಾರ್ಯರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು. ಕಿನ್ನೀರ ನಾರಾಯಣ ಹೆಗಡೆಯವರ ಮನೆಗೆ ಹೋಗಿಯೂ ಮದ್ದಳೆಗಾರಿಕೆಯನ್ನು ಅಭ್ಯಸಿಸಿದ್ದರು. ಶಂಕರ ಭಾಗವತರು ಕರ್ನಾಟಕದ ಎಲ್ಲಾ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕಾಳಿಂಗ ನಾವಡರ ಜತೆ ಭಾಗವಹಿಸಿದವರು. ಧಾರವಾಡ ಆಕಾಶವಾಣಿ ಕೇಂದ್ರವು ಇವರ ಮೃದಂಗ ವಾದನಕ್ಕೆ ಪ್ರಶಸ್ತಿಯನ್ನೂ ನೀಡಿತ್ತು. ಕಲಾಬದುಕಿನುದ್ದಕ್ಕೂ ಸಹಕಲಾವಿದರ, ಸಂಘಟಕರ, ಕಲಾಭಿಮಾನಿಗಳ ಸಹಕಾರವು ಸಿಕ್ಕಿತ್ತು ಎನ್ನುವ ಶಂಕರ ಭಾಗವತರಿಗೆ ಯಕ್ಷಗಾನ ಅಕಾಡಮಿ ಪ್ರಶಸ್ತಿಯೂ ಬಂದಿತ್ತು. ಇನ್ನೂರಕ್ಕೂ ಹೆಚ್ಚಿನ ಸನ್ಮಾನಗಳೂ ನಡೆದಿವೆ. ವಿದೇಶ ಪ್ರಯಾಣದ ಭಾಗ್ಯವೂ ಒದಗಿಬಂದಿತ್ತು. ದುಬಾೈ, ಕುವೈಟ್, ಕೆನಡಾ, ಸಿಂಗಾಪೂರ್‍ಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಮದ್ದಳೆವಾದನದ ಕೈಚಳಕವನ್ನು ಪ್ರದರ್ಶಿಸಿದ್ದಾರೆ. ದಂಟಕಲ್ ಶ್ರೀ ಗಣಪತಿ ಹೆಗಡೆ ಮತ್ತು ಸರ್ವೇಶ್ವರೀ ಹೆಗಡೆ ದಂಪತಿಗಳ ಪುತ್ರಿ ವಿನೋದಾ ಭಾಗವತ ಶಂಕರ ಭಾಗವತರ ಬಾಳಸಂಗಾತಿ. ಶಂಕರ ಭಾಗವತ ವಿನೋದಾ ಭಾಗವತ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ದರ್ಶನ್ ಭಾಗವತ ಬೆಂಗಳೂರಿನಲ್ಲಿ ಉದ್ಯೋಗಿ. ಸೊಸೆ ಶ್ರೀಮತೀ ಶಿಲ್ಪ ದರ್ಶನ್. ಮೊಮ್ಮಗಳು ಕು| ಪೂರ್ವಿ. ಪುತ್ರಿ ಕು ಪೂಜಾ ಎಸ್. ಭಾಗವತ ಪದವೀಧರೆ. ಶಿರಸಿಯ ಟಿ.ಆರ್.ಸಿ. ಸೊಸೈಟಿಯಲ್ಲಿ ಉದ್ಯೋಗಸ್ಥೆ. ಶಂಕರ ಭಾಗವತರು ಯಕ್ಷಗಾನದ ಗಳಿಕೆಯಿಂದಲೇ ಮಕ್ಕಳಿಬ್ಬರಿಗೂ ವಿದ್ಯೆ ಕೊಡಿಸಿದ್ದರು. ಶ್ರೀಯುತರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲೆಂಬ ಹಾರೈಕೆಗಳು. ು

ಲೇಖಕ: ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments