Thursday, November 21, 2024
Homeಯಕ್ಷಗಾನದಿನೇಶ ಅಮ್ಮಣ್ಣಾಯರ ಭಾವದಲೆಯಲ್ಲಿ...

ದಿನೇಶ ಅಮ್ಮಣ್ಣಾಯರ ಭಾವದಲೆಯಲ್ಲಿ…

ಯಾಕೋ ದಿನೇಶ ಅಮ್ಮಣ್ಣಾಯರು ಮತ್ತೆ ಮತ್ತೆ ನೆನಪಾಗುತ್ತಾರೆ. ಯಕ್ಷಗಾನದ ಸೊಲ್ಲು ಅಡಗಿ ಹೋಗದಿದ್ದರೂ ಚೆಂಡೆ ಮದ್ದಲೆಗಳ ಸದ್ದು ಮೊದಲಿನಂತೆ ಕೇಳಿಸದೇ ಇರುವ ಈ ಕಾಲಘಟ್ಟದಲ್ಲಿಯೂ ಅಮ್ಮಣ್ಣಾಯರು ಮತ್ತೆ ನೆನಪಿನ ಸುಳಿಯಲ್ಲೊಮ್ಮೆ ಬಂದು ಹೋಗತ್ತಾರೆ. ನಾನು ಅವರನ್ನೊಮ್ಮೆ ಮಾತ್ರ ಭೇಟಿ ಮಾಡಿದ್ದೆ. ಪತ್ರಿಕೆಯ ಲೇಖನವೊಂದಕ್ಕೆ ಅವರನ್ನು ಮಾತಾಡಿಸಲು ಹೋಗಿದ್ದೆ. ಆದರೆ ಅವರ ಮನೆಗಲ್ಲ. ಅದು ಪುತ್ತೂರಿನ ಕೆಮ್ಮಾಯಿಯ ವಿಷ್ಣು ಮಂಟಪಕ್ಕೆ. ಅಲ್ಲಿ ಇಲ್ಲಿ ಎಂದು ಭೇಟಿಯಾಗಲು ಅಂತಿಮವಾಗಿ ನಿಗದಿಪಡಿಸಿದ ತಾಣ ಭಗವಂತನ ಸಾನ್ನಿಧ್ಯವೇ ಆಗಿತ್ತು. ಆ ದಿನ ಅವರು ನನಗೆ ಆತ್ಮೀಯರೇನೋ ಎಂದು ಅನಿಸಿತ್ತು. ತುಂಬಾ ಹೊತ್ತು ಮನಬಿಚ್ಚಿ ಮಾತಾಡಿದ್ದರು. ಆದರೆ ಆಮೇಲೆ ನನಗೆ ಅವರಲ್ಲಿ ಮುಖತಃ ಮಾತನಾಡುವ ಸಂದರ್ಭ ಈ ವರೆಗೆ ಒದಗಿ ಬಂದದ್ದಿಲ್ಲ. 

ಆ ನಂತರದ ದಿನಗಳಲ್ಲಿ ನೋಡಿದ್ದು ಕೆಲವು ರಂಗಸ್ಥಳಗಳಲ್ಲಿ ಭಾಗವತನಾಗಿ ಮಾತ್ರ. ಅವರು ಭಾಗವತ. ನಾನು ಒಬ್ಬ ಸಾಮಾನ್ಯ ಪ್ರೇಕ್ಷಕ. ಅವರಿಗೆ ಪ್ರೇಕ್ಷಕರ ಗಡಣಕ್ಕೆ ಬಂದು ಮಾತನಾಡಿಸುವ ಅವಕಾಶಗಳಿಲ್ಲ. ಆದರೆ ನನಗೆ ಚೌಕಿಗೆ ನುಗ್ಗಿ ನಾನು ಇಂತಹವ ಎಂದು ಪರಿಚಯ ಮಾಡಿ ಮಾತನಾಡಿಸುವ ಗುಣವೂ ಸ್ವಲ್ಪ ಕಡಿಮೆಯೇ. ನಿಜವಾಗಿ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಕಲ್ಲನ್ನಾದರೂ ಮಾತನಾಡಿಸುವ ಗುಣವಿರಬೇಕು ಎಂಬುದು ಸತ್ಯವಾದರೂ ನನಗೆ ಅನಗತ್ಯವಾಗಿ ಮಾತನಾಡಿಸುವ ಹವ್ಯಾಸ ಬೆಳೆದು ಬಂದಿರಲಿಲ್ಲ. ಆದರೆ ಒಮ್ಮೆ ಮಾತನಾಡಿದ ನೆನಪುಗಳು ಸದಾ ಹಸಿರಾಗಿದೆ. 

ಈ ನೆನಪು ನನಗೆ ಮಾತ್ರವಲ್ಲ. ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಸಂಘಟಿಸುವವರಿಗೂ ಅಮ್ಮಣ್ಣಾಯರ ನೆನಪು ಇರಲೇ ಬೇಕಾಗುತ್ತದೆ. ಕೆಲವು ಪ್ರಸಂಗಗಳಿಗೂ ಅಮ್ಮಣ್ಣಾಯರಿಗೂ ಅವಿನಾಭಾವ ಸಂಬಂಧ. ಭಾವುಕ ಸನ್ನಿವೇಶಗಳಿರುವ, ಕಥಾಪಾತ್ರಗಳಿರುವ ಪ್ರಸಂಗಕ್ಕೂ  ಭಾವಜೀವಿ ಭಾಗವತನಿಗೂ ಸರಿಯಾದ ಜೊತೆಯಾಗುತ್ತದೆ. ಹಾಗೆಂದು ಇತರರಿಗೆ ಆಗುವುದಿಲ್ಲ ಎಂದು ಅರ್ಥವಲ್ಲ. ಅವರು ಉತ್ತಮರು ಎಂದು ಹೇಳಿದರೆ ಇವರು ಕೆಟ್ಟವರು ಎಂದು ಹೇಳಿದ ಹಾಗಾಗುವುದಿಲ್ಲ!

ಆದುದರಿಂದ ಮಾನಿಷಾದವೇ ಇರಲಿ ಅಥವಾ ದ್ರೌಪದಿ ವಸ್ತ್ರಾಪಹಾರವೇ ಇರಲಿ ಆ ದಿನದ ಪ್ರದರ್ಶನಗಳಲ್ಲಿ ಖಂಡಿತವಾಗಿಯೂ ಭಾವಜೀವಿ ಭಾಗವತ ದಿನೇಶ ಅಮ್ಮಣ್ಣಾಯರು ನೆನಪಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಮನಿಷಾದ ಪ್ರಸಂಗದ ಲಕ್ಷ್ಮಣ ಸೀತೆಯರ ಸಂವಾದವೇ ಇರಲಿ ಅಥವಾ ದ್ರೌಪದಿ ಕೃಷ್ಣನನ್ನು ಬೇಡುವ ಅಕ್ಷಯಾಂಬರದ ಪಾತ್ರಚಿತ್ರಣದ ಹಾಡುಗಳೇ ಇರಲಿ ಕೆಲವೊಮ್ಮೆ ಅಮ್ಮಣ್ಣಾಯರು ಕರುಣ ರಸದಲ್ಲಿ ಮುಳುಗೇಳುತ್ತಾರೆ. ಈ ಪ್ರಸಂಗಗಳಿಗೆ ಮತ್ತೂ ಒಂದು ಸೇರ್ಪಡೆ ‘ಸತ್ಯ ಹರಿಶ್ಚಂದ್ರ’. ಇಲ್ಲಿ ಭಾಗವತರಿಗೂ ದುಃಖ ಸನ್ನಿವೇಶವನ್ನು ಅನುಭವಿಸಿ ಹಾಡಲು ಮತ್ತು ಪ್ರೇಕ್ಷಕರಿಗೆ ಕರುಣೆಯ ಕಡಲಿನಲ್ಲಿ ಮುಳುಗೇಳುತ್ತಾ ನೋಡಲು ಬೇಕಾದಷ್ಟು ಸಂದರ್ಭಗಳಿವೆ. 

ಅಂತಹಾ ಪದ್ಯಗಳ ಬಗ್ಗೆ ಕೇಳಿದಾಗ ಅಮ್ಮಣ್ಣಾಯರು ಭಾವುಕರಾಗಿ ವಿವರಿಸುತ್ತಾರೆ. ಇದರಲ್ಲಿ ತನ್ನ ಸಾಧನೆಯೇನೂ ಇಲ್ಲ ಅಂತ ಮೇಲಕ್ಕೆ ಕೈ ತೋರಿಸುತ್ತಾರೆ. ತನ್ನನ್ನು ಕಾಣದ ಕೈಯೊಂದು ಪ್ರಚೋದಿಸಿ ರಾಗಗಳನ್ನು ಹಾಡಿಸುತ್ತಾ ಇದೆ ಎಂದು ಹೇಳುವ ಅವರು ತಾನು ಈ ರಂಗದಲ್ಲಿ ಪ್ರದರ್ಶನ ನೀಡಲು ದಾಮೋದರ ಮಂಡೆಚ್ಚರೇ ಕಾರಣ ಎಂದು ವಂಚನೆಯಿಲ್ಲದೆ ಹೇಳುತ್ತಾರೆ.  ನಾನು ಇಂದು ಈ ರಂಗದಲ್ಲಿ ಏನಾದರೂ ಸಾಧನೆಯನ್ನು ಮಾಡಿದ್ದಿದ್ದರೆ ಅದು ದಾಮೋದರ ಮಂಡೆಚ್ಚರ ಪ್ರಸಾದವೇ ಹೊರತು ನನ್ನದೇನಿಲ್ಲ ಎಂದು ಹೇಳುತ್ತಾ ಅಮ್ಮಣ್ಣಾಯರು ಭಾವುಕರಾಗುತ್ತಾರೆ.

ತನ್ನನ್ನು ಅತಿ ಹೆಚ್ಚು ಭಾವ ಪರವಶತೆಗೆ ದೂಡುವ ಸನ್ನಿವೇಶಗಳೆಂದರೆ ಅದು ಭಕ್ತಿ ಮತ್ತು ಕರುಣಾರಸ ಎನ್ನುವ ಅಮ್ಮಣ್ಣಾಯರು ಶೃಂಗಾರವನ್ನೂ ಅಷ್ಟೇ ಸುಲಲಿತವಾಗಿ ಹಾಡಬಲ್ಲ ಸಾಮರ್ಥ್ಯವನ್ನು ಹೊಂದಿದವರು. ಹೊಡಬಡಿಯ ಪ್ರಸಂಗವಾದ ಮೈರಾವಣ ಕಾಳಗವನ್ನೂ ಸಮರ್ಥವಾಗಿ ಆಡಿಸಬಲ್ಲೆ ಎನ್ನುವ ಅಮ್ಮಣ್ಣಾಯರ ಇಷ್ಟದ ಪದ್ಯಗಳು ಭಕ್ತಿ ಮತ್ತು ಕರುಣ ರಸದ ಪದ್ಯಗಳು ಎಂದು ಅವರು ಒಪ್ಪಿಕೊಳ್ಳುತ್ತಾರೆ.  ದಾಮೋದರ ಮಂಡೆಚ್ಚರ ಹೆಸರು ಹೇಳುವಾಗಲೇ ಹನಿದುಂಬುವ ಕಣ್ಣುಗಳನ್ನು ಒರೆಸುವ ಅಮ್ಮಣ್ಣಾಯರು ಬೆಳಿಗ್ಗೆ ಎದ್ದ ಒಡನೆಯೇ ಕೇಳುವುದೇ ಮಂಡೆಚ್ಚರ ಪದ್ಯಗಳನ್ನು.

ಎಷ್ಟೇ ಚೆನ್ನಾಗಿ ರಾಗಗಳನ್ನು ಹಾಡಲು ಗೊತ್ತಿದ್ದರೂ ಭಾವ ಇಲ್ಲದೆ ಅಭಿನಯಕ್ಕೆ ಸ್ಪೂರ್ತಿ ಬರಲಾರದು ಎಂದು ಹೇಳುವ ಅಮ್ಮಣ್ಣಾಯರು ರಾಗದ ಜೊತೆಗೆ ಭಾವಗಳನ್ನು ಸಮ್ಮಿಳಿತಗೊಳಿಸಿ ಹಾಡುವವರು. ಸನ್ನಿವೇಶವನ್ನು ಅನುಭವಿಸಿ ಹಾಡುವುದರಲ್ಲಿ ಸಂಬಿಕೆ ಇಟ್ಟವರು. ಕರುಣಾರಸದಲ್ಲಿ ಎಷ್ಟೇ ಚೆನ್ನಾಗಿ ಹಾಡಿದರೂ ಧ್ವನಿ ಮತ್ತು ಭಾವ ಇಲ್ಲದಿದ್ದರೆ ದುಃಖ ಬರಲಾರದು ಎಂದು ಅವರ ಅಭಿಪ್ರಾಯ.  

ಅಮ್ಮಣ್ಣಾಯರು ಕೃಷಿ ಕಾಯಕದಲ್ಲೇ ತೊಡಗಿಸಿಕೊಂಡು ಮೇಳದ ತಿರುಗಾಟಕ್ಕೆ ಅಲಭ್ಯರಾಗುತ್ತಾರೆಯೋ ಅಥವಾ ಇಲ್ಲವೋ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಆಯ್ಕೆಯ ಪ್ರದರ್ಶನಗಳಿಗೆ ಲಭ್ಯರಿರುತ್ತಾರೆ ಎಂದೇ ಕಲಾಭಿಮಾನಿಗಳು ನಂಬಿದ್ದಾರೆ. ಆ ನಂಬಿಕೆಯನ್ನು ಅವರು ಹುಸಿಗೊಳಿಸದಿರಲಿ ಎಂದು ಹಾರೈಸುತ್ತೇನೆ. ಭಾವ, ರಾಗಗಳ ಮಾತು ಬಂದಾಗ ಕರುಣ, ಭಕ್ತಿಪ್ರಧಾನ ಪ್ರಸಂಗಗಳ ಪ್ರಸ್ತಾಪ ಬಂದಾಗ ಯಾವಾಗಲೂ ಅಮ್ಮಣ್ಣಾಯರ ಹೆಸರು ಉಲ್ಲೇಖವಾಗದೆ ಇರಲಾರದು.  ಮುಂದಿನ ಯಕ್ಷಾಭಿಮಾನಿ ಪೀಳಿಗೆಯು ಆ ಬಗ್ಗೆ  ಕೇಳಿದರೆ ಅದು ಉತ್ತರ ದೊರಕದ ಪ್ರಶ್ನೆಯಾಗದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments