Saturday, January 18, 2025
Homeಯಕ್ಷಗಾನಚಂದನ್ ಶೆಟ್ಟಿ, ಹೊಸ ಪ್ರಯೋಗ ಮತ್ತು ಯಕ್ಷಗಾನ

ಚಂದನ್ ಶೆಟ್ಟಿ, ಹೊಸ ಪ್ರಯೋಗ ಮತ್ತು ಯಕ್ಷಗಾನ

ಇತ್ತೀಚಿಗೆ ಅಂದರೆ ಒಂದೆರಡು ದಿನಗಳ ಹಿಂದೆ ಹೊಸ ಪ್ರಯೋಗಕ್ಕೆ ಮೊದಲು ಎಚ್ಚರ ಎಂದು ಬರೆದಿದ್ದೆ. ಈಗ ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಬರೆಯಬೇಕಾಗಿದೆ. ಈಗಾಗಲೇ ‘ಕೋಲು ಮಂಡೆ’ ಹಾಡಿನ ವಿವಾದ ಇನ್ನೂ ತಣ್ಣಗಾಗಿಲ್ಲ. ಧಾರ್ಮಿಕ ಪುರುಷರ, ನಮ್ಮ ನಾಡಿನ ಶ್ರೀಮಂತ ಜಾನಪದ ಪುಣ್ಯ ಪುರುಷರ ಹಾಡುಗಳನ್ನು ಕೂಡ ರಿಮಿಕ್ಸ್ ಮಾಡಿ ರಾಪ್ ಹಾಡುಗಳನ್ನಾಗಿ ಪರಿವರ್ತಿಸಿ ಆ ಮೂಲಕ ಜನಪ್ರಿಯತೆ ಪಡೆಯುವ ಹುಚ್ಚು ಕೆಲವರಿಗಿದೆ. ಚಂದನ್ ಶೆಟ್ಟಿಯವರ ಪ್ರಕರಣವು ರಾಜ್ಯಾದ್ಯಂತ ಮಾತ್ರವಲ್ಲ ಪ್ರಪಂಚದಾದ್ಯಂತ ವಿವಾದದ ಅಲೆಯನ್ನೇ ಎಬ್ಬಿಸಿತು. ನಮ್ಮ ಪುರಾಣದ ಅಥವಾ ಪೂರ್ವ ಪರಂಪರೆಯ ವ್ಯಕ್ತಿತ್ವವನ್ನು ಚಿತ್ರಿಸುವಾಗ ಅವರ ಘನತೆಗೆ ಕುಂದುಂಟಾದರೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಸತ್ಯವನ್ನು ಈ ಪ್ರಕರಣದಿಂದ ನಾವು ತಿಳಿಯಬೇಕು. ಆ ಹಾಡಿನ ಪಾತ್ರಗಳ ವೇಷಭೂಷಣಗಳು ಹೇಗಿರಬೇಕು ಎಂಬುದರ ಯೋಚನೆಯನ್ನೂ ಮಾಡದೇ ಒಟ್ಟಾರೆ ಈಗಿನ ಯುವಜನಾಂಗವನ್ನು ಆಕರ್ಷಿಸಲು ಈ ರೀತಿಯ ಪ್ರಯೋಗಕ್ಕೆ ಮುಂದಾದದ್ದು ವಿಪರ್ಯಾಸ. ಅಷ್ಟು ಒಳ್ಳೆಯ ಸುಮಧುರವಾದ ಜಾನಪದ ಹಾಡಿಗೆ ಕೋಲು ಮಂಡೆ ರಾಪ್ ಎಂಬ ಹೆಸರು ಕೊಟ್ಟು ಹಾಡಿನ ಮೂಲ ಸೌಂದರ್ಯವನ್ನೇ ಕೆಡಿಸಿಬಿಟ್ಟರೆ ಏನಾದೀತು? ಇದರಿಂದ ಜಾನಪದ ಅಭಿಮಾನಿಗಳು ಕೆರಳಿದರು. ಪ್ರತಿಭಟನೆಯ ವಾಸನೆ ಸಿಕ್ಕಿದಾಗ ಆ ಹಾಡನ್ನು ಚಂದನ್ ಶೆಟ್ಟಿ ಯು ಟ್ಯೂಬ್ ನಿಂದ ಅಳಿಸಿ ಹಾಕಬೇಕಾಯಿತು. ಮಾತ್ರವಲ್ಲ ಜಾನಪದ ಅಭಿಮಾನಿಗಳ ಕ್ಷಮೆಯನ್ನೂ ಕೇಳಬೇಕಾಯಿತು. ಈ ರೀತಿಯ ಹೊಸ ದೃಷ್ಟಿಕೋನದ ಪ್ರಯೋಗ ಎಲ್ಲಾ ರಂಗದಲ್ಲೂ ಇದೆ. ಸಾಹಿತ್ಯ ಕ್ಷೇತ್ರ ಈ ಚಾಳಿಯಲ್ಲಿ ಮುಂಚೂಣಿಯಲ್ಲಿದೆ. ಸಿನಿಮಾ, ಸಂಗೀತ, ನಾಟ್ಯಕ್ಷೇತ್ರ, ಎಲ್ಲಾ ರಂಗಕಲೆಗಳು ಹೀಗೆ ಎಲ್ಲದರಲ್ಲೂ ಕೆಲವು ಅಸಂಬದ್ಧ ಪ್ರಯೋಗಗಳೇ ನಡೆಯುತ್ತವೆ. ಯಕ್ಷಗಾನ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. 

ಯಕ್ಷಗಾನದಲ್ಲಿ ಏನು ಬೇಕಾದರೂ ತುರುಕಿ, ಯಾವ ಪ್ರಸಂಗ ಆಡಿದರೂ ಆಕ್ಷೇಪವಿಲ್ಲ. ಯಾಕೆಂದರೆ ಈಗಾಗಲೇ ಹಲವಾರು ಕಾಲ್ಪನಿಕ ಪ್ರಸಂಗಗಳ ಪ್ರದರ್ಶನ ನಡೆದಿದೆ. ಪುರಾಣ ಪ್ರಸಂಗಗಳನ್ನು ಮಾತ್ರ ಆಡಬೇಕೆಂದು ಎಲ್ಲಿಯೂ ನಿಯಮವಿಲ್ಲ. ಆದರೆ ಪುರಾಣ ಪ್ರಸಂಗಗಳನ್ನು ಆಡುವಾಗ ಮಾತ್ರ ಸರಿಯಾಗಿ ಪ್ರದರ್ಶಿಸಿ. ಆ ಕತೆಯೊಳಗೆ ಏನೇನನ್ನೋ ತುರುಕಲು ಹೋಗುವುದು ಅಕ್ಷಮ್ಯ. ಕತೆಯೊಳಗೆ ಇಲ್ಲದ ಪಾತ್ರದ ಚಿಂತನೆಗಳನ್ನು ಕಲಾವಿದನ ಸ್ವ ಚಿಂತನೆಯೊಂದಿಗೆ ಕಿಸೆಯಿಂದ ತೆಗೆದ ಮಾತಿನ ಮುತ್ತುಗಳನ್ನು ರಂಗದಲ್ಲಿ ಉದುರಿಸುವುದು ನಮ್ಮ ಪುರಾಣಗಳಿಗೆ ಮಾಡುವ ಅವಮಾನ. ಕೆಲವರಿಗೆ ಯೋಚನೆಗಳ ನಾಗಾಲೋಟವೇ ಉಂಟಾಗುತ್ತದೆ. ಹೊಸತು ಏನಾದರೂ ಕೊಡಬೇಕೆಂಬ ತುಡಿತ.  ಇರಲಿ. ಅದು ಒಳ್ಳೆಯದೇ. ಆದರೆ ನವನಾವೀನ್ಯ ಪ್ರಯೋಗಗಳ ಆತುರದಲ್ಲಿ ಅಬದ್ಧಗಳನ್ನು ಸೃಷ್ಟಿಸಿದರೆ ಅದು ಆಕ್ಷೇಪ ಮತ್ತು  ಪ್ರತಿಭಟನೆಗಳಿಗೆ ಕಾರಣವಾದೀತು. ಈಗ ಎಲ್ಲವೂ ಹಾಳಾಗಿದೆ ಎಂದು ವಿಮರ್ಶಕರು ಬೊಬ್ಬೆ ಹೊಡೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. ನಿಜವಾಗಿಯೂ ಅವರ ಕಾಳಜಿ ಮೆಚ್ಚಬೇಕಾದ್ದೇ. ಈಗ ಎಲ್ಲರಿಗೂ ಹೇಗಾದರೂ ಸರಿ. ತಾನು ಎಲ್ಲರಿಗಿಂತ ಭಿನ್ನ ಎಂದು ಗುರುತಿಸಿಕೊಳ್ಳುವ ಚಪಲ. ಇದು ಎಲ್ಲ ರಂಗವನ್ನೂ ಕಾಡುವ ಭೂತ. ಸಿನಿಮಾ ರಂಗ ಇಂತಹಾ ಹಲವಾರು ಪ್ರಯೋಗಗಳನ್ನು ಕಂಡಿದೆ. ಹಾಗೆಯೆ ಪ್ರತಿಭಟನೆ ವಿರೋಧಗಳನ್ನೂ ಎದುರಿಸಬೇಕಾಗಿ ಬಂದಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಇಳಿಯಬೇಕಾದ ಪರಿಸ್ಥಿತಿ ಬರುವ ಮುನ್ನವೇ ಯೋಚನೆ ಮಾಡಬೇಕಾದ್ದು ಬುದ್ಧಿವಂತನ ಲಕ್ಷಣ. ಈಗ ನೀವು ಯಾವುದೇ ಪುರಾಣಗಳನ್ನೂ ನಿಮಗೆ ಬೇಕಾದಂತೆ ಬದಲಿಸಿ ರಂಗ ಪ್ರಯೋಗ ಮಾಡಬಹುದು ಎಂದು ಭಾವಿಸಿದರೆ ಅದು ನಿಮ್ಮ ಮೂರ್ಖತನವಲ್ಲದೆ ಮತ್ತೇನು? ಇತ್ತೀಚೆಗಿನ ಚಂದನ್ ಶೆಟ್ಟಿಯ ಉದಾಹರಣೆ ನಮ್ಮ ಕಣ್ಣ ಮುಂದಿದೆ. ನಮ್ಮದೇ ಧರ್ಮ ನಾವು ಏನು ಬೇಕಾದರೂ ಮಾಡಬಹುದು. ಪುರಾಣ ಪುಣ್ಯ ಕತೆಗಳನ್ನು ತಿರುಚಿ ನಮಗೆ ಬೇಕಾದಂತೆ ಬರೆಯಬಹುದು ಎಂದು ಲೇಖಕರೂ ತಿಳಿದುಕೊಂಡಂತಿದೆ. ಬರಹಗಾರರು ಸ್ವಾತಂತ್ರ್ಯದ ಎಲ್ಲೆಮೀರಿ ಏನು ಬೇಕಾದರೂ ಬರೆಯಬಹುದು ಎಂದು ತಿಳಿದುಕೊಂಡಂತಿದೆ. ಹಲವಾರು ಎಡಚ ಬರಹಗಾರರು ಏನೇನೆಲ್ಲಾ ತಮಗೆ ತೋಚಿದಂತೆ ಬರೆದು ಹಾಕುತ್ತಿದ್ದಾರೆ. ಅದನ್ನು, ಅಂತಹ ಪಾತ್ರಚಿತ್ರಣಗಳನ್ನು ನಾವು ರಂಗದಲ್ಲಿ ಪ್ರದರ್ಶನ ನೀಡಲು ಕಾತರಿಸುತ್ತಿದ್ದೇವೆ. ಆದರೆ ಇತರ ಯಾವುದೇ ಧರ್ಮಗಳು ಹಾಗೆ ಪುರಾಣ ಗ್ರಂಥಗಳನ್ನು ತಿರುಚಲು ಯಾರಿಗೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಧರ್ಮಗಳನ್ನು, ಧರ್ಮಗ್ರಂಥಗಳಿಗೆ ಚ್ಯುತಿ ತರುವಂತಹ ಬರಹಗಳಿಗೆ ಅಲ್ಲಿ ನಿಷೇಧವಿದೆ. ಧರ್ಮಗ್ರಂಥಗಳ ವಿರುದ್ಧ  ಏನೂ ಬರೆಯುವ ಹಾಗಿಲ್ಲ. ಆ ಧರ್ಮಗಳಿಗೆ ಹೊರಗಿನವರು ಬರೆಯುವ ಮಾತನ್ನು ಬಿಡೋಣ. ಆಯಾಯಾ ಧರ್ಮಕ್ಕೆ ಒಳಪಟ್ಟವರೇ ಆ ಸಾಹಸಕ್ಕೆ ಮುಂದಾಗುವುದಿಲ್ಲ. ಅವರಿಗೆ ಧರ್ಮಶ್ರದ್ಧೆಯೂ ಇದೆ ಅದರ ಜೊತೆಗೆ ಮತಾಂಧತೆಯೂ ಇರಬಹುದೇನೋ. ಯಾಕೆಂದರೆ ಅವೆರಡೂ ಬೇರೆ ಬೇರೆಯಾದ ಸಂಗತಿಗಳು. ಮೊನ್ನೆಯ ಬೆಂಗಳೂರು ಘಟನೆಯು ಇದಕ್ಕೆ ಒಂದು ಉದಾಹರಣೆ.

ಆದರೆ ಮಹಾಭಾರತ, ರಾಮಾಯಣಗಳನ್ನು ಯಾರು ಬೇಕಾದರೂ ತಿರುಚಿ ಬರೆಯಬಹುದು. ಇಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯ ಕಂಡುಬರುತ್ತದೆ. ಅದು ಹೃದಯವೈಶಾಲ್ಯತೆಯೋ ಅಥವಾ ಧರ್ಮದ ಬಗೆಗಿನ ಅಸಡ್ಡೆಯೋ ಎಂದು ಅರ್ಥ ಆಗುವುದಿಲ್ಲ. ನಮ್ಮಲ್ಲಿ ಕೆಲವು ಬರಹಗಾರರಿಗೆ ಅಥವಾ ಕಲಾವಿದರಿಗೆ ಪುರಾಣ ಪಾತ್ರಗಳ ಬಗ್ಗೆ ವಿಪರೀತ ಮೋಹ ಬಂದುಬಿಡುತ್ತದೆ!!! ಅದಕ್ಕೆ ನೋಡಿ ವಿಪರೀತ ಪಾತ್ರಚಿತ್ರಣಗಳಿಗೆ ಮನಮಾಡುತ್ತಿದ್ದಾರೆ.ಪುರಾಣಗಳಲ್ಲಿ ಇಲ್ಲ ಸಲ್ಲದ್ದನ್ನೆಲ್ಲಾ ತಮ್ಮದೇ ದೃಷ್ಟಿಕೋನದಿಂದ ಚಿತ್ರಿಸಿ ಬರೆಯುತ್ತಿದ್ದಾರೆ. ದ್ರೌಪದಿಯ ಬಗ್ಗೆ ಯಾರೋ ಏನನ್ನೂ ಬರೆದ ಹಾಗೆ ಓದಿದ ನೆನಪಾಗುತ್ತದೆ. ದ್ರೌಪದಿಗೆ ಮನದ ಅಂತರಾಳದಲ್ಲಿ ಯಾರದೋ ಮೇಲೆ ಪ್ರೇಮವಿತ್ತು ಎನ್ನುವುದನ್ನು ಆತ ತನ್ನದೇ ಆದ ದೃಷ್ಟಿಕೋನದಲ್ಲಿ ಊಹಿಸಿ ಬರೆದಿದ್ದ. ಕುಂತಿಯ ಮನದ ಅಂತರಾಳವನ್ನು ಬರೆದರು. ಸೀತೆ ಯೋಚಿಸದ್ದನ್ನೆಲ್ಲಾ ಕತೆಯಾಗಿ ಬರೆದರು. ಕರ್ಣನ ಯೋಚನೆಗಳ ಬಗ್ಗೆ, ಭಾನುಮತಿಯ ಗುಪ್ತ ಆಲೋಚನೆಗಳ ಬಗ್ಗೆ ಹೀಗೆ ಹೊಸ ಹೊಸ ಭಾವಗಳನ್ನು ಚಿತ್ರಿಸಿದರು. ಅಂಬೆಯ ಹೊಸ ಹೊಸ ಯೋಚನೆಗಳು, ತುಮುಲಗಳನ್ನೆಲ್ಲಾ ಪ್ರಕಟಪಡಿಸಿದರು.  

ಇದು ಇಂದು ನಿನ್ನೆಯ ವಿಷಯವಾಯಿತು. ಪುರಾಣ ಕಾಲದಿಂದ ಮೊದಲ್ಗೊಂಡು ಈ ಭಿನ್ನತೆ ಬದಲಾವಣೆಗಳು ಆಗುತ್ತಲೇ ಇವೆ ಎಂಬುದನ್ನೂ ಒಪ್ಪಿಕೊಳ್ಳಬೇಕು. ಆದರೆ ಆಗಿನ ಬದಲಾವಣೆಗಳು ಧರ್ಮಕ್ಕೆ ಚ್ಯುತಿಯಾಗುವಂತೆ ಅವಹೇಳನಕಾರಿಯಾಗಿ ಇರಲಿಲ್ಲ ಎಂಬುದೂ ಸತ್ಯ, ವಾಲ್ಮೀಕಿ ರಾಮಾಯಣಕ್ಕೂ ತೊರವೆ ರಾಮಾಯಣಕ್ಕೂ ಅಲ್ಪಸ್ವಲ್ಪ ವ್ಯತ್ಯಾಸಗಳು. ಇನ್ನೂ ಕೆಲವು ಕವಿಗಳು ಬರೆದ ರಾಮಾಯಣಕ್ಕೂ ಮೂಲ ರಾಮಾಯಣಕ್ಕೂ ಏನೋ ವ್ಯತ್ಯಾಸ, ಭಿನ್ನತೆಗಳು. ವ್ಯಾಸ ಭಾರತ, ಕುಮಾರವ್ಯಾಸ ಭಾರತದಲ್ಲೂ ಕಾಣುವ ವ್ಯತ್ಯಾಸಗಳಿವೆ. ಪಂಪನಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತನಗೆ ಆಶ್ರಯ ಕೊಟ್ಟ ದೊರೆಯನ್ನೇ ಅರ್ಜುನನಿಗೆ ಹೋಲಿಸಿ ಬರೆದಿದ್ದಾನೆ. ಮಾತ್ರವಲ್ಲದೆ ತನ್ನ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯವೆಂದೇ ಹೆಸರಿಸಿದ್ದಾನೆ. ಆದರೆ ಒಂದಂತೂ ಸತ್ಯ. ಧರ್ಮಶ್ರದ್ದೆಯವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬದಲಾವಣೆ ಹೊಸತನ ಎಂದು ಪುರಾಣ ಪಾತ್ರಗಳನ್ನು ಅವಹೇಳಕಾರಿಯಾಗಿ ಚಿತ್ರಿಸುತ್ತಿರುವವರು ಸಾವಿರ ಬಾರಿ ಯೋಚಿಸಿ ಮುಂದಡಿಯಿಡಬೇಕಾದುದು ಇಂದಿನ ಅನಿವಾರ್ಯತೆ. ಅದನ್ನು ಬಿಟ್ಟು ಆನೆ ನಡೆದದ್ದೇ ದಾರಿ ಎಂಬಂತೆ ಮುಂದೆ ಸಾಗಿದರೆ ದೊಡ್ಡ ಕಂದಕಕ್ಕೆ ಬಿದ್ದ ಆನೆಯ ಗತಿಯಾದೀತು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments