Saturday, January 18, 2025
Homeಪುಸ್ತಕ ಮಳಿಗೆಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಗ್ರಂಥ - ಸವ್ಯಸಾಚಿ 

ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಗ್ರಂಥ – ಸವ್ಯಸಾಚಿ 

ಸವ್ಯಸಾಚಿ ಎಂಬ ಈ ಪುಸ್ತಕವು ತೆಂಕುತಿಟ್ಟಿನ ಖ್ಯಾತ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಗ್ರಂಥ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ ) ಸಂಪಾಜೆ, ಕಲ್ಲುಗುಂಡಿ ಎಂಬ ಪ್ರತಿಷ್ಠಿತ ಸಂಸ್ಥೆಯೇ ಈ ಗ್ರಂಥದ ಪ್ರಕಾಶಕರು. ಶ್ರೀ ಕೆ. ಗೋವಿಂದ ಭಟ್ಟರ ಬಗೆಗೆ ಕಲಾಭಿಮಾನಿಗಳೆಲ್ಲರಿಗೂ ತಿಳಿದೇ ಇದೆ. ಯಕ್ಷಗಾನ ದಶಾವತಾರಿ ಎಂದು ಕರೆಸಿಕೊಂಡರು. ರಾಷ್ಟ್ರಪ್ರಶಸ್ತಿ ವಿಜೇತರೂ ಹೌದು. ಕಲಾವಿದನಾಗಿ ಇವರೊಬ್ಬ ಮಹಾ ಸಾಧಕ. ಅಲ್ಲದೆ ಮಣಿಮೇಖಲೆ, ರತ್ನಕಂಕಣ, ಮೂರೂವರೆ ವಜ್ರಗಳು ಮೊದಲಾದ ಪ್ರಸಂಗಗಳನ್ನೂ ರಚಿಸಿ ಯಶಸ್ವಿಯಾಗಿದ್ದಾರೆ. ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಶಿಷ್ಯನಾಗಿ ಹರಿದಾಸ ಶ್ರೀ ಮಲ್ಪೆ ರಾಮದಾಸ ಸಾಮಗ ಮೊದಲಾದವರ ಪ್ರಭಾವ ಮತ್ತು ಮಾರ್ಗದರ್ಶನಗಳಿಂದ ಹಂತ ಹಂತವಾಗಿ ಬೆಳೆದೇ ಶ್ರೀಯುತರು ಖ್ಯಾತರಾಗಿದ್ದಾರೆ. ಬದುಕಿಗಾಗಿ ಯಕ್ಷಗಾನವನ್ನೇ ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮೂಲ್ಕಿ, ಸುರತ್ಕಲ್, ಕುಂಡಾವು ಮೇಳಗಳಲ್ಲಿ ಪ್ರಾರಂಭದ ತಿರುಗಾಟಗಳು. ಪ್ರಸ್ತುತ ಧರ್ಮಸ್ಥಳ ಮೇಳದಲ್ಲಿ ದೀರ್ಘಕಾಲದಿಂದ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀಯುತರ ಬಗೆಗೆ ಬರೆಯುವ ಅವಕಾಶ ಸಿಗುವುದು ಒಂದು ಭಾಗ್ಯವೆಂದು ಭಾವಿಸುತ್ತೇನೆ.

ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಗೋವಿಂದ ಭಟ್ಟರನ್ನು ಅಭಿನಂದನ ಗ್ರಂಥಾವರಣದೊಂದಿಗೆ ಅಭಿನಂದಿಸಬೇಕೆಂಬುದು  ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶಯವಾಗಿತ್ತು. ಅದಕ್ಕನುಗುಣವಾಗಿ ಸವ್ಯಸಾಚಿ ಎಂಬ ಅಭಿನಂದನ ಗ್ರಂಥವು ಮುದ್ರಿಸಲ್ಪಟ್ಟಿತ್ತು. 2015 ನವೆಂಬರ್ ತಿಂಗಳಿನಲ್ಲಿ ಸಂಪಾಜೆ ಯಕ್ಷೋತ್ಸವದ ರಜತ ಮಹೋತ್ಸವದ ಶುಭಾವಸರದಲ್ಲಿ ಪ್ರತಿಷ್ಠಾನವು ಸವ್ಯಸಾಚಿ ಎಂಬ ಅಭಿನಂದನ ಗ್ರಂಥವಾರಣವನ್ನು ಮಾಡಿ ಶ್ರೀ ಕೆ. ಗೋವಿಂದ ಭಟ್ಟರನ್ನು ಅಭಿನಂದಿಸಿದ್ದು ಸಂತೋಷದ ವಿಚಾರ. ಸವ್ಯಸಾಚಿ ಎಂಬ ಗ್ರಂಥದ ಸಂಪಾದಕರು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟರು. ಈ ಪುಸ್ತಕವು ಒಟ್ಟು 306 ಪುಟಗಳಿಂದ ಕೂಡಿದೆ. ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಟಿ. ಶ್ಯಾಮ್ ಭಟ್, ಪ್ರೊ। ಅಮೃತ ಸೋಮೇಶ್ವರ, ಶ್ರೀ ಕುಂಬಳೆ ಸುಂದರ ರಾವ್, ಡಾ| ಎಂ. ಪ್ರಭಾಕರ ಜೋಶಿ, ಪ್ರೊ| ಟಿ. ಶ್ರೀಕೃಷ್ಣ ಭಟ್, ಶ್ರೀ ಬರೆ ಕೇಶವ ಭಟ್, ಡಾ| ಕಬ್ಬಿನಾಲೆ ವಸಂತ ಭಾರದ್ವಾಜ, ಸುಣ್ಣಂಬಳ ವಿಶ್ವೇಶ್ವರ ಭಟ್, ಡಾ| ಬಿ. ಪ್ರಭಾಕರ ಶಿಶಿಲ, ಕೃಷ್ಣ ಪ್ರಕಾಶ ಬಳ್ಳಂಬೆಟ್ಟು, ಬಿ. ಭುಜಬಲಿ ಧರ್ಮಸ್ಥಳ, ಅನಿತಾ ನರೇಶ್ ಮಂಚಿ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ವಾಸುದೇವ ರಂಗಾ ಭಟ್, ಪ್ರೊ| ಎಂ. ಎಲ್. ಸಾಮಗ, ಡಾ| ಎಂ. ಪ್ರಭಾಕರ ಜೋಶಿ, ಉಡುಪುಮೂಲೆ ರಘುರಾಮ ಭಟ್, ಶೇಣಿ ವೇಣುಗೋಪಾಲ,ಶೇಣಿ ಮುರಳಿ, ಪದ್ಯಾಣ ಶಂಕರನಾರಾಯಣ ಭಟ್, ನಾ. ಕಾರಂತ ಪೆರಾಜೆ, ಶ್ರೀಮತಿ ಕೆ. ಸಾವಿತ್ರಿ ಅಮ್ಮ, ಕೆ. ಗೋವಿಂದ ಭಟ್, ಡಾ. ಪಾದೆಕಲ್ಲು ವಿಷ್ಣು ಭಟ್, ಅನುಪಮಾ ರಾಘವೇಂದ್ರ ಇವರುಗಳ ಲೇಖನಗಳಿವೆ. ಬಳಿಕ ‘ಅನುಭಂದಗಳು’ ಶೀರ್ಷಿಕೆಯಡಿ ಗೋವಿಂದ ಭಟ್ಟರ ಸಂಕ್ಷಿಪ್ತ ಜೀವನ ವಿವರಗಳು, ಪ್ರಸಂಗದಲ್ಲಿ ವಹಿಸಿದ ಪಾತ್ರಗಳು, ಪ್ರಶಸ್ತಿ, ಅಭಿನಂದನೆ, ಸನ್ಮಾನ, ಪುರಸ್ಕಾರ ಗೌರವಾರ್ಪಣೆಗಳ ಬಗೆಗೆ ಮಾಹಿತಿಗಳಿವೆ. ಭಾಗ ಎರಡು ತಲೆಬರಹದಡಿ ‘ಯಕ್ಷಗಾನ ಚಿಂತನೆ’ ಎಂಬ ಗೋವಿಂದ ಭಟ್ಟರ ಯಕ್ಷಗಾನದ ಬಗೆಗೆ ಸುದೀರ್ಘ ಲೇಖನವೂ ಇದೆ. ಅಲ್ಲದೆ ಮೂವತ್ತಾರು ಪುಟಗಳಲ್ಲಿ ಸುಮಾರು ಎಂಬತ್ತಕ್ಕೂ ಹೆಚ್ಚಿನ ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳಿವೆ. ಗೋವಿಂದ ವೈಭವ ಕಾರ್ಯಕ್ರಮದ ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನೂ ಇದು ಒಳಗೊಂಡಿದೆ. ಸಂಗ್ರಹಯೋಗ್ಯವಾದುದು. ಖ್ಯಾತ ಕಲಾವಿದರ ಬಗೆಗಿನ ಅತ್ಯುತ್ತಮ ಪುಸ್ತಕ. 

RELATED ARTICLES

1 COMMENT

  1. ರಾಜ್ಯೋತ್ಸವ ಪ್ರಶಸ್ತಿ ಅಲ್ಲವೋ?? ರಾಷ್ಟ್ರ ಪ್ರಶಸ್ತಿ ದೊರಕಿದೆಯೇ??

LEAVE A REPLY

Please enter your comment!
Please enter your name here

Most Popular

Recent Comments