Friday, September 20, 2024
Homeಪುಸ್ತಕ ಮಳಿಗೆರಾನಂ ಪ್ರಸಂಗ ಸಂಪುಟ - ಡಾ। ಕೆ.ಎಂ. ರಾಘವ ನಂಬಿಯಾರ್ 

ರಾನಂ ಪ್ರಸಂಗ ಸಂಪುಟ – ಡಾ। ಕೆ.ಎಂ. ರಾಘವ ನಂಬಿಯಾರ್ 

ಡಾ। ಕೆ.ಎಂ. ರಾಘವ ನಂಬಿಯಾರರು ನಮ್ಮ ಹೆಮ್ಮೆಯ ಕಲೆ ಯಕ್ಷಗಾನದ ಶ್ರೇಷ್ಠ ವಿದ್ವಾಂಸರು. ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರ. ಲೇಖಕರಾಗಿ, ವಿಮರ್ಶಕರಾಗಿ, ಕಲಾವಿದರಾಗಿ, ಪ್ರಸಂಗಕರ್ತರಾಗಿ ಎಲ್ಲರಿಗೂ ಸುಪರಿಚಿತರು. ಯಕ್ಷಗಾನದ ಸರ್ವ ಅಂಗಗಳಲ್ಲಿಯೂ ಪರಿಣತಿಯನ್ನು ಹೊಂದಿ ಇತರರಿಗೆ ತಿಳಯಹೇಳಬಲ್ಲವರು. ಮೂಲತಃ ಇವರು ಕೇರಳದವರಾದರೂ ಶ್ರೀಯುತರ ತೀರ್ಥರೂಪರು ಕಾರ್ಕಳ ಸಮೀಪದ ಹಿರೇಬೈಲೂರಿನಲ್ಲಿ ವೈದ್ಯರಾಗಿದ್ದು ೧೯೫೮ರಲ್ಲಿ ಕಾರ್ಕಳ ನಗರಕ್ಕೆ ಬಂದು ನೆಲೆಸಿದ್ದರು. ಇವರ ಮನೆಯು ಒಂದು ಪೌರಾಣಿಕ ಅವರಣವನ್ನೇ ಹೊಂದಿತ್ತು. ಪುರಾಣ ಕಾವ್ಯಗಳ ಓದು, ಭಗವದ್ಗೀತೆಯ ಪಾರಾಯಣಗಳ ಪುರಾಣ ಅಧ್ಯಾತ್ಮಗಳ ಸಂಬಂಧವಿಟ್ಟುಕೊಂಡೇ ಬೆಳೆದವರು. ಪರಿಸರವು ವ್ಯಕ್ತಿನಿರ್ಮಾಣವನ್ನು ಮಾಡುತ್ತದೆ ಎಂಬುದಕ್ಕೆ  ರಾಘವ ನಂಬಿಯಾರರೇ ನಿದರ್ಶನ. ಆ ಸಮಯದಲ್ಲಿ ಮನೋರಂಜನೆಗಾಗಿ ಇದ್ದುದು ಯಕ್ಷಗಾನ ಎಂಬ ಮಾಧ್ಯಮ ಮಾತ್ರ. ಪ್ರದರ್ಶನಗಳನ್ನು ಆಸಕ್ತಿಯಿಂದ ನೋಡಿ ಮನನ ಮಾಡಿಕೊಂಡಿದ್ದರು. ಇವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕಾರ್ಕಳ ಶ್ರೀ ವೆಂಕಟ್ರಮಣ ದೇವಳದ ಸಮೀಪ ಕಾರ್ಯಾಚರಿಸುತ್ತಿದ್ದ ಸಂಘದ ತಾಳಮದ್ದಳೆಗಳಲ್ಲಿ ಅಧ್ಯಾಪಕರಾದ ಶ್ರೀ ವಾಮನ ಪ್ರಭುಗಳ ಪ್ರೇರೇಪಣೆಯಿಂದ ಅರ್ಥ ಹೇಳಲು ಆರಂಭಿಸಿದ್ದರು. ಪದವಿ ಶಿಕ್ಷಣವನ್ನು ಪಡೆಯುವಾಗಲೂ ಭಾಗವಹಿಸುತ್ತಿದ್ದರು. ಹರಿದಾಸರೆಲ್ಲಾ ಆ ಕಾಲಕ್ಕೆ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಕಾರಣದಿಂದ ಮಾತಿನಿಂದಲೇ ರಂಗ ನಿರ್ಮಾಣ ಮಾಡಬಹುದೆಂಬ ಸೂಕ್ಷ್ಮತೆಯನ್ನು ಚತುರಮತಿಗಳಾದ ನಂಬಿಯಾರರು ಅರಿತುಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಪಳಗಿದ ಇವರು ಮುಮ್ಮೇಳದ ಜೊತೆಗೆ ಹಿಮ್ಮೇಳವನ್ನೂ ಕರಗತ ಮಾಡಿಕೊಂಡಿದ್ದರು. ರಾಘವ ನಂಬಿಯಾರರು ಸಂಸ್ಕೃತ ಎಂ. ಎ . ಪದವೀಧರರು. ಅವರು ರಚಿಸಿದ ‘ಹಿಮ್ಮೇಳ’ ಎಂಬ ಬೃಹತ್ ಸಂಶೋಧನಾ ಗ್ರಂಥ ಯಕ್ಷಗಾನ ಕಲಾಲೋಕಕ್ಕೆ ಒಂದು ಅನುಪಮ ಕೊಡುಗೆಯಾಗಿದೆ. ಈ ಗ್ರಂಥಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ। ಕೆ.ಎಂ. ರಾಘವ ನಂಬಿಯಾರರು ಉಭಯ ತಿಟ್ಟುಗಳ ಪರಿಣಿತರು. ಹಿರಿಯ ಕಲಾವಿದರೆಲ್ಲರ ಒಡನಾಟ ಇವರಿಗೆ ಯಕ್ಷಗಾನದ ಸರ್ವ ವಿದ್ಯೆಗಳನ್ನು ತಿಳಿದುಕೊಳ್ಳಲು ಪೂರಕವಾಯಿತು. ಇವರು ಪತ್ರಿಕಾ ರಂಗದಲ್ಲೂ ವ್ಯವಸಾಯವನ್ನು ಮಾಡಿದ್ದರು. ಹಿಮ್ಮೇಳ, ದೀವಟಿಗೆ, ರಂಗಸ್ಥಳದ ಬೆಳಕು, ದ್ರಾವಿಡ ನಾಡು-ನುಡಿ, ಮದ್ದಳೆಯ ಮಾಯಾಲೋಕ, ಯಾಜಿ ಭಾಗವತರು, ಚಿನ್ನದ ತಾಳಿ, ಮುಂದಲೆ, ವಿಲೋಕನ, ಆಶುವೈಖರಿ ಮೊದಲಾದುವುಗಳು  ಇವರು ರಚಿಸಿದ ಗ್ರಂಥಗಳು. ‘ರಂಗ ವಿಚಿಕಿತ್ಸೆ’ ಎಂಬುದು ನಂಬಿಯಾರರ ವಿಶಿಷ್ಟ ಕೃತಿ. ಯಕ್ಷಗಾನದ ಅನೇಕ ವಿದ್ವಾಂಸರ, ಹಿರಿಯ ಕಲಾವಿದರ ಸಂದರ್ಶನ ನಡೆಸಿ ದಾಖಲೀಕರಣಗೊಳಿಸಿದ ಸಿತ್ಲ ಫೌಂಡೇಶನ್ ನ ಸಿತ್ಲ ರಂಗನಾಥ ರಾವ್ ನಂಬಿಯಾರರ ವಿಚಾರಧಾರೆಯನ್ನು ಈ ಪುಸ್ತಕದಲ್ಲಿ ನಿರೂಪಿಸಿರುತ್ತಾರೆ. ಶ್ರೀಧರ ಡಿ. ಎಸ್ , ರಾಜಕುಮಾರ್ ಪೈವಳಿಕೆ,ಧನಂಜಯ ನೆಲ್ಯಾಡಿ, ಸಮೀರ್ ದಾಮ್ಲೆಯವರ ಲೇಖನಗಳು ಈ ಹೊತ್ತಗೆಯಲ್ಲಿವೆ. ಈ ಕೃತಿಯ ಬಗ್ಗೆ ಮದ್ದಳೆಗಾರರಾದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವೊಂದನ್ನು ಬರೆದಿದ್ದರು. ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ನಂಬಿಯರರ ಕೊಡುಗೆ ಅಪಾರ. ಎಲ್ಲವೂ ಯಶಸ್ವೀ ಪ್ರಸಂಗಗಳು. ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ, ವಜ್ರಧರ ವಿಲಾಸ, ರಘುವಂಶ, ಚಾರು ಚರಿತೆ, ಮಣಿಕಂಠ ಚರಿತೆ ಎಂಬ ಪ್ರಸಂಗಗಳನ್ನು ಬರೆದಿರುತ್ತಾರೆ. ಇವುಗಳಲ್ಲಿ ಚಕ್ರೇಶ್ವರ ಪರೀಕ್ಷಿತ,  ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ, ವಜ್ರಧರ ವಿಲಾಸ, ರಘುವಂಶ ಎಂಬ ಐದು ಪ್ರಸಂಗಗಳ ಸಂಪುಟವೇ ‘ರಾನಂ ಪ್ರಸಂಗ ಸಂಪುಟ’ ಎಂಬ ಕೃತಿಯ ರೂಪದಲ್ಲಿ ೨೦೧೫ರಲ್ಲಿ ಲೋಕಾರ್ಪಣೆಗೊಂಡಿತು. ರಾನಂ ಎಂಬುದು ನಂಬಿಯಾರರ ಕಾವ್ಯನಾಮ.  ಅದೇ ಹೆಸರಿನಲ್ಲಿ ಪುಸ್ತಕವು ಪ್ರಕಟವಾಯಿತು. ಈ ಪುಸ್ತಕವನ್ನು ನಂಬಿಯಾರರು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿನಯಪೂರ್ವಕ ಅರ್ಪಿಸಿ ಅವರನ್ನು ಯಕ್ಷಗಾನದ ಆಕೃತಿಗೆ ನಿಷ್ಠರಾಗಿ ಈ ರಂಗವನ್ನು ನಮ್ಮ ಕಾಲದ ವರೆಗೆ ಸುಸ್ಥಿತಿಯಲ್ಲಿ ತಲುಪಿಸಿದ ಧರ್ಮಸ್ಥಳ ಮೇಳದ ಯಜಮಾನ ಎಂದು ಹೇಳಿ ಗೌರವಿಸಿದ್ದಾರೆ. ಈ ಕೃತಿಯ ಪ್ರಕಾಶಕರು ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್, ಉಡುಪಿ. ಪ್ರಕಾಶಕರಾಗಿ ಶ್ರೀ ಹೇರಂಜೆ ಕೃಷ್ಣ ಭಟ್ಟರು ರಾನಂ ಪ್ರಸಂಗ ಸಂಪುಟ ಕೃತಿಯನ್ನು ಇದು ಇತಿಹಾಸ ನಿರ್ಮಿಸಿದ ವರ್ತಮಾನ ಎಂದು ಹೇಳಿದ್ದಾರೆ. ಋಣಭಾರ ಎಂಬ ಶೀರ್ಷಿಕೆಯಡಿ ನಂಬಿಯಾರರು ಲೇಖಕನಾಗಿ ತಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ ಕೃತಾರ್ಥರಾಗಿರುವರು. ಐದು ಪ್ರಸಂಗಗಳ ಒಂದು ಗೊಂಚಲು ಇದು. ಅಲ್ಲದೆ ಅನುಬಂಧ ೧, ಅನುಬಂಧ ೨ ವಿಭಾಗಗಳಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಡಾ. ಅಮೃತ ಸೋಮೇಶ್ವರ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಕಡತೋಕ ಮಂಜುನಾಥ ಭಾಗವತರು, ಕುಂಬಳೆ ಸುಂದರ ರಾವ್, ಪ್ರೊ. ಕೇಶವ ಉಚ್ಚಿಲ, ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ಟರು  ಡಾ। ಕೆ.ಎಂ. ರಾಘವ ನಂಬಿಯಾರರ ಮತ್ತು ಅವರ ಪ್ರಸಂಗಗಳ ಬಗೆಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಅದನ್ನು ಓದಿಯೇ ನಾವು ಸಂತೋಷಪಡಬೇಕು. ಅತ್ಯಂತ ಉಪಯುಕ್ತ ಕೃತಿ ಇದು. ಒಟ್ಟು ೩೪೩ ಪುಟಗಳ ಶ್ರೇಷ್ಠ ಹೊತ್ತಗೆಯಾಗಿ ರಾನಂ ಪ್ರಸಂಗ ಸಂಪುಟವು ಓದುಗರ ಕೈ ಸೇರಿತ್ತು.  ಡಾ। ಕೆ.ಎಂ. ರಾಘವ ನಂಬಿಯಾರರ ಚಕ್ರೇಶ್ವರ ಪರೀಕ್ಷಿತ,  ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುವ ಅವಕಾಶವು ಶ್ರೀ ಕಟೀಲು ಮೇಳದಲ್ಲಿ ಒದಗಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. 

ಲೇಖನ: ರವಿಶಂಕರ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments