ರಂಗದ ಉತ್ಸಾಹವೇ ಹಾಗೆ. ಅದಕ್ಕೆ ಸುತ್ತಮುತ್ತಲಿನ ಹುಮ್ಮಸ್ಸಿನ ವಾತಾವರಣವೂ ಪೂರಕವಾದರೆ ಮತ್ತೆ ಕೇಳಬೇಕೆ? ಉತ್ತಮ ಹಿಮ್ಮೇಳ, ಮಾತನಾಡುವ ಎದುರು ಪಾತ್ರಧಾರಿಗಳು, ಪ್ರೋತ್ಸಾಹಿಸುವ ಪ್ರೇಕ್ಷಕರು ಇವೆಲ್ಲಾ ಒದಗಿಬಂದರೆ ಕಲಾವಿದನಾದವನಿಗೆ ಎಲ್ಲಿಲ್ಲದ ಉತ್ಸಾಹ ಬಂದು ಬಿಡುತ್ತದೆ. ಆ ಉತ್ಸಾಹದ ಭರದಲ್ಲಿ ನಡೆಯುವ ಅಷ್ಟೇನೂ ಆರೋಗ್ಯಕರವಲ್ಲದ ಚರ್ಚೆ ಕೆಲವೊಮ್ಮೆ ಕಸಿವಿಸಿಯನ್ನುಂಟು ಮಾಡುವುದಂತೂ ಸತ್ಯ. ಆದ್ದರಿಂದ ಅತಿ ಉತ್ಸಾಹ ಮತ್ತು ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಮಾರಕವಾದಂತಹ ಫಲಿತಾಂಶಗಳನ್ನು ತಂದುಕೊಡುತ್ತದೆ ಎಂಬುದು ಅನುಭವವೇದ್ಯ.
ಪಾತ್ರಧಾರಿಗಳೇನೂ ಸರ್ವಜ್ಞರಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳು ತಿಳಿದಿರಬೇಕೆಂದೇನೂ ಇಲ್ಲ. ಒಟ್ಟು ಪ್ರದರ್ಶನಗಳಲ್ಲಿ ಒದಗಿ ಬಂದ ಮಾನವ ಸಂಪನ್ಮೂಲಗಳಲ್ಲಿ ಅಥವಾ ಕಲಾವಿದರಲ್ಲಿ ‘The Best’ ಪಾತ್ರಧಾರಿಗಳನ್ನು ಗುರುತಿಸಿ ಉತ್ತಮ ಪಾತ್ರಗಳನ್ನು ಅವರಿಗೆ ನೀಡಲಾಗುತ್ತದೆ ಎನ್ನುವುದು ಸತ್ಯವಾದರೂ ಎಲ್ಲ ಸಂದರ್ಭಗಳನ್ನು ಈ ಅಲಿಖಿತ ನಿಯಮವನ್ನು ಪಾಲಿಸಲು ಹಲವಾರು ತೊಡಕುಗಳಿವೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು.
ಮೊದಲೇ ಹೇಳಿದಂತೆ ಯಾರೂ ಪರಿಪೂರ್ಣರಲ್ಲ ಎಂಬ ವಿಷಯವನ್ನು ಗಮನದಲ್ಲಿಟ್ಟು ವ್ಯವಹರಿಸಿದರೆ ಎಲ್ಲವೂ ಸುಗಮವಾಗಿ ನಡೆದುಕೊಂಡು ಹೋಗುತ್ತದೆ. ಆದರೆ ಕೃಷ್ಣನ ಪಾತ್ರಧಾರಿಯು ತನ್ನ ಪಾತ್ರಕ್ಕೆ ಸಂಬಂಧಪಟ್ಟ ಸಮಗ್ರ ಮಾಹಿತಿಗಳನ್ನೂ ಅಭ್ಯಸಿಸಿಯೇ ರಂಗಕ್ಕೆ ಬರಬೇಕೆ? ರಾವಣ, ವಾಲಿ, ಅರ್ಜುನ, ಭೀಮ ಪಾತ್ರಧಾರಿಗಳು ಪುರಾಣಗಳ ಇಂಚಿಂಚನ್ನೂ ಬಿಡದೆ ತನಗೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆಹಾಕಿ ಮನನ ಮಾಡಿಕೊಂಡೇ ವೇಷ ಮಾಡುತ್ತಾರೆಯೇ? ಈ ಪ್ರಶ್ನೆಗೆ ಉತ್ತರ ನಕಾರಾತ್ಮಕವೇ ಸರಿ. ಹಾಗಾಗಬೇಕಾದರೆ ವಿದ್ವಾಂಸರೇ ರಂಗದಲ್ಲಿ ವೇಷ ಮಾಡಬೇಕಷ್ಟೆ. ಅಷ್ಟಿಲ್ಲದಿದ್ದರು ಪ್ರಸಂಗಕ್ಕೆ ಅಗತ್ಯವಾದಷ್ಟು, ಪಾತ್ರಪೋಷಣೆಗೆ ಅಗತ್ಯವಿದ್ದಷ್ಟು ಅಧ್ಯಯನ ಮಾಡಿದರೂ ಸಾಕಾಗುತ್ತದೆ.
ಆದರೆ ಇಲ್ಲೊಂದು ಸೂಕ್ಷ್ಮ ಸಮಸ್ಯೆಯಿದೆ. ಎದುರು ಪಾತ್ರಧಾರಿ ತಿಳುವಳಿಕೆಯುಳ್ಳವನೂ ಸಹಪಾತ್ರಧಾರಿ ದುರ್ಬಲನೂ ಆಗಿದ್ದರೆ ಮತ್ತು ಅವರೊಳಗೆ ‘ಹೊಂದಾಣಿಕೆ’ ಇಲ್ಲದಿದ್ದರೆ ರಂಗದಲ್ಲಿ ‘ವಿಷಮ ಸನ್ನಿವೇಶ’ ಗಳುಂಟಾಗುತ್ತದೆ. ಬಣ್ಣದ ಮನೆಯ ಮುನಿಸು ರಂಗದಲ್ಲಿ ಪ್ರತಿಫಲಿತವಾಗುವ ಸಂದರ್ಭಗಳು ಎಷ್ಟೋ ಬಂದಿವೆ.
‘ನಾನು’ ಎಂಬ ಭಾವ ಪ್ರಕಟವಾಗಿ ಕೆಲವೊಮ್ಮೆ ಎದುರು ಪಾತ್ರಧಾರಿಯ ಬೌದ್ಧಿಕ ಸಾಮರ್ಥ್ಯವನ್ನು ತಿಳಿದೂ ತಿಳಿಯದಂತೆ ನಟಿಸಿ ಉತ್ತರಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ಕೇಳುವುದು ಸಮಂಜಸವಲ್ಲ.
ನಿನ್ನ ದಶನಾಮಗಳನ್ನು ಹೇಳು ಎಂದೋ ಅಥವಾ ನಿನಗೆ ಹತ್ತು ಹೆಸರುಗಳು ಯಾವ ಕಾರಣಕ್ಕೆ ಬಂತು ಎಂದು ಅನಿರೀಕ್ಷಿತವಾಗಿ ಎದುರು ಪಾತ್ರಧಾರಿಯು ಅರ್ಜುನ ಪಾತ್ರಧಾರಿಯಲ್ಲಿ ಕೇಳಿದರೆ ಅಷ್ಟೆಲ್ಲವನ್ನೂ ತಿಳಿಯದ ಅರ್ಜುನ ಪಾತ್ರಧಾರಿಯು ಏನು ತಾನೇ ಮಾಡಬೇಕು? ಇಲ್ಲಿ ಪಾತ್ರಧಾರಿಯ ಜೊತೆಗೆ ಅರ್ಜುನನ ಪಾತ್ರವೂ ಸೋಲುತ್ತದೆ. ಅರ್ಜುನ ಹೆಸರು ಸ್ವತಃ ಅರ್ಜುನನಿಗೇ ತಿಳಿದಿಲ್ಲ ಎಂಬುದು ತೀರಾ ಹಾಸ್ಯಾಸ್ಪದವಾಗುತ್ತದೆ ಹಾಗೂ ಆ ರೀತಿಯ ಚಿತ್ರಣ ಇಡೀ ರಂಗದ ಸೋಲು ಎಂದೇ ಪ್ರತಿಬಿಂಬಿತವಾಗುತ್ತದೆ.
‘ಕೃಷ್ಣ ಸಂಧಾನ’ದಲ್ಲಿ ಪಾಂಡವರೈವರಿಗೆ ಗ್ರಾಮಗಳನ್ನು ಕೇಳುವ ಬಗ್ಗೆ ಉಲ್ಲೇಖಿಸುವ ಸಂದರ್ಭದಲ್ಲಿ ಕೂಡಾ ಈ ಐದು ಗ್ರಾಮಗಳ ಹೆಸರುಗಳನ್ನು ಕೇಳಿ ಎದುರು ಪಾತ್ರಧಾರಿಯನ್ನು ಪೇಚಿಗೆ ಸಿಲುಕಿಸಿದ ಘಟನೆಗಳೂ ನಡೆದಿದ್ದರೆ ಹಾಗೂ ಉದ್ದೇಶಪೂರ್ವಕವೂ ಆಗಿದ್ದರೆ ಅದು ಆಕ್ಷೇಪಾರ್ಹ. ಅಥವಾ ಎದುರು ಪಾತ್ರಧಾರಿಗಳಲ್ಲಿ ಆ ಪಾತ್ರವು ಧರಿಸುವ ಆಯುಧ, ರಥಗಳ ಹೆಸರುಗಳನ್ನು ಬೇಕೆಂದೇ ಪ್ರಶ್ನಿಸುವುದು. ಭೀಮನ ಗದೆಯ ಹೆಸರೋ, ರಾಮನ ಬಿಲ್ಲು, ರಾವಣನ ಖಡ್ಗ ಇತ್ಯಾದಿಗಳ ಹೆಸರುಗಳನ್ನು ಕೇಳಿ ಕೆಣಕುವುದು ಕೆಲವೊಮ್ಮೆ ರಂಗದಲ್ಲಿ ಕಂಡುಬರುವ ದೃಶ್ಯಗಳಾದರೂ ಈ ಎಲ್ಲಾ ಸಂದರ್ಭಗಳಲ್ಲಿ ಪಾತ್ರಧಾರಿ ವಾದದಲ್ಲಿ ಗೆದ್ದೆ ಎಂದು ಬೀಗಿದರೂ ಪಾತ್ರವು ಸೋಲುತ್ತದೆ. ಒಟ್ಟು ಕಥೆಯೇ ಹಾಸ್ಯಾಸ್ಪದವಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ಪಾತ್ರಧಾರಿಗಳಿಗೂ ಆಯುಧಗಳ, ರಥಗಳ, ನಾಮಾವಳಿಗಳ ಹೆಸರುಗಳು ತಿಳಿದಿರುವುದೇ ಆಗಿದ್ದರೂ ಬೇಕೆಂದೇ ಕೆಲವು ಇನ್ನಿತರ ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುವುದು ಸಮಂಜಸವಲ್ಲ. ಯಾಕೆಂದರೆ ಸ್ವ ಸಾಮರ್ಥ್ಯವನ್ನು ಮೆರೆಸುವುದೇ ಮುಖ್ಯ ಉದ್ದೇಶವಾಗಿದ್ದರೆ ಅದಕ್ಕೆ ರಂಗವೇ ವೇದಿಕೆಯಲ್ಲ. ಅದಕ್ಕೆ ಬೇಕಾದರೆ ಯಾವುದೇ ಒಂದು ವಿಷಯದ ಮೇಲೆ ಚರ್ಚಾಸ್ಪರ್ಧೆಯನ್ನು ಏರ್ಪಡಿಸಬಹುದು.
“ನೀವು ರಾಮನ ಪಾತ್ರಧಾರಿಯನ್ನು ವಾದದಲ್ಲಿ ಸೋಲಿಸಿ. ಆದರೆ ರಾಮನ ಪಾತ್ರವನ್ನು ಸೋಲಿಸಬೇಡಿ.’’
ಇದರಿಂದ ಒಟ್ಟು ಪ್ರದರ್ಶನ ಮತ್ತು ರಂಗಕ್ರಿಯೆಗಳು ಸೋಲುತ್ತವೆ. ಪಾತ್ರಧಾರಿಯಾಗಿ ನೀವೂ ಗೆಲ್ಲಿ, ಜೊತೆಗೆ ಪಾತ್ರವನ್ನೂ ಗೆಲ್ಲಿಸುವುದರ ಜೊತೆಗೆ ಒಟ್ಟು ಪ್ರದರ್ಶನವನ್ನೂ ಗೆಲ್ಲಿಸಿದರೆ ಅದು ನೀವು ಈ ರಂಗಭೂಮಿಗೆ ಕೊಡುವ ದೊಡ್ಡ ಕೊಡುಗೆ.
ಬರಹ: ಯಕ್ಷರಸಿಕ, ಮಂಗಳೂರು