ಸಾಧಾರಣವಾಗಿ ಪಲಾಂಡು ಎನ್ನುವ ಶಬ್ದದ ಅರ್ಥ ಹಲವಾರು ಜನರಿಗೆ ತಿಳಿದಿರಲಾರದು. ನೀರುಳ್ಳಿಗೆ ಇನ್ನೊಂದು ಹೆಸರೇ ಪಲಾಂಡು ಎಂಬುದಾಗಿ. ಈ ಪಲಾಂಡು ಶಬ್ದ ಯಕ್ಷಗಾನದಲ್ಲಿ ಹೇಗೆ ಬಂತು? ರಂಗಸ್ಥಳದಲ್ಲಿ ನೀರುಳ್ಳಿಯ ಪರಿಮಳ ಹೇಗೆ ಪಸರಿಸಿತು ಎಂಬುದೇ ಈಗ ಯಕ್ಷಪ್ರಶ್ನೆ ? ಆದರೆ ಇಂತಹ ಯಕ್ಷಪ್ರಶ್ನೆಗಳಿಗೆ ಸಮರ್ಥವಾದ ಉತ್ತರಗಳು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ಶ್ರೀ ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಬಳಿ ಇವೆ ಎಂದರೆ ಅದು ಅತಿಶಯೋಕ್ತಿ ಆಗಲಾರದು. ರಂಗಸ್ಥಳಕ್ಕೆ ಪಲಾಂಡುವನ್ನು ಪರಿಚಯಿಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ರೂವಾರಿ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಉತ್ಸಾಹ ಮೆಚ್ಚುವಂತಹುದು.
ಹಾಗೆ ನೋಡಿದರೆ ‘ಪಲಾಂಡು ಚರಿತ್ರೆ’ ಎಂಬ ಈ ಪ್ರಸಂಗ ರಚಿಸಲ್ಪಟ್ಟದ್ದು ಸುಮಾರು 120 ವರ್ಷಗಳ ಹಿಂದೆ ಎಂದು ಹೇಳುತ್ತಾರೆ. ಪ್ರಸಂಗ ಕರ್ತೃ ಆ ಕಾಲದ ಖ್ಯಾತ ಸಾಹಿತಿ ಕೆರೋಡಿ ಸುಬ್ಬ ರಾವ್. ಶತಮಾನದಷ್ಟು ಹಿಂದಿನ ಕೃತಿಯನ್ನು ರಂಗಕ್ಕಿಳಿಸಿದ ಸಂಬಂಧಪಟ್ಟವರ ಸಾಹಸವನ್ನು ಮೆಚ್ಚಲೇ ಬೇಕು.
ಪ್ರಸಂಗದ ಹೆಸರೇ ಸೂಚಿಸುವಂತೆ ಇದು ಕೇವಲ ನೀರುಳ್ಳಿಯ ಕತೆಯಲ್ಲ!!! ಭೂಮಿಯ ಮೇಲೆ ಬೆಳೆಯುವ ಹಣ್ಣು, ತರಕಾರಿಗಳು ಹಾಗೂ ಭೂಮಿಯ ಒಳಗೆ ಮಣ್ಣಿನಡಿಯಲ್ಲಿ ಬೆಳೆಯುವ ಗೆಡ್ಡೆ ಗೆಣಸು ತರಕಾರಿಗಳ ನಡುವೆ ತಾವೇ ಶ್ರೇಷ್ಠರೆಂಬ ಅಹಂಭಾವ ಮೊಳೆತು ಹೆಮ್ಮರವಾಗುತ್ತದೆ. ಅದು ವಾಗ್ಯುದ್ಧ, ಸಮರಕ್ಕೆ ಹೇತುವಾಗುತ್ತದೆ. ಆದರೆ ಇದು ಇವರ ಕತೆಯಲ್ಲ. ಕತೆಯ ಗೂಡಾರ್ಥ , ಮೂಲಾರ್ಥ ಇನ್ನೂ ಒಳ ಹೊಕ್ಕು ನೋಡಿದಾಗ ಅರಿವಾಗುತ್ತದೆ ಪ್ರಪಂಚದಲ್ಲಿ ಶ್ರೇಷ್ಠ ನಿಕೃಷ್ಠರೆಂಬ ಬೇಧಭಾವ ಮೊದಲಿನಿಂದಲೂ ಇದೆ. ಶ್ರೀಮಂತ ಮತ್ತು ಬಡವ, ಪಂಡಿತ ಮತ್ತು ಪಾಮರ, ಆಳುವವರು ಮತ್ತು ಸಾಮಾನ್ಯ ಜನರು ಇವರೆಲ್ಲಾ ಈ ಪ್ರಸಂಗದ ಹಾಗೂ ಕವಿಯ ಆಶಯದಲ್ಲಿ ಒಳಗೊಳ್ಳುತ್ತಾರೆ. ವೃಥಾ ಮೇಲಾಟಗಳಲ್ಲಿ ತೊಡಗದೆ ಪರಸ್ಪರ ಸಹಕಾರದಿಂದ ಬಾಳುವೆ ಮಾಡಬೇಕೆಂಬುದನ್ನು ಕಥೆ ಸೂಚಿಸುತ್ತದೆ.
ಪ್ರಸಂಗದ ಅಂತ್ಯ ಮಾತ್ರ ತುಂಬಾ ರೋಚಕವಾಗಿದೆ. ಅದನ್ನು ನೀವು SV Vision ಅವರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಇದು ನೇರಪ್ರಸಾರಗೊಂಡ ಯಕ್ಷಗಾನ ಪ್ರದರ್ಶನ. ಸಂಚಾರ ನಿರ್ಬಂಧ ಇರುವ ಕಾರಣದಿಂದ ಗಡಿನಾಡಿನ ಕಲಾವಿದರನ್ನು ಮಾತ್ರ ಸೇರಿಸಿ ಪ್ರದರ್ಶಿಸಿದ ಯಕ್ಷಗಾನ ಪ್ರದರ್ಶನ. ಗಡಿನಾಡಿನ ಯಕ್ಷಗಾನ ಕಲಾವಿದರನ್ನು ಒಟ್ಟು ಸೇರಿಸಿ ಈ ಸಂಕಷ್ಟ ಕಾಲದಲ್ಲಿ ಅವರನ್ನು ಪ್ರೋತ್ಸಾಹಿಸಿದ ರಾಮಕೃಷ್ಣ ಮಯ್ಯರ ಪ್ರಯತ್ನ ಸ್ತುತ್ಯರ್ಹ. ಕಾಸರಗೋಡು ಜಿಲ್ಲೆಯ ಕಲಾವಿದರ ಪಟ್ಟಿಯನ್ನು ನೋಡುವಾಗ ಒಂದು ಅತ್ಯುತ್ತಮ ವೃತ್ತಿಪರ ಮೇಳವನ್ನು ಹೊರಡಿಸುವಷ್ಟು ಕಲಾವಿದರ ಗಡಣವೇ ಅಲ್ಲಿದೆ.