Saturday, November 23, 2024
Homeಯಕ್ಷಗಾನಹಿರಿಯ ಯಕ್ಷಗಾನ ಕಲಾವಿದ ವಿಶ್ವನಾಥ ಸ್ವಾಮೀಜಿ ಸುವರ್ಣನಾಡು ಅವರು ವಿಧಿವಶ

ಹಿರಿಯ ಯಕ್ಷಗಾನ ಕಲಾವಿದ ವಿಶ್ವನಾಥ ಸ್ವಾಮೀಜಿ ಸುವರ್ಣನಾಡು ಅವರು ವಿಧಿವಶ

 ‌‌ಪ್ರಸಿದ್ದ ಯಕ್ಷಗಾನ ಕಲಾವಿದ ಸೊರ್ನಾಡು ವಿಶ್ವನಾಥ ಶೆಟ್ಟಿ (81), ಪ್ರಸ್ತುತ ವಿಶ್ವನಾಥ ಸ್ವಾಮಿಯವರು ನಿನ್ನೆ( ಆಗಸ್ಟ್ 1, 2021 ) ಬೆಳಗ್ಗೆ ಸೊರ್ನಾಡುವಿನ  ತಮ್ಮ ಸ್ವ ಆಶ್ರಮದಲ್ಲಿ ದೈವಾಧೀನರಾದರು. ( 2 ವರ್ಷ ಹಿಂದೆ ಬರೆದ ಪರಿಚಯ ಲೇಖನ ಕೆಳಗಿದೆ)

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ
ಯಕ್ಷತಪಸ್ವಿ ಸೊರ್ನಾಡು ವಿಶ್ವನಾಥ ಶೆಟ್ಟಿ

ಯಕ್ಷಗಾನ ಕಲೆಯನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಬೆಳೆಸಿಕೊಂಡವರು ಹಲವರಿದ್ದಾರೆ. ಆದರೆ ಅವೆರಡನ್ನೂ ಬಿಟ್ಟು ಅಧ್ಯಾತ್ಮದ ಹಾದಿ ತುಳಿದವರು ವಿರಳ. ಅಂತಹ ವಿರಳಾತಿವಿರಳದಲ್ಲಿ ಸೊರ್ನಾಡು ವಿಶ್ವನಾಥ ಶೆಟ್ಟಿಯವರು ಪ್ರಮುಖರು. ಅವರಿಗೀಗ 79ರ ಹರೆಯ. ಬಂಟ್ವಾಳ ತಾಲೂಕಿನ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಸ್ಥಾಪಕರಾಗಿ ವೈರಾಗ್ಯದ ಹಾದಿ ತುಳಿದ ಅವರೀಗ ವಿಶ್ವನಾಥ ಸ್ವಾಮಿಯಾಗಿ ಪ್ರಸಿದ್ಧರು.


ಕುಪ್ಪೆಪದವು ಸಮೀಪದ ಕೊಂಜಿಬೆಟ್ಟು ಗುತ್ತುಮನೆ ಬಿರ್ಮಣ್ಣ ಶೆಟ್ಟಿ ಮತ್ತು ಚೆನ್ನಮ್ಮ ದಂಪತಿಯ ಐದು ಮಕ್ಕಳಲ್ಲಿ ಒಬ್ಬರಾಗಿರುವ ವಿಶ್ವನಾಥ ಶೆಟ್ಟಿ ಅರಳ ಶಾಲೆಯಲ್ಲಿ ಒಂಭತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ್ದರು. ಅವರ ಹಿರಿಯಣ್ಣ ಮೂಲ್ಕಿಯ ಹೆಸರಾಂತ ವೈದ್ಯ ಮತ್ತು ಸಮಾಜ ಸೇವಕ ದಿ. ಡಾ. ಎಂ. ಬಾಬು ಶೆಟ್ಟಿ. ಅವರು ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಸೇವೆಸಲ್ಲಿಸಿದವರು. ಎಳವೆಯಲ್ಲೇ ಅಧ್ಯಾತ್ಮದತ್ತ ಹೆಚ್ಚು ಒಲವಿದ್ದ ವಿಶ್ವನಾಥ ಶೆಟ್ಟರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದರು. ಆರಂಭದಲ್ಲಿ ಎಂಕು ಭಾಗವತರಿಂದ ಚೆಂಡೆ-ಮದ್ದಳೆ ಅಭ್ಯಸಿಸಿದ ಅವರು ಮೂಡಬಿದ್ರೆ ವಾಸು ಅವರಿಂದ ಯಕ್ಷಗಾನದ ಕುಣಿತ ಹಾಗೂ ಕೂರ್ಯಾಳ ತಮ್ಮಯ್ಯ ಆಚಾರ್ಯ ಮತ್ತು ನಾಂಞ ಕಿಲ್ಲೆಯವರಿಂದ ಅರ್ಥಗಾರಿಕೆಯಲ್ಲಿ ತರಬೇತಿ ಹೊಂದಿದರು. ಅಲ್ಲದೆ ರಾಜನ್ ಅಯ್ಯರ್‍ರಿಂದ ತಾಂಡವ ನೃತ್ಯವನ್ನು ಕಲಿತರು. ಎರ್ಮಾಳಿನಲ್ಲಿ ಚಿಕ್ಕ ಜೀನಸು ಅಂಗಡಿ ತೆರೆದು ವ್ಯವಹಾರಕ್ಕೆ ಕಾಲಿಟ್ಟ ಅವರು ಮುಂದೆ ಬಿ.ಸಿ.ರೋಡ್, ಸೊರ್ನಾಡುಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಗಳಲ್ಲಿ ತೊಡಗಿ ಅದರೊಂದಿಗೆ ಯಕ್ಷಗಾನ ಬಯಲಾಟಗಳನ್ನು ನಡೆಸಿಕೊಂಡು ಬಂದರು.


ಸೊರ್ನಾಡು ಶ್ರೀ ದುರ್ಗಾಂಬಿಕಾ ಮೇಳವನ್ನು ಕಟ್ಟಿ ಹಲವು ಕಲಾವಿದರಿಗೆ ಆಶ್ರಯವಿತ್ತ ವಿಶ್ವನಾಥ ಶೆಟ್ಟರು ಸ್ವತಃ ಉತ್ತಮ ಪುಂಡು ವೇಷಧಾರಿಯಾಗಿದ್ದರು. ಪ್ರಸಿದ್ಧ ಯಕ್ಷಗಾನ ಕಲಾವಿದ ದಿ| ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಆರಂಭದಲ್ಲಿ ಈ ಮೇಳದಲ್ಲಿದ್ದು ಅವರ ಗರಡಿಯಲ್ಲಿ ಪಳಗಿದವರು. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರೂ ಅವರೊಂದಿಗಿದ್ದರು. ಹರಿಶ್ಚಂದ್ರ, ಹನೂಮಂತ, ಭಸ್ಮಾಸುರ, ಹಿರಣ್ಯಕಶ್ಯಪ ಇತ್ಯಾದಿ ಪಾತ್ರಗಳಲ್ಲಿ ವಿಶ್ವನಾಥ ಶೆಟ್ಟರು ಹೆಸರು ಮಾಡಿದ್ದರು. ತುಳು ಕೋಟಿ-ಚೆನ್ನಯ್ಯದ ಕೋಟಿಯ ಪಾತ್ರಕ್ಕೆ ದಿ| ಬೋಳಾರ ನಾರಾಯಣ ಶೆಟ್ಟರು ಅವರಿಗೆ ಪ್ರೇರಣೆ.


ಅಧ್ಯಾತ್ಮದ ಕಡೆಗಿನ ಸೆಳೆತದೊಂದಿಗೆ ಸದ್ದಿಲ್ಲದೆ ಮುಂಬಯಿ ಸೇರಿದ ವಿಶ್ವನಾಥ ಶೆಟ್ಟರು ಮಜಂಗಾಮ್‍ನ ಹೊಟೇಲ್ ಉದ್ಯಮಿ ಮುತ್ತಪ್ಪ ಶೆಟ್ಟರ ಸಹಕಾರದಿಂದ ಸದ್ಗುರು ನಿತ್ಯಾನಂದ ಸ್ವಾಮಿಯ ದರ್ಶನ ಪಡೆದು ಅವರಿತ್ತ ರುದ್ರಾಕ್ಷಿಮಣಿಯಿಂದ ಪ್ರಭಾವಿತರಾಗಿ ಊರಿಗೆ ಮರಳಿದರು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂಸಾರಿಯಾದರೂ ಬದಲಾದ ಪರಿಸ್ಥಿತಿಯಲ್ಲಿ ಸ್ವಾಮಿಯಾಗಿ ಸೊರ್ನಾಡಿನಲ್ಲಿ ಶ್ರೀ ದುರ್ಗಾಂಬಿಕಾ ಸಿದ್ದೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಇತ್ತೀಚೆಗೆ ಅದರ ಬ್ರಹ್ಮಕಲಶೋತ್ಸವವನ್ನು ನಡೆಸಿದರು. ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಅವರಿಗೆ ದೀಕ್ಷೆ ನೀಡಿದ್ದರು. ಅಂದಿನ ಸೊರ್ನಾಡು ಈಗ `ಶ್ರೀ ಕ್ಷೇತ್ರ ಸುವರ್ಣನಾಡು’ ಆಗಿ ಪ್ರಸಿದ್ಧಿ ಹೊಂದಿದೆ.


ತನ್ನ ಆಶ್ರಮದಲ್ಲಿ ಬಡ ಮಕ್ಕಳಿಗೆ ಆಶ್ರಯವಿತ್ತು ಭಜನೆ ಕಾರ್ಯಕ್ರಮದೊಂದಿಗೆ ಅವರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮಾರ್ಗದರ್ಶನವಿತ್ತಿರುವ ವಿಶ್ವನಾಥ ಸ್ವಾಮಿ ತನ್ನ ಯಕ್ಷಗಾನ ಸೇವೆಯನ್ನು ಈಗಲೂ ಕೈ ಬಿಡದೆ ಮುಂದುವರಿಸುತ್ತಿದ್ದಾರೆ. ಅವರ ಶ್ರೀ ದುರ್ಗಾಂಬಿಕಾ ಮೇಳ ಐದು ವರ್ಷ ಟೆಂಟ್ ಮೇಳವಾಗಿ ತಿರುಗಾಟ ಮಾಡಿ ಪ್ರಸ್ತುತ ಬಯಲಾಟ ಮೇಳವಾಗಿ ಪರಿವರ್ತನೆಗೊಂಡಿದೆ. ಅವರ ಯಕ್ಷಗಾನ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಠಾನವು ದಿ. ಡಿ.ಕೆ. ಚೌಟ ದತ್ತಿನಿಧಿಯಿಂದ ಪ್ರತಿವರ್ಷ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ‘ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ 2018-19ನೇ ಸಾಲಿಗೆ ಯಕ್ಷತಪಸ್ವಿ ಸೊರ್ನಾಡು ವಿಶ್ವನಾಥ ಶೆಟ್ಟರನ್ನು ಆಯ್ಕೆ ಮಾಡಿತ್ತು.

ಲೇಖಕ: ಭಾಸ್ಕರ ರೈ ಕುಕ್ಕುವಳ್ಳಿ, `ವಿದ್ಯಾ’, ಕದ್ರಿ ಕಂಬಳ ರಸ್ತೆ, ಬಿಜೈ, ಮಂಗಳೂರು – 575 004.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments