ಬದುಕು ಎನ್ನುವುದು ಒಂದು ವ್ಯಕ್ತಿಯ ನಿರಂತರ ಹೋರಾಟ. ಆ ಹೋರಾಟದ ನಡುವೆ ತಿರುವುಗಳು, ಏರುಪೇರುಗಳು ಬರುತ್ತವೆ. ಆದರೆ ಅವೆಲ್ಲಾ ಜಂಜಡಗಳನ್ನು ಎದುರಿಸಿ ನಗು ನಗುತ್ತಾ ಬಾಳುವುದೇ ನಿಜವಾದ ಹುಟ್ಟಿನ ಸಾರ್ಥಕತೆ. ಇಂತಹಾ ಬಾಳ ಪಯಣವನ್ನು ಸುಂದರವಾಗಿ ನಡೆಸಿದ ನಮ್ಮೆಲ್ಲರ ಮೆಚ್ಚಿನ, ವಿದ್ಯಾರ್ಥಿಗಳ ಆರಾಧ್ಯದೈವ ಯಕ್ಷಕಲಾ ಪ್ರೋತ್ಸಾಹಕರಾಗಿದ್ದಂತಹಾ ಆದರ್ಶ ಶಿಕ್ಷಕ ಜನಮೆಚ್ಚಿದ ನಾಗರಿಕ ಶ್ರೀ ಸುರೇಶ್ ರಾವ್ ಪಚ್ಚನಾಡಿ.
ಶ್ರೀಯುತರು 18 ಮಾರ್ಚ್ 1958ರಲ್ಲಿ ಗೋಪಾಲಕೃಷ್ಣಯ್ಯ ಹಾಗೂ ರುಕ್ಮಿಣಿಯಮ್ಮ ದಂಪತಿಗಳ ಕಿರಿಯ ಪುತ್ರನಾಗಿ ಪಚ್ಚನಾಡಿ ಕಾರಂತ ಮನೆತನದಲ್ಲಿ ಜನಿಸಿದರು. ಇವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಸಹೋದರಿ. ಶ್ರೀಯುತರು ತನ್ನ ಶಿಕ್ಷಣವನ್ನು ಕ್ರಮವಾಗಿ ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆ ಬೊಂದೇಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಕಟೀಲು ದುರ್ಗಾಪರಮೇಶ್ವರಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಹಾಗೂ ಬಿಜೈ ಸರಕಾರಿ ತರಬೇತಿ (ಈಗಿನ DAIET) ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ತರಬೇತಿಯನ್ನು ಪೂರೈಸಿ 1978ಆಗಸ್ಟ್ 1ರಿಂದ ಶ್ರೀರಾಮಾಶ್ರಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೊಂಚಾಡಿಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು.
ಅಪಾರ ಶಿಷ್ಯವರ್ಗವನ್ನು ಹೊಂದಿ ಶಿಕ್ಷಕ ವೃತ್ತಿಯಲ್ಲಿ ಸಾಧನೆಯನ್ನು ಮಾಡಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ 40 ವರ್ಷಗಳ ಸೇವೆಯನ್ನು ಪೂರೈಸಿ 2018 ಮಾರ್ಚ್ 31ರಂದು ನಿವೃತ್ತಿ ಹೊಂದಿದರು. ಶ್ರೀಯುತರು ತನ್ನ ಸೇವಾವಧಿಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ನಾಟಕ, ಯಕ್ಷಗಾನ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿ ಅವರಲ್ಲಿದ್ದ ಪ್ರತಿಭೆಯನ್ನು ಬೆಳಕಿಗೆ ತಂದರು. ಕೆಲವು ಯಕ್ಷಗಾನದ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಅವರಲ್ಲಿದ್ದ ಆಸಕ್ತಿಗೆ ನೀರೆರೆದು ಪೋಷಿಸಿದರು. ಶಾಲೆಯಲ್ಲಿ ಅಧ್ಯಾಪಕರ ಕೊರತೆಯಿದ್ದಾಗ ತನ್ನ ಅರ್ಧ ವೇತನವನ್ನು ನೀಡಿ ಅಧ್ಯಾಪಕರನ್ನು ನಿಯುಕ್ತಿಗೊಳಿಸಿ ಮಕ್ಕಳ ವಿದ್ಯಾಭ್ಯಾಸ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಕೆಲವು ಬಡ ವಿದ್ಯಾರ್ಥಿಗಳಿಗೆ ತನ್ನದೇ ಖರ್ಚಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಹೀಗೆ ತನ್ನ ಸೇವಾವಧಿಯಲ್ಲಿ ಕೆಲವು ಲಕ್ಷಗಳಷ್ಟು ಹಣವನ್ನು ಶಾಲಾ ವಿದ್ಯಾರ್ಥಿಗಳ ಏಳಿಗೆಗಾಗಿ ಮತ್ತು ಯಕ್ಷಗಾನದ ಸಲುವಾಗಿ ವ್ಯಯಿಸಿದ್ದಾರೆ.
ನಿವೃತ್ತಿಯ ನಂತರ ಇದ್ದ ಅಲ್ಪಸ್ವಲ್ಪ ಭೂಮಿಯಲ್ಲಿ ಕೃಷಿ ಕಾಯಕದಲ್ಲಿ ನಿರತರಾಗಿದ್ದರು. ಇವರ ಧರ್ಮಪತ್ನಿ ಶ್ರೀಮತಿ ಚಂದ್ರಲೇಖಾ. ಮಗಳು ಶ್ರೀಮತಿ ರಶ್ಮಿ ನಾಗೇಶ್ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜಿನಿಯರ್. ಪುತ್ರ ಶೈಲೇಶ್ ರಾವ್ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವುದು ಮಾತ್ರವಲ್ಲದೆ ಯಕ್ಷಗಾನದ ಹವ್ಯಾಸಿ ಮತ್ತು ಉದಯೋನ್ಮುಖ ಕಲಾವಿದ. ಸುರೇಶ ರಾವ್ ಪಚ್ಚನಾಡಿ ಅವರು ತನ್ನ ವಿಶ್ರಾಂತ ಜೀವನದಲ್ಲಿಯೂ ಸದಾ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರು. ಊರವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಬಡಜನರಿಗೆ ಸಹಕಾರಿಯಾಗುತ್ತಿದ್ದರು. ಬೆಂಕಿನಾಥೇಶ್ವರ ಮೇಳದಲ್ಲಿ ಅರ್ಚಕರಾಗಿ ಮೇಳದ ದೇವರ ಪೂಜೆಯ ಹೊಣೆಯನ್ನು ಹೊತ್ತುಕೊಂಡಿದ್ದರು.
ಸುರೇಶ್ ರಾಯರ ಸೇವಾ ಕೈಂಕರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಶಕರ ಸಂಘ, ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಹಕಾರಿ (ನಿ), ಪ್ರಣವ ಸೌಹಾರ್ದ ಸಹಕಾರಿ, ಶಿಕ್ಷಕರ ದಿನಾಚರಣೆ ಸಮಿತಿ, ಶ್ರೀರಾಮಾಶ್ರಮ ಶಾಲಾ ಶಿಕ್ಷಕ ರಕ್ಷಕ ಹಳೆ ವಿದ್ಯಾರ್ಥಿ ಸಂಘ, ಕೋಟ ಮಹಾಜನರು (ರಿ) ಮಂಗಳೂರು, ಮತ್ತು ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ (ರಿ) ಇವರ ವತಿಯಿಂದ ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಸಾಧಕ ಹಾಗೂ ಕಲಾಸೇವಕರಾಗಿ ಜನಪ್ರಿಯರಾಗಿದ್ದ ಶ್ರೀ ಸುರೇಶ ರಾವ್ ಪಚ್ಚನಾಡಿ ೨೫.೦೨. ೨೦೨೧ರಂದು ಅವರು ರಸ್ತೆ ಅಫಘಾತವೊಂದರಲ್ಲಿ ಇಹಲೋಕವನ್ನು ಅಗಲಿದರು. ಅವರ ದಿವ್ಯಾತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಊರ ಹಾಗೂ ಪರವೂರ ಅವರ ಅಭಿಮಾನಿಗಳ ಪರವಾಗಿ ಹಾರೈಕೆಗಳು.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು