ಯಾವುದೇ ಕ್ಷೇತ್ರದಲ್ಲಿ ವೃತ್ತಿಪರತೆ ಹೆಚ್ಚಾದಷ್ಟೂ ಅದು ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಯಕ್ಷಗಾನ ವಿಚಾರದಲ್ಲಿ ಕೇಳುವುದೇ ಬೇಡ. ಸಿದ್ಧಮಾದರಿಗೇ ಜೋತುಬೀಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಕಲಾವಿದರಂತೂ ಕಣ್ಮುಚ್ಚಿ ಅನುಕರಿಸುವುದರಲ್ಲೇ ತೃಪ್ತಿಯನ್ನು ಪಡೆಯುತ್ತಿದ್ದಾರೆ. ಯಾವುದೇ ಹೊಸತನಕ್ಕೆ, ಪ್ರಯೋಗಶೀಲತೆಗೆ ತೆರೆದುಕೊಳ್ಳದ ಮನಸ್ಸಿನ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ತಥಾಕಥಿತ, ಚರ್ವಿತಚರ್ವಣ ವಿಷಯಕ್ಕೇ ಒಂದಿಷ್ಟು ಮಸಾಲೆ ಹಾಕಿ ಪ್ರೇಕ್ಷಕರನ್ನು ರಂಜಿಸುವ ಕಲಾವಿದರಿಗೆ ಕೊರತೆಯೇನೂ ಇಲ್ಲ. ಇವುಗಳ ಜತೆಗೆ ಯಕ್ಷಗಾನದ ಬೇಸಿಕ್ ಒಂದಿಷ್ಟನ್ನು ಕಲಿತುಕೊಂಡು, ಬಣ್ಣ ಹಚ್ಚಿ, ವೇಷ ತೊಟ್ಟು, ಫೇಸ್‍ಬುಕ್, ವಾಟ್ಸ್‍ಅಪ್, ದೂರದರ್ಶನ, ಪತ್ರಿಕೆ ಮುಂತಾದ ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸುವ ತಂತ್ರಕ್ಕೆ ಮಿತಿಯೇ ಇಲ್ಲವಾಗಿದೆ. ಇದೊಂದು ಬಗೆಯ ಯಕ್ಷಗಾನ ಆಭಾಸ ಎನ್ನದೆ ಬೇರೆ ಹಾದಿಯಿಲ್ಲ. ಯಕ್ಷಗಾನದಲ್ಲಿ ಸಾಧನೆ ಮಾಡಿ ಹೆಸರು ಪಡೆಯಬೇಕು ಅನ್ನುವುದಕ್ಕಿಂತ ಪ್ರಚಾರ ಮಾಡಿ ಹೆಸರು ಪಡೆಯಬೇಕೆಂಬ ಹಪಹಪಿಕೆಯೇ ಎಲ್ಲೆಲ್ಲೂ ವಿಜೃಂಭಿಸುತ್ತಿದೆ.
ಇವೆಲ್ಲ ಅಪಸವ್ಯಗಳ ಮಧ್ಯದಲ್ಲಿ, ಜಿಡ್ಡುಗಟ್ಟಿದ ವಾತಾವರಣದಲ್ಲಿ ಯಕ್ಷಗಾನಕ್ಕೆ ತಾನೇನು ಕೊಡಬಲ್ಲೆ? ನೂತನ ಆವಿಷ್ಕಾರ ಮಾಡಬಲ್ಲೆ? ಕಲೆಯ ಸೌಂದರ್ಯ ಸಾಧನೆಗೆ, ರಸಾನುಭೂತಿಗೆ, ಭಾವ ಸಂವರ್ಧನಕ್ಕೆ ತಾನೇನು ಕಾಣಿಕೆ ನೀಡಬಲ್ಲೆ ಎಂದು ಯೋಚಿಸುವವರು ಇಲ್ಲದೆ ಇಲ್ಲ. ಖಂಡಿತಕ್ಕೂ ಇದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ. ಅಂಥಹವರಲ್ಲಿ ಖ್ಯಾತ ಮೃದಂಗವಾದಕ ಅನಂತ ಪದ್ಮನಾಭ ಪಾಠಕ್ ಒಬ್ಬರು.
ಸಂಕ್ಷಿಪ್ತವಾಗಿ ಎ.ಪಿ. ಪಾಠಕ್ ಎಂದೇ ಕರೆಯಲ್ಪಡುವ ಪಾಠಕರು ಯಕ್ಷಗಾನದ ಸರ್ವ ಅಂಗಗಳನ್ನೂ ಬಲ್ಲವರು. ಚಂಡೆ, ಮೃದಂಗ, ಭಾಗವತಿಕೆ, ನೃತ್ಯ- ಹೀಗೆ ಎಲ್ಲದರಲ್ಲೂ ಪ್ರವೇಶ ಇರುವರು. ಮುಖ್ಯವಾಗಿ ಮೃದಂಗ ವಾದನದಲ್ಲಿ ವಿಶೇಷ ಪ್ರಾವೀಣ್ಯ ಉಳ್ಳವರು; ಅದರಲ್ಲಿ ಸಿದ್ಧಿ-ಪ್ರಸಿದ್ಧಿಯನ್ನೂ ಪಡೆದವರು. ಪಾಠಕರ ಮೃದಂಗವಾದನ ಬಹು ಸೂಕ್ಷ್ಮವಾದುದು. ಅದು ಜಲಪಾತದಂತೆ ಭೋರ್ಗರೆಯುವ ರೀತಿಯದಲ್ಲ; ನದಿಯ ದಡಗಳನ್ನು ಕೊಚ್ಚಿಕೊಂಡು ಹೋಗುವ ನೀರಿನ ರೀತಿಯದಲ್ಲ. ಎರಡು ದಡಗಳ ಮಧ್ಯದಲ್ಲಿ ಕಣ್ಣಿಗೆ ಗೋಚರಿಸದೆ ರಭಸದಲ್ಲಿ, ವೇಗದಲ್ಲಿ ತುಂಬಿ ಹರಿಯುವ ನದಿಯ ನೀರಿನಂತಹದ್ದು. ಮುಂದಡಿಯಿಟ್ಟರೆ ಸೆಳೆದುಕೊಂಡು ಬಿಡುವಂಥಾದ್ದು. ಅಂದರೆ ನದಿಯಲ್ಲಿ ಹೆಜ್ಜೆಯಿಡುವವನಿಗೆ ಎಲ್ಲಿ ನೀರಿನ ಸುಳಿಯಿದೆ? ಕಲ್ಲುಬಂಡೆಗಳಿವೆ? ಜಲಚರಗಳಿವೆ? ಮುತ್ತುರತ್ನಗಳಿವೆ? ಎಂದು ಗೊತ್ತಿರಬೇಕಾಗುತ್ತದೆ.
ಅಂದರೆ ಪಾಠಕರ ಮೃದಂಗವಾದನದ ಕೌಶಲ, ಪಾಂಡಿತ್ಯ, ಚಮತ್ಕಾರ ಆಸ್ವಾದ್ಯವಾಗಬೇಕಾದರೆ ಅವನಿಗೆ ಮೃದಂಗ ವಾದನದ ವರ್ಣಮಾಲೆ ಅಷ್ಟಿಷ್ಟಾದರೂ ಗೊತ್ತಿರಬೇಕಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ಅವರದ್ದು ತನಗೆ ಗೊತ್ತಿರುವುದನ್ನು ಮೆರೆಸುವುದಕ್ಕಿಂತ ತನಗೆ ಗೊತ್ತಿರುವುದರಲ್ಲಿ ಹೊಸದನ್ನು ಕಾಣಿಸುವ, ಆವಿಷ್ಕರಿಸುವ ಪ್ರವೃತ್ತಿಯದು. ಹಾಲಿನಲ್ಲಿ ಬೆರೆತ ಸಕ್ಕರೆ ತಾನು ಕಾಣಿಸಿಕೊಳ್ಳದೆ ಹಾಲಿಗೆ ರುಚಿಯನ್ನೂ, ಮಾಧುರ್ಯವನ್ನೂ ಕೊಡುವಂತೆ ಪಾಠಕರದ್ದು ಪ್ರೇಕ್ಷಕರಿಗೆ ರಸಾನುಭವ ಮಾಡಿಸುವಂಥಾದ್ದು.
ಯಕ್ಷಗಾನ ಬಯಲಾಟದಲ್ಲಿ ಅಥವಾ ತಾಳಮದ್ದಳೆಯಲ್ಲಿ ಭಾಗವತ ಹಾಡಿದಂತೆಲ್ಲ ಆ ಹಾಡಿನ ತಾಳಗಳು ಮೃದಂಗ ಮತ್ತು ಚಂಡೆಯಲ್ಲಿ ಮೂಡಿ ವಿನ್ಯಾಸಗೊಳ್ಳುತ್ತವೆ. ಪರಿಣಾಮ ಕರುಣ, ವೀರ, ಶೃಂಗಾರಾದಿ ಯಾವುದಾದರೂ ಒಂದು ರಸ, ಭಾವ ಆವಿರ್ಭಾವಗೊಳ್ಳುತ್ತದೆ. ಪಾಠಕರಿಗೆ ಸರಿಯಾದ ಭಾಗವತ ಸಿಕ್ಕಿದರೆ, ಅವನು ರಸಜ್ಞನಾಗಿದ್ದರೆ ಅವರು ತಾಳಾನುಗುಣವಾಗಿ ಗಾನದೊಡನೆ ಮೃದಂಗವಾದನವನ್ನು ಬೆರೆಸಿ ರಸಾತ್ಮಕವಾಗಿ ಭಿನ್ನ ಭಿನ್ನ ಕೌಶಲಗಳನ್ನು ಬೀರಿ ರಸದ ಬುಗ್ಗೆಯನ್ನು ಹರಿಸಬಲ್ಲರು. ಹಾಡಿನ ತಾಳಗಳನ್ನು ಬಿಡಿ ಬಿಡಿಯಾಗಿ ವಿಂಗಡಿಸಿ ಗಣಿತಾನುಗುಣವಾಗಿ ಹಿಗ್ಗಿಸಿ ಕುಗ್ಗಿಸಿ ಮೊತ್ತದಲ್ಲಿ ಒಂದಾಗಿ ಹೊಂದಿಸಿ ಸಮರಸವಾಗಿ ಸ್ಫುರಿಸಬಲ್ಲರು. ಪದ್ಯಾನುಗತವಾದ ಕವಿ ಹೃದಯ, ಭಾವ, ರಸವಿಶೇಷವನ್ನು ಬಹು ಸುಂದರವಾಗಿ ಪ್ರಕಟಿಸಬಲ್ಲರು.
“ಮದ್ದಳೆ ಬಾರಿಸುವುದೆಂದರೆ ಭಾಗವತರಿಗೆ, ಹಿಮ್ಮೇಳಕ್ಕೆ, ನರ್ತನಕ್ಕೆ ಅಥವಾ ನೃತ್ತಕ್ಕೆ (ಕುಣಿತಕ್ಕೆ) ಬಾರಿಸುವುದು ಎಂದೇ ಬಹಳ ಮಂದಿಯ ಗ್ರಹಿಕೆ. ಅದು ಹೌದಾದರೂ ಮೃದಂಗವಾದಕನ ನಿಜ ಕಸುಬು ಸಾಕಾರಗೊಳ್ಳುವುದು ಪಾತ್ರಕ್ಕೆ ನುಡಿಸುವುದರಿಂದ, ಭಾವಕ್ಕೆ ಸ್ಪಂದಿಸುವುದರಿಂದ, ರಾಗಕ್ಕೆ ಅನುಸರಿಸುವುದರಿಂದ ಮತ್ತು ರಂಗ ಪರಿಣಾಮಕ್ಕೆ ಅನುನಯಿಸುವುದರಿಂದ” ಎಂದು ಮಂಟಪ ಪ್ರಭಾಕರ ಉಪಾಧ್ಯ ಹೇಳುತ್ತಾರೆ. ತಮ್ಮ ಏಕವ್ಯಕ್ತಿ ಪ್ರದರ್ಶನದಲ್ಲಿ ಮುಖ್ಯ ಮೃದಂಗಕಾರರಾಗಿದ್ದ ಪಾಠಕರ ಬಗ್ಗೆಯೇ ಹೇಳಿದ ಮಾತಿದು. ಪಾಠಕರು ಈ ಎಲ್ಲವನ್ನೂ ವೇದಿಕೆಯಲ್ಲಿ ಸಮರ್ಥವಾಗಿ ಸಾಕಾರಗೊಳಿಸಬಲ್ಲರು.
ಪಾಠಕರು ಯಕ್ಷಗಾನ ಪ್ರಪಂಚಕ್ಕೆ ದಕ್ಕುವಂತಾಗಿದ್ದು ಅವರ ಮನೆಯ ವಾತಾವರಣದಿಂದ. ಅವರ ತಂದೆ ಶ್ರೀಕಂಠ ಪಾಠಕರು ತಾಳಮದ್ದಳೆ ಅರ್ಥಧಾರಿಗಳಾಗಿದ್ದರು; ಕಲಾಪ್ರೇಮಿಗಳಾಗಿದ್ದರು. ಪಾಠಕರು ಜನ್ಮವೆತ್ತಿದ ಕಾರ್ಕಳ-ದುರ್ಗದ ಸುತ್ತ ಯಕ್ಷಗಾನ, ತಾಳಮದ್ದಳೆಗಳು ಜರುಗುತ್ತಲೇ ಇರುತ್ತಿದ್ದವು. ಪಾಠಕರ ತಾಯಿ ಗಿರಿಜಾ ಅವರ ತಂದೆ ನಾರಾಯಣ ಭಟ್ ಥಾಮನ್‍ಕರ್ ಸ್ವತಃ ಹಾರ್ಮೋನಿಯಂ ವಾದಕರಾಗಿದ್ದರು. “ಅಂಬಾ ಪ್ರಸಾದಿತ” ಎಂಬ ನಾಟಕ ಕಂಪನಿಯನ್ನು ನಡೆಸುತ್ತಿದ್ದರು. ಪಾಠಕರ ದೊಡ್ಡಪ್ಪ ವಿಶ್ವನಾಥ ಪಾಠಕರು ವಯೋಲಿನ್ ವಾದಕರಾಗಿದ್ದರು. ಇಂತಹ ಕಲೆಯ, ಸಾಂಸ್ಕೃತಿಕ ವಾತಾವರಣದಲ್ಲಿ ಎಣ್ಣೆಹೊಳೆ ಶ್ರೀನಿವಾಸ ನಾಯ್ಕ ಎಂಬವರು ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಮನೆ ಮನೆಗೆ ಹೋಗಿ ಚಂಡೆ ಹಾಗೂ ಮೃದಂಗ ವಾದನವನ್ನು ಕಲಿಸುತ್ತಿದ್ದರು. ಬಾಲಕ ಅನಂತಪದ್ಮನಾಭನಿಗೂ ಮೃದಂಗದ ಒಂದಿಷ್ಟು ಪಾಠಗಳಾದವು. ಇವೆಲ್ಲವೂ ಅವರನ್ನು ಯಕ್ಷಗಾನ ಪ್ರಪಂಚಕ್ಕೆ ಪ್ರವೇಶಿಸುವಂತೆ ಮಾಡಿದವು.
ಹತ್ತನೆ ಇಯತ್ತೆಯವರೆಗೆ ಓದಿದ ಪಾಠಕರು 1985ರಲ್ಲಿ, ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮೃದಂಗ ಕಲಿಯಲೆಂದು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದರು. ಆಗ ಭಾಗವತಿಕೆಗೆ ನೀಲಾವರ ಲಕ್ಷ್ಮೀನಾರಾಯಣಯ್ಯನವರು, ಮೃದಂಗಕ್ಕೆ ಮಹಾಬಲ ಕಾರಂತರು, ನೃತ್ಯಕ್ಕೆ ಸಂಜೀವ ಸುವರ್ಣರು ಬೋಧಕರಾಗಿ ಕೆಲಸ ಮಾಡುತ್ತಿದ್ದರು. 1985ರಿಂದ 86ರವರೆಗೆ ಒಂದು ವರ್ಷ ಮೃದಂಗ ವ್ಯಾಸಂಗ ಮಾಡಿದ ಪಾಠಕರು ಸಂಗೀತ ನಿರ್ದೇಶಕ, ಕಲಾಚಿಂತಕ ಗುರುರಾಜ ಮಾರ್ಪಳ್ಳಿಯವರ ಸಲಹೆ, ಮಾರ್ಗದರ್ಶನದಂತೆ ರಂಗತಾಲೀಮು ಅಭ್ಯಾಸಕ್ಕಾಗಿ “ನೀನಾಸಂ” ಸೇರಿದರು. ಅಲ್ಲಿ ಪಾಠಕರಿಗೆ ಖ್ಯಾತ ನಾಟಕ ನಿರ್ದೇಶಕ ಸುಬ್ಬಣ್ಣ, ಚಿದಂಬರ ರಾವ್ ಜಂಬೆ, ಅಕ್ಷರ ಮೊದಲಾದವರ ಒಡನಾಟ ಲಭಿಸಿತು. ಅಲ್ಲಿ ಅವರಿಗೆ ರಂಗತಂತ್ರದ ಅನೇಕ ಮರ್ಮಗಳು ತಿಳಿದವು. ರಂಗಭೂಮಿ ಎಂದರೆ ಏನು? ಡೈಲಾಗ್ ಡೆಲಿವರೆಗೆ ಸ್ಪಂದಿಸುವುದು ಹೇಗೆ? ಮೌನವೂ ಒಂದು ಭಾಷೆಯಾದಾಗ ಉಂಟಾಗುವ ಪರಿಣಾಮ ಏನು? ಎಂಬಿತ್ಯಾದಿ ರಂಗತಂತ್ರಗಳು ವೇದ್ಯ ವಾದವು.
ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ- ಪಾಠಕರಿಗೆ ಕಲಿಕೆಯ ಆರಂಭದಲ್ಲೇ ಇತರ ಅನೇಕ ಮೃದಂಗಕಾರರಿಗೆ ಸಿಗದ ಸೌಲಭ್ಯ, ರಂಗಭೂಮಿ ಪರಿಚಯ ದೊರೆತವು. ಹಾಗಾಗಿಯೇ ಅವರು ಸಾಂಪ್ರದಾಯಿಕ ಮೃದಂಗಕಾರರಿಗಿಂತ ಭಿನ್ನವಾಗಿ ಯೋಚಿಸುವಂತೆ ಮಾಡಿದವು. ಇತರ ರಂಗಭೂಮಿಯ ಸಾಧ್ಯತೆಗಳನ್ನು ಯಕ್ಷಗಾನ ರಂಗಭೂಮಿಗೆ ಹೇಗೆ ಅಳವಡಿಸಬಹುದು ಎಂಬ ಯೋಚನೆಗೆ ಅವರು ಮುಂದಾದರು. ಅವೆಲ್ಲದರ ಫಲವಾಗಿಯೇ ಅವರ ಮೃದಂಗವಾದನದಲ್ಲಿ ಸೂಕ್ಷ್ಮ, ಕುಸುರಿ ಕೆಲಸಗಳು ಹೆಚ್ಚಾದವು. ನೂತನ ಆವಿಷ್ಕಾರಕ್ಕೆ ಬಾಗಿಲು ತೆರೆದವು. ರಸ-ಭಾವಗಳಿಗೆ ಸ್ಪಂದಿಸತೊಡಗಿದವು. ಹಿಮ್ಮೇಳದಲ್ಲಿ ಮೃದಂಗವಾದನ ಒಂದು ಮೇಳವಾಗಿ, ಕಲಾವಿದನಿಗೆ ಪೋಷಕವಾಗಿ, ಅವನ ಹೆಜ್ಜೆ, ಗತಿ, ಲಯಗಳಿಗೆ ಅನುವರ್ತಿಯಾಗಿ ಬರಬೇಕೆಂಬ ಸಿದ್ಧಾಂತಕ್ಕೆ ಅವರು ಬಂದರು. ಪಾಠಕರ ಮೃದಂಗವಾದನದಲ್ಲಿ ನಾವಿಂದು ನೋಡುತ್ತಿರುವುದು ಅದನ್ನೇ.
“ನೀನಾಸಂ”ಲ್ಲಿ ಒಂದು ವರ್ಷ ತರಬೇತಿ ಪಡೆದ ಪಾಠಕರು 1987ರಲ್ಲಿ “ಉಡುಪಿ ಯಕ್ಷಗಾನ ಕೇಂದ್ರ”ಕ್ಕೆ ಮೃದಂಗ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿ ಒಂದು ವರ್ಷ ಕೆಲಸ ಮಾಡಿದ ಪಾಠಕರಿಗೆ 1988ರಲ್ಲಿ ಮತ್ತೊಂದು ಸುವರ್ಣಾವಕಾಶ ಪ್ರಾಪ್ತವಾಯಿತು. ಅದು ಕಡಲತೀರ ಭಾರ್ಗವ ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಭಾಗವಹಿಸುವ ಸುಯೋಗ. ಆಗ ಕಾರಂತರು ಯಕ್ಷಗಾನಕ್ಕೆ ಒಂದಿಷ್ಟು ಸುಧಾರಣೆ ತರುವ ಕೆಲಸದಲ್ಲಿ ತೊಡಗಿದ್ದರು. ಯಕ್ಷಗಾನದಲ್ಲಿ ಇದ್ದ ಅನೇಕ ದೋಷಗಳನ್ನು ನೀಗಲು ಅವರು ಯತ್ನಿಸುತ್ತಿದ್ದರು. ನೃತ್ಯಲೇಖನವೆಂಬ ಹೆಸರಲ್ಲಿ ಜಲಕೇಳಿ, ಯುದ್ಧ, ಪ್ರಯಾಣ, ವನವಿಹಾರ ಮುಂತಾದುವಕ್ಕೆ ಹೊಸತನವನ್ನು ತಂದಿದ್ದರು. ವೇಷಭೂಷಣ, ಬಣ್ಣಗಾರಿಕೆಯಿಂದ ಹಿಡಿದು ಯಕ್ಷಗಾನದ ಹಿಮ್ಮೇಳ, ವಾದ್ಯಗಳವರೆಗೆ ಅವರು ವಿಚಿಕಿತ್ಸಕ ದೃಷ್ಟಿ ಹರಿಸಿದ್ದರು.
ಇದು ಪಾಠಕರಿಗೆ ತುಂಬಾ ಸಹಾಯಕವಾಯಿತು. ಸ್ವತಃ ಸಾಹಿತಿಯಾಗಿದ್ದ ಕಾರಂತರು ಯಕ್ಷಗಾನದಲ್ಲಿ ಸಾಹಿತ್ಯವನ್ನು ಹೇಗೆ ಬಳಸಬೇಕು ಎಂದು ಹೇಳುತ್ತಿದ್ದರು. ಅದು ಪದ್ಯವಿರಲಿ ಅಥವಾ ವಾದ್ಯಪರಿಕರಗಳಿರಲಿ ಎಲ್ಲದರ ಮೇಲೂ ಕಾರಂತರು ಬೆಳಕು ಹಾಯಿಸುತ್ತಿದ್ದರು. ಸುಮಾರು ಎಂಟು ವರ್ಷ ಅವರ ಜೊತೆಯಲ್ಲಿದ್ದ ಪಾಠಕರಿಗೆ ಕಾರಂತರೊಟ್ಟಿಗೆ ದಕ್ಷಿಣ ಅಮೇರಿಕಾಕ್ಕೂ ಹೋಗಿ ಪ್ರದರ್ಶನ ನೀಡುವ ಅವಕಾಶ ಬಂದೊದಗಿತು. ಇವೆಲ್ಲವೂ ಅವರ ಜ್ಞಾನಕ್ಷಿತಿಜವನ್ನು ವಿಸ್ತರಿಸಿದವು. ಇತರರಿಗೆ ಕಲಿಸುತ್ತಾ ತಾನೂ ಕಲಿತರು. ಅದೇ ಸಂದರ್ಭದಲ್ಲಿ ಕಾರಂತರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪದ್ಮಚರಣ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಖ್ಯಾತ ವಯೋಲಿನ್ ವಾದಕ ಎ.ವಿ. ಕೃಷ್ಣಮಾಚಾರರ ಒಡನಾಟ, ಸಾಹಚರ್ಯ ಒದಗಿಬಂತು. ಅವರ ಸಾನ್ನಿಧ್ಯ ಪಾಠಕರಿಗೆ ವಾದ್ಯ ಬಳಸುವಿಕೆ ಹಾಗೂ ನುಡಿಸುವಿಕೆಯಲ್ಲಿ ಹೆಚ್ಚಿನ ಪರಿಣತಿಯನ್ನೂ, ಸೂಕ್ಷ್ಮಸಂವೇದಿತೆಯನ್ನೂ ತಂದುಕೊಟ್ಟವು.
1995ರ ತನಕ ಕಾರಂತರೊಡನೆ ಇದ್ದ ಪಾಠಕರು ಆ ವರ್ಷದ ಕೊನೆಯಲ್ಲಿ ಕೆರೆಮನೆ ಮೇಳಕ್ಕೆ ಮೃದಂಗವಾದಕರಾಗಿ ಮತ್ತು ಕೆರೆಮನೆ ಯಕ್ಷಗಾನ ಶಾಲೆಗೆ ಮೃದಂಗ ಶಿಕ್ಷಕರಾಗಿ ನೇಮಕಗೊಂಡರು. ಅದೇ ವರ್ಷ (1995) ಪಿ.ಯು.ಸಿ. ತನಕ ಓದಿದ್ದ ಕಾರ್ಕಳದ ಸುಶಿಕ್ಷಿತ ಯುವತಿ ಸಂಧ್ಯಾ ಜೋಶಿಯವರೊಡನೆ ಪಾಠಕರಿಗೆ ವಿವಾಹವಾಯಿತು. ಮುಂದೆ ಸಂಧ್ಯಾ ಅವರು ಅನಿಮೇಷನ್ನಲ್ಲಿ ಡಿಪ್ಲೋಮಾ ಮಾಡಿ ಉದ್ಯೋಗಿಯೂ ಆದರು. ತನ್ಮಧ್ಯೆ ಕಾರ್ಕಳದಲ್ಲಿ ನೆಲೆಸಿದ್ದ ಪಾಠಕರಿಗೆ ಜೀವನ ಭದ್ರತೆಗಾಗಿ ಮೃದಂಗ ವಾದನದ ಹೊರತು ಏನಾದರೂ ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಬೇಕೆಂಬ ತುಡಿತವುಂಟಾಯಿತು. ಕೆರೆಮನೆ ಶ್ರೀಮಯ ಯಕ್ಷಗಾನ ಕೇಂದ್ರಕ್ಕೆ ಸರಕಾರದಿಂದ ಸರಿಯಾಗಿ ಅನುದಾನ ಬರದಿರುವುದು, ಮೇಳದ ಕಡಿಮೆ ಸಂಬಳ ಹೀಗಾಗಿ ಪಾಠಕರು ಯಕ್ಷಗಾನವನ್ನೇ ನಂಬಿ ಜೀವನ ಸಾಗಿಸುವಂತಿರಲಿಲ್ಲ.
ಅಷ್ಟರಲ್ಲಿ ಯಕ್ಷಗಾನ ವಲಯದಲ್ಲಿ ಒಂದು ಹೊಸ ಶಕೆ ಆರಂಭವಾಗಿತ್ತು. ಶತಾವಧಾನಿ ಡಾ. ಆರ್. ಗಣೇಶ್ ಅವರ ನಿರ್ದೇಶನದಲ್ಲಿ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಹೆಸರು ಮಾಡತೊಡಗಿತ್ತು. ಕಲಾಕೃತಿಯೊಂದರ ಉತ್ಕರ್ಷಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ, ನಿರ್ದೇಶನಕ್ಕೆ ಒಳಪಡುವ ಸಮಾನಮನಸ್ಕರ ಹಿಮ್ಮೇಳವೊಂದು ಮಂಟಪರಿಗೆ ಬೇಕಿತ್ತು. ಅದಕ್ಕೆ ದೊರೆತವರೇ ವಿದ್ವಾನ್ ಗಣಪತಿ ಭಟ್ಟರು, ಕೃಷ್ಣ ಯಾಜಿ ಇಡಗುಂಜಿ ಮತ್ತು ಅನಂತ ಪದ್ಮನಾಭ ಪಾಠಕರು. ನಿಜಕ್ಕೂ ಮಂಟಪರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಪಾಠಕರಿಗೆ ಹೊಸ ಅಧ್ಯಾಯವೊಂದನ್ನು ತೆರೆಯಿತು. ಗಣೇಶರ ಸಮರ್ಥ ನಿರ್ದೇಶನದಲ್ಲಿ ಏಕವ್ಯಕ್ತಿ ಯಕ್ಷಗಾನ ಒಂದು Classical programme ಅನ್ನುವ ಮಟ್ಟಿಗೆ ಜನಾದರ ಪಡೆಯಿತು.
ಇದರಲ್ಲಿ ನಿಮ್ಮ ಅನುಭವವೇನು ಅಂತ ಪಾಠಕರನ್ನು ಕೇಳಿದರೆ- “ಇದೊಂದು ನನ್ನ ಪಾಲಿನ ಸುಯೋಗ; ಒಳ್ಳೆಯ ಸಂಭಾವನೆ; ಸಾಮಾಜಿಕ ಮನ್ನಣೆ, ಗೌರವ ದೊರೆಯಿತು. ನಾನು ಕಲಿತ ಎಲ್ಲಾ ಮೃದಂಗ ಸೂಕ್ಷ್ಮಗಳನ್ನು ಹೊರಹಾಕಲು ಇದೊಂದು ಸೂಕ್ತ ವೇದಿಕೆಯಾಯಿತು. ಇಲ್ಲಿ ಮೇಳದಲ್ಲಿ ಬಾರಿಸಿದಂತೆ ಅಲ್ಲ. ಅಬ್ಬರ, ಗೌಜಿಗೆ ಅವಕಾಶವಿಲ್ಲ. ವ್ಯಕ್ತಿಪ್ರತಿಷ್ಠೆಗೆ ಮಣೆಯಲ್ಲ. ಉಳಿದವರು ಏನಾದರೂ ಆಗಲಿ. ತಾನು ಮಾತ್ರ ಕಾಣಿಸಿಕೊಂಡರಾಯಿತು ಎಂಬ ಚೀಪ್ ಮೆಂಟಾಲಿಟಿಗೆ ಆಸ್ಪದವಿಲ್ಲ. ಇಲ್ಲಿ ಭಾಗವಹಿಸುವ ಒಬ್ಬೊಬ್ಬನೂ ಒಂದೊಂದು ಪಾತ್ರವೇ ಆಗಿರುತ್ತಾನೆ. ಒಂದು ಕ್ಷಣದ ಅನವಧಾನ ಇಡೀ ಕಲಾಕೃತಿಯನ್ನೇ ಮಸುಕುಗೊಳಿಸೀತು! ಇದು ಸಮಷ್ಟಿ ಕಲೆಯಾಗಿರುವಂತೆ ವ್ಯಷ್ಟಿ ಕಲೆಯೂ ಹೌದು. ಇಡೀ ತಂಡ ಕಲೆಯ ಉತ್ಕರ್ಷಕ್ಕೆ, ರಸಾನುಭೂತಿಗೆ, ಭಾವಸೌಂದರ್ಯಕ್ಕೆ ದುಡಿಯಬೇಕಾಗುತ್ತದೆ” ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ.
ಒಟ್ಟಿನಲ್ಲಿ ಏಕವ್ಯಕ್ತಿ ಯಕ್ಷಗಾನ ಪಾಠಕರಿಗೆ ಒಂದು ಹೊಸ ತಿರುವನ್ನು ನೀಡಿತು. ಅವರ ಮೃದಂಗವಾದನ ಚಾತುರ್ಯ, ಪಾಂಡಿತ್ಯ, ಸೂಕ್ಷ್ಮ ಕುಸುರಿ ಕೆಲಸ ನವನವೋನ್ಮೇಷಶಾಲಿಯಾಗಿ ಮೆರೆಯುವಂತೆ ಮಾಡಿದವು. ಮಂಟಪರ “ಮೋಹಮೇನಕೆ” ಯಕ್ಷಗಾನಕ್ಕೆ ಪಾಠಕರೇ ಭಾಗವತರಾಗಿ ಯಕ್ಷಗಾನ ವಲಯದಲ್ಲಿ ಹೊಸ ಸಂಚಲನ ಹುಟ್ಟುಹಾಕಿದರು. ಭಾಗವತಿಕೆಯಲ್ಲೂ ತನ್ನ ಗಟ್ಟಿತನವನ್ನು ತೋರಿಸಿದರು.
ಡಾ. ಆರ್. ಗಣೇಶ್ ಹೇಳುವಂತೆ “ಪಾಠಕ್ ಒಬ್ಬ ಅದ್ಭುತ ವ್ಯಕ್ತಿ; ಉಲ್ಲಾಸಭರಿತ ಮನುಷ್ಯ; ಕರ್ಮಕುಶಲೀ. ವಿನೋದಪ್ರಜ್ಞೆಯ ಆರೋಗ್ಯಕರ ಮನೋಭಾವದವ. ಮಾಡುವ ಕೆಲಸದಲ್ಲಿ ಸ್ವಲ್ಪವೂ ಉಪೇಕ್ಷೆಯಿಲ್ಲ. ಕಥೆ-ಕಾದಂಬರಿ ಓದಿಕೊಂಡವರು. ಮಾನವ ಸ್ವಭಾವ ಅರಿತಿರುವವರು. ಭಾಗವತರಿಗೆ, ನರ್ತಕರಿಗೆ ಎಲ್ಲಾ ವಿಧದಲ್ಲೂ ಒದಗಿ ಬರುವವರು. ಸ್ನೇಹವಲಯವನ್ನು ಸಂತೋಷವಾಗಿ ಇಡುವವರು.” ಹೀಗೆ ಅವರ ಗುಣಗಾನ ಮಾಡುತ್ತಾರೆ ಗಣೇಶ್.
ಪಾಠಕರ ಒಡನಾಟದಲ್ಲಿರುವವರಿಗೆಲ್ಲಾ ಇವು ಅನುಭವಕ್ಕೆ ಬಂದಿರುತ್ತವೆ. ಪಾಠಕರ ಹಿರಿಯ ಮಗಳು ಲಹರೀ ಸ್ನಾತಕಪೂರ್ವ ತರಗತಿಯಲ್ಲಿ ಓದುತ್ತಿದ್ದಾಳೆ. ಕಿರಿಯ ಮಗಳು ತನ್ಮಯೀ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಗಂಡನ ಬಗ್ಗೆ ಅಪಾರ ಗೌರವವಿರುವ, ವಿಚಾರಶೀಲೆ, ಸದ್ಗೃಹಣಿ ಸಂಧ್ಯಾ ಪಾಠಕರ ಹೆಮ್ಮೆಯ ಮಡದಿಯಾಗಿರುವಂತೆಯೇ ಪಾಠಕರ ಒಂದು ಶಕ್ತಿಯೂ ಹೌದು. ಪಾಠಕರ ಸಂಚಾರೀ ಜೀವನದಲ್ಲಿ ಮನೆಯ ಜವಾಬ್ದಾರಿಯೆಲ್ಲವೂ ಅವರದೇ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪಾಠಕರು ಯಕ್ಷಗಾನ ಕ್ಲಾಸ್ ನಡೆಸುತ್ತಾ ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. ು
- ಅಲ್ಲು ಅರ್ಜುನ್ ಬಂಧನ, ಹೈಕೋರ್ಟ್ ಜಾಮೀನು ಆದೇಶ ಪ್ರತಿ ತಲುಪದ ಕಾರಣ ಜೈಲಿನಲ್ಲಿ ರಾತ್ರಿ ಕಳೆದ ನಟ; ಇಂದು ಜಾಮೀನಿನ ಮೇಲೆ ಬಿಡುಗಡೆ
- ಯಕ್ಷಗಾನ ಕಲಾವಿದರಿಗೆ ಬಸ್ಪಾಸ್ ವಿತರಣೆ
- ಶೌಚಾಲಯಕ್ಕೆ ಹೋದರೆ ಶಿಕ್ಷೆ; ನಾಲ್ಕು ವರ್ಷದ ಬಾಲಕಿಯ ಖಾಸಗಿ ಅಂಗಕ್ಕೆ ಶಿಕ್ಷಕಿ ಚಿವುಟಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ ಪೋಷಕರು
- ನವ ವಿವಾಹಿತೆಯ ಆತ್ಮಹತ್ಯೆ ಪ್ರಕರಣಕ್ಕೆ ನಾಟಕೀಯ ತಿರುವು – ಪ್ರೇಮಿ ಅಜಾಸ್ಗೆ ಕೊನೆಯ ಫೋನ್ ಕರೆ, ಬಳಿಕ ಆತ್ಮಹತ್ಯೆ
- ತನ್ನನ್ನು ಮರೆತು ಮತ್ತೆ ಗಂಡನ ಜೊತೆಗೆ ತೆರಳಿದ್ದಕ್ಕಾಗಿ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ – ಇನ್ಸ್ಟಾಗ್ರಾಮ್ ಪ್ರೀತಿಗೆ ಬಲಿಯಾದ ಮಹಿಳೆ