Thursday, November 21, 2024
Homeಪುಸ್ತಕ ಮಳಿಗೆಮೌನವನ್ನು ತುಂಬುವ ಪ್ರಯತ್ನ, ಈ ಪರಕಾಯ ಪ್ರವೇಶ!

ಮೌನವನ್ನು ತುಂಬುವ ಪ್ರಯತ್ನ, ಈ ಪರಕಾಯ ಪ್ರವೇಶ!

‘ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಲೀ ಬಯಲಾಟದ ಪಾತ್ರಧಾರಿಯಾಗಲಿ ತನ್ನ ಕಲಾವಂತಿಕೆಯನ್ನು ಯಶಸ್ವಿಯಾಗಿ ರಂಜನೀಯವಾಗಿ ಪ್ರೇಕ್ಷಕರಿಗೆ ದಾಟಿಸಬೇಕಾದರೆ ಆತ ಆಯಾ ಪಾತ್ರಗಳನ್ನು ತನ್ನಲ್ಲಿ ಆವಾಹಿಸಿಕೊಂಡು ತಾನೇ ಆ ಪಾತ್ರವೆಂಬಂತೆ ಅದರಲ್ಲಿ ಏಕೀಭವಿಸಬೇಕಾಗುತ್ತದೆ’ ಎಂಬ ‘ಪರಕಾಯ ಪ್ರವೇಶ’ದ ಬೆನ್ನುಡಿ ಕಲಾವಿದರಿಗೆ ಬೇಕಾದ ಪರಕಾಯ ಪ್ರವೇಶದ ಸಾಮರ್ಥ್ಯದ ಕುರಿತು ಹೇಳುತ್ತದೆ.

ಹಾಗೆ ನೋಡಿದರೆ ನಮ್ಮ ಮನಸ್ಸನ್ನೇ ನಾವು ಮುಕ್ತವಾಗಿ ತೆರೆದಿಡುವುದು ಕಷ್ಟ. ಅಂಥಾದ್ದರಲ್ಲಿ ಇನ್ನೊಂದು ಪಾತ್ರವನ್ನು ನಮ್ಮಲ್ಲಿ ಆವಾಹಿಸಿಕೊಂಡು, ಆಯಾ ಕಾಲಘಟ್ಟದ ಧರ್ಮವನ್ನು ಮೀರದಂತೆ, ನಮ್ಮ ಜ್ಞಾನಪ್ರದರ್ಶನ ಮತ್ತು ವರ್ತಮಾನದ ಸಾಮಾಜಿಕ ವಿಡಂಬನೆಯೊಂದೇ ಆಯುಧವಾಗದಂತೆ ಅರ್ಥಧಾರಿಯಾಗುವುದು ಸುಲಭದ ಮಾತಲ್ಲ. ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತುಕೊಂಡು ಯುಗಗಳ ಹಿಂದಿನ ಪಾತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ಪಾತ್ರಗಳಿಗೆ ದನಿಯಾಗಬೇಕಾದರೆ ಸಹಾನುಭೂತಿಯ ಪ್ರಜ್ಞೆ ನಮ್ಮಲ್ಲಿರಬೇಕು. ಅನುಕಂಪ ತೋರಿಸುವುದು ಸುಲಭ, ಸಹಾನುಭೂತಿ ಹೊಂದುವುದು ಕಷ್ಟ, ಹೌದಲ್ಲ!


ಈ ದೃಷ್ಟಿಯಿಂದ ನೋಡಿದರೆ ಶ್ರೀ ರಾಧಾಕೃಷ್ಣ ಕಲ್ಚಾರರ ‘ಪರಕಾಯ ಪ್ರವೇಶ’ ಒಂದೊಂದು ಪಾತ್ರಗಳ ಕುರಿತೂ ಲೇಖಕರು ಹೊಂದಿದ ಸಹಾನುಭೂತಿಯ ಸಂಕೇತ. ಪುರಾಣಗಳ ಲೋಕದಲ್ಲಿ ಅಷ್ಟೇನೂ ಪ್ರಾಮುಖ್ಯವೆನಿಸದ ಆದರೆ ಪ್ರಮುಖ ಘಟನೆಯೊಂದು ನಡೆಯುವಲ್ಲಿ ಕಾರಣೀಭೂತರಾದ ಪಾತ್ರಗಳ ಅಂತರಂಗವನ್ನು ತೆರೆಯುವ ಪ್ರಯತ್ನ. ಹೊರನೋಟಕ್ಕೆ ಕಾಣುವುದು ಮುದ್ದಾಗಿ ಹೊಲಿಯಲ್ಪಟ್ಟ ಅಂಗಿ ಹೊರತು ಹೊಲಿಯಲು ನೆರವಾದ ಸೂಜಿ ಅಲ್ಲವಲ್ಲ? ದಾರವಾದರೂ ಅಲ್ಪಮಟ್ಟಿಗೆ ಕಾಣಿಸೀತು. ಪುರಾಣಗಳಲ್ಲಿ ಇಂತಹ ಪಾತ್ರಗಳು ಅದೆಷ್ಟೋ ಇರಬಹುದು. ಆ ಮಹಾಕಾವ್ಯಗಳ ಕರ್ತೃಗಳ ದೃಷ್ಟಿಯಲ್ಲಿ ಅವು ಮುಖ್ಯವಾಗದೇ ಇರಬಹುದು. ಆದರೆ ಹೊಸ ತಲೆಮಾರಿನ ಓದುಗನಿಗೆ ಹಾಗೆ ಮೌನವಾಗಿ ನಿಂತ ಹಲವು ಪಾತ್ರಗಳು ಕಾಣಿಸಿಯಾವು. ಆದರೆ ರಾಧಾಕೃಷ್ಣ ಕಲ್ಚಾರರಿಗೆ ಆ ಪಾತ್ರಗಳ ಒಳಧ್ವನಿ ಕೇಳಿಸಿರಬೇಕು. ಹಾಗಾಗಿಯೇ ಈ ಪುಸ್ತಕದಲ್ಲಿರುವ ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ ಮತ್ತು ಪರೀಕ್ಷಿತನ ಸ್ವಗತಗಳು ಓದುಗರೆದುರು ತೆರೆದುಕೊಂಡಿವೆ.


ಮನು ಚಕ್ರವರ್ತಿಯ ಮೊಮ್ಮಗನಾದರೂ ರಾಜಮನೆತನದ ಘನತೆ ಗಾಂಭೀರ್ಯಗಳನ್ನು, ನಡತೆಯನ್ನೂ ಕಲಿಯಲಾಗದೇ ಹೋದ ದಂಡಕ, ಶಾಪಗ್ರಸ್ತನಾಗಿ ಸಾವಿಗಾಗಿ ಕಾಯುವ ಹೊತ್ತು ‘ಪ್ರಪಂಚ ಮೂಢರನ್ನು ಸಹಿಸುತ್ತದೆ, ಮೂರ್ಖರನ್ನಲ್ಲ’ ಎಂದು ಪರಿತಪಿಸುತ್ತಾನೆ. ಅವನ ಇಡಿಯ ಬಾಲ್ಯ, ಬದುಕು ನಮ್ಮೆದುರು ತೆರೆದುಕೊಳ್ಳುತ್ತದೆ. ಭೀಮನಿಂದ ಶರಹತಿಗೊಳಗಾದ ವಿಕರ್ಣ, ಕೌರವರು ಪಾಂಡವರಿಗೆ ಮಾಡಿದ ಒಂದೊಂದೂ ಅನ್ಯಾಯವನ್ನು ನೆನಪಿಸಿಕೊಂಡು ಪರಿತಪಿಸುತ್ತಾನೆ. ಪಾಂಚಾಲೆಯ ವಸ್ತ್ರಾಪಹಾರದ ಸಂದರ್ಭ ಅವಳ ಪರವಾಗಿ ದನಿಯೆತ್ತ ಹೊರಟ ಅವನು ‘ಈ ದಿನ, ಈ ಕ್ಷಣ ಮಾತಾಡದೇ ಇದ್ದರೆ ನನ್ನ ಇದುವರೆಗಿನ ಮೌನವೂ ಅರ್ಥ ಕಳೆದುಕೊಳ್ಳುತ್ತಿತ್ತು’ ಎನ್ನುವುದು ಮಾತಿಗಿರುವ ಮಹತ್ವವನ್ನು ತೋರುತ್ತದೆ. ಎಲ್ಲ ಮೌನವೂ ಸಹ್ಯವಲ್ಲ, ಸಾಧುವೂ ಅಲ್ಲವಲ್ಲ! ‘ಕಣ್ಣುಮುಚ್ಚುವ ಮೊದಲು ಕಾಣಿಸಿದ್ದು ಧರ್ಮರಾಯ, ಯಮಧರ್ಮನಲ್ಲ, ನನ್ನ ಅಣ್ಣ’ ಎಂಬ ವಿಕರ್ಣನ ಕೊನೆಯ ಮಾತನ್ನು ಗ್ರಹಿಸಿಯೂ ಹನಿಗಣ್ಣಾದೇ ಉಳಿದೇವೇ?

ಕೀಚಕನ ಸಾವಿನ ಬಳಿಕ ತೆರೆದುಕೊಳ್ಳುವ ಅವನಕ್ಕ ಸುದೇಷ್ಣಾಳ ಒಳಗು ತನ್ನ ಅಂತಃಪುರದ ಪರಿಚಾರಿಕೆಯರಿಗಿನ್ನು ನೆಮ್ಮದಿ ಎಂದು ಅಂದುಕೊಳ್ಳುವುದು, ಅದೆಷ್ಟೋ ಹೆಣ್ಣುಮಕ್ಕಳನ್ನು ನಿತ್ಯ ಕಾಡುತ್ತಿದ್ದ ದುಃಸ್ವಪ್ನ ದೂರವಾಯಿತಲ್ಲ ಅಂದುಕೊಳ್ಳುವುದು ಸುಲಭದ ಸ್ವಗತವಲ್ಲ. ಹಾಗೆಂದು ಇಲ್ಲಿನ ಯಾವ ಮಾತುಗಳೂ ಸ್ತ್ರೀವಾದದ ವಿರೋಧಾಭಾಸ ಎನಿಸುವುದಿಲ್ಲ. ರಾಣಿಯೇ ಆದರೂ ತಮ್ಮನನ್ನು ಶಿಕ್ಷಿಸುವ ಯಾವ ಅಧಿಕಾರವೂ ಇಲ್ಲದ ಅಬಲೆಯ ಸ್ವಗತವಿದು. ಮಹಾಭಾರತ ಯುದ್ಧಕ್ಕೆ ರಥ ಕಟ್ಟಬೇಕಾದ ರಥಕಾರನ ಸ್ವಗತ ಸಾಮಾನ್ಯ ಜನರ ಕಣ್ಣಿಗೆ ಕಾಣಿಸಬಹುದಾದ ಕೌರವ ಪಾಂಡವರ ಕಥನವನ್ನು ತೆರೆಯುತ್ತದೆ. ‘ಅನ್ಯಾಯವನ್ನು ಸಹಿಸುವುದು ಇನ್ನೊಂದು ಅನ್ಯಾಯವೆಸಗಿದಂತೆ’ ಎನ್ನುವುದು ಒಳ್ಳೆಯ ಸಂದೇಶವೇ.


ರಾಮನ ಸೇವಕನಾಗಿ ಜನಾಭಿಪ್ರಾಯವನ್ನು ಅವನಿಗೆ ಅರುಹಬೇಕಾದ ಭದ್ರ ಸೀತೆಯನ್ನು ರಾಮ ಪರಿತ್ಯಜಿಸಿದ ನಂತರದ ತನ್ನ ಅಳಲನ್ನು ನಮ್ಮೊಂದಿಗೆ ತೋಡಿಕೊಳ್ಳುತ್ತಾನೆ. ಕರ್ತವ್ಯಪ್ರಜ್ಞೆಯಿಂದ ನಡೆದುಕೊಂಡರೂ ಆ ಕಾರಣವಾಗಿ ಸೀತೆ ಅಯೋಧ್ಯೆಯಿಂದ ದೂರವಾಗಬೇಕಾಯಿತು ಎಂದುಕೊಳ್ಳುವ ಭದ್ರನ ‘ಆದರ್ಶಪ್ರಿಯತೆ ವಿಪರೀತಕ್ಕೆ ಹೋದರೆ ಹೀಗೇ ಆಗುವುದೇನೋ. ಸ್ವತಃ ಅವನಿಗಲ್ಲದಿದ್ದರೂ ಅವನನ್ನು ಅವಲಂಬಿಸಿದವರಿಗೆ ಸಂಕಟ ತಪ್ಪಿದ್ದಲ್ಲ. ತಪ್ಪಿರಲಿ, ಇಲ್ಲದಿರಲಿ ಶಿಕ್ಷೆಯನ್ನಂತೂ ಅನುಭವಿಸಲೇಬೇಕು, ಸೀತೆ ಯಂತೆ’ ಎಂಬ ನಿಟ್ಟುಸಿರು ಅದೆಷ್ಟು ಬಿಸಿ! ಅಬ್ಬಾ! ‘ಆಳುವಾತ ದುರ್ಬುದ್ಧಿಯವನಾದರೆ ಅವನ ಕೈಕೆಳಗಿರುವವರು ಒಳ್ಳೆಯವರಾಗುವುದು ಸಾಧ್ಯವೇ’ ಎಂದು ಪ್ರಶ್ನಿಸುವ ಪ್ರಾತಿಕಾಮಿ ದುಷ್ಟರ ನಾಯಕತ್ವದಲ್ಲಿ ಮುದುರಿ ಹೋಗುವ ಒಳ್ಳೆಯ ಮನಸ್ಸುಗಳ ಪ್ರತೀಕ.

‘ಮನುಷ್ಯರು ನಮ್ಮ ಹಾಗಲ್ಲ, ನಮಗೆ ಹಲ್ಲಿನಲ್ಲಿ ಮಾತ್ರ ವಿಷವಾದರೆ ಇವರಿಗೆ ಮೈ, ಬುದ್ಧಿಗಳಲ್ಲೂ ಅದೇ ತುಂಬಿದೆ. ಕಾರಣವೇ ಇಲ್ಲದೇ ಕೊಲ್ಲುವವರ ಪರಿಸರವನ್ನು ಬಿಟ್ಟು ದೂರಕ್ಕೆ ನಮ್ಮ ನಾಡಿಗೆ ಹೋಗಿಬಿಡೋಣ’ ಎನ್ನುವ ಅಶ್ವಸೇನನ ತಾಯಿ, ತಕ್ಷಕನ ಹೆಂಡತಿ, ‘ನನ್ನವರೆಂಬುವರಿಲ್ಲದೆ, ನಾಗನೆಂದು ಕಂಡವರೆಲ್ಲರೂ ಅಂಜುವ, ಅಲ್ಲವಾದರೆ ಅಸಹ್ಯದಿಂದ ಓಡಿಸುವವರ ಮಧ್ಯೆ ನಾನು ಬದುಕಬೇಕಿತ್ತು, ಅಲ್ಲ ಬದುಕಲೇ ಬೇಕಿತ್ತು’ ಎಂಬ ಅಶ್ವಸೇನ ಅರ್ಜುನನನ್ನು ಕೊಲ್ಲಬೇಕಿದ್ದ ತನ್ನ ಸೇಡನ್ನು ಅನಾವರಣಗೊಳಿಸುತ್ತಾನೆ.


ವಾಲಿಯ ಸಾವಿನ ಬಳಿಕ ಕಿಷ್ಕಿಂಧೆಯ ಅಧಿಕಾರ ಮಾತ್ರವಲ್ಲದೇ ತಾರೆಯನ್ನೂ ಒಪ್ಪಿಕೊಳ್ಳುವ ಸುಗ್ರೀವನ ಹೆಂಡತಿ ರುಮಾ ‘ತಾರೆಯನ್ನು ಪತ್ನಿಯಾಗಿಸಿಕೊಳ್ಳಬೇಕಾದ ಅಗತ್ಯವೋ ಅನಿವಾರ್ಯತೆಯೋ ಇತ್ತೇ’ ಎಂದು ಕೇಳುವುದು ನ್ಯಾಯಯುತವೇ ಅಲ್ಲವೇ? ‘ಯಾರೋ ಅಣ್ಣ ಸತ್ತರೆ ಅವನ ಹೆಂಡತಿಯನ್ನು ತಮ್ಮ ಕೈಹಿಡಿಯಬಹುದು ಎಂಬ ಸೂಚನೆ ಕೊಟ್ಟದ್ದೇ ತಡ, ತಾರೆಯ ಕೈಹಿಡಿದ. ಅವರಿಬ್ಬರ ನಡುವೆ ಮೊದಲೇ ಆಕರ್ಷಣೆ ಇದ್ದಿರಬಹುದೇ’ ಎಂಬ ಅನುಮಾನ ವ್ಯಕ್ತಪಡಿಸುವುದು ಅಪ್ಪಟ ಹೆಣ್ಣುಮನಸ್ಸಿನ ಅಳಲು! ಪ್ರಮತಿ ಮಹರ್ಷಿಗಳ ಮಗ ರುರು ಪ್ರಮದ್ವರಾಳಿಗಾಗಿ ತನ್ನ ಅರ್ಧ ಆಯಸ್ಸು ಕೊಟ್ಟು ಅವಳನ್ನು ಬದುಕಿಸಿಕೊಂಡ ಮೇಲೆ ಸರ್ಪಗಳನ್ನು ಕಂಡಲ್ಲಿ ಕೊಲ್ಲುತ್ತಾನೆ. ‘ಋಷಿಯೋಗ್ಯವಲ್ಲದ ಪ್ರತೀಕಾರ ಬುದ್ಧಿ ನನ್ನಲ್ಲಿ ಜಾಗೃತವಾಗಿತ್ತು’ ಎಂಬ ಸ್ವಪ್ರಜ್ಞೆಯೊಂದಿಗೆ ಕೊರಗುತ್ತಾನೆ. ಅವನ ಕೊನೆ ಹೇಗಾಯಿತು ಎಂಬುದು ಇನ್ನೊಂದು ಕಥೆ ಎಂದಿದ್ದಾರೆ ಲೇಖಕರು. ಆ ಕಥೆಗಾಗಿ ನಾವು ಕಾಯಬೇಕಿದೆ.


ಅಂಬೆ ತನ್ನ ಮೇಲೆ ವಿಶ್ವಾಸವಿಟ್ಟು ಬಂದರೂ ಅವಳನ್ನು ಒಪ್ಪಿಕೊಳ್ಳದೇ ತಿರಸ್ಕರಿಸಿ ಹೇಡಿಯೆನಿಸುವ ಸಾಲ್ವನ ಒಳಮನಸ್ಸು ಲೇಖಕರಿಗೆ ಬೇರೆಯದೇ ಆಗಿ ಕಂಡಿದೆ, ಅದು ಓದುಗರು ಒಪ್ಪುವಂತೆ! ಕುರುಕ್ಷೇತ್ರದ ರಣಕ್ಷೇತ್ರದಲ್ಲಿ ಊರುಭಂಗಕ್ಕೊಳಗಾಗಿ ಬಿದ್ದಿರುವ ಕೌರವನಿಗೆ ಕಿವಿಯಲ್ಲಿ ವಿದುರ ಮಾತಾಡಿಸಿದಂತೆನಿಸುತ್ತದೆ. ‘ಬದುಕಿದ್ದಷ್ಟೂ ಕಾಲ ಭೂಮಿ, ಭೂಮಿ ಅಂದೆಯಲ್ಲ, ಈಗ ಹೀಗೆ ಮಲಗುವುದಕ್ಕೆ ಎಷ್ಟು ಬೇಕಪ್ಪಾ?’ ಎಂಬ ಪ್ರಶ್ನೆಯ ಆಳ ದೊಡ್ಡದು. ‘ಸಾವು ದೂರವಾದಾಗ ನಿರಾಶೆ! ಅಂದರೆ ಮೃತ್ಯುಭಯವನ್ನು ನಾನು ಗೆದ್ದೆನೇ’ ಎಂದು ಪ್ರಶ್ನಿಸಿಕೊಳ್ಳುವ ಪರೀಕ್ಷಿತನ ಸ್ವಗತ ಒಂದು ಯುಗ ಅಂತ್ಯವಾಗುವಾಗಿನ ತಲ್ಲಣಗಳ ಚಿತ್ರಣ.


ಉತ್ಥಾನ ಮಾಸಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಳ್ಳುತ್ತಿರುವ ‘ಪರಕಾಯ ಪ್ರವೇಶ’ವನ್ನು ಪುಸ್ತಕದ ರೂಪದಲ್ಲಿ ತಂದಿರುವುದು ಸಾಹಿತ್ಯ ಸಿಂಧು ಪ್ರಕಾಶನ ಬೆಂಗಳೂರು. ಯಕ್ಷಗಾನ ಅಭ್ಯಾಸಿಗಳಿಗೆ ನಿಜಾರ್ಥದಲ್ಲಿ ಸ್ವಗತಗಳಿಗೊಂದು ಮಾದರಿ. ನೋಡುವ ಕಣ್ಣುಗಳು ವರ್ತಮಾನದ್ದಾದರೂ ಪುರಾಣಗಳ ಆಳವಾದ ಅಧ್ಯಯನ ನಮ್ಮನ್ನು ಆ ಕಾಲಘಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂಬುದಕ್ಕೆ ಉದಾಹರಣೆ ‘ಪರಕಾಯ ಪ್ರವೇಶ’. ಕಲ್ಚಾರರ ಮನಸ್ಸು ಈ ಸ್ವಗತಗಳನ್ನು ಬರೆದು ಹಗುರಾಗಿರಬೇಕು… ಓದಿ ಭಾರವಾಗುವ ಸರದಿಯೀಗ ನಮ್ಮದು. ಯಾಕೆಂದರೆ ಅನೇಕ ಸಂದರ್ಭ ಆ ಸ್ವಗತಗಳು ನಮ್ಮ ಆಂತರ್ಯದ ಪ್ರತಿಬಿಂಬವೂ ಆದೀತು. ಲೇಖಕರೇ ಹೇಳುವ ಹಾಗೆ ‘ಇದು ಪುರಾಣದ ಮೌನಗಳನ್ನು ತುಂಬುವ ಪ್ರಯತ್ನ’. ಮಾತಾದ ಸುದೀರ್ಘ ಮೌನವನ್ನು ಆಲಿಸಿದ ಬಳಿಕವೂ ಸಹಾನುಭೂತಿ ಹೊಂದದೇ ಉಳಿದೇವೆಯೇ? ು

ಲೇಖಕಿ: ಆರತಿ ಪಟ್ರಮೆ
(ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ)
ಉಪನ್ಯಾಸಕಿ, ವಿದ್ಯಾನಿಧಿ ಪದವಿಪೂರ್ವ ಕಾಲೇಜು
ಕೃಷ್ಣ ನಗರ, ತುಮಕೂರು – 03


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments