ಕೈರಂಗಳ ಶ್ರೀ ಕೃಷ್ಣ ಮೂಲ್ಯ ಪ್ರಸ್ತುತ ಕಟೀಲು 3ನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 1980ರಿಂದ ತೊಡಗಿ, ಸುಮಾರು 37 ವರುಷಗಳಿಂದ ಕಲಾಸೇವೆಯನ್ನು ಮಾಡಿದ್ದಾರೆ. ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಆನೆಗುಂಡಿ ಎಂಬಲ್ಲಿ ಇವರ ಜನನ (13-02-1954). ತಂದೆ ಮಾರು ಮೂಲ್ಯ. ತಾಯಿ ಅಕ್ಕು ಮೂಲ್ಯೆದಿ.
ಕೈರಂಗಳ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದವರು. ಕೈರಂಗಳ ಎಂಬ ಊರು, ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯ. ಯಕ್ಷಗಾನಾಸಕ್ತರೇ ತುಂಬಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಅಲ್ಲಿ ‘ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ’ ಎಂಬ ಸಂಸ್ಥೆಯೂ ವ್ಯವಹರಿಸುತ್ತಿದೆ. ಶ್ರೀ ಆನೆಗುಂಡಿ ಗಣಪತಿ ಭಟ್ಟರೇ ಯಕ್ಷಗಾನ ಕಲಾವಿದನಾಗಲು ನನಗೆ ಪ್ರೇರಕರು. ಅವರ ಒತ್ತಾಯದಿಂದಲೇ ನಾನು ನಾಟ್ಯ ಕಲಿಯಲು ಅಭ್ಯಾಸ ಮಾಡಿದೆ. ಶ್ರೀ ಹೊಸಹಿತ್ಲು ಮಹಾಲಿಂಗ ಭಟ್ಟರಿಂದ ನಾಟ್ಯ ಕಲಿಯುವಂತಹ ಅವಕಾಶ ಸಿಕ್ಕಿತು. ಅವರು ಸಿಂಧು. ನಾವು ಕೇವಲ ಬಿಂದುಗಳು. ಅವರು ಹೇಳಿಕೊಟ್ಟದ್ದರಲ್ಲಿ ಒಂದೆರಡನ್ನಾದರೂ ಕಲಿತಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿ ಆ ಶ್ರೇಷ್ಠ ಕಲಾವಿದರಿಗೆ ಕೃಷ್ಣ ಮೂಲ್ಯರು ಗೌರವವನ್ನರ್ಪಿಸುತ್ತಾರೆ.
ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಹಿಮ್ಮೇಳ ಗುರುಗಳಾಗಿದ್ದವರು ಶ್ರೀ ಆನೆಗುಂಡಿ ಗಣಪತಿ ಭಟ್ಟರು. ಖ್ಯಾತ ಭಾಗವತ, ಪ್ರಸಂಗಕರ್ತ, ನಿರ್ದೇಶಕ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಇವರ ಶಿಷ್ಯರು. ಖ್ಯಾತ ಅರ್ಥಧಾರಿಗಳಾದ ಬರೆ ಶ್ರೀ ಕೇಶವ ಭಟ್ಟರೂ ಈ ಸಂಘದಲ್ಲಿ ಸಕ್ರಿಯರಾಗಿದ್ದರು. ಇವರೆಲ್ಲರೂ ಪ್ರತಿಫಲಾಪೇಕ್ಷೆ ಇಲ್ಲದೆ ಕಲಾಸೇವೆಯನ್ನು ಮಾಡುತ್ತಿದ್ದರಂತೆ. ಕಲಿಯುವ ಹಂತದಲ್ಲಿ ಇವರೆಲ್ಲರ ಪ್ರಭಾವವೂ ಕೃಷ್ಣ ಮೂಲ್ಯರ ಮೇಲೆ ಪರಿಣಾಮ ಬೀರಿತು.
ನಾಟ್ಯ ಕಲಿತ ಮೇಲೆ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಾ, ಅಂಚೆ ಕಛೇರಿಯಲ್ಲಿ ಸಹಾಯಕನಾಗಿ, ಉಗ್ರಾಣಿ ಕೆಲಸ, ಕೂಲಿಕೆಲಸವನ್ನು ಮಾಡುತ್ತಾ 5 ವರ್ಷ ಗಳನ್ನು ಕಳೆದ ಕೈರಂಗಳ ಕೃಷ್ಣ ಮೂಲ್ಯರು 1980 ಕಟೀಲು ಮೇಳಕ್ಕೆ ಸೇರಿದರು. ಆಗ 2 ಮೇಳ ತಿರುಗಾಟ ನಡೆಸುತ್ತಿತ್ತು. 1ನೇ ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರು, ಪುತ್ತೂರು ಕೃಷ್ಣ ಭಟ್, ತ್ರಿವಿಕ್ರಮ ಶೆಣೈ, ಸಂಪಾಜೆ ಶೀನಪ್ಪ ರೈ, ಕುತ್ಯಾಳ ಬಾಬು ರೈಗಳಂತ ಶ್ರೇಷ್ಠ ಕಲಾವಿದರಿದ್ದುದು ಇವರ ಬೆಳವಣಿಗೆಗೆ ಪೂರಕವಾಯಿತು. ಕುತ್ಯಾಳ ಬಾಬು ರೈಗಳು ಮಾತುಗಾರಿಕೆ ಹೇಳಿಕೊಡುತ್ತಿದ್ದರಂತೆ.
1981ನೇ ಇಸವಿ ಕಟೀಲು 3ನೇ ಮೇಳ ಆರಂಭವಾದಾಗ ಕಲಾವಿದನಾಗಿ ಸೇರ್ಪಡೆಗೊಂಡರು. ಆಗ ಸರಪಾಡಿ ಶಂಕರನಾರಾಯಣ ಕಾರಂತರು ಭಾಗವತರಾಗಿದ್ದರು. ನಂತರ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳು, ನಿಡ್ಲೆ ನರಸಿಂಹ ಭಟ್ಟರು, ಮೋಹನ ಶೆಟ್ಟಿಗಾರರೂ ಮದ್ದಳೆಗಾರರಾಗಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು ಮತ್ತು ನಿಡ್ಲೆ ನರಸಿಂಹ ಭಟ್ಟರು ನನ್ನನ್ನು ತಿದ್ದಿ ತೀಡಿದರು. ನಾನಿಂದು ಕಲಾವಿದನಾಗಿ ಕಾಣಿಸಿಕೊಳ್ಳಲು ಅವರೇ ಕಾರಣರು. ಉಣ್ಣುವಾಗ ಅವರನ್ನು ನೆನಪಾಗುತ್ತದೆ. ನಂತರ ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ ರಾವ್ ಅವರೂ ನನಗೆ ಮಾರ್ಗದರ್ಶಕರಾದರು ಎನ್ನುವ ಮೂಲಕ ಗೌರವವನ್ನು ಎಲ್ಲರಿಗೂ ಕೃಷ್ಣ ಮೂಲ್ಯರು ಸಲ್ಲಿಸುತ್ತಾರೆ. ಶ್ರೀ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟರೂ ನನಗೆ ಬಹಳಷ್ಟು ಹೇಳಿಕೊಟ್ಟವರು. ಅವರನ್ನು ಕಳೆದುಕೊಂಡ ನೋವಿದೆ ಎನ್ನುತ್ತಾರೆ.
ತೆಕ್ಕುಂಜೆ ಕೇಶವ ಭಟ್ಟರು ಅವರ ಅಕ್ರೂರ. Master Piece. ಹಾಗಾಗಿ ಅವರನ್ನು ಅಕ್ರೂರ ಮಾಸ್ಟರ್ ಎನ್ನುತ್ತಿದ್ದರಂತೆ. ಸಂಜಯ, ಅತಿಕಾಯ ಮೊದಲಾದ ಸಾತ್ವಿಕ ಪಾತ್ರಗಳನ್ನು ಮೆಚ್ಚುವಂತೆ ಮಾಡುತ್ತಿದ್ದರಂತೆ. ಇನ್ನಿಬ್ಬರು ವೆಂಕಪ್ಪ ಮಾಸ್ತರ್ ಮತ್ತು ಕೈರಂಗಳ ಕೃಷ್ಣ ಮಾಸ್ತರ್. ಈ ಮೂವರೂ ಕೈರಂಗಳ ಕೃಷ್ಣ ಮೂಲ್ಯರಿಗೆ ಮಾತುಗಾರಿಕೆಯನ್ನು ಹೇಳಿಕೊಟ್ಟಿದ್ದರಂತೆ.
ಕೈರಂಗಳ ಕೃಷ್ಣ ಮೂಲ್ಯರಿಗೆ ಸಾತ್ವಿಕ ಪಾತ್ರಗಳೆಂದರೆ ಬಲು ಇಷ್ಟ. ಭಾವನಾತ್ಮಕ ಪಾತ್ರಗಳಲ್ಲಿ ಇವರು ಚೆನ್ನಾಗಿ ಅಭಿನಯಿಸುತ್ತಾರೆ. ಪುಂಡುವೇಷಗಳನ್ನಲ್ಲದೆ ಕಿರೀಟ, ನಾಟಕೀಯ ವೇಷಗಳನ್ನು ಚೆನ್ನಾಗಿ ಮಾಡಬಲ್ಲರು. 1ನೇ ಮೇಳದಲ್ಲಿರುವಾಗ ಈಶ್ವರ, ಸುಪಾರ್ಶ್ವಕ, ಮತ್ತೆ ದೇವೀ ಪ್ರತ್ಯಕ್ಷ ಈಶ್ವರ, ಮತ್ತೆ ಧೂಮ್ರಾಕ್ಷನ ಪಾತ್ರಗಳನ್ನು ನಿರ್ವಹಿಸಿದ್ದರು. ಬ್ರಹ್ಮ, ವಿಷ್ಣು, ಶ್ರೀಕೃಷ್ಣ, ಶ್ರೀರಾಮ, ಶ್ವೇತಕುಮಾರ ಅಲ್ಲದೆ ಅರ್ಜುನ, ದೇವೇಂದ್ರ, ಪರೀಕ್ಷಿತ ಮೊದಲಾದ ಕಿರೀಟ ವೇಷಗಳನ್ನೂ, ಹಿರಣ್ಯಕಶ್ಯಪ, ರಾವಣ, ವಿಕ್ರಮಾದಿತ್ಯ, ನಳ, ಹರಿಶ್ಚಂದ್ರ, ಶ್ರೀರಾಮ ಮೊದಲಾದ ನಾಟಕೀಯ ಪಾತ್ರಗಳನ್ನೂ ಕೈರಂಗಳ ಕೃಷ್ಣ ಮೂಲ್ಯರು ನಿರ್ವಹಿಸಿದ್ದಾರೆ.
ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ಯಜಮಾನರುಗಳ ಪ್ರೋತ್ಸಾಹ, ಕಲಾವಿದರ, ಕಲಾಭಿಮಾನಿಗಳ ಸಹಕಾರದಿಂದ ಇವು ಸಾಧ್ಯವಾಯಿತು ಎನ್ನುವ ಕೃಷ್ಣ ಮೂಲ್ಯರು ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು. ಪತ್ನಿ ಲೀಲಾವತೀ ಮತ್ತು 3 ಮಂದಿ ಮಕ್ಕಳು (2 ಗಂಡು, 1 ಹೆಣ್ಣು) ಹಿರಿಯ ಪುತ್ರ ಕಿರಣ್‍ರಾಜ್ Civil Diploma ಮಾಡಿ ಉದ್ಯೋಗಿ. ಕಿರಿಯ ಪುತ್ರ ಕಿಶನ್‍ರಾಜ್ B.Com ಪದವೀಧರ. ಪುತ್ರಿ ದೇವಿಕಲಾ B.Sc. ಪದವೀಧರೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು