ಮಧೂರು ಗಣಪತಿ ರಾವ್ ಅವರ ಹೆಸರನ್ನು ಕೇಳದವರು ಅಪರೂಪ. ಹಳೆಯ ಯಕ್ಷಗಾನ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರಾಗಿದ್ದ ಹೆಸರು. ಇತ್ತೀಚೆಗಿನ ಯಕ್ಷಗಾನ ಪ್ರೇಕ್ಷಕರಿಗೆ ಅವರ ಹಾಗೂ ಅವರು ನಿರ್ವಹಿಸಿದ ಪಾತ್ರಗಳ ಪರಿಚಯ ಅಷ್ಟಾಗಿ ಇರದಿದ್ದರೂ ಹಳೆಯ ತಲೆಮಾರಿನ ಹಿರಿಯ ಪ್ರೇಕ್ಷಕರು ಅವರ ಬಗ್ಗೆ ಆಡಿಕೊಳ್ಳುವುದನ್ನು ಕೇಳಿ ಗೊತ್ತಿರಬಹುದು.
ಯಕ್ಷಗಾನದ ವಿವಿಧ ಅಂಗಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಕಲಾವಿದ ಮಧೂರು ಗಣಪತಿ ರಾವ್. ಸುಬ್ಬರಾವ್ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿ 1924ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಪರಿಸರದಲ್ಲಿಯೇ ಬೆಳೆದವರಾದ ಕಾರಣ ಸಹಜವಾಗಿಯೇ ಯಕ್ಷಗಾನ ಕಲೆಯತ್ತ ಸೆಳೆಯಲ್ಪಟ್ಟಿದ್ದರು.
ಇವರ ಸಹೋದರರಾಗಿದ್ದ ಮಧೂರು ನಾರಾಯಣ ಹಾಸ್ಯಗಾರರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದರು. ಗಣಪತಿ ರಾವ್ ಅವರಿಗೆ ಸಹೋದರನ ನಿರಂತರ ಪ್ರೋತ್ಸಾಹವಿತ್ತು. ಯಕ್ಷಗಾನ ಕಲಿತ ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿ ಸೇರ್ಪಡೆಗೊಂಡರು. ಆಮೇಲೆ ಹಲವಾರು ಮೇಳಗಳಲ್ಲಿ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು.
ಕೂಡ್ಲು ಮೇಳ, ಕುಂಡಾವು ಮೇಳ, ಕುಂಡಾಪು, ಕುದ್ರೋಳಿ, ಮೂಲ್ಕಿ. ಸುರತ್ಕಲ್ ಮೇಳ, ಮಲ್ಲ ಮೇಳ, ಮಧೂರು ಮೇಳ, ಉಪ್ಪಳ ಭಗವತೀ ಮೇಳವೇ ಮೊದಲಾದ ಮೇಳಗಳಲ್ಲಿ ಪ್ರಬುದ್ಧ ಜನಪ್ರಿಯ ವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದರು. ಮಧೂರು ಗಣಪತಿ ರಾವ್ ಅವರದು ಯಕ್ಷಗಾನ ಕ್ಷೇತ್ರದಲ್ಲಿ ಐದು ದಶಕಗಳಿಗೂ ಮಿಕ್ಕಿದ ಕಲಾಸೇವೆ. ಅಷ್ಟು ದೀರ್ಘಾವದಿಯಲ್ಲಿಯೂ ಕಲಾವಿದನಾಗಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದರು.
ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳೆರಡನ್ನೂ ಬಲ್ಲ ಇವರು ಯಕ್ಷಗಾನಕ್ಕೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಮುಮ್ಮೇಳ ವೇಷಧಾರಿಯಾಗಿ ಪ್ರಸಿದ್ಧಿಯನ್ನು ಪಡೆದುದು ಮಾತ್ರವಲ್ಲದೆ ತಾಳಮದ್ದಳೆಯ ಜನಮೆಚ್ಚಿದ ಅರ್ಥಧಾರಿಯೂ ಆಗಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೊಂದಿಗೆ ಹಿಮ್ಮೇಳಕ್ಕೆ ಸಹಕಲಾವಿದರಾಗಿದ್ದುಕೊಂಡು ಆಮೇಲೆ ವೇಷಧಾರಿಯಾಗಿ ಗುರುತಿಸಲ್ಪಟ್ಟು ಕರ್ಣ, ಅರ್ಜುನ, ಸುದರ್ಶನ, ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಇಂದ್ರಜಿತು, ರಕ್ತಬೀಜ, ತಾಮ್ರಧ್ವಜ, ದೇವೇಂದ್ರ, ಋತುಪರ್ಣ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದವರು.
ಗಣಪತಿ ರಾಯರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದುದು ಮಾತ್ರವಲ್ಲದೆ ಆ ಸಂಸ್ಥೆಯ ಉನ್ನತಿಗಾಗಿ ದುಡಿದ ಮಾರ್ಗದರ್ಶಕರೂ ಆಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಗೌರವವನ್ನು ಪಡೆದಿರುವ ಮಧೂರು ಗಣಪತಿ ರಾಯರನ್ನು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘ, ಸುರತ್ಕಲ್ ಮೇಳ, ಎಡನೀರು ತರುಣ ಕಲಾವೃಂದ, ಕೊಲ್ಯದ ಶಿವಾಜಿ ಸಂಘ ಮತ್ತು ಎಡನೀರು ಮಠ, ಮಧೂರಿನ ಮಿತ್ರ ಕಲಾವೃಂದ, ಉಳಿಯತ್ತಡ್ಕದ ಆದರ್ಶ ಕಲಾ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕೂಡ್ಲು ಶ್ರೀ ಗೋಪಾಲಕೃಷ್ಣ ಶಾನುಭೋಗ್ ಪ್ರತಿಷ್ಠಾನ ಮೊದಲಾದೆಡೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಇನ್ನೂ ಹಲವಾರು ಪ್ರಶಸ್ತಿ ಸನ್ಮಾನಗಳು ಅವರಿಗೆ ಬಂದಿವೆ. ಯಕ್ಷಗಾನದ ಸವ್ಯಸಾಚಿ ಎಂದು ಗುರುತಿಸಿಕೊಂಡಿದ್ದ ಮಧೂರು ಗಣಪತಿ ರಾವ್ ಅವರು ಆಟ, ಕೂಟಗಳೆರಡರಲ್ಲಿಯೂ ಸಮಾನ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಮಾತ್ರವಲ್ಲ, ಅವೆರಡರಲ್ಲಿಯೂ ಪ್ರಸಿದ್ಧಿಯನ್ನೂ ಪಡೆದವರು. ಪಾತ್ರದ ಔಚಿತ್ಯ, ಸ್ವಭಾವ ಮತ್ತು ಘನತೆಗಳನ್ನು ಅರಿತು ಪಾತ್ರ ನಿರ್ವಹಿಸಿ ಅಭಿನಯಿಸುವವರು.
ಅವರ ಹುಟ್ಟೂರು ಅಡೂರು ಆಗಿದ್ದರೂ ಕ್ರಮೇಣ ಮಧೂರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ ನಂತರ ಮಧೂರು ಗಣಪತಿ ರಾವ್ ಎಂದೇ ಕರೆಸಿಕೊಂಡರು. ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಮೂಲಕ ಹಲವಾರು ಕಲಾವಿದರನ್ನು ತರಬೇತಿಗೊಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರತಿವರ್ಷವೂ ಇವರ ನೇತೃತ್ವದಲ್ಲಿ ಯಕ್ಷಗಾನ ಆಟ, ಕೂಟ ಮತ್ತು ಪ್ರದರ್ಶನಗಳು ನಡೆಯುತ್ತಿದ್ದುವು.
ಯಕ್ಷಗಾನದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿ, ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟ ಮಧೂರು ಗಣಪತಿ ರಾವ್ ತನ್ನ 89ನೆಯ ವಯಸ್ಸಿನಲ್ಲಿ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರೂ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ