Wednesday, November 27, 2024
Homeಯಕ್ಷಗಾನಯಕ್ಷಗಾನದಲ್ಲಿ ಅಪ್ಪ, ಮಗ, ಮೊಮ್ಮಗ - ವಂಶವಾಹಿನಿಯಲ್ಲಿ ಕಲಾಪ್ರಪಂಚ 

ಯಕ್ಷಗಾನದಲ್ಲಿ ಅಪ್ಪ, ಮಗ, ಮೊಮ್ಮಗ – ವಂಶವಾಹಿನಿಯಲ್ಲಿ ಕಲಾಪ್ರಪಂಚ 

ಭಾಗ – 1

ಕಲೆಯ ಸೆಳೆತ ಮತ್ತು ರಂಗಪ್ರದರ್ಶನದ ಉತ್ಸಾಹ ಅದಮ್ಯವಾದದ್ದು. ಅದೇನೋ ಚುಂಬಕಶಕ್ತಿ ಅದರೊಳಗೆ ಅಡಗಿದೆ. ಯಾವುದಾದರೂ ಕಲಾಪ್ರದರ್ಶನವನ್ನೋ ಅಥವಾ ಭಾರತೀಯ ಸಂಗೀತದ ವಿವಿಧ ಪ್ರಾಕಾರಗಳನ್ನೋ ಗಮನಿಸಿದಾಗ ಅಥವಾ ಅದನ್ನು ಕೂಲಂಕುಷವಾಗಿ ಅಭ್ಯಸಿಸಲು ತೊಡಗಿದಾಗ ಹಲವಾರು ಸೋಜಿಗಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ಯಾವುದೇ ಒಂದು ರಂಗಕಲೆಯು ಅದರ ಉಗಮಸ್ಥಾನದಲ್ಲಿ ಪರಿಪೂರ್ಣತೆಯನ್ನು ಪಡೆದಿರುವುದಿಲ್ಲ. ನದಿಯ ಉಗಮಸ್ಥಾನದಲ್ಲಿ ಅದು ಹೇಗೆ ಕೇವಲ ಸಣ್ಣ ನೀರಿನ ಒರತೆಯಾಗಿರುತ್ತದೆಯೋ ಹಾಗೆ. ಆಮೇಲೆ ಒರತೆಗಳು, ಝರಿಗಳು ಕವಲುಗಳು ಬಂದು ಸೇರುತ್ತಾ ಮುಂದಕ್ಕೆ ಪರಿಪೂರ್ಣ ನದಿಯಾಗಿ ಮೈದುಂಬಿ ಹರಿಯುತ್ತದೆ.

ಕಲೆಯೊಂದು ಉಗಮವಾದಾಗ ಅಥವಾ ರೂಪುಗೊಂಡಾಗ ಇದ್ದ ಸ್ಥಿತಿಯಲ್ಲಿಯೇ ಸದಾಕಾಲ ಇರಬೇಕೆಂದು ಬಯಸುವುದು ಮೂರ್ಖತನ. ಮಾನವರು ಕೂಡಾ ಅನಾಗರಿಕ ಪ್ರಪಂಚದಿಂದ ನಾಗರಿಕತನದ ಸುಂದರ ಜಗತ್ತಿನಲ್ಲಿ ಜೀವಿಸುತ್ತಿಲ್ಲವೇ? ಕಲೆಯೊಂದು ಬೆಳವಣಿಗೆಯಾಗುವ ಹಂತದಲ್ಲಿ ಅದರ ಬೆಳವಣಿಗೆಗೆ ಸಹಕಾರಿಯಾಗಿ ಸೇವೆ ಸಲ್ಲಿಸಿದ ಹಲವಾರು ಕೈಗಳಿರುತ್ತವೆ.

ಒಂದೇ ಕುಟುಂಬದ ಹಲವಾರು ಮಂದಿ ಕಲಾವಿದರಾಗಿ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧರಾದುದನ್ನು ಕಾಣಬಹುದು. ಹಾಗೆಯೇ ಕಲಾಭ್ಯಾಸ ಎಂಬುದು ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಮುಂದುವರಿದ ಸಾಕಷ್ಟು ಉದಾಹರಣೆಗಳಿವೆ. ಕುಟುಂಬದ ಎಲ್ಲ ಸದಸ್ಯರು ಕಲಾವಿದರಾಗಿ ಕಲೆಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡ ನಿದರ್ಶನಗಳೂ ಹೇರಳವಾಗಿವೆ. 

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಕಥಕ್, ಮಣಿಪುರಿ, ಪಕ್ಕವಾದ್ಯಗಳಾದ ತಬಲಾ, ಮೃದಂಗ, ವಯೊಲಿನ್, ಘಟಂ, ಹಾಡುಗಾರಿಕೆ ಮೊದಲಾದ  ರಂಗಕ್ರಿಯೆಗಳಲ್ಲಿ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ತಾದಾತ್ಮ್ಯತೆಯಿಂದ ತೊಡಗಿಸಿಕೊಂಡ ನಿದರ್ಶನಗಳು ಹೇರಳವಾಗಿ ಕಾಣಸಿಗತ್ತವೆ. 

ಆದರೆ ಸದ್ಯಕ್ಕೆ ಉಳಿದೆಲ್ಲಾ ಕಲೆಗಳನ್ನು ಬದಿಗಿರಿಸಿ ಯಕ್ಷಗಾನದತ್ತ ಬರೋಣ. ಯಕ್ಷಗಾನ ಎಂದ ಕೂಡಲೇ ತಿಟ್ಟುಗಳ ವಿಭಾಗಿಸುವಿಕೆ ಎಂಬುದು ಸಹಜವಾಗಿ ಕೇಳಿಬರುವ ಧ್ವನಿ. ಉಭಯ ತಿಟ್ಟುಗಳಲ್ಲಿಯೂ ಅಥವಾ ವಿಮರ್ಶಕರು ಗುರುತಿಸುವ ಮತ್ತೆರಡು ತಿಟ್ಟುಗಳನ್ನೂ ಸೇರಿಸಿ ಹೇಳುವುದಿದ್ದರೂ ನಮಗೆ ಯಕ್ಷಗಾನ ಕಲಾವಿದರ ಕೆಲವೊಂದು ವಂಶಗಳು ಕಾಣಸಿಗುತ್ತವೆ. ಅಂತಹಾ ಒಂದಕ್ಕಿಂತ ಹೆಚ್ಚು ಕಲಾವಿದರು ಇರುವ ಮನೆತನವನ್ನು ಗುರುತಿಸುವ ಅಥವಾ ಹೆಸರಿಸುವ ಒಂದು ಸಣ್ಣ ಪ್ರಯತ್ನ ಇದು. ಹೆಚ್ಚಿನ ವಿವರಣೆಗಳಿಲ್ಲದೆ ಕೇವಲ ಉಲ್ಲೇಖ ಮಾತ್ರ ಇಲ್ಲಿರುತ್ತದೆ.

ಎಲ್ಲಿಂದ ಆರಂಭಿಸುವುದು? ಇವರನ್ನು ಹೇಳಿದರೆ ಇವರಿಗಿಂತಲೂ ಮೊದಲು ಅವರು ಇರಲಿಲ್ಲವೇ ಎಂಬ ಪ್ರಶ್ನೆಗಳನ್ನು ಆಚೆಗಿಟ್ಟು ನೋಡಿದಾಗ ಸಹಜವಾಗಿಯೇ ಕೆರೆಮನೆ ಕುಟುಂಬದ ಹೆಸರನ್ನು ಉಲ್ಲೇಖಿಸಲೇ ಬೇಕು. ಕೆರೆಮನೆ ಶಿವರಾಮ ಹೆಗಡೆಯವರು ಸ್ವಾತಂತ್ರ್ಯಪೂರ್ವದಲ್ಲಿಯೇ ಯಕ್ಷಗಾನದಲ್ಲಿ ಸಾಕಷ್ಟು ವ್ಯವಸಾಯವನ್ನು ಮಾಡಿದವರು.

ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಅಕಾಲ ಮೃತ್ಯುವಶರಾಗಿದ್ದ ಕೆರೆಮನೆ ಗಜಾನನ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಶಿವರಾಮ ಹೆಗಡೆ ಕೆರೆಮನೆ ಮತ್ತು ಕೆರೆಮನೆ ಶ್ರೀಧರ ಹೆಗಡೆ ಹೀಗೆ ಕಲಾವಿದರ ಪಟ್ಟಿಯೇ ಕೆರೆಮನೆ ಕುಟುಂಬದಲ್ಲಿದೆ. ಅದೂ ಅಲ್ಲದೆ ಕೆರೆಮನೆ ಕುಟುಂಬಕ್ಕೆ ಸಂಬಂಧಿಸಿ ಗುಣವಂತೆಯ ‘ಶ್ರೀಮಯ ಕಲಾಕೇಂದ್ರ ಕೆರೆಮನೆ’, ಇಡಗುಂಜಿ ಮೇಳ ಎಂದು ಪ್ರಸಿದ್ಧವಾಗಿದ್ದ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’, ಮೊದಲಾದುವುಗೆಲ್ಲಾ ಕೆರೆಮನೆ ಕುಟುಂಬದ ಕೊಡುಗೆಗಳು.  (ಮುಂದುವರಿಯುವುದು)

RELATED ARTICLES

Most Popular

Recent Comments