Saturday, November 23, 2024
Homeಯಕ್ಷಗಾನಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು ...

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 2)

ಕಲಾತಪಸ್ವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತು ಬರೆಯುವ ಅರ್ಹತೆಯನ್ನು ನಾನು ಹೊಂದಿಲ್ಲ. ಆದರೆ ಅವರ ಬಗೆಗೆ ಕೇಳಿ ತಿಳಿದ, ಪುಸ್ತಕಗಳಿಂದ ಓದಿ ತಿಳಿದ, ಅವರು ಬರೆದ ಪ್ರಸಂಗಗಳಲ್ಲಿ ವೇಷ ಮಾಡಿದ ಅನುಭವಗಳಿಂದ ಬರೆಯಲು ಅನುಕೂಲವಾದುದು ಭಾಗ್ಯವೆಂದು ಭಾವಿಸುತ್ತೇನೆ. ಯಕ್ಷಗಾನದ ಭೀಷ್ಮನೆಂದೇ ಕರೆಸಿಕೊಂಡ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರೂ ‘ಗುರುಗಳೇ ..” ಎಂದು ಸಂಬೋಧಿಸಿ ಗೌರವಿಸುತ್ತಿದ್ದರೆಂದರೆ ಕೀರಿಕ್ಕಾಡು ಮಾಸ್ತರ್  ವಿಷ್ಣು ಭಟ್ಟರ ವ್ಯಕ್ತಿತ್ವವೇನು, ಅವರೆಷ್ಟು ವರ್ಚಸ್ವಿಯಾಗಿದ್ದರು ಎಂಬುದನ್ನು ನಮಗೆ ಊಹಿಸಬಹುದು. 

ಕೀರಿಕ್ಕಾಡು ಎಂಬುದು ಕೇರಳ ರಾಜ್ಯದ ಕಾಸರಗೋಡು ತಾಲೂಕು ಕುಂಬಡಾಜೆ ಗ್ರಾಮದ ಒಂದು ಊರು. ತೀರಾ ಹಿಂದುಳಿದ ಹಳ್ಳಿಯ ಪ್ರದೇಶ. ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿತ್ತು. ಆಗ ಕನ್ನಡಿಗರಿಂದಲೇ ತುಂಬಿದ ಪ್ರದೇಶವಾದರೂ ಕೇರಳ ರಾಜ್ಯಕ್ಕೆ ಸೇರಿದ್ದು ವಿಶೇಷವೆನ್ನೋಣವೇ? ಕನ್ನಡಿಗರ ದೌರ್ಭಾಗ್ಯವೆನ್ನೋಣವೇ? ಕೀರಿಕ್ಕಾಡು ಸಮೀಪದ ವಳಕ್ಕುಂಜ ನನ್ನ ಹುಟ್ಟೂರು. ವಳಕ್ಕುಂಜದಿಂದ ಕೀರಿಕ್ಕಾಡಿಗೆ ಕೇವಲ ಒಂದು ಮೈಲಿ ದೂರವಷ್ಟೇ ಅಂತರ. ಹಾಗಾಗಿ ಕೀರಿಕ್ಕಾಡು ಎಂಬ ಊರನ್ನು ನಾನು ತಿಳಿದಿರುವೆ.

ಏತಡ್ಕದ ಸಮೀಪದಿಂದ ತೊಡಗಿ ನೇರಪ್ಪಾಡಿ, ವಳಕ್ಕುಂಜ, ಪಳ್ಳತ್ತಡ್ಕ ದಾರಿಯಾಗಿ ಹರಿದು ಕುಂಬಳೆಯ ಸಿರಿಯಾ ಎಂಬಲ್ಲಿ ಪಡುಗಡಲನ್ನು ಸೇರುವ ಹೊಳೆಯ ಬದಿಯಲ್ಲಿದೆ ಕೀರಿಕ್ಕಾಡು ಎಂಬ ಹಳ್ಳಿ. ನೇರಪ್ಪಾಡಿ ಮತ್ತು ವಳಕ್ಕುಂಜದ ಮಧ್ಯೆ ಇರುವ ಭೂಮಿ. ಸಾಧಾರಣ 2010ನೇ ಇಸವಿಯ ವರೆಗೂ ನಾನು ತಿಳಿದಂತೆ ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಕೇವಲ ತೂಗು ಸೇತುವೆ ಮಾತ್ರ ಇದ್ದುದು.

ಇತ್ತೀಚಿಗೆ ಏತಡ್ಕದಿಂದ ಕೀರಿಕ್ಕಾಡಿಗೆ ಹಳ್ಳಿ ರಸ್ತೆಯೊಂದು ನಿರ್ಮಾಣವಾಗಿತ್ತು. ಜೀಪುಗಳು ಭಾರೀ ಕಷ್ಟದಲ್ಲಿ ಓಡಾಡುವಂತಾಗಿತ್ತು. ಕಳೆದ ವರ್ಷ ಕೀರಿಕ್ಕಾಡಿನಲ್ಲಿ ಕಟೀಲು ಮೇಳದ ಸೇವಾ ಬಯಲಾಟ ನಡೆದಿತ್ತು. 1 ಕಿ. ಮೀ. ದೂರ ಮೇಳದ ಬಸ್ ನಿಲ್ಲಿಸಿ ವೇಷಭೂಷಣಗಳನ್ನು ಅನ್ಲೋಡ್ ಮಾಡಿ ಜೀಪಿನಲ್ಲಿ ಕೊಂಡು ಹೋಗಬೇಕಾಗಿ ಬಂದಿತ್ತು. ಈ ವಿಚಾರ ಹೇಳಲು ಕಾರಣವಿಷ್ಟೇ. ಈಗಲೂ ಇಂತಹ ಸ್ಥಿತಿಯಾದರೆ ಮಾಸ್ತರರು ಜನಿಸಿ ಬೆಳೆದ ಆ ದಿನಗಳಲ್ಲಿ ಕೀರಿಕ್ಕಾಡು ಎಂಬ ಊರಿನ ಸ್ಥಿತಿ ಹೇಗಿದ್ದಿರಬಹುದು?!

ಕೇವಲ ನಾಲ್ಕೈದು ಮನೆಗಳಿದ್ದ ಕುಗ್ರಾಮವಾಗಿತ್ತು. ಸುತ್ತಲೂ ದಟ್ಟವಾದ ಕಾಡು. ಕ್ರೂರ ಮೃಗಗಳ ಸಂಚಾರ, ಉಪಟಳವೂ ಜೋರಾಗಿತ್ತು. ಭತ್ತ, ಕಂಗು, ತೆಂಗು ಕೃಷಿ ಪ್ರದೇಶ. ಹುಲಿಗಳು ಹಟ್ಟಿಗೆ ದಾಳಿ ಮಾಡಿ ಹಸುಗಳನ್ನು ತಿಂದು ಹಾಕುವ ಪ್ರಕರಣಗಳೂ ನಡೆಯುತ್ತಿದ್ದ ಕಾಲ ಅದು. ಗುಡ್ಡೆಗೆ ಮೇಯಲು ಬಿಟ್ಟ ಹಸುಗಳು ಬರದೇ ಹುಲಿಗೆ ಆಹಾರವಾಗುತ್ತಿದ್ದುವು. ಬೆಳೆಗೂ ಸಾಕುಪ್ರಾಣಿಗಳಿಗೂ ಕೊಬ್ಬಿದ ಪ್ರಾಣಿಗಳ ಕಾಟ. ದೂರದೂರುಗಳ ಸಂಪರ್ಕದಿಂದ ವಂಚಿತವಾಗಿದ್ದ ಕೀರಿಕ್ಕಾಡು ಯಕ್ಷಗಾನದ ಕುಲಪತಿ ಸದೃಶ್ಯರಾದ ಮಾಸ್ತರ್ ವಿಷ್ಣು ಭಟ್ಟರ ಹುಟ್ಟೂರು. 1913ನೇ ಇಸವಿ  ಆಗಸ್ಟ್ 4ರಂದು ಕೀರಿಕ್ಕಾಡು ಕೇಶವ ಭಟ್ಟರು ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಕೃಷಿ ಕುಟುಂಬದ ಸಂಪ್ರದಾಯಸ್ಥ ಮನೆತನ.

ಓದಬೇಕೆಂಬ ಹಂಬಲವಿದ್ದರೂ ಕೀರಿಕ್ಕಾಡು ಪರಿಸರದವರಿಗೆ ಅದಕ್ಕೆ ಅವಕಾಶಗಳಿರಲಿಲ್ಲ. ಹತ್ತಿರದಲ್ಲಿ ಶಾಲೆ ಇರಲಿಲ್ಲ. ಮಳೆಗಾಲದಲ್ಲಿ ಹೊಳೆ ದಾಟಿ ಹೋಗಲೂ ಆಗುತ್ತಿರಲಿಲ್ಲ. ಹಾಗಾಗಿ ಈ ಪ್ರದೇಶದ ಜನರು ವಿದ್ಯೆಯಿಂದ ವಂಚಿತರಾಗಿದ್ದರು. ಹಾಗಿದ್ದರೂ ಹೊಳೆಯಾಚೆಯ ಬದಿಯ ಮೂರು ಕಿ. ಮೀ. ದೂರದ ಕರ್ವಲ್ತಡ್ಕ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದ್ದರು. ಮತ್ತೆ ಏತಡ್ಕ ಶಾಲೆಯಲ್ಲಿ 5ನೇ ತರಗತಿಯನ್ನು ಪೂರೈಸಿದ್ದರು. ಉಣ್ಣಬೇಕಾದರೆ ದುಡಿಯಲೇ ಬೇಕಾದ ಕಾಲ ಅದು. ಹಣ ಸಂಪಾದನೆಗೆ  ಈಗಿನಂತೆ ದಾರಿಗಳೇ ಇರಲಿಲ್ಲ. ಕೆಲಸಗಾರರಿಗೆ ವಸ್ತು ರೂಪದಲ್ಲೇ ಸಂಬಳ. ಬೆಲೆ ಬೆಳೆಸಿದರೆ ಮಾತ್ರ ಹೊಟ್ಟೆಗೆ ಅನ್ನ.

ಮಾಸ್ತರರ ತಾಯಿ ಲಕ್ಷ್ಮಿ ಅಮ್ಮ ಪರಮ ಸಾಧ್ವಿಯಾಗಿದ್ದರು. ಮನೆಕೆಲಸಗಳಲ್ಲಿ ಶ್ರದ್ಧೆ. ದೇವರಲ್ಲಿ ಭಕ್ತಿ ಉಳ್ಳವರಾಗಿ ಮನೆಯನ್ನೇ ವಿದ್ಯಾಲಯದಂತೆ, ದೇವಾಲಯದಂತೆ ಇರಿಸಿದ ಸಂತುಷ್ಟ ಗೃಹಣಿಯಾಗಿದ್ದರು. ಮನೆಯ ಗೃಹಣಿಯಾಗಿ ಕರ್ತವ್ಯಗಳನ್ನು ಮಾಡುತ್ತಿರುವಾಗ ಸದಾ ದೇವರನಾಮ ಸ್ಮರಣೆಯ ಜೊತೆ ಕೀರ್ತನೆಗಳನ್ನೂ ಹಾಡುತ್ತಿದ್ದರು. ಅಲ್ಲದೆ ಆಷಾಡ ಮಾಸದಲ್ಲಿ ದಿನವೂ ಶಿವಪುರಾಣದ ಬ್ರಹ್ಮೋತ್ತರ ಖಂಡವನ್ನು ಕ್ರಮವತ್ತಾಗಿ ಓದುತ್ತಿದ್ದರು. ಸಾಯಂ ಸಂಧ್ಯೆಯಲ್ಲಿ ಪ್ರತಿ ದಿನವೂ ಮಕ್ಕಳಿಗೆ ಪುರಾಣ ಪುಣ್ಯ ಪುರುಷರು, ದೇವಾಧಿದೇವತೆಗಳು, ಪ್ರಾತಃಸ್ಮರಣೀಯ ಪತಿವ್ರತಾ ನಾರಿಯರು ಬಾಳಿ ಬದುಕಿದ ರೀತಿಯನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಸಂಸ್ಕಾರವೆಂಬ ಅಮೃತವನ್ನು ಉಣಿಸಿದವರು ಲಕ್ಷ್ಮಿ ಅಮ್ಮ. ಇದರ ಪರಿಣಾಮವನ್ನು ಅನುಭವಿಸಿದವರು ವಿಷ್ಣು ಭಟ್ಟರು. ಅವರಿಗೆ ಎಳವೆಯಲ್ಲೇ ಗೋಪಾಲಕೃಷ್ಣನು ಪ್ರಿಯನಾದ ದೇವರಾಗಿದ್ದ. ಮಾಸ್ತರರೊಳಗೆ ಅವ್ಯಕ್ತನಾಗಿ ಕುಳಿತಿದ್ದ ಕಲಾವಿದನು ಪ್ರಕಟವಾಗಿ ಬೆಳೆಯಲು ಇದೂ ಕಾರಣವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.

ಪ್ರದರ್ಶನ ಆರಂಭವಾಗುವುದಕ್ಕೆ ಮೊದಲೇ ಅಲ್ಲಿದ್ದು ಬೆಳಗಿನ ತನಕವೂ ನೋಡುತ್ತಿದ್ದರು. ಚೌಕಿಯೊಳಗೆ ಕಲಾವಿದರು ಸಿದ್ಧರಾಗುವ ರೀತಿಯನ್ನೂ ಗಮನಿಸುತ್ತಿದ್ದರು. ಬಳಿಕ ಕೀರಿಕ್ಕಾಡು ಗುಡ್ಡವೇ ಗೆಳೆಯರ ಸಹಿತ ಇವರಿಗೆ ರಂಗಸ್ಥಳವಾಗುತ್ತಿತ್ತು. ಬಣ್ಣ ಬಣ್ಣದ ಮಣ್ಣನ್ನು ತಂದು ಮುಖಕ್ಕೆ ಮೆತ್ತಿ ವೇಷಗಳು ಸಿದ್ಧವಾಗುತ್ತಿತ್ತು. ಅಡಿಕೆ ಹಾಳೆಯಿಂದ ಕಿರೀಟ ತಯಾರಾಗುತ್ತಿತ್ತು. ಮಕ್ಕಳಾಟವು ಬಹು ಚಂದವಲ್ಲವೇ? ಪುಟ್ಟ ಮಕ್ಕಳು ನಾಟ್ಯ ಗೊತ್ತಿಲ್ಲದಿದ್ದರೂ ವೇಷ ಧರಿಸಿ ರಂಗವೇರಿ ತಪ್ಪಾಗಿ ಕುಣಿದರೂ ಅದೆಷ್ಟು ಸೊಗಸು! ನಾವದನ್ನು ಆಸ್ವಾದಿಸುತ್ತೇವೆ.

ಮೊಟ್ಟಮೊದಲು ಇವರ ಕೈಗೆ ಸಿಕ್ಕಿದ್ದು ಪಂಚವಟಿ, ವಾಲಿ ಸುಗ್ರೀವರ ಕಾಳಗದ ಪ್ರಸಂಗ ಪುಸ್ತಕ. ಅದನ್ನು ಓದಿ ಅರಗಿಸಿಕೊಂಡಿದ್ದರು. ಏತಡ್ಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಕುಶಲವ ಎಂಬ ಪೌರಾಣಿಕ ನಾಟಕದಲ್ಲಿ ಮೊತ್ತ ಮೊದಲು ವಾಲ್ಮೀಕಿಯ ಪಾತ್ರದಲ್ಲಿ ರಂಗವೇರಿದ್ದರು. ಇವರ ಅಭಿನಯ ಸಾಮರ್ಥ್ಯವನ್ನು ಕಂಡ ಯಕ್ಷಗಾನ ವಿದ್ವಾಂಸ, ಸಂಸ್ಕೃತ ಶಿರೋಮಣಿ ಪಡ್ರೆ ಶ್ರೀಪತಿ ಶಾಸ್ತ್ರಿಗಳು ಮೆಚ್ಚಿ ಮೊದಲ ಬಹುಮಾನವನ್ನೇ ನೀಡಿದ್ದರು. ವಿಷ್ಣು ಭಟ್ಟರೊಳಗೆ ಅಡಗಿ ಕುಳಿತಿದ್ದ ಮಹಾನ್ ಕಲಾವಿದನೊಬ್ಬನನ್ನು ಪಡ್ರೆ ಶ್ರೀಪತಿ ಶಾಸ್ತ್ರಿಗಳು ಅಂದೇ ಗುರುತಿಸಿದ್ದರು.  – (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments