63 ವರ್ಷಗಳಿಂದ ಯಕ್ಷಗಾನ ಕಲಾ ಸೇವೆ ಮಾಡುತ್ತಿರುವ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯು ತನ್ನ 13 ಸೆಂಟ್ಸ್ ಸ್ವಂತ ಸ್ಥಳದಲ್ಲಿ ನಿರ್ಮಿಸಿದ ‘ಶ್ರೀ ಜನಾರ್ದನ ಮಂಟಪ’ದ ಉದ್ಘಾಟನೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.), ಪರ್ಕಳ ಸಂಸ್ಥೆಗೆ, ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ ಶ್ರೀ ಮಂಜುನಾಥ ಭಂಡಾರಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಶ್ರೀ ಟಿ. ಭೋಜಪ್ಪ ಸಾಲ್ಯಾನ್, ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ ಶ್ರೀ ಗುರುರಾಜ ಮಾರ್ಪಳ್ಳಿ ಇವರಿಗೆ ಪ್ರದಾನ ಮಾಡಲಾಯಿತು.
ಕಟ್ಟಡದ ಇಂಜಿನೀಯರ್‍ರಾದ ಶ್ರೀ ಎಂ. ಗಂಗಾಧರ ರಾವ್ ಹಾಗೂ ವಿನ್ಯಾಸಕಾರರಾದ ಶ್ರೀ ಯೋಗೀಶ್ಚಂದ್ರ ಧಾರರವರನ್ನು ಸನ್ಮಾನಿಸಲಾಯಿತು. ಉದ್ಘಾಟಿಸಿ ಮಾತನಾಡಿದ ಬಲ್ಲಾಳರು, ಅಂಬಲಪಾಡಿ ಸಂಘ ಉಳಿದ ಸಂಘಟನೆಗಳಿಗೆ ಮಾದರಿಯಾಗಿದೆ. ನೂತನ ಕಟ್ಟಡದಲ್ಲಿ ಸಂಸ್ಥೆ ಇನ್ನಷ್ಟು ಕಲಾ ಸಂಬಂಧಿ ಚಟುವಟಿಕೆಗಳನ್ನು ಮಾಡಿ ಉತ್ತರೋತ್ತರ ಅಭಿವೃದ್ಧಿ ಹೊಂದಲೆಂದು ಹಾರೈಸಿದರು.
ಶಾಸಕ ಕೆ.ರಘುಪತಿ ಭಟ್ಟರು ಮಾತನಾಡಿ ಈ ಸಂಘವು ನಮ್ಮ ಉಡುಪಿಯ ಹೆಮ್ಮೆಯ ಸಂಸ್ಥೆ. ಮುಂದಿನ ಸಭಾ ಮಂಟಪದ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂಪಾಯಿಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಅಭ್ಯಾಗತರಾಗಿ ಆಗಮಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್‍ಎಚ್., ಅಂಬಲಪಾಡಿ ಸಂಸ್ಥೆಯ ಪ್ರಾಮಾಣಿಕ ಕಲಾ ಸೇವೆಯನ್ನು ಗಮನಿಸಿ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಸಂಸ್ಥೆ ಇನ್ನಷ್ಟು ಔನ್ನತ್ಯವನ್ನು ಸಾಧಿಸಲೆಂದು ಹಾರೈಸಿದರು.
ಅಂಬಲಪಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಶ್ರೀಮತಿ ರೋಹಿಣಿ ಎಸ್. ಪೂಜಾರಿ, ಉದ್ಯಮಿ ಯು. ವಿಶ್ವನಾಥ ಶೆಣೈ, ಎ. ರಾಘವೇಂದ್ರ ಉಪಾಧ್ಯ, ಮುರಳೀಧರ ನಕ್ಷತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ನಿರ್ವಹಣೆಗೈದರು.
ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿ ಕೆ. ಜೆ. ಕೃಷ್ಣ ವಂದನಾರ್ಪಣೆಗೈದರು. ಕೋಶಾಧಿಕಾರಿ ಎ. ನಟರಾಜ ಉಪಾಧ್ಯ ಕಲಾವಿದರ ಪರಿಚಯ ಮಾಡಿದರು. ಸಮಾರಂಭದ ಬಳಿಕ ಮಂಡಳಿಯ ಸದಸ್ಯರಿಂದ ‘ಶ್ವೇತಕುಮಾರಚರಿತ್ರೆ’ ಯಕ್ಷಗಾನ ಪ್ರದರ್ಶನಗೊಂಡಿತು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ