Sunday, November 24, 2024
Homeಯಕ್ಷಗಾನರಂಗಸ್ಥಳದ ಚಿರಯುವಕ ಶ್ರೀಧರ ಭಂಡಾರಿ: ಡಾ. ಜೋಶಿ - ಎಸ್.ಡಿ.ಎಂ ಯಕ್ಷೋತ್ಸವ ಸಮಿತಿಯಿಂದ ಶ್ರೀಧರ...

ರಂಗಸ್ಥಳದ ಚಿರಯುವಕ ಶ್ರೀಧರ ಭಂಡಾರಿ: ಡಾ. ಜೋಶಿ – ಎಸ್.ಡಿ.ಎಂ ಯಕ್ಷೋತ್ಸವ ಸಮಿತಿಯಿಂದ ಶ್ರೀಧರ ಭಂಡಾರಿಗೆ ನುಡಿನಮನ

‘ತೆಂಕುತಿಟ್ಟು ಯಕ್ಷಗಾನದ ಆರು ದಶಕಗಳ ಇತಿಹಾಸದಲ್ಲಿ ವರ್ಣರಂಜಿತ ವ್ಯಕ್ತಿತ್ವ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರದು. ಭೌತಿಕ ಅಂಗಸೌಷ್ಠವ, ಸ್ಫುರದ್ರೂಪಿ ವೇಷ ಹಾಗೂ ವೀರರಸಾಭಿವ್ಯಕ್ತಿಯ ನಾಟ್ಯಾಭಿನಯ, ಮಾತುಗಾರಿಕೆ ಮೂಲಕ ರಂಗಸ್ಥಳದಲ್ಲಿ ಚಿರಯುವಕನಾಗಿಯೇ  ಮೆರೆದ  ಶ್ರೇಷ್ಠತೆ ಅವರದು. 

ಧರ್ಮಸ್ಥಳ ಮೇಳದಲ್ಲಿ ಕಡತೋಕಾ, ಚಿಪ್ಪಾರು, ಕುಂಬಳೆ, ನಾರಾಯಣ ಹೆಗಡೆ, ಪಾತಾಳ, ಗೋವಿಂದ ಭಟ್ಟ, ಎಂಪೆಕಟ್ಟೆಯವರಂತಹ ಪ್ರಬುದ್ಧರ ನಡುವೆ  ಪರಿ ಪಕ್ವಗೊಂಡ  ಕಲಾ ಪ್ರತಿಭೆ ಭಂಡಾರಿ’ ಎಂದು ಯಕ್ಷಗಾನ ವಿದ್ವಾಂಸ ಮತ್ತು ಹಿರಿಯ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.       

ಈಚೆಗೆ ಅಗಲಿ ಹೋದ ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಪುತ್ತೂರು ಶ್ರೀಧರ ಭಂಡಾರಿ ಅವರ ಬಗ್ಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

‘ಯುವಜನ ಸ್ಪೂರ್ತಿಯ ಪುಂಡುವೇಷಧಾರಿ’:         

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ವಿದ್ಯಾವಂತರ ನಡುವೆ ಯಕ್ಷಗಾನ ಅಷ್ಟೊಂದು ಪ್ರಚಾರದಲ್ಲಿಲ್ಲದ ಕಾಲಘಟ್ಟದಲ್ಲಿ ಶತ ಧೀಂಗಣಗಳ ಮೂಲಕ ಯುವಕರನ್ನು ಬಹುವಾಗಿ ಆಕರ್ಷಿಸಿದ್ದ ಶ್ರೀಧರ ಭಂಡಾರಿ ಯುವಜನರಿಗೆ ಸ್ಫೂರ್ತಿಯಾಗಿದ್ದರು. ಕ್ರಿಶ್ಚಿಯನ್ ಬಾಬು ಹಾಗೂ ಹೊಸಹಿತ್ಲು ಮಾಲಿಂಗ ಭಟ್ ಅವರನ್ನು ಮಾದರಿಯಾಗಿಟ್ಟು ರಂಗದಲ್ಲಿ ತನ್ನತನವನ್ನು ಸ್ಥಾಪಿಸಿದ್ದ ಅವರು ಪುಂಡುವೇಷದ ಗಂಡುಗಲಿಯೆನಿಸಿ ಶ್ರೇಷ್ಠ ಪರಂಪರೆಯೊಂದನ್ನು ಬಿಟ್ಟು ಹೋಗಿದ್ದಾರೆ’ ಎಂದರು.           

ಎಸ್ ಡಿ ಎಮ್ ಉದ್ಯಮಾಡಳಿತ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ದೇವರಾಜ್ ಕೆ. ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಅಗಲಿದ ಕಲಾವಿದನ  ಗುಣಗಾನ ಮಾಡಿದರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಯಕ್ಷಗಾನ ಹಾಡಿನ ಮೂಲಕ ಗೀತ ನಮನ ಸಲ್ಲಿಸಿದರು.       

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಪುಷ್ಪರಾಜ್ ನಿರೂಪಿಸಿ, ನರೇಶ್ ಮಲ್ಲಿಗೆಮಾಡು ವಂದಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಭಿಕರು ಮೌನ ಪ್ರಾರ್ಥನೆಯೊಂದಿಗೆ ಶ್ರೀಧರ ಭಂಡಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments