ಇತ್ತೀಚೆಗಿನ ದಿನಗಳಲ್ಲಿ ಹಾಸ್ಯ ಪಾತ್ರವು ಅಪಹಾಸ್ಯಕ್ಕೆ ಒಳಗಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ನಮಗೆ ಅಳಿದುಹೋದ ಹಲವಾರು ಖ್ಯಾತ ಹಾಸ್ಯ ಕಲಾವಿದರ ಪಾತ್ರಗಳು ಮತ್ತು ಪ್ರತಿಭೆಯ ನೆನಪುಗಳು ಮನದಲ್ಲಿ ಹಾದುಹೋದರೆ ಅಚ್ಚರಿಯೇನಿಲ್ಲ.
ಸಭ್ಯತೆಯ ಎಲ್ಲೆಯನ್ನು ಮೀರದೆ ಹಲವಾರು ಕಲಾವಿದರು ಗಂಭೀರತೆಯಿಂದ ತಾನು ನಗದೇ ಇನ್ನೊಬ್ಬರನ್ನು ನಕ್ಕುನಗಿಸಿದ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಈಗಲೂ ಅಂತಹ ಹಾಸ್ಯ ಕಲಾವಿದರು ನಮ್ಮ ನಡುವೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಬಡಗುತಿಟ್ಟಿನ ಹಾಸ್ಯ ಕಲಾವಿದರ ಯಾದಿಯಲ್ಲಿ ರಾಜಹಾಸ್ಯ ಖ್ಯಾತಿಯ ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿಯವರದು ಪ್ರಮುಖ ಹೆಸರು.
ತನ್ನ ಪ್ರಸಿದ್ಧಿಯಿಂದ ತಾನು ಬೆಳೆದ ಊರಾದ ‘ಹಳ್ಳಾಡಿ’ಯನ್ನೇ ತನ್ನ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ ಸಾಧಕ ಕಲಾವಿದ. ವಿಟ್ಲ ಗೋಪಾಲಕೃಷ್ಣ ಜೋಷಿ, ಕುಂಜಾಲು ರಾಮಕೃಷ್ಣ, ಸಾಲ್ಕೋಡು ಗಣಪತಿ ಹೆಗಡೆ, ಹಾಲಾಡಿ ಕೊರ್ಗು ಹಾಸ್ಯಗಾರ್ ಮೊದಲಾದವರು ಹಾಕಿಕೊಟ್ಟ ಸಭ್ಯತೆಯ ಗೆರೆಯನ್ನು ದಾಟದಿದ್ದರೂ ತನ್ನದೇ ಶೈಲಿಯಿಂದ ಸುಸಂಸ್ಕೃತವಾದ ಹಾಸ್ಯದಿಂದ ಹಾಸ್ಯ ಚಕ್ರವರ್ತಿ ಎಂದು ಕರೆಸಿಕೊಂಡರು.
ಹಳ್ಳಾಡಿಯವರು ಪ್ರೇಕ್ಷಕರು ನಗಬೇಕೆಂದು ಏನಾದರೂ ಮಾತನಾಡುವವರಲ್ಲ. ಆದರೆ ಇವರ ಮಾತುಗಳನ್ನು ಕೇಳಿದಾಗ ನಗದ ಪ್ರೇಕ್ಷಕರಿಲ್ಲ. ಇವರ ಮಾತುಗಳಲ್ಲಿ ತನ್ನದೇ ಆದ ಕುಂದಾಪುರ ಕನ್ನಡದ ಶಬ್ದಗಳನ್ನು ಧಾರಾಳವಾಗಿ ಕೇಳಬಹುದು. ಹಳ್ಳಾಡಿಯರದು ಯಕ್ಷಗಾನ ರಂಗದಲ್ಲಿ ನಿರಂತರ 50 ವರ್ಷಗಳಿಗೂ ಮೇಲ್ಪಟ್ಟ ಕಲಾ ವ್ಯವಸಾಯ.
ಕುಂದಾಪುರ ತಾಲೂಕಿನ ಶಿರಿಯಾರ ಸಮೀಪದ ಹಳ್ಳಾಡಿ ಎಂಬಲ್ಲಿ 1956ರಲ್ಲಿ ಅಣ್ಣಪ್ಪ ಶೆಟ್ಟಿ ಮತ್ತು ಅಕ್ಕಮ್ಮ ಶೆಡ್ತಿ ಪುತ್ರನಾಗಿ ಜನಿಸಿದರು. ಐದನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ ತನ್ನ 12ನೇ ವಯಸ್ಸಿನಲ್ಲಿಯೇ ಮೇಳದ ತಿರುಗಾಟ ಪ್ರಾರಂಭಿಸಿ ತನ್ನ ಕಲಾಜೀವನದಲ್ಲಿ ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.
ಪೆರ್ಡೂರು, ಕಮಲಶಿಲೆ, ಮುಲ್ಕಿ ಮುಂತಾದ ಮೇಳಗಳಲ್ಲಿ ಸೇವೆಸಲ್ಲಿಸಿದ ಇವರು ಸಾಲಿಗ್ರಾಮ ಮೇಳದಲ್ಲಿ ದೀರ್ಘಕಾಲ ಅಂದರೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಾಲಿಗ್ರಾಮ ಮೇಳದಲ್ಲಿ ಬೆಳಿಯೂರು ಕೃಷ್ಣಮೂರ್ತಿಯವರೊಂದಿಗೆ ಹಳ್ಳಾಡಿಯವರು ನಿರ್ವಹಿಸಿದ ಜೋಡಿ ಹಾಸ್ಯ ಪಾತ್ರಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು.
ಕೆಲವು ವರ್ಷಗಳ ಹಿಂದಿನ ವರೆಗೂ ಬಳ್ಕೂರು ಕೃಷ್ಣಯಾಜಿಯವರೊಂದಿಗಿನ ಹಳ್ಳಾಡಿಯವರ ಜೋಡಿ ವೇಷಗಳು ತುಂಬಾ ಜನಮೆಚ್ಚುಗೆಯನ್ನು ಪಡೆದಿತ್ತು. ಪರಂಪರೆಯ ಹಾಸ್ಯಪಾತ್ರಗಳ ಹೆಜ್ಜೆಗಾರಿಕೆ ಮತ್ತು ಶ್ರುತಿಬದ್ಧ ಮಾತುಗಾರಿಕೆಗೆ ಹೆಸರಾದ ಹಳ್ಳಾಡಿ ಜಯರಾಮ ಶೆಟ್ಟಿಯವರು ತೆಂಕು ತಿಟ್ಟಿನ ಕುಂಬಳೆ ಮೇಳದಲ್ಲೂ ಕೆಲಸಮಯ ತಿರುಗಾಟ ಮಾಡಿದ್ದರು.
- ಮೊಘಲರು ಹರಿಹರ್ ಮಂದಿರವನ್ನು ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದರೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು: ಸಮೀಕ್ಷೆಗೆ ಬಂದ ಅಧಿಕಾರಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ – ಪೊಲೀಸರ ಅಶ್ರುವಾಯು ದಾಳಿಯಲ್ಲಿ ಮೂವರ ಸಾವು
- ಮಲಯಾಳಂ ಸಿನಿಮಾ ಸೆಟ್ಗಳು ಸೇಫ್ ಅಲ್ಲ ಎಂದು ಹೇಳಿದ ನಟಿ ಸುಹಾಸಿನಿ ಮಣಿರತ್ನಂ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ