ವಿದುಷಿ ಕು| ಚಂದನ ಪ್ರಿಯಾ ಕಟೀಲು ಅವರು ಇತ್ತೀಚಿಗೆ ನಡೆದ ಭರತನಾಟ್ಯ ಪ್ರಾಕಾರದ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಶೇಕಡಾ 84 ಅಂಕಗಳನ್ನು ಗಳಿಸುವುದರೊಂದಿಗೆ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ವಿದುಷಿ ಪದವಿಯನ್ನು ಪಡೆದ ಈ ದುಂಡು ಮೊಗದ ಚೆಲುವೆ ಚಂದನ ಪ್ರಿಯಾ ತನ್ನ 9ನೇ ವಯಸ್ಸಿನಲ್ಲಿಯೇ ಭರತನಾಟ್ಯ ಅಭ್ಯಾಸವನ್ನು ವಿದುಷಿ ಗೀತಾ ಸರಳಾಯರಲ್ಲಿ ಆರಂಭಿಸಿದ್ದರು. ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಎದುರಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಶಿಕ್ಷಣವನ್ನು (ಭರತನಾಟ್ಯ ಸೀನಿಯರ್) ‘ನಾಟ್ಯನಿಲಯಂ ಮಂಜೇಶ್ವರ’ ಇದರ ಸ್ಥಾಪಕರಾದ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ಪಡೆದುಕೊಂಡರು.
ಕು ಚಂದನ ಪ್ರಿಯಾ ಅವರು ತನ್ನ ಗುರುಗಳೊಂದಿಗೆ ಸುಮಾರು 500ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನಾಡಿನ ಎಲ್ಲೆಡೆ ನೀಡಿದ್ದಾರೆ. ತನ್ನ ಸಾಧನೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಕೃಪೆ, ಗುರುಗಳ ಆಶೀರ್ವಾದ ಮತ್ತು ತಂದೆ ತಾಯಿಯವರ ನಿರಂತರ ಪ್ರೋತ್ಸಾಹವೇ ಕಾರಣವೆಂದು ಹೇಳುವ ಕು| ಚಂದನ, ಕಟೀಲಿನ ವೈದ್ಯ ದಂಪತಿಗಳಾದ ಡಾ| ಶಶಿಕುಮಾರ್ ಮತ್ತು ಡಾ| ಗೀತಾ ಅವರ ಪುತ್ರಿ. ಕು| ಚಂದನ ಪ್ರಿಯಾ ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ.