Sunday, November 24, 2024
Homeಯಕ್ಷಗಾನಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆ

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆ

ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ 2020 – 21 ನೇ ಸಾಲಿನಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆಯಾಗಿದ್ದಾರೆ. 

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ , ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್. ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ರಾಜೀವ ಶೆಟ್ಟರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬಡಗುತಿಟ್ಟಿನ ಹೆಸರಾಂತ ಕಮಲಶಿಲೆ, ಪೆರ್ಡೂರು, ಅಮೃತೇಶ್ವರಿ, ಸೌಕೂರು, ಬಚ್ಚಗಾರು, ಸಾಲಿಗ್ರಾಮ ಮತ್ತು ಮಂದರ್ತಿ ಮೇಳಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ 60ರ ಹರೆಯದ ರಾಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೊಸಂಗಡಿ ಕೆಳಬಾಗಿ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.

ದಿ. ಎಂ.ಎಂ.ಹೆಗಡೆ, ಭಾಗವತ ನಾರಣಪ್ಪ ಉಪ್ಪೂರು, ಜಿ.ಆರ್. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ , ಎಂ.ಎ.ನಾಯ್ಕ, ಕೋಟ ವೈಕುಂಠ, ವಾಸುದೇವ ಸಾಮಗ, ರಾಮ ನಾಯಿರಿ, ಅರಾಟೆ ಮಂಜುನಾಥ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮುಖ್ಯಪ್ರಾಣ ಕಿನ್ನಿಗೋಳಿ ಮುಂತಾದ ಹಿರಿಯರ ಒಡನಾಟದಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಯಕ್ಷಗಾನ ರಂಗಾನುಭವ ಅವರದು.

ಪ್ರಮೀಳೆ, ಚಿತ್ರಾಂಗದೆ, ಪ್ರಭಾವತಿ, ದ್ರೌಪದಿ, ಸುಭದ್ರೆ, ದಾಕ್ಷಾಯಿಣಿ, ಮೀನಾಕ್ಷಿ, ಸತ್ಯಭಾಮೆ, ಮೇನಕೆ, ಶಶಿಪ್ರಭೆ, ಅಂಬೆ, ಯೋಜನಗಂಧಿ ಇತ್ಯಾದಿ ಪೌರಾಣಿಕ ಪಾತ್ರಗಳಲ್ಲದೆ ಹೊಸ ಪ್ರಸಂಗಗಳ ನಾಗಶ್ರೀ, ಚಿತ್ರಾವತಿ, ರತಿ ರೇಖಾ, ಕಾಮಿನಿ, ಶುಭದ ಮುಂತಾದ ಪ್ರಧಾನ ಸ್ತ್ರೀಪಾತ್ರಗಳಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ರಾಮ, ಕೃಷ್ಣ , ಶಿವ, ಮನ್ಮಥ ಮೊದಲಾದ ಪುರುಷ ಪಾತ್ರಗಳಲ್ಲೂ ಹೆಸರು ಗಳಿಸಿದ್ದಾರೆ.


ಜ. 23 ಪ್ರಶಸ್ತಿ ಪ್ರದಾನ: ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿಯು ರೂ 20,000 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಜನವರಿ 23, 2021 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಜರಗುವ ಜಾಗತಿಕ ಬಂಟ ಫೌಂಡೇಶನ್ ಟ್ರಸ್ಟ್ ನ 24 ನೇ ವಾರ್ಷಿಕ ಸಮಾವೇಶದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments