Friday, November 22, 2024
Homeಯಕ್ಷಗಾನಬಹುಮುಖ ಪ್ರತಿಭೆಯ ಅಧ್ಯಾಪಕ, ಲೇಖಕ, ಕಲಾವಿದ ಶ್ರೀ ಪಕಳಕುಂಜ ಶ್ಯಾಮ ಭಟ್

ಬಹುಮುಖ ಪ್ರತಿಭೆಯ ಅಧ್ಯಾಪಕ, ಲೇಖಕ, ಕಲಾವಿದ ಶ್ರೀ ಪಕಳಕುಂಜ ಶ್ಯಾಮ ಭಟ್

ಅಧ್ಯಾಪಕನಾಗಿ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ, ಕಲಾವಿದನಾಗಿ ಕಲಾಭಿಮಾನಿಗಳ ಮತ್ತು ಸಹಕಲಾವಿದರ ಮೆಚ್ಚುಗೆ, ಪ್ರೀತಿಗೆ ಪಾತ್ರರಾದ ಪಕಳಕುಂಜ ಶ್ಯಾಮ ಭಟ್ಟರು ಬಹುಮುಖ ಪ್ರತಿಭೆ ಉಳ್ಳವರು. ಇವರು ಶ್ರೇಷ್ಠ ಲೇಖಕರೂ ಹೌದು. ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಶ್ರೀ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ 32 ವರ್ಷಗಳ ಕಾಲ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು. ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. 

ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪಕಳಕುಂಜ ಎಂಬಲ್ಲಿ 23-12-1949ರಂದು ಶ್ರೀ ನಾರಾಯಣ ಭಟ್ ಮತ್ತು ಪರಮೇಶ್ವರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ತಂದೆಯವರ ಸಂಚಾಲಕತ್ವದ ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಪೂರೈಸಿದರು. ವಿವೇಕಾನಂದ ಕಾಲೇಜಿನಲ್ಲಿ (ಪುತ್ತೂರು) ವ್ಯಾಸಂಗ ಮಾಡಿ ಬಿ.ಎಸ್ಸಿ. ಪದವಿಯನ್ನು ಪಡೆದ (ಬಯೋಲಜಿ) ಶ್ಯಾಮ ಭಟ್ಟರು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಸರಕಾರೀ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬಿ.ಎಡ್. ಶಿಕ್ಷಣವನ್ನು ಪೂರೈಸಿದರು. ವಿಠಲ ಪದವಿಪೂರ್ವ ಕಾಲೇಜು ವಿಟ್ಲದಲ್ಲಿ 32 ವರ್ಷ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಸಹೋದ್ಯೋಗಿಗಳ ಮೆಚ್ಚುಗೆಗೆ, ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದರು.

ಶ್ಯಾಮ ಭಟ್ಟರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯ ವಾತಾವರಣವೇ ಅದಕ್ಕೆ ಕಾರಣ. ಅಜ್ಜ ಪಕಳಕುಂಜ ಶಂಭಟ್ಟರು ಒಳ್ಳೆಯ ಹಾಡುಗಾರರಾಗಿದ್ದರು. ತಂದೆಯವರು ಹಾಡುಗಾರರು ಮಾತ್ರವಲ್ಲ, ಉತ್ತಮ ಮೃದಂಗ ವಾದಕರೂ ಆಗಿದ್ದರು. ಅವರು ಹಿಮ್ಮೇಳ ತರಗತಿಯನ್ನೂ ನಡೆಸುತ್ತಿದ್ದರಂತೆ. ಕುದುರೆಕೋಡ್ಲು ಹಿರಿಯ ರಾಮ ಭಟ್ಟರು ಇವರ ಸಮೀಪದ ಬಂಧುಗಳಾಗಿದ್ದರು. ಮಳೆಗಾಲದಲ್ಲಿ ಇವರ ಮನೆಯಲ್ಲಿ ಹಾಡುವುದು, ಚೆಂಡೆಮದ್ದಳೆ ನುಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಆಗ ಶ್ಯಾಮ ಭಟ್ಟರು ಹಾರ್ಮೋನಿಯಂ ನುಡಿಸುತ್ತಿದ್ದರಂತೆ. ಈ ಸಂದರ್ಭದಲ್ಲಿ ಶ್ಯಾಮ ಭಟ್ಟರು ಕುದ್ರೆಕೋಡ್ಲು ರಾಮ ಭಟ್ಟರಿಂದ ಮದ್ದಳೆ ಬಾರಿಸುವುದನ್ನು ಕಲಿತರು. ಶ್ಯಾಮ ಭಟ್ಟರ ಚಿಕ್ಕಪ್ಪ ಶ್ರೀ ಸುಬ್ರಾಯ ಭಟ್ಟರೂ ಕಲಾವಿದರಾಗಿದ್ದರು. ಬಿ.ಎಡ್. ಶಿಕ್ಷಣ ಪೂರೈಸಿ ಅಧ್ಯಾಪಕ ವೃತ್ತಿಗೆ ಸೇರಿದ ಮೇಲೆ ಕುಕ್ಕಿಲ ಶಂಕರ ಭಟ್ಟರಿಂದ ಕರ್ನಾಟಕ ಸಂಗೀತ ಮೃದಂಗವಾದನವನ್ನೂ ಶ್ಯಾಮ ಭಟ್ಟರು ಅಭ್ಯಸಿಸಿದರು.

ಶ್ಯಾಮ ಭಟ್ಟರು ತಾಳಮದ್ದಳೆ ಅರ್ಥಧಾರಿಯಾಗಿ ಮೊದಲು ಕಾಣಿಸಿಕೊಂಡದ್ದು ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ. ಇಂದ್ರಜಿತು ಕಾಳಗದ ವಿಭೀಷಣನಾಗಿ. ಅಂದು ಇಂದ್ರಜಿತುವಾಗಿ ಹೊಸಹಿತ್ಲು ಮಹಾಲಿಂಗ ಭಟ್ಟರು ಅರ್ಥ ಹೇಳಿದ್ದರಂತೆ. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ್ದು ಪಕಳಕುಂಜ ಶಾಲೆಯಲ್ಲಿ. ಹಳೆವಿದ್ಯಾರ್ಥಿಗಳಿಂದ ನಡೆದ ಆಟ- ಪಂಚವಟಿ ಪ್ರಸಂಗದ ಲಕ್ಷ್ಮಣನಾಗಿ. ಹೀಗೆ ಯಕ್ಷಗಾನದ ಉಭಯ ಪ್ರಕಾರಗಳಾದ ತಾಳಮದ್ದಳೆ ಮತ್ತು ಆಟಗಳಲ್ಲಿ ಹವ್ಯಾಸವಾಗಿ ಪಾತ್ರಗಳನ್ನು ಮಾಡುತ್ತಾ ಶ್ಯಾಮ ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡರು. ಕುಕ್ಕಿಲ ನಾರಾಯಣ ಭಟ್ಟರ ಸಂಚಾಲಕತ್ವದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾ ಸಂಘದ ಪ್ರದರ್ಶನಗಳಲ್ಲಿ ಶ್ಯಾಮ ಭಟ್ಟರು ಸಕ್ರಿಯರಾಗಿದ್ದರು. ಆಗ ವರುಷಕ್ಕೆ 30ರಿಂದ 40 ಪ್ರದರ್ಶನಗಳು ನಡೆಯುತ್ತಿತ್ತು. ತೆಂಕಬೈಲು ತಿರುಮಲೇಶ್ವರ ಭಟ್, ಪಾರೆಕೋಡಿ ಗಣಪತಿ ಭಟ್, ದಿವಾಣ ಗಣಪತಿ ಭಟ್ಟರು ಹಿಮ್ಮೇಳಕ್ಕೆ. ಕರ್ಗಲ್ಲು ವಿಶ್ವೇಶ್ವರ ಭಟ್, ಗುಂಡ್ಯಡ್ಕ ಈಶ್ವರ ಭಟ್, ಮಲಾರು ತಿರುಮಲೇಶ್ವರ ಭಟ್, ಕಿನಿಲ ಗೋವಿಂದ ಭಟ್, ಚಣಿಲ ತಿರುಮಲೇಶ್ವರ ಭಟ್, ಚಣಿಲ ಸುಬ್ರಹ್ಮಣ್ಯ ಭಟ್ ಮೊದಲಾದ ಕಲಾವಿದರಿದ್ದ ತಂಡ ಅದು. ಶ್ಯಾಮ ಭಟ್ಟರಿಗೆ ಹಿಮ್ಮೇಳದ ಜ್ಞಾನವಿದ್ದ ಕಾರಣ, ವೇಷ  ಮಾಡಲು, ಅರ್ಥ ಹೇಳಲು ಹೋದ ಸಂದರ್ಭ ಅನಿವಾರ್ಯಕ್ಕೆ ಮದ್ದಳೆ ಬಾರಿಸಿದ ಪ್ರಸಂಗಗಳು ಅನೇಕ. ಕಲಾವಿದನಾಗಿ ಶ್ರೀ ಶ್ಯಾಮ ಭಟ್ಟರು ಮರೆಯಲಾಗದ, ಕೆಲವು ವಿಶಿಷ್ಟ ಅನುಭವಗಳನ್ನು ನೆನಪಿಸಿ ಹಂಚಿಕೊಳ್ಳುತ್ತಾರೆ.
                             

ರಾತ್ರೆಯಿಂದ ಬೆಳಗಿನ ವರೇಗೆ ಎರಡು ಪ್ರಸಂಗಗಳ ತಾಳಮದ್ದಳೆ. ವಾಲಿವಧೆ ಮತ್ತು ಕರ್ಣಾರ್ಜುನ. ಶೇಣಿ ಗೋಪಾಲಕೃಷ್ಣ ಭಟ್ಟರು ವಾಲಿವಧೆ ಪ್ರಸಂಗಕ್ಕೆ ಪೂರ್ತಿ ಭಾಗವತರಾಗಿ ಪದ್ಯ ಹೇಳಿದರಂತೆ. ಅಂದು ಜೋಕಟ್ಟೆ ಮಹಮ್ಮದ್ ಅವರ ವಾಲಿ. ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಷಿ ಹಾಸ್ಯಗಾರರ ಸುಗ್ರೀವ. ಶ್ಯಾಮ ಭಟ್ಟರು ತಾರೆಯಾಗಿ ಅರ್ಥ ಹೇಳಿದರಂತೆ. ನಂತರ ಕರ್ಣಾರ್ಜುನ ಪ್ರಸಂಗದಲ್ಲಿ ಶೇಣಿಯವರು ಕರ್ಣನಾಗಿ ಅರ್ಥ ಹೇಳಿದರಂತೆ (ಮೊದಲ ಪ್ರಸಂಗದಲ್ಲಿ ಪದ್ಯ ಹೇಳಿ). ಅಂದು ಶೇಣಿಯವರ ಕರ್ಣ ತೆಕ್ಕಟ್ಟೆಯವರ ಅರ್ಜುನ, ಪೆರ್ಲ ಪಂಡಿತರ ಕೃಷ್ಣ ಎಂದು ಶ್ಯಾಮ ಭಟ್ಟರು ನೆನಪಿಸುತ್ತಾರೆ. ಅಡ್ಯನಡ್ಕದಲ್ಲಿ ನಡೆದ ಇನ್ನೊಂದು ತಾಳಮದ್ದಳೆ. ಶ್ರೀಕೃಷ್ಣ ಪರಂಧಾಮ ಪ್ರಸಂಗ. ಶೇಣಿಯವರ ಕೃಷ್ಣ. ‘ಜರ’ನಾಗಿ ಅವರ ಜತೆ ಅರ್ಥ ಹೇಳಿದ್ದು, ಅತಿಕಾಯ ಮೋಕ್ಷ ಪ್ರಸಂಗದಲ್ಲಿ ಅವರ ಅತಿಕಾಯನಿಗೆ ಲಕ್ಷ್ಮಣನಾಗಿ ಅರ್ಥ ಹೇಳಿದ್ದು ವಿಶಿಷ್ಠ ಅನುಭವ. ಅದು ನನ್ನ ಭಾಗ್ಯ ಎಂಬುದು ಶ್ಯಾಮ ಭಟ್ಟರ ಅನಿಸಿಕೆ. ಶೇಣಿ ಮತ್ತು ದೇರಾಜೆಯವರ ಜತೆ ಧ್ವನಿಸುರುಳಿಗೆ ಅರ್ಥ ಹೇಳಿದ್ದೂ ಒಂದು ವಿಶಿಷ್ಠ ಅನುಭವ ಮತ್ತು ಭಾಗ್ಯ. ಉತ್ತರನ ಪೌರುಷ ಪ್ರಸಂಗದಲ್ಲಿ ದೇರಾಜೆಯವರ ಉತ್ತರನ ಪಾತ್ರ ಕೌರವನ ಪಾತ್ರ ಬೇಡ ಎಂದು ನಿರ್ಣಯವಾಗಿತ್ತು. ಆದರೆ ದೇರಾಜೆಯವರು ಉದಾರತೆಯಿಂದ ನನ್ನಲ್ಲಿ ಕೌರವನ ಅರ್ಥ ಹೇಳಿಸಿದರು. ರಾವಣವಧೆ ಪ್ರಸಂಗದಲ್ಲಿ ಅವರ ರಾಮನ ಪಾತ್ರಕ್ಕೆ ಮಾತಲಿಯಾಗಿ ಅರ್ಥ ಹೇಳಿದ್ದು. ಹೀಗೆ ಕಲಾವಿದನಾಗಿ ತನ್ನ ವಿಶೇಷ ಅನುಭವಗಳನ್ನು ಶ್ರೀ ಪಕಳಕುಂಜ ಶ್ಯಾಮ ಭಟ್ಟರು ಹಂಚಿಕೊಳ್ಳುತ್ತಾರೆ.
                       

ಅಧ್ಯಾಪಕನಾಗಿದ್ದಾಗ ಸಹೋದ್ಯೋಗಿಗಳಾಗಿದ್ದ ಅಂಗ್ರಿ ಶಂಕರ ಭಟ್, ಬಳ್ಳ ಶಂಕರನಾರಾಯಣ ಭಟ್ ಮೊದಲಾದವರು ಒಳ್ಳೆಯ ಕಲಾವಿದರಾಗಿದ್ದರು. ಶ್ಯಾಮ ಭಟ್ಟರ ಯಕ್ಷಗಾನಾಸಕ್ತಿಗೆ ಪೂರಕ ವಾತಾವರಣ ಸಿಕ್ಕಿತು. ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಕರ್ಗಲ್ಲು ಸುಬ್ಬಣ್ಣ ಭಟ್ಟರಿಂದ ತರಬೇತಿ ಕೊಡಿಸುವ ವ್ಯವಸ್ಥೆಯಾಯಿತು. ಮಳಿ ಶ್ಯಾಮ ಭಟ್ಟರು ಹಿಮ್ಮೇಳಕ್ಕೆ. ಹೀಗೆ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಿ ಶ್ಯಾಮ ಭಟ್ಟರು ಕಲಾಸೇವೆಯನ್ನು ಮಾಡಿದರು. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಇವರು ಬರೆದ ಎರಡು ನಾಟಕಗಳು- 1) ಯಾರು ಹಿತವರು ನಿನಗೆ? – ದೇರಾಜೆಯವರಿಂದ ಕೃತಿ ಬಿಡುಗಡೆ 2) ನಾಟಕದೊಳಗೆ  ನಾಟಕ – ಶೇಣಿಯವರ ಹರಿಕಥಾ ಕಾರ್ಯಕ್ರಮ ಇರಿಸಿ ಬಿಡುಗಡೆಯಾಯಿತು.

ಅಲ್ಲದೆ ಇವರು ಬರೆದ ಅಪ್ರಕಟಿತವಾದ ಅನೇಕ ಪುಸ್ತಕಗಳಿವೆ. ಉಳಿಯ ಧನ್ವಂತರೀ ಯಕ್ಷಗಾನ ಕಲಾ ಸಂಘದ ವತಿಯಿಂದ ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ (ರಿ.), ವಿಟ್ಲ ತಂಡಕ್ಕೆ ಪ್ರಥಮ ಪ್ರಶಸ್ತಿ ಬಂದಿತ್ತು. ಆ ತಂಡದ ಸದಸ್ಯನಾಗಿ ಶ್ಯಾಮ ಭಟ್ಟರು ಶ್ರೇಷ್ಠ ಅರ್ಥಧಾರಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನೂ ಹಲವೆಡೆಗಳಲ್ಲಿ ಸಂಘ-ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆದ ಶ್ರೀಯುತರು ಒರಿಸ್ಸಾದಲ್ಲಿ ಕನ್ನಡ ಸಂಘದ ವತಿಯಿಂದ ಸುನಾಬೇಡ ಎಂಬಲ್ಲಿ (1984), ಬೆಂಗಳೂರು, ಮುಂಬಯಿ ಮೊದಲಾದ ಕಡೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
                                   2007ರ ವರೇಗೆ ಪಕಳಕುಂಜದಲ್ಲಿ ವಾಸ್ತವ್ಯ ವಿದ್ದ ಶ್ಯಾಮ ಭಟ್ಟರು ಪ್ರಸ್ತುತ ಅಳಿಕೆಯಲ್ಲಿ ನೆಲೆಸಿದ್ದಾರೆ. ಪತ್ನಿ ರತ್ನಾ ಎಸ್. ಭಟ್ (ಗೃಹಿಣಿ). ಮಕ್ಕಳು- ಅನಿಲ್, ಅಚಲ್, ಅಖಿಲಾ.

ಲೇಖಕ: ರವಿಶಂಕರ್ ವಳಕ್ಕುಂಜ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments