Friday, November 22, 2024
Homeಯಕ್ಷಗಾನಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ - ತಾಳಮದ್ದಳೆ ಪರ್ವ- 2020

ಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ – ತಾಳಮದ್ದಳೆ ಪರ್ವ- 2020

 ‘ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆ; ಅದರ ಒಂದು ಪ್ರಕಾರವಾದ ತಾಳಮದ್ದಳೆ ಕನ್ನಡ ಭಾಷೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇಂದು ಕನ್ನಡ ಸಾಹಿತ್ಯ – ಸಂಸ್ಕೃತಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಈ ಭಾಗದ ಸಾಹಿತಿ ಕಲಾವಿದರಿಗೆ ಮೂಲ ಪ್ರೇರಣೆಯೇ ಯಕ್ಷಗಾನ.  ಕರಾವಳಿಯಲ್ಲಿ ಕನ್ನಡದ ನಿಜವಾದ ಅಸ್ಮಿತೆ ಇರುವುದು ಯಕ್ಷಗಾನದಿಂದ’  ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.   ‌

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪಾರಿಜಾತ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಪರ್ವ – 2020’ ಎಂಟನೇ ವರ್ಷದ ನುಡಿಹಬ್ಬದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.       

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣಮಾಡಿ ‘ವೇದಿಕೆಯ ಮೇಲೆ ಪರಿಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಏಕೈಕ ಕಲಾಮಾಧ್ಯಮ ಇದ್ದರೆ ಅದು ಯಕ್ಷಗಾನ ಮಾತ್ರ. ಆದ್ದರಿಂದ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಯಕ್ಷಾಂಗಣ ಕಳೆದ ಏಳು ವರ್ಷಗಳಿಂದ ಕನ್ನಡ ನುಡಿಹಬ್ಬದ ರೂಪದಲ್ಲಿ ತಾಳಮದ್ದಳೆ ಸಪ್ತಾಹವನ್ನು ನವಂಬರ್ ತಿಂಗಳಲ್ಲಿ ನಡೆಸುತ್ತಾ ಬಂದಿದೆ. ಈ ವರ್ಷ ಕೋವಿಡ್ – 19 ಸಂಕಷ್ಟದಿಂದಾಗಿ ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ತಾಳಮದ್ದಳೆ ಪರ್ವವನ್ನು ನಡೆಸಲಾಗುತ್ತಿದೆ’ ಎಂದರು. 

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಜೀವಮಾನ ಸಾಧನೆಗಾಗಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಯಕ್ಷಗಾನ ವೇಷದಾರಿ ಮತ್ತು ಮೇಳದ ಸಂಚಾಲಕ ಕೆ.ಎಚ್.ದಾಸಪ್ಪ ರೈ ಪುತ್ತೂರು ಅವರಿಗೆ 2019-20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕಿ ಸುಜಯ ಯು. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. 

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೊರನಾಡ ಕನ್ನಡಿಗ, ಉದ್ಯಮಿ ಮತ್ತು ಸಮಾಜಸೇವಕ ಕೆ.ಡಿ.ಶೆಟ್ಟಿ ಮುಂಬೈ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕೆ. ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಮ್ಮಾನ ಫಲಕ ವಾಚಿಸಿದರು. ಸುಧಾಕರ ರಾವ್ ಪೇಜಾವರ ಅಭಿನಂದನಾ ನುಡಿ ಹೇಳಿದರು. ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರತಿಷ್ಠಾನದ ವತಿಯಿಂದ ದಾಸಪ್ಪ ರೈ ಅವರಿಗೆ ಕಲಾ ಗೌರವ ನೀಡಿದರು.

ಹಿರಿಯರ ಸಂಸ್ಮರಣೆ :  ಯಕ್ಷಗಾನ ರಂಗದ ಹಿರಿಯ ಚೇತನಗಳಾದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯೊಂದಿಗೆ ನುಡಿ ನಮನ ಸಲ್ಲಿಸಲಾಯಿತು.        ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ, ದ.ಕ.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್,  ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಲೀಲಾಕ್ಷ ಬಿ. ಕರ್ಕೇರ ಮತ್ತು ಕಲಾಸಂಘಟಕ ಕರ್ನೂರು ಮೋಹನ ರೈ ಮುಖ್ಯ ಅತಿಥಿಗಳಾಗಿದ್ದರು.           

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಕೃಷ್ಣ ಆಳ್ವ ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಿದ್ಧಾರ್ಥ ಅಜ್ರಿ,  ಕೃಷ್ಣಪ್ಪಗೌಡ ಪಡ್ಡಂಬೈಲ್ ಹಾಗೂ ದೇವಳದ ಆಡಳಿತಾಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.

ತಾಳಮದ್ದಳೆ – ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ : ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀ ಕೃಷ್ಣ ತಂತ್ರ – ಮಾರುತಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಅಶೋಕ ಭಟ್ಟ ಉಜಿರೆ, ಕದ್ರಿ ನವನೀತ ಶೆಟ್ಟಿ, ರವಿ ಅಲೆವೂರಾಯ, ಉಮೇಶ ಆಚಾರ್ಯ ಗೇರುಕಟ್ಟೆ, ಹರೀಶ್ಚಂದ್ರ ನಾಯಗ ಅರ್ಥದಾರಿಗಳಾಗಿದ್ದರು. ಹರೀಶ್ ಶೆಟ್ಟಿ ಸೂಡಾ ಮತ್ತು ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ರೋಹಿತ್ ಉಚ್ಚಿಲ್ ಹಾಗೂ ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments