Sunday, November 24, 2024
Homeಯಕ್ಷಗಾನಕಲಾವಿದ ಕೆ.ಎಚ್. ದಾಸಪ್ಪ ರೈ - ಯಕ್ಷಾಂಗಣ ಗೌರವ ಪ್ರಶಸ್ತಿ

ಕಲಾವಿದ ಕೆ.ಎಚ್. ದಾಸಪ್ಪ ರೈ – ಯಕ್ಷಾಂಗಣ ಗೌರವ ಪ್ರಶಸ್ತಿ

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಹಿರಿಯ ಕಲಾವಿದರಿಗೆ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಗೆ 2019 – 20ನೇ ಸಾಲಿನಲ್ಲಿ  ಕನ್ನಡ – ತುಳು ಪ್ರಸಂಗಗಳ ಪ್ರಸಿದ್ದ ವೇಷಧಾರಿ, ಮೇಳದ ಸಂಚಾಲಕ  ಕೆ.ಎಚ್. ದಾಸಪ್ಪ ರೈ ಆಯ್ಕೆಯಾಗಿದ್ದಾರೆ. ಯಕ್ಷಾಂಗಣ ಮಂಗಳೂರು ಹಾಗೂ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ‌ ಪ್ರತಿಷ್ಠಾನಗಳನ್ನೊಳಗೊಂಡ  ಜಂಟಿ ಸಮಿತಿಯು ದಾಸಪ್ಪ ರೈಯವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ. 

ಕೆ.ಎಚ್. ದಾಸಪ್ಪ ರೈ ಪುತ್ತೂರು: ಕುತ್ಯಾಳ ಹೊಸಮನೆ ದಿ. ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಗೆ ಮೇ 10, 1950 ರಲ್ಲಿ ಜನಿಸಿದ ಕೆ.ಎಚ್.ದಾಸಪ್ಪ ರೈ ತಮ್ಮ 15ನೇ ವಯಸ್ಸಿನಲ್ಲಿ ಕರ್ನಾಟಕ ಯಕ್ಷಗಾನ ಸಭಾದ ಮೂಲಕ ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಗುರು ದಿ.ಕೆ.ಯನ್.ಬಾಬು ರೈಯವರು ಅವರಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಮಾತು, ಮುಖವರ್ಣಿಕೆಗಳನ್ನು ಕಲಿಸಿದರು.

ಕರ್ನಾಟಕ, ಕದ್ರಿ, ಕುಂಬಳೆ,  ಮಂಗಳಾದೇವಿ, ಸರಪಾಡಿ, ಬಾಚಕೆರೆ ಮೇಳಗಳಲ್ಲಿ ಸುಮಾರು ನಾಲ್ಕೂವರೆ ದಶಕಗಳ ತಿರುಗಾಟ ಮಾಡಿರುವ ಅವರು ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳವನ್ನು ಕಟ್ಟಿ ಆರು ವರ್ಷ ನಡೆಸಿದರು. ಪೌರಾಣಿಕ ಪ್ರಸಂಗಗಳಲ್ಲಿ ರಾವಣ, ಕಂಸ, ಮಹಿಷಾಸುರ, ಯಮಧರ್ಮ, ಹಿರಣ್ಯಕಶಿಪು, ಭೀಮ, ಕೌರವ, ಕೀಚಕ, ವಾಲಿ, ಇಂದ್ರಜಿತು, ಜರಾಸಂಧ ಇತ್ಯಾದಿ ಪಾತ್ರಗಳಲ್ಲಿ ದಾಸಪ್ಪ ರೈ ಹೆಚ್ಚು ಜನಪ್ರಿಯರು.

ಕೋಟಿ, ಕೋಡ್ದಬ್ಬು, ಕೊಡ್ಸರಾಳ್ವ, ದೇವುಪೂಂಜ, ಕಾಂತಬಾರೆ, ಮೈಂದ ಗುರಿಕಾರ, ಶಾಂತ ಕುಮಾರ ಮುಂತಾದ ಪಾತ್ರಗಳು ಅವರಿಗೆ ಕೀರ್ತಿ ತಂದುಕೊಟ್ಟಿವೆ. ಮುಂಬೈ, ಚೆನ್ನೈ ದೆಹಲಿ, ಬೆಹರಿನ್, ಕತಾರ್, ದುಬೈ, ಮಸ್ಕತ್ ಹೀಗೆ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ನೂರಾರು ಸನ್ಮಾನಗಳನ್ನು ಪಡೆದಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಳಿಕೆ – ಬೋಳಾರ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದಲ್ಲದೆ ತುಳುನಾಡ ತುಳುಶ್ರೀ, ಯಕ್ಷರಂಗ ನಟನಾ ಚತುರ, ಯಕ್ಷ ಭಾರ್ಗವ, ರಂಗಸ್ಥಳದ ಗುರಿಕಾರ ಇತ್ಯಾದಿ ಬಿರುದುಗಳಿಂದ ಸಮ್ಮಾನಿತರಾಗಿದ್ದಾರೆ.       

ಪತ್ನಿ ಚಿತ್ರವತಿ , ಮಗ ದೇವಿ ಪ್ರಸಾದ್ ಮತ್ತು ಮೊಮ್ಮಕ್ಕಳೊಂದಿಗೆ ಪುತ್ತೂರಿನ ಬಪ್ಪಳಿಗೆ ‘ಯಕ್ಷಧಾ’ ನಿವಾಸದಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಕೆ.ಎಚ್.ದಾಸಪ್ಪ ರೈ ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಸಾಕಷ್ಟು ಕಷ್ಟ, ನಷ್ಟ ಕಂಡವರು. ಪ್ರಸ್ತುತ 70 ರ ಇಳಿ ವಯಸ್ಸಿನಲ್ಲೂ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿ ರಂಗವೇರುವುದನ್ನು ಅವರು ನಿಲ್ಲಿಸದಿರುವುದು ವಿಶೇಷ.       

ನವೆಂಬರ್ 29, 2020 ರಂದು ಭಾನುವಾರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ‘ಪಾರಿಜಾತ’ ಸಭಾಗೃಹದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಆಯೋಜಿಸಿರುವ 8ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ’ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗುವುದೆಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments