ದೇಶದ ಉತ್ತರ ಪ್ರದೇಶದ ಹತ್ರಾಸ್ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಕುರಿತಾದ ಕೇಸಿನ ವಿಚಾರಣೆಯ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಇಂದು ಅಸಮ್ಮತಿ ಸೂಚಿಸಿದೆ.
ಈ ಕೇಸಿನ ಕುರಿತಂತೆ ಸಿಬಿಐ ವಿಚಾರಣೆ ಮತ್ತು ಇತರ ಎಲ್ಲಾ ವಿಷಯಗಳ ಬಗ್ಗೆಯೂ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹತ್ರಾಸ್ ಕೇಸಿನ ವಿಚಾರಣೆಯನ್ನು ಉತ್ತರ ಪ್ರದೇಶ ಹೈಕೋರ್ಟ್ ಹೊರತಾಗಿ ಬೇರೆ ಯಾವುದಾದರೂ ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಸಿಬಿಐ ಕೂಡ ಅಲಹಾಬಾದ್ ಹೈಕೋರ್ಟಿಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಹೇಳಿದೆ. ತನಿಖೆಯು ಪ್ರಗತಿಯಲ್ಲಿರುವ ಈ ಹಂತದಲ್ಲಿ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿಬಿಐ ಮೊದಲು ವಿಚಾರಣೆ ಪೂರ್ತಿಗೊಳಿಸಲಿ. ಆಮೇಲೆ ಅಗತ್ಯವಿದ್ದರೆ ಮಾತ್ರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.