ಉಡುಪಿಯ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯುವ, ಯಕ್ಷಗಾನ ಕಲಾರಂಗದ ಸಂಯೋಜನೆಯ, ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾನ ಆಯೋಜಿಸುತ್ತಿರುವ ಈ ಬಾರಿಯ ‘ಸರ್ಪಂಗಳ ಯಕ್ಷೋತ್ಸವ’ವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 27.10.2020ರ ಮಂಗಳವಾರ ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 10ರ ವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ 2020 ನೇ ಸಾಲಿನ ಪ್ರತಿಷ್ಠಿತ ಸರ್ಪಂಗಳ ಪ್ರಶಸ್ತಿ ಮತ್ತು ಸರ್ಪಂಗಳ ಪುರಸ್ಕಾರವನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ಪ್ರತಿಷ್ಠಿತ ‘ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪುರಸ್ಕೃತರಾಗುವವರು ಖ್ಯಾತ ಮದ್ದಳೆಗಾರರಾದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ.
ಹಾಗೂ ಸರ್ಪಂಗಳ ಪುರಸ್ಕಾರಕ್ಕೆ ಪಾತ್ರರಾಗುವವರು ಧರ್ಮಸ್ಥಳ ಮೇಳದ ನೇಪಥ್ಯ ಕಲಾವಿದರಾದ ಬೆಳಾಲು ಸಂಜೀವ ಪೂಜಾರಿ. ಸರ್ಪಂಗಳ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಅನಂತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಕಾಯಕಲ್ಪ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮಗಳಿಗನುಸಾರವಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ನಿಗದಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರ ಯೂಟ್ಯೂಬ್ ಮತ್ತು ಫೇಸ್ ಬುಕ್ ತಾಣದಲ್ಲಿ ಲಭ್ಯ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.