‘ವೀರಾಂಜನೇಯ ವೈಭವ’ ಎಂಬ ಈ ಕೃತಿಯು ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಅವರಿಂದ ರಚಿಸಲ್ಪಟ್ಟದ್ದು. ಈ ಕೃತಿಯಲ್ಲಿ ಒಟ್ಟು ಇಪ್ಪತ್ತೇಳು ಪ್ರಸಂಗಗಳಿವೆ. ಎಲ್ಲವೂ ಆಂಜನೆಯ ಸುತನಾದ ಶ್ರೀರಾಮ ಕಿಂಕರ ಹನುಮಂತನಿಗೆ ಸಂಬಂಧಿಸಿದ ಪ್ರಸಂಗಗಳು. ಆದುದರಿಂದ ಈ ಕೃತಿಗೆ ‘ಸಮಗ್ರ ಹನುಮಾಯನ’ ಎಂಬ ಹೆಸರನ್ನು ನೀಡಲಾಗಿದೆ. ಈ ಕೃತಿಯ ಪ್ರಕಾಶಕರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ನೇತೃತ್ವದ ಶ್ರೀ ಗುರುದೇವ ಪ್ರಕಾಶನ ಎಂಬ ಸಂಸ್ಥೆಯು. ಇದು ಪ್ರಕಟವಾದುದು 2019ರಲ್ಲಿ.
ಮೊದಲಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಅನುಗ್ರಹ ಸಂದೇಶವನ್ನು ನೀಡಲಾಗಿದೆ. ಮುನ್ನುಡಿಯನ್ನು ಬರೆದವರು ಡಾ| ಪಾದೇಕಲ್ಲು ವಿಷ್ಣು ಭಟ್ಟರು. ಲೇಖಕ ಹೊಸ್ತೋಟ ಮಂಜುನಾಥ ಭಾಗವತರು ‘ಹೀಗೊಂದು ಪ್ರೇರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಮನದ ಮಾತುಗಳನ್ನು ತಿಳಿಸಿರುತ್ತಾರೆ. ಪ್ರೊ| ಎಂ. ಎ. ಹೆಗಡೆ ಶಿರಸಿ, ಕೆ. ಗೋವಿಂದ ಭಟ್ಟ, ರಾಜಗೋಪಾಲ್ ಕನ್ಯಾನ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಜಿ. ಮೃತ್ಯಂಜಯ, ಶ್ರೀಧರ ಡಿ.ಎಸ್, ಡಾ. ಮಮತಾ ಜಿ., ಇವರುಗಳ ಲೇಖನಗಳನ್ನೂ ನೀಡಲಾಗಿದೆ. ಬಳಿಕ ಕಥಾ ಸಾರಾಂಶ ಮತ್ತು ಆಧಾರ ಗ್ರಂಥಗಳ ಪಟ್ಟಿಯನ್ನು ನೀಡಲಾಗಿದೆ.
ಈ ಕೃತಿಯಲ್ಲಿ ರಂಗವಲ್ಲಿ ವೃಕ್ಷಮಹಿಮೆ, ಅಂಜನಾ ವಿವಾಹ, ಆಂಜನೇಯಾವಿರ್ಭಾವ, ವಾನರ ಕಿಶೋರ, ಕಿಷ್ಕಿಂಧಾ ಸಾಮ್ರಾಜ್ಯ, ಶ್ರೀರಾಮ ದರ್ಶನ, ಸುಗ್ರೀವ ಸಖ್ಯ, ಋಕ್ಷರಾಜ ವಿಲಾಸ, ವಾಲಿ ಸಂಹಾರ, ಸೀತಾನ್ವೇಷಣ, ಸಮುದ್ರೋಲ್ಲಂಘನ-ಲಂಕಾದಹನ, ವಿಭೀಷಣ ಲಂಕಾತ್ಯಾಗ, ಮಹಾ ಸೇತುಬಂಧ, ದೂಮ್ರಾಕ್ಷ ವಧೆ-ಮೇಘನಾದ ಪ್ರತಾಪ, ಸಸ್ಯ ಸಂಜೀವಿನಿ, ಅಹಿತಕ್ಕೊಬ್ಬ ಅಹಿರಾವಣ, ವೀರಾಂಜನೇಯ ವಿಜಯ, ಸೀತಾ ಪರೀಕ್ಷೆ, ಭರತ ಮಿಲನ, ಅಶ್ವಮೇಧ ಯಾಗ-ಸುಬಾಹು ಕಾಳಗ, ವೀರಮಣಿ ಕಾಳಗ, ಸುರಧಾಂಜನೇಯ, ರಾಮಾಂಜನೇಯ, ಗರುಡಾಂಜನೇಯ, ಅರ್ಜುನಾಂಜನೇಯ, ಭೀಮಾಂಜನೇಯ, ಶನೀಶ್ವರಾಂಜನೇಯ, ಶ್ರೀ ಒಡಿಯೂರ ದತ್ತಾಂಜನೇಯ ಎಂಬ ಇಪ್ಪತ್ತೇಳು ಪ್ರಸಂಗಗಳಿವೆ. ಅಲ್ಲದೆ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಶಿರಂಕಲ್ಲು ಈಶ್ವರ ಭಟ್ಟರ ಪರಿಚಯ ಲೇಖನಗಳನ್ನೂ ನೀಡಲಾಗಿದೆ. ಶಿರಂಕಲ್ಲು ಈಶ್ವರ ಭಟ್ಟರಿಂದ ಸಿದ್ಧಗೊಂಡ ‘ವೀರಾಂಜನೇಯ ವೈಭವಂ’ ಎಂಬ ಗದ್ಯಕಾವ್ಯದ ಆಧಾರದಲ್ಲಿ ಈ ಎಲ್ಲಾ ಪ್ರಸಂಗಗಳನ್ನು ರಚಿಸಲಾಗಿದೆ. ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಪ್ರಸಂಗಗಳ ಗುಚ್ಛ ವೀರಾಂಜನೇಯ ವೈಭವಕ್ಕೆ(ಸಮಗ್ರ ಹನುಮಾಯನ ) 2019ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ದೊರಕಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ