ಯಕ್ಷಗಾನ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ಹೊಸ್ತೋಟ ಮಂಜುನಾಥ ಭಾಗವತರು. ಬದುಕಿನುದ್ದಕ್ಕೂ ಪ್ರದರ್ಶನ, ಶಿಕ್ಷಣ, ಸಂಶೋಧನೆ, ಚಿಂತನೆಗಳಲ್ಲೇ ತೊಡಗಿಸಿಕೊಂಡು ಇನ್ನೂರಕ್ಕೂ ಮಿಕ್ಕಿದ ಪ್ರಸಂಗಗಳನ್ನು ರಚಿಸಿದ್ದರು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗೆ ಅರ್ಪಿಸಿದವರು. ಶ್ರೀಯುತರಿಂದ ರಚಿಸಲ್ಪಟ್ಟ ಕೃತಿಯಿದು. ‘ಯಕ್ಷಗಾನ ಶಿಕ್ಷಣ-ಲಕ್ಷಣ’ಇದು 2019ರಲ್ಲಿ ಮುದ್ರಣವಾಗಿ ಓದುಗರ ಕೈ ಸೇರಿತ್ತು.
ಪ್ರಕಾಶಕರು ಕೆನೆಡಾದ ಟೊರಾಂಟೊ ಎಂಬಲ್ಲಿರುವ ಯಕ್ಷಮಿತ್ರ ಯಕ್ಷಗಾನ ಮೇಳ ಎಂಬ ಸಂಸ್ಥೆಯು. ಸಂಪಾದಕರು ಶ್ರೀ ರಘು ಕಟ್ಟಿನಕೆರೆ. ಪ್ರಕಾಶಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಬಳಿಕ ‘ಬಿನ್ನಹಕೆ ಬಾಯಿಲ್ಲವಯ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಮನದ ಮಾತುಗಳನ್ನು ನೀಡಲಾಗಿದೆ. ವಿದ್ವಾಂಸ, ವಿಮರ್ಶಕ, ಹಿರಿಯ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ ಅವರು ‘ಶಿಕ್ಷಣ ಲಕ್ಷಣಕ್ಕೆ ಅಕ್ಕರೆಯ ನಲ್ನುಡಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಹೊಸ್ತೋಟದವರು ಬರೆದ ‘ಯಕ್ಷಗಾನ ಶಿಕ್ಷಣ ಲಕ್ಷಣ’ ಎಂಬ ಈ ಹೊತ್ತಗೆಯು ಎಂಟು ವಿಭಾಗಗಳನ್ನು ಹೊಂದಿದೆ.
ಲಯ, ತಾಳಗಳು, ಮದ್ದಳೆ, ಯಕ್ಷಗಾನ ಕುಣಿತ, ಸ್ವರ, ರಾಗಗಳು, ಯಕ್ಷಗಾನ ಸಾಹಿತ್ಯ, ಅರ್ಥಗಾರಿಕೆ, ಅಭಿನಯಾವಲೋಕನ, ಚೆಂಡೆ-ಹಿನ್ನೆಲೆಯ ವಾದ್ಯ ಎಂಬ ಎಂಟು ವಿಭಾಗಗಳು. ಮೊದಲಿಗೆ ‘ಯಕ್ಷಗಾನ ಸಂಕ್ಷಿಪ್ತ ಪರಿಚಯ’ ಎಂಬ ಬರಹವನ್ನೂ ನೀಡಿರುತ್ತಾರೆ. ಯಕ್ಷಗಾನ ಕ್ಷೇತ್ರಕ್ಕೆ ಹೊಸ್ತೋಟದವರ ಅನುಪಮವಾದ ಕೊಡುಗೆ ಇದು. ಹಿಮ್ಮೇಳ ಮುಮ್ಮೇಳ ಕಲಿಕಾಸಕ್ತರಿಗೆ ಅತ್ಯಂತ ಸಹಕಾರಿಯಾಗಿ ಪರಿಣಮಿಸಲಿದೆ. ಇದು ಸುಮಾರು ಇನ್ನೂರ ಎಂಬತ್ತು ಪುಟಗಳುಳ್ಳ ಕೃತಿ. ಪುಸ್ತಕದ ಹೊರ ಆವರಣದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಪ್ರೊ| ಎಂ.ಎ. ಹೆಗಡೆ, ಡಾ. ಕೆ.ಎಂ. ರಾಘವ ನಂಬಿಯಾರ್ ಇವರುಗಳ ನಲ್ನುಡಿಗಳನ್ನು ನೀಡಲಾಗಿದೆ.
ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ