ಹೆಸರು: ವಸಂತ ಗೌಡ ಕಾಯರ್ತಡ್ಕ
ಪತ್ನಿ: ಶ್ರೀಮತಿ ಗೀತ
ಜನನ: 1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು
ಜನನ ಸ್ಥಳ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ
ತಂದೆ ತಾಯಿ: ತಂದೆ ಶ್ರೀ ಬಿರ್ಮಣ್ಣ ಗೌಡ . ತಾಯಿ ಶ್ರೀಮತಿ ಬೊಮ್ಮಿ ಅಮ್ಮ ವಿದ್ಯಾಭ್ಯಾಸ: ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಯಕ್ಷಗಾನ ಗುರುಗಳು: ಶ್ರೀ ಪಡ್ರೆ ಚಂದು ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ
ಅನುಭವ: 46 ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಧರ್ಮಸ್ಥಳ ಮೇಳವೊಂದರಲ್ಲೇ 46 ವರ್ಷಗಳ ತಿರುಗಾಟ. 1974ನೇ ಇಸವಿ ತನ್ನ 12ನೇ ವರ್ಷದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರಿದರು) ಕುಟುಂಬ : ಪತ್ನಿ ಶ್ರೀಮತಿ ಗೀತ ಮತ್ತು ಮೂವರು ಗಂಡು ಮಕ್ಕಳ (ರವಿ, ಪುನೀತ್, ದಯಾನಂದ) ಸಂತೃಪ್ತ ಕುಟುಂಬ ಇವರದು.
ವಸಂತ ಗೌಡ ಅವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು: ಆರಂಭದಲ್ಲಿ ಬಾಲಲೀಲೆಯ ಶ್ರೀಕೃಷ್ಣ, ಪ್ರಹ್ಲಾದ, ಬಾಲಚ್ಯವನ, ಮಾರ್ಕಂಡೇಯ, ಲೋಹಿತಾಶ್ವ, ಷಣ್ಮುಖ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. ಮಾತುಗಾರಿಕೆಯನ್ನೂ ಚೆನ್ನಾಗಿ ಅಭ್ಯಸಿಸಿ, ಬಭ್ರುವಾಹನ, ಅಭಿಮನ್ಯು, ಚಂಡ ಮುಂಡರು, ಲಕ್ಷ್ಮಣ, ವಿಷ್ಣು, ಶ್ರೀರಾಮ, ಬ್ರಹ್ಮ, ಅಶ್ವತ್ಥಾಮನೇ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಸಮರ್ಥ ಪುಂಡುವೇಷಧಾರಿಯಾದರು. ಹಾಸ್ಯಗಾರರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ಮಾಡುತ್ತಾರೆ. ನಾರದ ಮತ್ತು ಬಾಹುಕನ ಪಾತ್ರವನ್ನೂ ಮಾಡಿದ ಖ್ಯಾತಿ ಇವರಿಗಿದೆ. ಸ್ತ್ರೀವೇಷ, ಪುಂಡುವೇಷ, ಎದುರುವೇಷ, ಪೀಠಿಕೆ ವೇಷ, ಹಾಸ್ಯ ಪಾತ್ರಗಳೇ ಮೊದಲಾದ ಯಾವುದೇ ಪಾತ್ರಗಳನ್ನೂ ಅಭಿನಯಿಸುವ ವಸಂತ ಗೌಡರಂತಹಾ ಅನುಭವಿ ಕಲಾವಿದರು ಕಾಣಸಿಗುವುದು ಅಪರೂಪ. ವಿಶೇಷತೆ: ಎಲ್ಲ ಪ್ರಸಂಗಗಳ ರಂಗನಡೆಯನ್ನು ಬಲ್ಲರು. ಇವರು ಮೇಳವೊಂದಕ್ಕೆ ಮಾತ್ರವಲ್ಲದೆ ಯಕ್ಷಗಾನ ರಂಗಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿ. ಮಿತಭಾಷಿ. ಪ್ರಚಾರ, ವೇದಿಕೆಗಳಿಂದ ದೂರ ಇರಲು ಇಷ್ಟಪಡುತ್ತಾರೆ.
ಲೇಖನ: ಮನಮೋಹನ್ ವಿ.ಎಸ್.