‘ಯಕ್ಷ ನಟ ಸಾರ್ವಭೌಮ’ ಎಂಬ ಪುಸ್ತಕವು ಶ್ರೀ ಕುರಿಯ ವಿಠಲ ಶಾಸ್ತ್ರಿಗಳು ಬರೆದಿರುವ ಲೇಖನಗಳ ಒಂದು ಅಮೂಲ್ಯ ಸಂಗ್ರಹವು. ಈ ಹೊತ್ತಗೆಯು 2005ರಲ್ಲಿ ಪ್ರಕಟವಾಗಿತ್ತು. ಸಂಪಾದಕರು ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರು. ಪ್ರಕಾಶಕರು ಉಷಾ ಎಂಟರ್ಪ್ರೈಸೆಸ್, ಬೆಂಗಳೂರು. ಈ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ರತ್ನಮ್ಮನವರಿಗೆ ಗೌರವದಿಂದ ಅರ್ಪಿಸಲಾಗಿದೆ. ಇದು ಸುಮಾರು ಇನ್ನೂರು ಪುಟಗಳುಳ್ಳ ಪುಸ್ತಕ. ಮೊದಲಾಗಿ ಸಂಪಾದಕ ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಪರಿಚಯ ಲೇಖನವನ್ನೂ, ಅವರ ಕಥಾ ಸಂಯೋಜನೆಯಲ್ಲಿ ಈ ವರೆಗೆ ತಯಾರಾದ ಯಕ್ಷಗಾನ ಪ್ರಸಂಗಗಳ ವಿವರಗಳನ್ನೂ ನೀಡಲಾಗಿದೆ. ಈ ಪುಸ್ತಕವು ಯಕ್ಷ ನಟ ಸಾರ್ವಭೌಮ, ಕುರಿಯ ವಿಠಲ ಶಾಸ್ತ್ರಿ ವಿರಚಿತ ಲೇಖನಗಳು, ಕುರಿಯ ವಿಠಲ ಶಾಸ್ತ್ರಿಯವರನ್ನು ಕುರಿತಾಗಿ ಬರೆದ ಕವಿತೆಗಳು, ವಿವಿಧ ಕೃತಿಗಳಲ್ಲಿ ವಿಠಲ ಶಾಸ್ತ್ರಿಗಳ ಆಕೃತಿ ಎಂಬ ನಾಲ್ಕು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗದಲ್ಲಿ ಶಾಸ್ತ್ರಿಗಳ ಬಗ್ಗೆ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಪಂಜಳ ಇವರು ಬರೆದ ಲೇಖನವಿದೆ. ಎರಡನೆಯ ವಿಭಾಗದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಬರೆದ ಏಳು ಲೇಖನಗಳಿವೆ. ಮೂರನೆಯ ವಿಭಾಗದಲ್ಲಿ ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ, ಸೊಡಂಕೂರು ತಿರುಮಲೇಶ್ವರ ಭಟ್ಟ ವಿದ್ವಾನ್, ಅಮೃತ ಸೋಮೇಶ್ವರ, ಪ್ರೊ| ಟಿ. ಕೇಶವ ಭಟ್ಟ ಇವರುಗಳು ಶ್ರೀ ಶಾಸ್ತ್ರಿಗಳ ಬಗೆಗೆ ವಿವಿಧ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟಿತವಾದ ಕಿರು ಲೇಖನಗಳನ್ನು ನೀಡಲಾಗಿದೆ. ಬಳಿಕ ಸುಮಾರು ಮೂವತ್ತರಷ್ಟು ಕಪ್ಪು ಬಿಳುಪಿನ ಛಾಯಾ ಚಿತ್ರಗಳನ್ನು ನೀಡಲಾಗಿದೆ. ಶ್ರೀ ಕೆ.ಪಿ. ರಾಜಗೋಪಾಲ ಕನ್ಯಾನ ಅವರ ಈ ಸಂಗ್ರಹವು ಕುರಿಯ ವಿಠಲ ಶಾಸ್ತ್ರಿಗಳ ಬಗೆಗಿನ ಹೊತ್ತಗೆಯಾಗಿ ಕಾಣಿಸಿಕೊಂಡಿದ್ದು, ಇದು ಒಂದು ಅತ್ಯುತ್ತಮ ಪ್ರಯತ್ನ. ಅಭಿನಂದನೆಗಳು.
ಲೇಖಕ: ರವಿಶಂಕರ್ ವಳಕ್ಕುಂಜ
ಚಿಕ್ಕದಾಗಿ ಚೊಕ್ಕವಾದ ಬರೆಹ. ಕೃತಜ್ಞತೆಗಳು.
-ರಾಜಗೋಪಾಲ್ ಕನ್ಯಾನ.