ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ಶಿಕ್ಷಕ, ಪ್ರಸಂಗಕರ್ತ, ಯಕ್ಷಗಾನದ ದಂತಕತೆ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ ‘ಸೀತಾನದಿ’ ಪ್ರಶಸ್ತಿಯನ್ನು ಈ ವರ್ಷ ಖ್ಯಾತ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ ಶೆಟ್ಟಿಯವರಿಗೆ ನೀಡಲಾಗಿದೆ. ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ 33ನೇ ಪ್ರಶಸ್ತಿ ಇದಾಗಿದೆ. ಮತ್ತು 2020ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ಉಬರಡ್ಕ ಉಮೇಶ ಶೆಟ್ಟಿಯವರದಾಗಿದೆ. ಸಂಭಾವಿತ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಸದಾ ನಗುಮುಖ, ವಿನಯಶೀಲತೆ, ನಯವಿನಯಗಳ ಅಪರೂಪದ ವ್ಯಕ್ತಿತ್ವಕ್ಕೆ ಒಂದು ನಿದರ್ಶನ.
ತಂದೆ : ಶ್ರೀ ಕಿಟ್ಟಣ್ಣ ಶೆಟ್ಟಿ
ತಾಯಿ : ಶ್ರೀಮತಿ ಯಮುನಾ
ಜನನ : 16-06-1958 (ಒಟ್ಟು ಏಳು ಮಂದಿ ಸಹೋದರ ಸಹೋದರಿಯರು)
ಪತ್ನಿ : ಶ್ರೀಮತಿ ಉಷಾ ಉಮೇಶ ಶೆಟ್ಟಿ (ಸರಕಾರಿ ಶಾಲೆಯಲ್ಲಿ ಅಧ್ಯಾಪಿಕೆ)
ಮಕ್ಕಳು : ಅವಿನಾಶ್ ಉಬರಡ್ಕ ಮತ್ತು ಆದರ್ಶ್ ಉಬರಡ್ಕ. ಅವಿನಾಶ್ ಎಂ.ಎಸ್.ಸಿ., ಎಂ.ಬಿ.ಎ. ಪದವಿ ಪಡೆದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಸೊಸೆ ಅಕ್ಷತಾ. ಆದರ್ಶ್ ಉಬರಡ್ಕ ಎಂ.ಕಾಂ. ಪದವೀಧರ.
ಗುರುಗಳಾಗಿ : ಉಮೇಶ ಶೆಟ್ಟಿಯವರು ಯಕ್ಷಗಾನ ಗುರುಗಳಾಗಿ ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗಳು ಹಾಗೂ ವಿವಿದೆಡೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸಿ ಅನೇಕ ಮಂದಿ ಶಿಷ್ಯರನ್ನು ತಯಾರಿ ಮಾಡಿದ್ದಾರೆ. 16-06-1958ರಲ್ಲಿ ಜನಿಸಿದ ಉಬರಡ್ಕ ಉಮೇಶರು ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾದರು.
ಮಾವನಾಗಬೇಕಾದ ಅಳಿಕೆ ರಾಮಯ್ಯ ರೈಗಳನ್ನು ಆದರ್ಶವಾಗಿಟ್ಟುಕೊಂಡ ಇವರ ಯಕ್ಷಗಾನಾಸಕ್ತಿಯು ಶಾಲಾ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿತು. ಇವರು ಧರ್ಮಸ್ಥಳ ಯಕ್ಷಗಾನ ಕೇಂದ್ರ ಅಥವಾ ಲಲಿತ ಕಲಾ ಕೇಂದ್ರ ಆರಂಭವಾದ ವರ್ಷದ ಅಂದರೆ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ. ಅದೇ ವರ್ಷವೇ ಅಂದರೆ 1971ರಲ್ಲಿಯೇ ಧರ್ಮಸ್ಥಳ ಮೇಳದಲ್ಲಿ ಬಾಲಗೋಪಾಲನಾಗಿ ಗೆಜ್ಜೆ ಕಟ್ಟಿ ತಮ್ಮ ಯಕ್ಷಪಯಣವನ್ನು ಆರಂಭಿಸಿದ್ದರು. ಆಮೇಲೆ ನಿರಂತರವಾಗಿ 44 ವರ್ಷಗಳಷ್ಟು ಕಾಲ ಅಂದರೆ 2015ರ ವರೆಗೆ ಧರ್ಮಸ್ಥಳ ಮೇಳವೊಂದರಲ್ಲೇ ಕಲಾವಿದನಾಗಿ ಸೇವೆ ಸಲ್ಲಿಸಿದರು. 2015ರಲ್ಲಿ ಮೇಳದಿಂದ ಸ್ವಯಂ ನಿವೃತ್ತಿ ಬಯಸಿದರು.
ಆಮೇಲೆಯೂ ಹವ್ಯಾಸಿ ಕಲಾವಿದನಾಗಿಯೂ ಯಕ್ಷಗಾನ ಗುರುಗಳಾಗಿಯೂ ತಮ್ಮ ಕಲಾಸೇವೆಯನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಬಾಲಗೋಪಾಲ, ಪೀಠಿಕೆ ಸ್ತ್ರೀವೇಷದಿಂದ ತೊಡಗಿ ಸಾಧಾರಣ ಹೆಚ್ಚಿನೆಲ್ಲಾ ವೇಷಗಳನ್ನು ಮಾಡಿದ್ದಾರೆ. ಪುತ್ತೂರು ಶ್ರೀಧರ ಭಂಡಾರಿಯವರ ಅನುಪಸ್ಥಿತಿಯಲ್ಲಿ ಸುಮಾರು 11 ವರ್ಷಗಳಷ್ಟು ಕಾಲ ಪುಂಡುವೇಷಗಳನ್ನು ಮಾಡಿದರು. ಧರ್ಮಸ್ಥಳ ಮೇಳಕ್ಕೆ ಶ್ರೀಧರ ಭಂಡಾರಿಯವರ ಪುನರ್ ಪ್ರವೇಶ ಆದ ಮೇಲೆ ಉಬರಡ್ಕದವರು ಕಿರೀಟ ವೇಷಗಳಿಗೆ ಭಡ್ತಿ ಹೊಂದಿದರು. ಶ್ರೀಧರ ಭಂಡಾರಿಯವರ ಜೊತೆ ಪುಂಡುವೇಷಗಳನ್ನು ಮಾಡುತ್ತಿದ್ದರು.
ಕಿರೀಟ ವೇಷಗಳಲ್ಲೂ ಕೂಡಾ ದೇವೇಂದ್ರ, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಅಣ್ಣಪ್ಪ, ದ್ರೋಣ, ತಾಮ್ರಧ್ವಜ, ತ್ರಿಶಂಕು ಮುಂತಾದ ಹಲವು ಪಾತ್ರಗಳನ್ನು ಮಾಡುತ್ತಿದ್ದರು. ಪುತ್ತೂರು ನಾರಾಯಣ ಹೆಗ್ಡೆಯವರು ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳು ರಜೆಯಲ್ಲಿದ್ದಾಗಲೂ ಅವರು ನಿರ್ವಹಿಸುತ್ತಿದ್ದ ಪಾತ್ರಗಳೂ ಕೆಲವೊಮ್ಮೆ ಉಮೇಶ ಶೆಟ್ಟಿಯವರ ಪಾಲಿಗೆ ಬರುತ್ತಿದ್ದುವು. ಹೀಗೆ ಧರ್ಮಸ್ಥಳ ಮೇಳದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಮೇಳಕ್ಕೆ ಅನಿವಾರ್ಯ ಕಲಾವಿದರಾದರು. ಪ್ರಖ್ಯಾತ ಎದುರು ವೇಷಧಾರಿಯಾಗಿ ಗುರುತಿಸಿಕೊಂಡರು. ಬೆಳ್ತಂಗಡಿ ತಾಲೂಕು ಉಜಿರೆ ಸಮೀಪ ನಿಡ್ಲೆ ಎಂಬಲ್ಲಿ ಪತ್ನಿ ಉಷಾ ಉಮೇಶ ಶೆಟ್ಟಿ, ಇಬ್ಬರು ಮಕ್ಕಳಾದ ಅವಿನಾಶ್ ಉಬರಡ್ಕ, ಆದರ್ಶ್ ಉಬರಡ್ಕರೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಯಕ್ಷಗಾನದ ದಂತಕತೆ ದಿವಂಗತ ಸೀತಾನದಿ ಗಣಪಯ್ಯ ಶೆಟ್ಟಿಯವರ ಸ್ಮರಣಾರ್ಥ ನೀಡುತ್ತಿರುವ ‘ಸೀತಾನದಿ’ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ.
ಲೇಖನ: ಮನಮೋಹನ್ ವಿ. ಎಸ್.