ಯಕ್ಷಗಾನ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಯಕ್ಷಪ್ರಿಯರಿಗೆ ಇದು ಸಂತೋಷದ ಸುದ್ದಿ. ನಿನ್ನೆ ಮಂಗಳೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೀಗೊಂದು ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಡೆದ ನಿರ್ಣಯದ ಪ್ರಕಾರ ನವೆಂಬರ್ ಅಂತ್ಯಕ್ಕೆ ಕೆಲವೊಂದು ನೀತಿ ನಿಯಮಾವಳಿಗಳ ಪ್ರಕಾರ ಯಕ್ಷಗಾನ ಪ್ರದರ್ಶನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಮತಿ ನೀಡೆಯಲಾಗಿದೆ. ಮಾರ್ಚ್ 2020ರಲ್ಲಿ ಕೊರೋನಾ ಪ್ರಸಾರದ ಭೀತಿಯಲ್ಲಿ ಅನಿವಾರ್ಯವಾಗಿ ಪ್ರದರ್ಶನಗಳನ್ನು ನಿಲ್ಲಿಸಿದ್ದ ಯಕ್ಷಗಾನ ಮೇಳಗಳು ಒಂಭತ್ತು ತಿಂಗಳುಗಳ ನಂತರ ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಹೊರಡುವುದು ಖಚಿತ ಎಂದು ಭಾವಿಸಲಾಗಿದೆ.
‘ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ತಮ್ಮ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಪಡಬಾರದು. ಆದುದರಿಂದ ಎಲ್ಲಾ ರೀತಿಯ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಪ್ರಾರಂಭಿಸಲು ಅನುಮತಿ ನೀಡಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಇನ್ನು ಕಡ್ಡಾಯವಾಗಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯವರು ಕಲಾವಿದರೆಲ್ಲರ ಮಾಹಿತಿ ಪಡೆದು ದಾಖಲಿಸಬೇಕು. ಆರೋಗ್ಯ ಇಲಾಖೆಯವರ ವತಿಯಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲ ಕಲಾವಿದರೂ ಯಕ್ಷಗಾನ ಆರಂಭಕ್ಕೆ ಮುನ್ನ ಕೋವಿದ್ -19 ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಯಕ್ಷಗಾನ ಪ್ರದರ್ಶನಗಳು ಆರಂಭವಾದ ನಂತರವೂ ಪ್ರತಿ ವಾರವೂ ಮೇಳಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಿದರು. ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಆರಂಭವಾಗುವ ಮುನ್ನ ಅಥವಾ ಜನ ಸೇರುವ ಮುನ್ನ ಸ್ಯಾನಿಟೈಜ್ ಮಾಡಬೇಕು. 200 ಜನ ಪ್ರೇಕ್ಷಕರಿಗಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡುತ್ತಾ, ಕಟೀಲಿನ ಎಲ್ಲಾ ಆರು ಮೇಳಗಳು ನಿಗದಿತ ಸಮಯಕ್ಕೆ ಪ್ರದರ್ಶನಕ್ಕೆ ಹೊರಡುತ್ತವೆ ಎಂದೂ ಆ ಬಗ್ಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆಂದೂ ತಿಳಿಸಿದರು. ಉಜಿರೆ ಅಶೋಕ ಭಟ್ಟರು ಮಾತನಾಡುತ್ತಾ ಕೊರೋನಾ ಕಾರಣದಿಂದ ಯಕ್ಷಗಾನ ಕಲಾವಿದರ ಸಂಕಷ್ಟ ಮತ್ತು ಸವಾಲುಗಳನ್ನು ವಿವರಿಸಿದರು. ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್, ಕಲಾವಿದರ ಪರವಾಗಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ ಹಾಗೂ ಸೀತಾರಾಮ್ ಕುಮಾರ್ ಉಪಸ್ಥಿತರಿದ್ದರು.