Friday, September 20, 2024
Homeಪುಸ್ತಕ ಮಳಿಗೆಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ 

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ 

‘ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ’ ಎಂಬ ಕೃತಿಯು ಯಕ್ಷಗಾನದ ಐದು ಪ್ರಸಂಗಗಳನ್ನು ಒಳಗೊಂಡಿದೆ. ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ. ಪ್ರಧಾನ ಸಂಪಾದಕರು ಶ್ರೀ ಎಚ್.ಬಿ.ಎಲ್. ರಾವ್ ಮುಂಬಯಿ. ಸಂಪಾದಕರು ಶ್ರೀ ಪು. ಶ್ರೀನಿವಾಸ ಭಟ್ ಕಟೀಲು ಅವರು. ಮುದ್ರಣಕ್ಕೆ ಸಹಕರಿಸಿದವರು ಭಾಗವತರಾದ ಶ್ರೀ ಕುಬಣೂರು ಶ್ರೀಧರ ರಾವ್. ಪದವೀಧರ ಯಕ್ಷಗಾನ ಸಮಿತಿಯ ಇಪ್ಪತ್ತಾರನೆಯ ಪ್ರಸಂಗ ಸಂಪುಟವಿದು. ಪ್ರಕಟಗೊಂಡದ್ದು 2008ನೇ ಇಸವಿಯಲ್ಲಿ. ಇದು ಒಟ್ಟು ನೂರಾ ಮೂವತ್ತೈದು ಪುಟಗಳಿಂದ ಕೂಡಿದ್ದು ಅವುಗಳೆಂದರೆ ಪ್ರಹ್ಲಾದ ಚರಿತ್ರೆ ( ಅಂಬಾತನಯ ಮುದ್ರಾಡಿ), ರುಧಿರ ಮೋಹಿನಿ (ಅಮೃತ ಸೋಮೇಶ್ವರ) ಶ್ರೀರಾಮ ಪಟ್ಟಾಭಿಷೇಕ ಮೂಲಕಾಸುರ ವಧೆ (ಅಜ್ಞಾತ ಕವಿ), ಧರ್ಮಗುಪ್ತ ವಿಜಯ (ದುಗ್ಗಪ್ಪಯ್ಯ), ಪಾಪಣ್ಣ ವಿಜಯ ಗುಣಸುಂದರಿ (ನಾರಾಯಣ ಭಟ್ಟ). 1972ರಲ್ಲಿ ಸ್ಥಾಪನೆಗೊಂಡ ಪದವೀಧರ ಯಕ್ಷಗಾನ ಸಮಿತಿಯು ಅದೇ ವರ್ಷ ಕಟೀಲು ಅಮ್ಮನವರ ಸನ್ನಿಧಿಯಲ್ಲಿ ಹನುಮದ್ವಿಲಾಸ ಎಂಬ ಪ್ರಸಂಗವನ್ನು ಪ್ರದರ್ಶಿಸಿದ್ದರಂತೆ. ಪ್ರದರ್ಶನವನ್ನು ನೋಡಿ ಮೆಚ್ಚಿಕೊಂಡ ಶ್ರೀ ಗೋಪಾಲಕೃಷ್ಣ ಆಸ್ರಣ್ಣರು ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಸಾದ ನೀಡುವಾಗ ಪದವೀಧರ ಯಕ್ಷಗಾನ ಸಮಿತಿಯು ಬೆಳೆದು ಕೀರ್ತಿಯನ್ನು ಪಡೆಯಲಿ ಎಂದು ಆಶೀರ್ವದಿಸಿದ್ದರು. ಈ ಪ್ರಸಂಗ ಸಂಪುಟವನ್ನು ಪದವೀಧರ ಯಕ್ಷಗಾನ ಸಮಿತಿಯು ಶ್ರೀ ಗೋಪಾಲಕೃಷ್ಣ ಆಸ್ರಣ್ಣರಿಗೆ ಅರ್ಪಿಸಿತ್ತು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಪ್ರಸಂಗ ಮಾಲಿಕೆ ಎಂಬ ಹೆಸರಿನಲ್ಲಿ ಈ ಪುಸ್ತಕವನ್ನು ಮುದ್ರಿಸಿ ಅವರನ್ನು ಗೌರವಿಸಿತ್ತು. ಶ್ರೀ ಎಚ್.ಬಿ.ಎಲ್. ರಾಯರು ‘ಪ್ರಸಂಗ ಓದುವ ಮೊದಲು’ ಎಂಬ ತಮ್ಮ ಲೇಖನದಲ್ಲಿ ಈ ವಿಚಾರವನ್ನು ತಿಳಿಸಿರುತ್ತಾರೆ. ಶ್ರೀರಾಮ ಪಟ್ಟಾಭಿಷೇಕ ಮೂಲಕಾಸುರ ವಧೆ, ಧರ್ಮಗುಪ್ತ ವಿಜಯ ಎಂಬ ಪ್ರಸಂಗಗಳ ಕುರಿತು ಶ್ರೀ ಪು. ಶ್ರೀನಿವಾಸ ಭಟ್ಟರು ಬರೆದ ಲೇಖನಗಳನ್ನು ನೀಡಲಾಗಿದೆ. ರುಧಿರ ಮೋಹಿನಿ ಪ್ರಸಂಗದ ಕವಿ ಶ್ರೀ ಅಮೃತ ಸೋಮೇಶ್ವರರು ‘ಅರಿಕೆ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವನ್ನೂ ಪ್ರಸಂಗದ ಕಥಾಸಾರವನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ    

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments