Friday, September 20, 2024

ರಾಘವಾಯಣ

‘ರಾಘವಾಯಣ’ ಎಂಬ ಕೃತಿಯು ಓದುಗರ ಕೈ ಸೇರಿದ್ದು 2016ನೇ ಇಸವಿಯಲ್ಲಿ. ಇದು ಬಹುಮುಖ ಚಿತ್ರ ಕಲಾವಿದರಾಗಿ, ಕಲಾಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥ. 1923ನೇ ಇಸವಿಯಲ್ಲಿ ಪಣಂಬೂರಿನಲ್ಲಿ ಇವರ ಜನನ. ಇವರ ಮೂಲ ಮನೆ ಆದ್ಯಪಾಡಿ. ತೀರ್ಥರೂಪರು, ಅಜ್ಜ, ಮುತ್ತಜ್ಜಂದಿರು ಯಕ್ಷಗಾನ ಭಾಗವತರುಗಳಾಗಿ ಕಲಾಸೇವೆಯನ್ನು ಮಾಡಿದವರೇ ಆಗಿದ್ದರು. ಚಿಕ್ಕಪ್ಪ ಉತ್ತಮ ಸ್ತ್ರೀ ವೇಷಧಾರಿಯಾಗಿ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದವರಾಗಿದ್ದರು. ರಾಘವ ರಾಯರು ಕಲಿತದ್ದು ಏಳನೆಯ ತರಗತಿಯ ವರೆಗೆ. ಬಳಿಕ ಮೈಸೂರಿಗೆ ತೆರಳಿ ಚಿತ್ರ ರಚನೆಯ ಕೌಶಲವನ್ನು ಸಿದ್ಧಿಸಿಕೊಂಡಿದ್ದರು. ಮುಂಬೈಯಲ್ಲಿ ಕೆಲ ಸಮಯ ಇದ್ದು ಊರಿಗೆ ಮರಳಿದ್ದರು. ಎಲ್ಲೇ ಇದ್ದರೂ ಇವರ ಕಲೆಯ ಕುರಿತಾದ ಕಲಿಕೆಯು ನಿರಂತರವಾಗಿ ಸಾಗಿತ್ತು. ಕಲಾವಿದರೂ ಸಂಘಟಕರೂ ಉತ್ತಮ ರಂಗತಜ್ಞರೂ ಬಹುಮುಖೀ ಚಿತ್ರಕಲಾವಿದರೂ ಆಗಿ ಶ್ರೀ ರಾಘವ ರಾಯರು ಪ್ರಸಿದ್ಧರಾಗಿದ್ದರು. ಮಣ್ಣಿನ ಮೂರ್ತಿಗಳನ್ನು ಸಿದ್ಧಗೊಳಿಸುವ ಕಲೆಯೂ ಎಳವೆಯಲ್ಲಿಯೇ ಕರಗತವಾಗಿದ್ದು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದರು. ಮುಖವರ್ಣಿಕೆ, ವೇಷಭೂಷಣಗಳನ್ನು ತಯಾರಿಸುವ ಕಾಯಕದಲ್ಲೂ ಶ್ರೀಯುತರು ಪಕ್ವರಾಗಿದ್ದರು. ಎರಡು ದಶಕಗಳ ಕಾಲ ‘ಸುವರ್ಣ ಆರ್ಟ್ಸ್ ಮುಲ್ಕಿ’ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರಸಾಧನಕಾರರಾಗಿ ಅನುಭವಗಳನ್ನು ಗಳಿಸಿದ್ದರು. ಊರ ಪರವೂರ ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ ವೇಷಭೂಷಣಗಳನ್ನು ಸಿದ್ಧಗೊಳಿಸಿ ಕೊಟ್ಟ ಮಹನೀಯರಿವರು. ಈ ಕೃತಿಯಲ್ಲಿ ಮುದ್ರಿಸಲ್ಪಟ್ಟ ಲೇಖನಗಳನ್ನು ಓದಿದರೆ ಶ್ರೀ ರಾಘವರಾಯರ ಪ್ರತಿಭೆ, ಸಾಮರ್ಥ್ಯ ಮತ್ತು ಅವರ ಬದುಕಿನ ವಿಚಾರಗಳನ್ನು ತಿಳಿಯಬಹುದಾಗಿದೆ. ಶ್ರೀಯುತರ ಪುತ್ರರಾದ ಶ್ರೀ ಮಧುಕರ ಭಾಗವತ್ ಅವರೂ ಕಲಾಪ್ರೇಮಿಯೇ ಆಗಿದ್ದಾರೆ. ಇವರು  ನಮ್ಮ ದೇಶದ ಹೆಮ್ಮೆಯ ವಾಯು ಸೇನೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾದವರು. ಪ್ರಸ್ತುತ ಜ್ಯೋತಿಷಿಯಾಗಿ, ಕಲಾಸಂಘಟಕರಾಗಿ ಯಕ್ಷಗಾನ ಕಲಾಮಾತೆಯ ಸೇವೆಯನ್ನು ಮಾಡುತ್ತಿರುವುದು ಸಂತೋಷವನ್ನು ತರುವ ವಿಚಾರ. ಇವರು ಉತ್ತಮ ಬರಹಗಾರರೂ ಹೌದು. 

‘ರಾಘವಾಯಣ’   ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥದ ಪ್ರಕಾಶಕರು ಬಹುಮುಖೀ ಚಿತ್ರ ಕಲಾವಿದ ಪಣಂಬೂರು  ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನೆ ಕುಳಾಯಿ ಮಂಗಳೂರು. ಇದರ ಸಂಪಾದಕರು ಶ್ರೀ ಸೇರಾಜೆ ಸೀತಾರಾಮ ಭಟ್  ಮತ್ತು ಶ್ರೀ ಪಿ. ವಿ. ಪರಮೇಶ್. ಇದು ಒಟ್ಟು ನಾನ್ನೂರ ಐವತ್ತು ಪುಟಗಳುಳ್ಳ ಪುಸ್ತಕ. ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿಯವರೂ ಕಾರ್ಯನಿರ್ವಹಿಸಿದ್ದರು. ಈ ಕೃತಿಯ ಆರಂಭದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವರ ವರ್ಣಚಿತ್ರವನ್ನೂ, ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಮತ್ತು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರ ಅನುಗ್ರಹ ರೂಪದ ಸಂದೇಶಗಳನ್ನೂ ನೀಡಲಾಗಿದೆ. ಬಳಿಕ ಯೋಜನಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಮಹನೀಯರುಗಳ ಪರಿಚಯವನ್ನು ವರ್ಣಚಿತ್ರಗಳ ಸಹಿತ ಕೊಡಲಾಗಿದೆ. ಬಳಿಕ ‘ವರ್ಣ ಒಂದು – ನೇಪಥ್ಯದ ಬೆಳಕಿನಲ್ಲಿ’ ‘ವರ್ಣ ಎರಡು – ಅಂತರಾಳದ ನುಡಿಗಳು’ ‘ವರ್ಣ ಮೂರು – ಯಕ್ಷಗಾನ ಮತ್ತಿತರ ವೈಚಾರಿಕ ಲೇಖನಗಳು’ ಎಂಬ ವಿಭಾಗಗಳಲ್ಲಿ ಖ್ಯಾತ ಬರಹಗಾರರ ಲೇಖನಗಳೂ, ರಾಘವರಾಯರು ಪಡೆದ ಸನ್ಮಾನ ಪತ್ರಗಳೂ, ವರ್ಣಚಿತ್ರಗಳೂ, ಕಪ್ಪುಬಿಳುಪಿನ ಛಾಯಾಚಿತ್ರಗಳೂ ಇವೆ. ಬಳಿಕ ‘ಸ್ತಬ್ಧ ಚಿತ್ರಗಳ ಸಾಕ್ಷಿ’ ಎಂಬ ವಿಭಾಗವನ್ನು ಕಾಣಬಹುದು. ‘ವರ್ಣ ಐದು – ತ್ರಿಭಾಷಾ ಪ್ರಸಂಗ ಸಾಹಿತ್ಯ’ ಎಂಬ ವಿಭಾಗದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಒಂಭತ್ತು ಪ್ರಸಂಗಗಳನ್ನು ಕವಿ ಪರಿಚಯದ ಸಹಿತ ನೀಡಲಾಗಿದೆ. ತನ್ನ ಬಹುಮುಖೀ ಪ್ರತಿಭೆಗಳಿಂದ ಜನಾನುರಾಗಿಯಾಗಿ ಯಕ್ಷಗಾನ ಕಲೆಯ ಮತ್ತು ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿಯ ಸಂಬಂಧವಿರಿಸಿಕೊಂಡೇ ಬದುಕನ್ನು ಸಾಗಿಸಿದ ಪಣಂಬೂರು ಶ್ರೀ ರಾಘವ ರಾಯರೆಂಬ ಹಿರಿಯ ಚೇತನಕ್ಕೆ ಗೌರವ ಪೂರ್ವಕ ಪ್ರಣಾಮಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments