Friday, September 20, 2024
Homeಯಕ್ಷಗಾನವಿಶ್ವ ಅರೋಗ್ಯ ಸಂಸ್ಥೆ ವೀಕ್ಷಿಸಿದ 'ಕೊರೋನಾ ಯಕ್ಷ ಜಾಗೃತಿ'

ವಿಶ್ವ ಅರೋಗ್ಯ ಸಂಸ್ಥೆ ವೀಕ್ಷಿಸಿದ ‘ಕೊರೋನಾ ಯಕ್ಷ ಜಾಗೃತಿ’

ಎಲ್ಲರಿಗೂ ತಿಳಿದಿರುವಂತೆ ಮಾರಕ ರೋಗ ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ  ಜಗತ್ತೇ ಒಂದಾಗಿ ಮಹಾ ಅಭಿಯಾನವನ್ನು ಕೈಗೊಂಡಿದೆ. ವಿಶ್ವ ಅರೋಗ್ಯ ಸಂಸ್ಥೆ (WHO) ಈ ಬಗ್ಗೆ ಜನರನ್ನು ಎಚ್ಚರಿಸುವಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಾತ್ರವಲ್ಲದೆ ಇಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಆಯೋಜಿಸುವವರಿಗೂ ನಿರಂತರ ಪ್ರೋತ್ಸಾಹಗಳನ್ನು ಕೊಡುತ್ತಿದೆ. ಈ ನಿಟ್ಟಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಮುಂದಾಳತ್ವದಲ್ಲಿ ನಡೆದ ಕೊರೋನಾ ಯಕ್ಷಗಾನ ಪ್ರದರ್ಶನವು  ವಿಶ್ವ ಅರೋಗ್ಯ ಸಂಸ್ಥೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲದೆ  ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ನಿರ್ಮಿಸಿದ ‘ಕೊರೋನಾ ಯಕ್ಷ ಜಾಗೃತಿ’ (Awareness about Covid-19) ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ವಿಶ್ವ ಅರೋಗ್ಯ ಸಂಸ್ಥೆಯ ಗಮನಕ್ಕೆ ಬಂದಿದೆ.

ವಿಶ್ವದಾದ್ಯಂತ ಪ್ರಸರಿಸುತ್ತಿರುವ ಕೊರೋನಾ ರೋಗದ ಪರಿಣಾಮ ಮತ್ತು ಎಚ್ಚರಿಕೆ, ಜಾಗೃತಿಗಳ ಬಗ್ಗೆ ಅಧ್ಯಯನ ನಡೆಸಲು ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಟೆಡ್ರಾಸ್ ಅಧಾನೊಮ್ ಘೆಬ್ರೆಯೆಸೆಸ್  ನೇಮಿಸಿದ ತಜ್ಞರ ತಂಡವಾದ GOARN ನ ಮುಖ್ಯಸ್ಥ ಹಾಗೂ ಅಧ್ಯಕ್ಷರಾದ ಸಿಂಗಾಪುರದ ನ್ಯಾಷನಲ್ ಹೆಲ್ತ್ ಸಿಸ್ಟಮ್ ನ (NUHS) ಪ್ರಾಧ್ಯಾಪಕರೂ ಆದ ಪ್ರೊ| ಡೇಲ್ ಫಿಶರ್ ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕೊರೋನಾ ಪ್ರಸರಣ ತಡೆಯ ಜಾಗೃತಿ ಕಾರ್ಯಕ್ರಮ ‘ಕೊರೋನಾ ಯಕ್ಷ ಜಾಗೃತಿ’ ಯಕ್ಷಗಾನ ಬೊಂಬೆಯಾಟ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.

ವಿಶ್ವದ ಅದರಲ್ಲೂ ಏಷ್ಯಾದ ಕೊರೋನಾ ಪೀಡಿತರ ಹಾಗೂ ಆತಂಕಿತ ಜನರ ಖಿನ್ನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಚಾರದಲ್ಲಿ ಈ GOARN ತಂಡವು ಮುಂದಾದಾಗ ಸಿಂಗಪುರದ NUHS ನ ಪ್ರೊಫೆಸರ್ ಎಂ. ಪ್ರಕಾಶ ಹಂದೆ, ಸಿಂಗಾಪುರ ಇವರು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದವರು ನಿರ್ಮಿಸಿದ ‘ಕೊರೋನಾ ಯಕ್ಷ ಜಾಗೃತಿ’ ಯಕ್ಷಗಾನ ಬೊಂಬೆಯಾಟವನ್ನು ಪರಿಗಣಿಸಲು ಸೂಚಿಸಿದರು.  

ಈ  ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ  ಸುಮಾರು 30 ನಿಮಿಷಗಳ ಕಾರ್ಯಕ್ರಮವಾದರೂ ಪ್ರೊ| ಪ್ರಕಾಶ ಹಂದೆಯವರ ಸೂಚನೆಯನ್ನು ಪರಿಗಣಿಸಿದ ವಿಶ್ವ ಅರೋಗ್ಯ ಸಂಸ್ಥೆಯು ಇದನ್ನು ಸುಮಾರು 4 ನಿಮಿಷಕ್ಕೆ ಪರಿಷ್ಕರಿಸಿ ಕಳುಹಿಸಲು ಮನವಿ ಮಾಡಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ನಿರ್ಮಿಸಿದ ಈ 4 ನಿಮಿಷದ  ಕಾರ್ಯಕ್ರಮ  ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನವು ವಿಶ್ವ ಅರೋಗ್ಯ ಸಂಸ್ಥೆಯ ಅಧಿವೇಶನದಲ್ಲಿ ವೀಕ್ಷಣೆಗೆ ಒಳಪಟ್ಟು ಮೆಚ್ಚುಗೆಯನ್ನು ಗಳಿಸಿದೆ.

ಈ ಬೆಳವಣಿಗೆಯು ಯಕ್ಷಗಾನ ಮತ್ತು ಬೊಂಬೆಯಾಟ ಕಲಾ ಕ್ಷೇತ್ರಕ್ಕೊಂದು ಹೆಮ್ಮೆಯ ಸುದ್ದಿ ಹಾಗೂ ಕೊರೋನಾ ಜನ ಜಾಗೃತಿಯನ್ನು ಕಲೆಯ ಮೂಲಕ  ಉಂಟುಮಾಡುವಲ್ಲಿ ಶ್ರಮಿಸಿದ  ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಹಾಗೂ ಈ ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ಎಲ್ಲಾ ಮಹಾನುಭಾವರೂ ಈ ರೋಗದ ನಿರ್ಮೂಲನಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದಂತಾಗಿದೆ.  ಕೊರೋನಾ ನಿರ್ಮೂಲನಾ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದ ಜೊತೆ ಕೈ ಜೋಡಿಸುವಲ್ಲಿ ತಮ್ಮನ್ನೂ ಪರಿಗಣಿಸಿದ್ದಕ್ಕಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರೊ| ಡೇಲ್ ಫಿಶರ್ ಹಾಗೂ ಪ್ರೊ| ಪ್ರಕಾಶ ಹಂದೆಯವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ 

 ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನದ ಯು ಟ್ಯೂಬ್ ಲಿಂಕ್ ಕೆಳಗಡೆ ಕೊಡಲಾಗಿದೆ.  

 ‘ಕೊರೋನಾ ಯಕ್ಷ ಜಾಗೃತಿ’  ಎಂಬ  ಯಕ್ಷಗಾನ ಬೊಂಬೆಯಾಟ ಪ್ರದರ್ಶನ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments