ಕನ್ನಡ ಸಾರಸ್ವತ ಲೋಕಕ್ಕೆ ಪ್ರಸ್ತುತ ಕೇರಳ ರಾಜ್ಯಕ್ಕೆ ಸೇರಿದ ಕಾಸರಗೋಡು ಪ್ರದೇಶದ ಕವಿಗಳ ಕೊಡುಗೆ ಅಪಾರವಾದುದು. ಅವರುಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರೂ ಒಬ್ಬರು. ಶ್ರೀಯುತರ ಜೀವಿತಾವಧಿ 1930 – 1979. ವಿದ್ಯಾರ್ಜನೆಯ ಬಳಿಕ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಯಕ್ಷಗಾನ, ನಾಟಕ, ಸಂಗೀತ ಮೊದಲಾದ ಕಲೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಸರಗೋಡು ಮತ್ತೆ ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ನಡೆದ ಹೋರಾಟಗಳಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ ಇವರು ಲೇಖಕರಾಗಿ, ಪ್ರಸಂಗಕರ್ತರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದರು. ಇವರು ಬರೆದ ಕೆಲವು ಕೃತಿಗಳು ಕೇರಳ ಸರಕಾರದ ಶಿಕ್ಷಣ ಇಲಾಖೆಯ ಉಪಪಠ್ಯವಾಗಿ ಆಯ್ಕೆಯಾಗಿತ್ತು. ವೆಂಕಪ್ಪಯ್ಯನವರು ಬರೆದ ಹೆಚ್ಚಿನ ಲೇಖನಗಳೂ ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸಿರಿಬಾಗಿಲು ವೆಂಕಪ್ಪಯ್ಯನವರ ಪುತ್ರರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಶ್ರೀ ಧರ್ಮಸ್ಥಳ ಮೇಳದ ಭಾಗವತರು. ತೀರ್ಥರೂಪರ ಹೆಸರಿನಲ್ಲಿ ಪ್ರಸ್ತುತ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಡೆಸುತ್ತಿರುವುದು ಸಂತೋಷದ ವಿಚಾರ. ಈ ಸಂಸ್ಥೆಯು ನಿರಂತರ ಕಲಾಸಂಬಂಧೀ ಚಟುವಟಿಕೆಗಳನ್ನು ನಡೆಸುತ್ತಿದೆ. ‘ಸಾಹಿತಿ ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ’ ಎಂಬ ಈ ಕೃತಿಯು ಪ್ರಕಟಗೊಂಡದ್ದು 2018ರಲ್ಲಿ. ಹೆಸರೇ ಸೂಚಿಸುವಂತೆ ವಿದ್ವಾಂಸರಾದ ಸಿರಿಬಾಗಿಲು ಶ್ರೀ ವೆಂಕಪ್ಪಯ್ಯನವರ ಕುರಿತಾದ ಪುಸ್ತಕ ಇದು. ಈ ಕೃತಿಯ ಪ್ರಕಾಶಕರು ಕನ್ನಡ ಸಂಘ ಕಾಂತಾವರ (ರಿ) ಕಾರ್ಕಳ ಸಂಸ್ಥೆ. ಲೇಖಕರು ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ. ಗೌರವ ಸಂಪಾದಕರು ಡಾ. ನಾ. ಮೊಗಸಾಲೆ. ಸಂಪಾದಕರು ಡಾ. ಬಿ. ಜನಾರ್ದನ ಭಟ್. ಮೊದಲಿಗೆ ಕನ್ನಡ ಸಂಘ ಕಾಂತಾವರ ಎಂಬ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ಮಾತುಗಳು ಲೇಖನ ರೂಪದಲ್ಲಿದೆ. ಮುಂದೆ ಭಾಗ ಒಂದರಲ್ಲಿ ‘ಜೀವನ ಸಾಧನೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯನವರ ಬದುಕು ಸಾಧನೆಗಳ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಭಾಗ ಎರಡರಲ್ಲಿ ನುಡಿನಮನ ಎಂಬ ಶೀರ್ಷಿಕೆಯಡಿ ಡಾ. ಪಿ. ವೆಂಕಟರಾಜ ಪುಣಿಚಿತ್ತಾಯ, ಡಾ. ಎಂ. ಪ್ರಭಾಕರ ಜೋಶಿ, ಎಂ. ವಿ. ಭಟ್ ಮಧುರಂಗಾನ, ಅಳಕ್ಕೆ ಮಹಾಲಿಂಗ ಭಟ್ಟ , ಕೆ.ವಿ. ರಮೇಶ ಕಾಸರಗೋಡು, ಪುತ್ತಿಗೆ ರಘುರಾಮ ಹೊಳ್ಳ, ಜಯರಾಮ ಕಾರಂತ ದೇಶಮಂಗಲ, ಶಂಕರನಾರಾಯಣ ಮಯ್ಯ ಸಿರಿಬಾಗಿಲು, ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರುಗಳ ಲೇಖನಗಳಿವೆ. ಭಾಗ ಮೂರರಲ್ಲಿ ಆಯ್ದ ಲೇಖನಗಳು ಎಂಬ ಶೀರ್ಷಿಕೆಯಡಿ ಹದಿನೇಳು ವಿಮರ್ಶಾ ಲೇಖನಗಳಿವೆ. ಭಾಗ ನಾಲ್ಕರಲ್ಲಿ ಜಯರಾಮ ದೇವಸ್ಯ ನೀರ್ಚಾಲು, ಶಿವರಾಮ ಕಾಸರಗೋಡು ಇವರ ಲೇಖನಗಳಿವೆ. ಬಳಿಕ ಸುಮಾರು ಹದಿನೆಂಟು ಕಪ್ಪು ಬಿಳುಪಿನ ಚಿತ್ರಗಳಿದ್ದು ಇದು ಕನ್ನಡ ಸಂಘ ಕಾಂತಾವರವು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ. ಸಂಘದ ‘ನಾಡಿಗೆ ನಮಸ್ಕಾರ’ ಎಂಬ ಗ್ರಂಥಮಾಲೆಯ ಇನ್ನೂರ ಐವತ್ತೆರಡನೆಯ ಹೊತ್ತಗೆ ಇದು.
ಸಾಹಿತಿ, ಸಂಶೋಧಕ ಸಿರಿಬಾಗಿಲು ವೆಂಕಪ್ಪಯ್ಯ
RELATED ARTICLES
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on