Friday, September 20, 2024
Homeಪುಸ್ತಕ ಮಳಿಗೆಶೇಣಿ ಭಾರತ - ಶೇಣಿ ಅರ್ಥಗಾರಿಕೆಯ ಸಂಗ್ರಹಗುಚ್ಛ 

ಶೇಣಿ ಭಾರತ – ಶೇಣಿ ಅರ್ಥಗಾರಿಕೆಯ ಸಂಗ್ರಹಗುಚ್ಛ 

ಶೇಣಿ ಶ್ರೀ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಮಹಾನ್ ಸಾಧನೆಯನ್ನು ಮಾಡಿ ಕೀರ್ತಿವಂತರಾದವರು. ಅವರ ಸಾಧನೆ, ಅರ್ಥಗಾರಿಕೆಯ ವೈಭವ, ಪಾತ್ರಗಳನ್ನು ಚಿತ್ರಿಸುವ ರೀತಿಗೆ ಯಾರಾದರೂ ತಲೆದೂಗಲೇ ಬೇಕು. ಮಾತಿನಿಂದಲೇ ಪಾತ್ರಗಳನ್ನೂ ದೃಶ್ಯಗಳನ್ನೂ ಕಟ್ಟಿಕೊಡುವ ಅವರ ಮಾತಿನ ರಚನಾ ಸಿದ್ಧಿಯು ಅಚ್ಚರಿ ಹುಟ್ಟಿಸುವಂತಹಾ ವಿಚಾರ. ಶ್ರೀಯುತರು ಇಂದು ನಮ್ಮೊಂದಿಗೆ ಇಲ್ಲವಾದರೂ ಗಳಿಸಿದ ಕೀರ್ತಿಯು ಸದಾ ಉಳಿದು ಬೆಳಗುತ್ತದೆ. ಯಕ್ಷಗಾನದ ಭೀಷ್ಮನೆಂದು ಖ್ಯಾತಿಯನ್ನು ಪಡೆದ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಹರಿದಾಸರಾಗಿ, ಪ್ರಸಂಗಕರ್ತರಾಗಿ ಮತ್ತು ಶ್ರೇಷ್ಠ ಭಾಷಣಕಾರರಾಗಿ ಗುರುತಿಸಿಕೊಂಡವರು. ಇದು ಕೇವಲ ಕೃತಿ ಪರಿಚಯ ಅಷ್ಟೇ.

ಇದು ‘ಶೇಣಿ ಭಾರತ’ ಎಂಬ ಕೃತಿ. ಇದರ ಪ್ರಕಾಶಕರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು ಎಂಬ ಘನ ಸಂಸ್ಥೆ. ಡಾ. ಎಲ್. ಗೋಪಾಲಕೃಷ್ಣ ಹೆಗಡೆಯವರು ಇದರ ಸಂಪಾದಕರು. ಈ ಕೃತಿಯ ಪ್ರಕಟಣೆಗೆ ಅಕಾಡೆಮಿಯ ಅಂದಿನ ಅಧ್ಯಕ್ಷರಾಗಿದ್ದ ಕೆರೆಮನೆ ಶ್ರೀ ಶಂಭು ಹೆಗಡೆಯವರ ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದ ಶ್ರೀ ಬಿ. ಎನ್. ಪರಡ್ಡಿಯವರ ಸಹಕಾರವೂ ಪ್ರೋತ್ಸಾಹವೂ ಇತ್ತೆಂಬುದು ತಿಳಿದಿರುವ ವಿಚಾರ. ಇದು ೨೦೦೭ ನೇ ಇಸವಿಯಲ್ಲಿ ಪ್ರಕಟಗೊಂಡಿತ್ತು. ೪೪೦ಕ್ಕೂ ಮಿಕ್ಕಿದ ಪುಟಗಳುಳ್ಳ ಹೊತ್ತಗೆ ಇದು. ಅಕಾಡೆಮಿಯ ಅಧ್ಯಕ್ಷರಾಗಿದ್ದ ಕೆರೆಮನೆ  ಶಂಭು ಹೆಗಡೆಯವರು ‘ಅಧ್ಯಕ್ಷರ ಮಾತು ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವನ್ನು ಬರೆದಿರುತ್ತಾರೆ. ಡಾ. ಗೋಪಾಲಕೃಷ್ಣ ಹೆಗಡೆಯವರು ತಮ್ಮ ಮುನ್ನುಡಿ ಬರಹದಲ್ಲಿ ಶೇಣಿಯವರ ಹುಟ್ಟು, ಬಾಲ್ಯ ಬದುಕು, ಅವರ ಒಡನಾಟ, ಯಕ್ಷಗಾನದ ಬಗೆಗೆ ಅವರಿಗಿರುವ ಕಾಳಜಿ, ಅರ್ಥಗಾರಿಕೆಯ ಕುಶಲತೆಗಳ ಬಗೆಗೆ ತಮ್ಮ ಅನಿಸಿಕೆಗಳನ್ನು ಸೊಗಸಾಗಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಸಮಗ್ರ ಭಾರತ ಎಂದು ಯಾರೂ ತಿಳಿಯಕೂಡದು. ಶೇಣಿ ಭಾರತವೆಂದರೆ ಯಕ್ಷಗಾನ ಕಲಾನಿಧಿ ಶೇಣಿ ಗೋಪಾಕೃಷ್ಣ ಭಟ್ಟರು ಮಹಾಭಾರತ ಪ್ರಸಂಗಗಳಲ್ಲಿ ಅಲ್ಲಲ್ಲಿ ಹೇಳಿದ ಅರ್ಥಗಳನ್ನು ಸಂಗ್ರಹಿಸಿ ನಿರ್ಮಿಸಿದ ಅಶು ಕಾವ್ಯ ಎಂದೂ ಸೂಚಿಸಿದ್ದಾರೆ. ಇದಿರಾಳಿಯ ಮಾತನ್ನು ದಾಖಲಿಸಲು ಸಾಧ್ಯವಾಗಿಲ್ಲ. ದೊಡ್ಡ ಸಾಮಗರು, ರಾಮದಾಸ ಸಾಮಗರು, ಕುಂಬಳೆ ಸುಂದರ ರಾಯರು, ಪ್ರಭಾಕರ ಜೋಶಿ, ವಾಸುದೇವ ಸಾಮಗ,ಬುಚ್ಚನ್ ಶಾಸ್ತ್ರಿಗಳು, ಕಟ್ಟೆ ಪರಮೇಶ್ವರ ಭಟ್ಟರು ಮೊದಲಾದವರ ಅರ್ಥವನ್ನು ಇದರೊಂದಿಗೆ ದಾಖಲಿಸಿದ್ದರೆ ಈ ಪುಸ್ತಕದ ಸ್ವರೂಪವು ಇನ್ನೂ ಬೇರೆಯಾಗುತ್ತಿತ್ತು. ಅದು ಸಾಧ್ಯವಾಗಿಲ್ಲ ಎಂಬ ಕೊರಗೂ ನನಗಿದೆ ಎಂದು ಹೇಳಿರುತ್ತಾರೆ. ಶೇಣಿ ಭಾರತ ಎಂಬ ಕೃತಿಯಲ್ಲಿ ಮಹಾಭಾರತದ ಹದಿನಾರು ಪ್ರಸಂಗಗಳ ನೂರಾ ತೊಂಬತ್ತೆರಡು ಪದ್ಯಗಳ ಅರ್ಥಗಾರಿಕೆಯಿದೆ. ಮೂವತ್ತಮೂರು ಅಧ್ಯಾಯಗಳಲ್ಲಿ ಮಹಾಭಾರತದ ಹದಿನೇಳು ಪಾತ್ರಗಳಲ್ಲಿ ಶೇಣಿಯವರ ಅರ್ಥವೈಭವದ ಮುಖ್ಯ ವಿಚಾರಗಳನ್ನು ಸಂಗ್ರಹಿಸಿ ನೀಡಲಾಗಿದೆ. ಸಂಗ್ರಹಿಸಿ ಮುದ್ರಿಸುವುದು ಒಂದು ಸಾಧನೆಯೇ ಸರಿ. ಇವನ್ನೆಲ್ಲಾ ಅಕ್ಷರ ರೂಪಕ್ಕೆ ತಂದು ಒಂದು ವ್ಯವಸ್ಥೆಯಲ್ಲಿ ಜೋಡಿಸಿದ್ದು ಒಂದು ಸಾಹಸವೇ. ಆ ಕೆಲಸವನ್ನು ಹೊಣೆಗಾರಿಕೆಯನ್ನು ನಿರ್ವಹಿಸಿದ ಡಾ. ಜಿ.ಎಲ್. ಹೆಗಡೆಯವರು ಅಭಿನಂದನಾರ್ಹರು ಎಂದು ಅಕಾಡೆಮಿಯ ಅಧ್ಯಕ್ಸರಾಗಿದ್ದ ಕೆರೆಮನೆ ಶಂಭು ಹೆಗಡೆಯವರು ಹೇಳಿರುತ್ತಾರೆ. ಶ್ರೀ ಶೇಣಿಯವರ ಅರ್ಥಗಾರಿಕೆಯ ರೀತಿ ವೈಭವವು ಹೇಗಿತ್ತು ಎಂಬುದು ಮುಂದಿನ ತಲೆಮಾರಿನವರಿಗೆ ತಿಳಿಯಲು ಇದರಿಂದ ಅನುಕೂಲವೇ ಆಯಿತು. ದಾಖಲೀಕರಣವಾದುದು ಸಂತೋಷದ ವಿಚಾರ. ಇದು ಶೇಣಿಯವರಿಗೆ ಅರ್ಪಿಸಿದ ಗೌರವವೂ ಹೌದು. 

ಲೇಖನ:ರವಿಶಂಕರ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments