ಈ ವರ್ಷದ ಸಾಧನಾ ಪ್ರಶಸ್ತಿಗೆ ಉಪನ್ಯಾಸಕ, ಖ್ಯಾತ ಯಕ್ಷಗಾನ ಕಲಾವಿದ ಶ್ರೀ ವಾದಿರಾಜ ಕಲ್ಲೂರಾಯರು ಆಯ್ಕೆಯಾಗಿದ್ದಾರೆ. ಸಾಧನಾ ರಂಗಸಂಸ್ಥೆಯು ಪ್ರತಿವರ್ಷವೂ ಕ್ರಿಯಾಶೀಲ ಉಪನ್ಯಾಸಕರಿಗೆ ಕೊಡಮಾಡುವ ಈ ಪ್ರಶಸ್ತಿಯ ಗರಿ ಈ ಸಾಲಿನಲ್ಲಿ ಅಂದರೆ 2020ರಲ್ಲಿ ವಾದಿರಾಜ ಕಲ್ಲೂರಾಯರ ಮುಡಿಗೇರಲಿದೆ. ಶ್ರೀ ವಾದಿರಾಜ ಕಲ್ಲೂರಾಯರು ಉಪನ್ಯಾಸಕನಾಗಿ ಗುರುತಿಸಿಕೊಂಡುದು ಮಾತ್ರವಲ್ಲದೆ ಯಕ್ಷಗಾನ ಕಲಾವಿದನಾಗಿಯೂ ಹಾಗೂ ಇನ್ನಿತರ ಹತ್ತು ಹಲವು ಸಮಾಜಮುಖೀ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಾಮಂಜೂರಿನ ಸಂತ ರೇಮಂಡ್ಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಟೀಲು ಮೇಳದಲ್ಲಿ ಕಲಾ ವ್ಯವಸಾಯವನ್ನೂ ಮಾಡುತ್ತಿದ್ದಾರೆ.
