Thursday, November 21, 2024
Homeಪುಸ್ತಕ ಮಳಿಗೆಶತಸ್ಮೃತಿ - ನಾರ್ಣಪ್ಪ ಉಪ್ಪೂರರ ನೂರರ ನೆನಪು

ಶತಸ್ಮೃತಿ – ನಾರ್ಣಪ್ಪ ಉಪ್ಪೂರರ ನೂರರ ನೆನಪು

ನವೆಂಬರ್ ತಿಂಗಳು, 2018ನೇ ಇಸವಿಯಲ್ಲಿ ಬಡಗು ತಿಟ್ಟಿನ ಖ್ಯಾತ ಭಾಗವತರಾಗಿದ್ದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಗೆಗೆ  ‘ಬದುಕಿ ಇರುತ್ತಿದ್ದರೆ ನೂರನೆಯ ವರುಷ’ ಎಂಬ ಲೇಖನವನ್ನು ಬರೆದಿದ್ದೆ. ಆ ಹೊತ್ತಿಗೆ ಜನ್ಮಶತಮಾನೋತ್ಸವ ಸಮಿತಿಯು ರೂಪೀಕರಣಗೊಂಡು ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ‘ಶತಸ್ಮೃತಿ’ ಎಂಬ ಕೃತಿಯನ್ನು ಹೊರತರುವ ಸಿದ್ಧತೆಯೂ ನಡೆಯುತ್ತಿತ್ತು. (ಶ್ರೀಯುತರ ಜೀವಿತಾವಧಿ 1918-1984) ಸರ್ವರ ಸಹಕಾರದಿಂದ  2018ರ ನವೆಂಬರ್ ತಿಂಗಳಿನಿಂದ ತೊಡಗಿ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳು ನಡೆದು 2019ರಲ್ಲಿ ಶತಸ್ಮೃತಿ ಎಂಬ ಕೃತಿಯು ಓದುಗರ ಕೈ ಸೇರಿತ್ತು. ಶ್ರೀ ಅಮೃತೇಶ್ವರೀ ಮೇಳದ ಖ್ಯಾತ ಭಾಗವತರಾಗಿದ್ದ ಶ್ರೀ ಉಪ್ಪೂರರು 1972ರಲ್ಲಿ ಸ್ಥಾಪಿಸಲ್ಪಟ್ಟ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದರು.

1978ರಲ್ಲಿ ‘ಯಕ್ಷಗಾನ – ಅಧ್ಯಯನ’ ಎಂಬ ಪುಸ್ತಕವನ್ನೂ ಬರೆದಿದ್ದರು. 1980ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಇವರು ತನ್ನ ಕಲಾಜೀವನದ ಮುಖ್ಯ ವಿಚಾರಗಳನ್ನು ಡೈರಿಯಲ್ಲಿ ಬರೆದಿರಿಸಿದ್ದರು. ಆ ಡೈರಿಯ ಆಧಾರದಲ್ಲೇ ‘ಪ್ರಾಚಾರ್ಯ ಪಥ’ ಎಂಬ ಪುಸ್ತಕವು ಶ್ರೀ ನಾಗರಾಜ ಮತ್ತಿಗಾರರ ಸಂಪಾದಕತ್ವದಲ್ಲಿ ಪ್ರಕಟವಾಗಿತ್ತು.

ಶ್ರೀ ಅಮೃತೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯು ಭಾಗವತ ಶ್ರೀ ನಾರಣಪ್ಪ ಉಪ್ಪೂರ ಪ್ರಶಸ್ತಿಯನ್ನು ಸಾಧಕರಿಗೆ ನೀಡುವ ಕ್ರಮವನ್ನು ಆರಂಭಿಸಿ ಉಪ್ಪೂರರನ್ನು ಗೌರವಿಸುತ್ತಿರುವುದು ಸಂತೋಷದ ವಿಷಯ. ಶತಸ್ಮೃತಿ ಪುಸ್ತಕವು ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಸುಮಾರು ಮುನ್ನೂರ ಎಪ್ಪತ್ತೈದು ಪುಟಗಳನ್ನೊಳಗೊಂಡ ಒಂದು ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ. ಪ್ರೊ. ಎಂ. ಎ . ಹೆಗಡೆಯವರು ಪ್ರಾಸ್ತಾವಿಕ ಮಾತುಗಳನ್ನು ಬರೆದಿದ್ದಾರೆ. ಸಂಪಾದಕ ಮಂಡಳಿಯ ಪರವಾಗಿ ಪ್ರಧಾನ ಸಂಪಾದಕರಾದ ಡಾ. ಶ್ರೀಧರ ಉಪ್ಪೂರರ ಸಂಪಾದಕೀಯವಿದೆ. ಈ ಕೃತಿಯ ಪ್ರಕಾಶಕರು ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ. ಶತಸ್ಮೃತಿ ಹೊತ್ತಗೆಯು ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ ಎಂಬ ನಾಲ್ಕು ವಿಭಾಗಗಳನ್ನೂ ನೂರು ಲೇಖನಗಳನ್ನೂ ಒಳಗೊಂಡಿದೆ. ವಿದ್ವಾಂಸರು, ಕಲಾಭಿಮಾನಿಗಳೂ ಕಲಾವಿದರೂ ಉಪ್ಪೂರರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊನೆಯ ಇಪ್ಪತ್ತು ಪುಟಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳಿವೆ. ಸುಂದರವೂ ಅತ್ಯುತ್ತಮವೂ ಆದ ಕೃತಿ. ಕೃತಿಗಾಗಿ ಸಹಕರಿಸಿದ ಮಹನೀಯರಿಗೆ ಅಭಿನಂದನೆಗಳು. ಮಾರ್ವಿ ಶೈಲಿಯ ಕೀರ್ತಿಯನ್ನು ಬೆಳಗಿಸಿದ ಪ್ರಾಚಾರ್ಯ ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರರಿಗೆ ನಮನಗಳು. 

ಲೇಖನ:ರವಿಶಂಕರ್ ವಳಕ್ಕುಂಜ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments