Thursday, November 14, 2024
Homeಸುದ್ದಿ'ವಿಂಶತಿ ಸಂಭ್ರಮ'ದಲ್ಲಿ ಯಕ್ಷಸಿರಿ ಕಲಾ ವೇದಿಕೆ ಖಂಡಿಗೆ ಮೂಲೆ ಬನ್ನಡ್ಕ

‘ವಿಂಶತಿ ಸಂಭ್ರಮ’ದಲ್ಲಿ ಯಕ್ಷಸಿರಿ ಕಲಾ ವೇದಿಕೆ ಖಂಡಿಗೆ ಮೂಲೆ ಬನ್ನಡ್ಕ

ಕಲೆ ಯಾವುದೇ ಇರಬಹುದು, ಅದರಲ್ಲಿ ಸರ್ವ ಸಮರ್ಪಣಾ ಭಾವದಿಂದ ಅರ್ಥಾತ್ ಭಕ್ತಿ ಎಂಬ ಭಾವವನ್ನು ಪ್ರಧಾನ ಲಕ್ಷ್ಯವಾಗಿರಿಸಿ ತೊಡಗಿಸಿಕೊಂಡಾಗ ಒಂದು ವಿಶಿಷ್ಟವಾದ ಪ್ರಾಪ್ತಿ ಸಿದ್ಧಿಸುತ್ತದೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಚಲಿತದಲ್ಲಿರುವ ಎಲ್ಲಾ ಕಲಾ ಪ್ರಕಾರಗಳನ್ನು ಗಮನಿಸಿದಾಗ ಒಂದು ವಿಶಿಷ್ಟವಾದ ಬೆರಗು, ವಿಸ್ಮಯಗಳನ್ನು ತನ್ನಲ್ಲಿ ಅಡಕಗೊಳಿಸಿ ಸರ್ವ ಜನರಿಗೆ ಅತೀವ ಆನಂದವನ್ನೂ, ಮನುಕುಲದ ಅಭ್ಯುದಯದ ಚರಮ ಲಕ್ಷ್ಯವನ್ನೂ ತೋರ್ಪಡಿಸುವ ಒಂದು ಅದ್ಭುತವಾದ ಕಲೆ ಎಂದರೆ ಅದು ಯಕ್ಷಗಾನ.


ಆಂಗಿಕ, ವಾಚಿಕ ,ಸಾತ್ವಿಕ, ಮತ್ತು ಆಹಾರ್ಯ ಇವು ಯಕ್ಷಗಾನದ ಪ್ರಧಾನ ಅಂಶಗಳೆಂದು ವಿದ್ವಾಂಸರು ಖಚಿತವಾಗಿ ವಿಶದಪಡಿಸಿದ್ದಾರೆ.
ಇಂತಹ ರಮ್ಯಾದ್ಬುತ ಕಲೆ ಯಕ್ಷಗಾನದಲ್ಲಿ ಎಷ್ಟೆಷ್ಟೋ ಖ್ಯಾತನಾಮ ಕಲಾವಿದರು ವಚೋವಿಲಾಸದಿಂದಲೂ ಅದ್ಭುತ ರಂಗ ನಿರ್ವಹಣೆಯಿಂದಲೂ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ನಾವು ಗಮನಿಸಬೇಕಾದ ಒಂದು ಅಂಶ ಓರ್ವ ವರ್ಧಿಷ್ಣು ಕಲಾವಿದ ಅಥವಾ ಈ ಕಲಾ ಕ್ಷೇತ್ರದಲ್ಲಿ ಅನುಪಮವಾದ ಕೊಡುಗೆಯನ್ನು ನೀಡಿದ ಕಲಾವಿದ ಈ ಎರಡನ್ನೂ ತೌಲನಿಕ ನೆಲೆಯಲ್ಲಿ ನೋಡಿದರೆ ಇಬ್ಬರದೂ ಸಮಾನ ದೃಷ್ಟಿಕೋನ. ಅಂದರೆ ಕಲೆಯಲ್ಲಿ ತಮ್ಮ ಬೊಗಸೆಗೆ ದಕ್ಕುವಷ್ಟನ್ನು ಪಡೆದೇ ತೀರಬೇಕೆಂಬ ತೀವ್ರ ಹಪಹಪಿಕೆ. ಇದೊಂದು ಏಕಮುಖವಾದ ಸಾಧನಾಪಥ. ಇದನ್ನು ತಪ್ಪೆಂದೋ ಪ್ರಮಾದವೆಂದೋ ಗುರುತಿಸಲಿಕ್ಕೆ ಬರುವುದಿಲ್ಲ. ಇದು ದೀರ್ಘಕಾಲೀನವಾದ ಅವರ ಆಶೋತ್ತರಗಳನ್ನು ಬಿಂಬಿಸುತ್ತದೆ ಎನ್ನುವುದು ಮುಖ್ಯ.

ಈ ಕಲಾ ಮಾಧ್ಯಮದಲ್ಲಿ ಮತ್ತೊಂದು ವಿಧದ ಕಲಾ ಆರಾಧನೆ ವಿರಳ ವರ್ಗದಲ್ಲಿ ಕಂಡು ಬರುತ್ತದೆ. ಇಂತಹ ಕಲಾ ಆರಾಧಕರು ವೈಯಕ್ತಿಕ ನೆಲೆಯಲ್ಲಿ ಯೋಚಿಸದೆ ಸಮಷ್ಠಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ಎಸಗುವವರು . ಇದೊಂದು ರೀತಿಯ ಕಲೆಯ ಮೇಲಣ ಭಕ್ತಿ ಮತ್ತು ತಾದಾತ್ಮ್ಯ. ಕಲೆಯನ್ನು ತಾನು ಮಾತ್ರ ಆರಾಧಿಸಿದರೆ ,ಸವಿದರೆ ಸಾಲದು ,ಹತ್ತಾರು ಜನರಿಗೆ ಕಲೆಯ ಸ್ವಸ್ವರೂಪ ಗಮನಕ್ಕೆ ಬರಬೇಕು ಎಂಬ ದೃಷ್ಟಿಕೋನ ಪ್ರಧಾನವಾಗಿರುತ್ತದೆ.

ಈ ದಿಸೆಯಲ್ಲಿ ನಾನು ಯೋಚನೆಯನ್ನು ಮಾಡುವಾಗ ನನ್ನ ಗಮನಕ್ಕೆ ಬಂದ ಒಂದು ಸಂಸ್ಥೆ ಯಕ್ಷಗಾನ ಕಲೆಯ ಕುರಿತಾಗಿ ಅತೀವವಾದ ಭಕ್ತಿ ಶ್ರದ್ಧೆಯ ಮೂಲಕ ಅದನ್ನು ನಾಲ್ದೆಸೆಗೂ ಪಸರಿಸುವ ಕೈಂಕರ್ಯಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಂಡ ಯಕ್ಷ ಕಲಾವೇದಿಕೆ ಒಂದಿದ್ದರೆ ಅದು ಯಕ್ಷ ಸಿರಿ ಕಲಾವೇದಿಕೆ ಖಂಡಿಗೆ ಮೂಲೆ ಎಂಬುದು. ಇದು ಸುಳ್ಯ ತಾಲೂಕಿನ ಐವರ್ನಾಡು ಸಮೀಪದ ಖಂಡಿಗೆ ಮೂಲೆ ಎಂಬ ಪ್ರದೇಶವಾಗಿರುತ್ತದೆ.

ಇಲ್ಲಿ ವಾಸ್ತವ್ಯವಿರುವ ಶ್ರೀ ಶ್ಯಾಮ್ ಭಟ್ ಖಂಡಿಗೆ ಮೂಲೆ ಎಂಬವರು ಸರಕಾರಿ ಉದ್ಯೋಗಿಯಾಗಿದ್ದವರು. ಎಲ್ಲ ಕಲೆಗಳ ಕುರಿತು ಪ್ರೀತಿ ಗೌರವ ಇರುವ ಅವರು ಸರ್ವಾಂಗೀಣ ಕಲೆ ಯಕ್ಷಗಾನದ ಬಗ್ಗೆ ವಿಶೇಷವಾದ ಒಲವನ್ನು ಹೊಂದಿದವರು. ಇದು ಅಷ್ಟಕ್ಕೆ ಸೀಮಿತವಾದ ವಿಚಾರವಲ್ಲ. ಯಕ್ಷಗಾನದ ವಿಭಿನ್ನ ಆಖ್ಯಾನಗಳನ್ನು ವೀಕ್ಷಿಸುತ್ತ ಇದ್ದ ಅವರಿಗೆ ಇಂತಹ ಒಂದು ಸಮಗ್ರ ಕಲೆಯ ಹರಹು (ವ್ಯಾಪ್ತಿ,) ವಿಸ್ತರಿಸಬೇಕು, ಇದಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ನೀಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದರು.

ಕಾಲದ ಪ್ರಭಾವವೋ,ಕಲೆಯ ಮೇಲಣ ತೀವ್ರವಾದ ಶ್ರದ್ಧೆಯೋ ಒಂದುಗೂಡಿದ ಒಂದು ಶುಭದಿನ ತಮ್ಮ ಮನೆಯ ಅಂಗಳದಲ್ಲಿ ಯಕ್ಷನಾಟ್ಯ ,ಹಿಮ್ಮೇಳ ತರಗತಿಗಳನ್ನು ಆರಂಭಿಸಿಬಿಡುತ್ತಾರೆ. ಇದು 2004 ನೇ ಇಸವಿಯಲ್ಲಿ ಆದ ವಿಶಿಷ್ಟ ವಿದ್ಯಮಾನ. ಈ ಕಲಾವೇದಿಕೆಯನ್ನು ಉದ್ಘಾಟಿಸಿದವರು ತೆಂಕುತಿಟ್ಟಿನ ಪ್ರಸಿದ್ಧ ಹವ್ಯಾಸಿ ಕಲಾವಿದರೂ ಯಕ್ಷ ಶಿಕ್ಷಕರೂ ಆದ ಶ್ರೀ ಕೋಡ್ಲ ಗಣಪತಿ ಭಟ್ ರವರು.

ಶ್ರೀಯುತರು ಕಲಾವೇದಿಕೆಯನ್ನು ಉದ್ಘಾಟಿಸಿದ್ದು ಮಾತ್ರವಲ್ಲ, ಕೆಲವು ಸಮಯದವರೆಗೆ ನಾಟ್ಯ ಅಭ್ಯಾಸಿ ವಿದ್ಯಾರ್ಥಿಗಳಿಗೆ ನೃತ್ಯ ಗುರುಗಳಾಗಿದ್ದರು. ನಂತರ ನಾಟ್ಯ ಕಲಿಸುವ ಹೊಣೆಯನ್ನು ಹೊತ್ತವರು ಕಟೀಲು ಮೇಳದಲ್ಲಿ ಸಾಕಷ್ಟು ತಿರುಗಾಟದ ನಂತರ ಪ್ರವರ್ಧಮಾನ ಕಲಾವಿದನಾಗಿದ್ದ ಶ್ರೀ ಸುಧಾಕರ ಕಾಂತಮಂಗಲ ಎಂಬವರು. ಸುಧಾಕರ ಅವರು ತಮ್ಮ ಕೌಶಲ್ಯ ಪೂರ್ಣ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡಿದರು ಮಾತ್ರವಲ್ಲ ಕಲಾ ವೇದಿಕೆಯ ಆಶ್ರಯದಲ್ಲಿ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ವ ರೀತಿಯ ಮಾರ್ಗದರ್ಶನವನ್ನು ನೀಡಿದರು.

ಇದರ ಫಲಶ್ರುತಿಯಾಗಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಸಹೃದಯರಿಗೆ ಮುದ ನೀಡುತ್ತಿದ್ದವು. ಈ ಸಂದರ್ಭದಲ್ಲಿ ಹಿಮ್ಮೇಳ ವಾದಕರಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಡೂರು ಮೋಹನ ಸರಳಾಯ ಸಾಥ್ ನೀಡುತ್ತಿದ್ದರು. ಭಾಗವತಿಕೆಯಲ್ಲಿ ರಾಮಚಂದ್ರ ಅರ್ಬಿತ್ತಾಯ,, ರವಿಕೃಷ್ಣ ಪುಣಚ ,ಶಿವಪ್ರಸಾದ್ ಕಾಂತಾವರ ಸಹಕರಿಸುತ್ತಿದ್ದರು.
ತೆಂಕ ಬೈಲಿನ ಟಿ ಡಿ ಗೋಪಾಲಕೃಷ್ಣ ಮೃದಂಗದಲ್ಲಿ ಸಹಕರಿಸಿದ್ದಾರೆ.

ಹೀಗೆ ನಿರಂತರತೆಯನ್ನು ಕಾಯ್ದುಕೊಂಡ ಕಲಾ ವೇದಿಕೆಯ ಯಕ್ಷಗಾನ ಪ್ರದರ್ಶನಗಳಿಗೆ ಮೂಲ ದ್ರವ್ಯವಾಗಿ ಒದಗಬೇಕಾದ ಪ್ರಸಂಗ ಮಾಹಿತಿ, ಪಾತ್ರೋಚಿತ ಸಂಭಾಷಣೆಗಳನ್ನು ಅತ್ಯಂತ ಹೃದ್ಯವಾಗಿ ಪೋಣಿಸಿಕೊಟ್ಟವರು ದೇಲಂಪಾಡಿ ಬನಾರಿಯ ಭಾಗವತ ,ಪ್ರಸಂಗ ಕರ್ತೃ, ಯಕ್ಷಗುರು ಶ್ರೀ ವಿಶ್ವ ವಿನೋದ ಬನಾರಿಯವರು. ಕಲಾವೇದಿಕೆಯ ಯಶಸ್ಸಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಶ್ರಮ ಗಮನಾರ್ಹ.

ತೆಂಕಿನ ಮಹಿಳಾ ಭಾಗವತರಲ್ಲಿ ಸಾಕಷ್ಟು ಹೆಸರನ್ನು ಪಡೆದಿರುವ ಕಾವ್ಯಶ್ರೀ ಅಜೇರು ,ಭವ್ಯಶ್ರೀ ಹರೀಶ್ ಕುಲ್ಕುಂದ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಚಂಡೆಯಲ್ಲಿ ದಿವ್ಯಶ್ರೀ ಮರ್ಕಂಜ ಇರುತ್ತಿದ್ದರು.

ಸಾಂದರ್ಭಿಕ ಪರಿಸ್ಥಿತಿಗೆ ಅನುಸರಿಸಿ ಶ್ಯಾಮ್ ಭಟ್ ರವರು ಖಂಡಿಗೆ ಮೂಲೆಯಿಂದ ದೊಡ್ಡ ತೋಟದ ನಾರ್ಣಕಜೆ ಎಂಬಲ್ಲಿಗೆ ವಾಸ್ತವ್ಯವನ್ನು ಬದಲಾಯಿಸುತ್ತಾರೆ. ಬದಲಾಯಿಸಿದ್ದು ವಾಸ್ತವ್ಯವನ್ನು ಮಾತ್ರ, ಕಲೋಪಾಸನೆಯ ತುಡಿತವನ್ನಲ್ಲ ಎಂಬುದಕ್ಕೆ ಸಾಕ್ಷೀರೂಪವಾಗಿ ಅಲ್ಲಿಯೂ ಈ ಯಕ್ಷಗಾನ ತರಬೇತಿಯನ್ನು ಮುಂದುವರಿಸುತ್ತಾರೆ. ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಯಕ್ಷ ಸಿರಿ ಕಲಾವೇದಿಕೆಯ ಮಹಿಳಾ ತಂಡದಿಂದ ಯಕ್ಷಗಾನ ನಡೆದಿದೆ ಎನ್ನುವುದು ಕಲಾ ವೇದಿಕೆಗೊಂಡು ಸಾರ್ಥಕತೆಯ ಭಾವ.


ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶ ಶ್ಯಾಮ್ ಭಟ್ ರವರ ತೀರ್ಥರೂಪರು ಗೋಪಾಲಕೃಷ್ಣ ಭಟ್ ಎಂಬುವರು. ಅವರೊಬ್ಬ ಪ್ರಬುದ್ಧ ಮನಸ್ಥಿತಿಯ ವಿಮರ್ಶಕರು. ಕಾರ್ಯಕ್ರಮವನ್ನು ಪೂರ್ಣ ವೀಕ್ಷಿಸಿ ಎಲ್ಲಿ ಒಳ್ಳೆಯ ಅಂಶವಿತ್ತು ಎಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ತಲಸ್ಪರ್ಶಯಾಗಿ ವಿಮರ್ಶಿಸಬಲ್ಲ ವಿಶೇಷತೆಯನ್ನು ಹೊಂದಿದವರು.


ಪ್ರಸ್ತುತ ಸಂದರ್ಭದಲ್ಲಿ ಶ್ಯಾಮ ಭಟ್ ರವರ ಕುಟುಂಬ ಮೂಡಬಿದಿರೆಯ ಸಮೀಪದ ಬನ್ನಡ್ಕ ಎಂಬಲ್ಲಿ ವಾಸವಾಗಿದ್ದಾರೆ. ಕಲಾಮಾತೆಯನ್ನು ಅವರು ಬಿಡಲಿಲ್ಲ ಅವರನ್ನು ಕಲಾ ಮಾತೆ ಕೃಪಾ ದೃಷ್ಟಿಯಿಂದ ಹರಸಿದಳು ಎಂಬುದಕ್ಕೆ ನಿದರ್ಶನವಾಗಿ ಬನ್ನಡ್ಕದಲ್ಲೂ ಯಕ್ಷಗಾನ ಕಲಾರಾಧನೆ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ನಾಟ್ಯ ತರಗತಿಯ ಸಾರಥ್ಯವಹಿಸಿದವರು ಅವರ ಸುಪುತ್ರ ಗೋಪಾಲಕೃಷ್ಣ ಕೆ ಎಸ್ ರವರು. ಉಪನ್ಯಾಸಕರಾಗಿರುವ ಅವರು ಒಬ್ಬ ಒಳ್ಳೆಯ ಕಲಾವಿದ ಎಂಬುದು ಕೂಡ ಗಮನಾರ್ಹ.

ಇವರ ಸಹೋದರಿ ಸರೋಜಿನಿ ಬನಾರಿಯವರು ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಒಳ್ಳೆಯ ಪ್ರಭುತ್ವವನ್ನು ಹೊಂದಿದವರು ಸಂದರ್ಭಕ್ಕೆ ಅನುಸರಿಸಿ ಯಕ್ಷ ನಾಟ್ಯದ ನಿರ್ವಹಣೆಯನ್ನು ಅವರು ಮಾಡುತ್ತಾರೆ. ಹಾಗೆಯೇ ಒಳ್ಳೆಯ ಯಕ್ಷಗಾನ ಕಲಾವಿದೆಯೂ ಹೌದು. ಪ್ರಕೃತ ಬನ್ನಡ್ಕರ ಪರಿಸರದಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಚೆಂಡೆ ವಾದಕರಾಗಿ ಸರೋಜಿನಿಯವರ ಪತಿ ,ಶ್ಯಾಮ ಭಟ್ಟರ ಅಳಿಯ ಶ್ರೀ ವಿಷ್ಣುಶರಣ ಬನಾರಿ ತೊಡಗಿಸಿಕೊಳ್ಳುತ್ತಾರೆ.

2004 ರಿಂದ ಇಲ್ಲಿಯವರೆಗಿನ ಸುಧೀರ್ಘ ಪಯಣದಲ್ಲಿ ಒಂದು ಸಲವೂ ಕಲಾವೇದಿಕೆಯ ವಾರ್ಷಿಕೋತ್ಸವವನ್ನು ಆಚರಿಸಿಲ್ಲ ಎಂಬುದು ಅಚ್ಚರಿಯ ಸಂಗತಿ. ಆದರೆ ಈಗ ಕಲಿಕೆಯಲ್ಲಿ ತೊಡಗಿ ಸಾಕಷ್ಟು ಪ್ರವರ್ಧಮಾನ ಸ್ಥಿತಿಗೆ ಬಂದ ವಿದ್ಯಾರ್ಥಿಗಳ ಒತ್ತಾಸೆಗೆ ಮಣಿದು ಪ್ರಥಮ ಬಾರಿಗೆ ವಾರ್ಷಿಕೋತ್ಸವವನ್ನು ಆಚರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವ ಅಂದರೆ ‘ವಿಂಶತಿ ಸಂಭ್ರಮ’.

ಅವರೇ ಉಲ್ಲೇಖಿಸಿದಂತೆ ಇದು ಯಕ್ಷ ಸಂಗಮ. ಮೂಡುಬಿದಿರೆಯ ಬನ್ನಡ್ಕ ಎಂಬಲ್ಲಿ ಗುರು ರಾಘವೇಂದ್ರ ಮಠ ಇದ್ದು ಇಲ್ಲಿ ಈ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ದಿನಾಂಕ 31. 10 . 20204ನೇ ಗುರುವಾರದಂದು ಬೆಳಗ್ಗಿನಿಂದಲೇ ಸಾಂಸ್ಕೃತಿಕೋತ್ಸವ, ಯಕ್ಷಗಾನ ಮುಖವರ್ಣಿಕೆ, ಯಕ್ಷಗಾನ ವೈಭವ, ತಾಳಮದ್ದಳೆ, ನರಕಾಸುರ ಮೋಕ್ಷ, ದಕ್ಷಯಜ್ಞ ಎಂಬ ಬಯಲಾಟ ಕಾರ್ಯಕ್ರಮಕ್ಕೆ ಕಳೆಗಟ್ಟಲಿದೆ.

ನಾವು ಗಮನಿಸಬೇಕಾದ ಬಹಳ ಮುಖ್ಯವಾದ ವಿಚಾರ ಒಂದಿದೆ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಯಕ್ಷ ನಾಟ್ಯ ತರಗತಿಗಳನ್ನು ಇಷ್ಟೊಂದು ವ್ಯವಸ್ಥಿತವಾಗಿ ನಡೆಸುತ್ತಿದ್ದರೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ಆಸಕ್ತರಿಗೆ ನಾಟ್ಯಾಭ್ಯಾಸವನ್ನು ಮಾಡಿಸುತ್ತಿದ್ದರು ಎಂಬುದು ಅಚ್ಚರಿಯ ಸಂಗತಿ ಆದರೂ ಇದು ಸತ್ಯ. ಇಂತಹ ಕಲೋಪಾಸನೆಯನ್ನು ಜೀವನ ದೃಷ್ಟಿಯಾಗಿ ಹೊಂದಿರುವ ಶ್ಯಾಮ ಭಟ್ ರವರ ಕಲಾ ಕೈಂಕರ್ಯ ನಿರಂತರವಾಗಿರಲೆಂದು ಹಾರೈಸೋಣ

ಬರಹ – ನಾರಾಯಣ ತೋರಣಗಂಡಿ, ಸಪ್ತಸ್ವರ, ಪೈಲೂರು ಸುಳ್ಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments