Saturday, November 23, 2024
Homeಸುದ್ದಿಖ್ಯಾತ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

ಖ್ಯಾತ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

ಬೆಂಗಳೂರಿನಲ್ಲಿ ನಡೆಯಲಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ತಂಡದಲ್ಲಿದ್ದ ಬಂಟ್ವಾಳ ಜಯರಾಮ ಆಚಾರ್ಯರು ಇಂದು ಮುಂಜಾನೆ ನಾಲ್ಕು ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದರು.

ಸಹ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತದೇಹವನ್ನು ಆಮೇಲೆ ಆಂಬುಲೆನ್ಸ್ ಮೂಲಕ ಊರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

ಅಗಲಿದ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಹಾಸ್ಯಗಾರ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು ಸರಳ, ಸಜ್ಜನ, ನಿಗರ್ವಿ, ವಿನಯವಂತ ಹಾಸ್ಯಗಾರರು. ಇವರು ಜನಿಸಿದ್ದು 12-10-1957ರಂದು. ತಂದೆ ಬಂಟ್ವಾಳ ಗಣಪತಿ ಆಚಾರ್ಯ, ತಾಯಿ ಶ್ರೀಮತಿ ಭವಾನಿ ಅಮ್ಮ. ಗಣಪತಿ ಆಚಾರ್ಯರು ತನ್ನ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದು ಮಾತ್ರವಲ್ಲದೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು. ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದವರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ಜಯರಾಮ ಆಚಾರ್ಯರು ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡರು. ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿದರು.
ಕಟೀಲು ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದ ನಂತರ ಡಾ. ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ತಿರುಗಾಟ ಮಾಡಿದರು.

ತರುವಾಯ ಮತ್ತೆ ಕಟೀಲು ಮೇಳದಲ್ಲಿ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಜತೆಯಲ್ಲಿ ಕಲಾಸೇವೆಯನ್ನು ಮಾಡಿದರು
ಮುಂದಿನ 5 ವರ್ಷಗಳ ಕಾಲ ಮತ್ತೆ ಪುತ್ತೂರು ಮೇಳದಲ್ಲಿ ಹಾಸ್ಯಗಾರನಾಗಿ ಕಲಾಸೇವೆಯನ್ನು ಮಾಡಿದ ಬಂಟ್ವಾಳ ಜಯರಾಮ ಆಚಾರ್ಯರು ಮತ್ತು ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳವನ್ನು ಸೇರಿಕೊಂಡರು.


ನಂತರ ಕುಂಬಳೆ ಮೇಳದಲ್ಲಿ ತಿರುಗಾಟ ಮಾಡಿದರು.
ನಂತರ ಬಂಟ್ವಾಳ ಜಯರಾಮ ಆಚಾರ್ಯರು ಕಲಾಸೇವೆಯನ್ನು ಮಾಡಿದ್ದು ಸುರತ್ಕಲ್ಲು ಮೇಳದಲ್ಲಿ (2 ವರ್ಷ).
ಪುನಃ ಕದ್ರಿ ಮೇಳದಲ್ಲಿ 11 ವರುಷಗಳ ತಿರುಗಾಟ. ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಅರುವ ಕೊರಗಪ್ಪ ಶೆಟ್ರು, ಪುಳಿಂಚ ರಾಮಯ್ಯ ಶೆಟ್ರು, ಮನೋಹರ ಕುಮಾರರೊಂದಿಗೆ ಹಾಸ್ಯಗಾರರಾಗಿ ಕಲಾಸೇವೆ ಮಾಡಿದರು.


ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ, ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ ಕಟೀಲು 3ನೇ ಮೇಳದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರು ಹಾಸ್ಯಗಾರರಾಗಿ ರಂಜಿಸಿದರು. ಮತ್ತೆ 2 ವರುಷಗಳ ಕಾಲ ಎಡನೀರು ಮೇಳ, 9 ವರ್ಷಗಳ ಕಾಲ ಹೊಸನಗರ ಮೇಳ, 2017ರಿಂದ 7 ವರ್ಷಗಳ ಕಾಲ ಹನುಮಗಿರಿ ಮೇಳದಲ್ಲಿ. ಹೀಗೆ, 53 ವರುಷಗಳ ಕಲಾಸೇವೆ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರದ್ದು.


ಯಕ್ಷಗಾನ ಕಲಾವಿದರಾಗಿ ಅಪಾರ ಜನಪ್ರಿಯತೆ, ಅಭಿಮಾನಿಗಳನ್ನು ಗಳಿಸಿರುವ ಬಂಟ್ವಾಳ ಜಯರಾಮ ಆಚಾರ್ಯರ ನಿಧನ ಯಕ್ಷಗಾನ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ. ಮೃತರು ಪತ್ನಿ ಶ್ಯಾಮಲಾ ಮತ್ತು ಇಬ್ಬರು ಮಕ್ಕಳಾದ ವರ್ಷಾ ಮತ್ತು ವರುಣ್ ಅವರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments