Sunday, January 19, 2025
Homeಸುದ್ದಿನಾಳೆ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರಾ? ಸಾರ್ವಜನಿಕ ವಲಯದಲ್ಲಿ ಮೊದಲೇ ಹರಿದಾಡುತ್ತಿದ್ದ ಸುದ್ದಿ ನಾಳೆ...

ನಾಳೆ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರಾ? ಸಾರ್ವಜನಿಕ ವಲಯದಲ್ಲಿ ಮೊದಲೇ ಹರಿದಾಡುತ್ತಿದ್ದ ಸುದ್ದಿ ನಾಳೆ ನಿಜವಾಗಬಹುದೇ?

ನಾಳೆ ಡಿ.ವಿ. ಸದಾನಂದ ಗೌಡ ಕಾಂಗ್ರೆಸ್ ಸೇರುತ್ತಾರಾ? ಸಾರ್ವಜನಿಕ ವಲಯದಲ್ಲಿ ಮೊದಲೇ ಹರಿದಾಡುತ್ತಿದ್ದ ಸುದ್ದಿ ನಾಳೆ ನಿಜವಾಗಬಹುದೇ? ಹೀಗೊಂದು ಪ್ರಶ್ನೆ ಜನರನ್ನು ಕಾಡುತ್ತಿದೆ.

ಹೌದು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿವಿ ಸದಾನಂದ ಗೌಡ ಅವರು ಬಿಜೆಪಿ ತೊರೆಯಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಥಾನ ನಿರಾಕರಿಸಿರುವುದು ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ದಕ್ಷಿಣ ಕನ್ನಡದ ಪುತ್ತೂರಿನ ಸದಾನಂದ ಗೌಡ ಅವರು 2014 ರಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರು. ಅವರು ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆಗಳಿವೆ.

ಇಂದು ಸದಾನಂದ ಗೌಡರ ಹುಟ್ಟುಹಬ್ಬ. ಆ ಕಾರಣದಿಂದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಡಿವಿಎಸ್‌ ಮಾತನಾಡಿದರು. ಈ. ಮಾತುಕತೆಯ ವೇಳೆ ನಾನು ಮಹತ್ವದ ವಿಷಯದ ಬಗ್ಗೆ ನಾಳೆ ನಿಮ್ಮ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದರಿಂದ ಈ ಪ್ರಶ್ನೆ ಈಗ ಮಾಧ್ಯಮಗಳ ತಲೆ ತಿನ್ನುತ್ತಿದೆ.

ಕರ್ನಾಟಕ ಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಸ್ತುತ ಸದಾನಂದ ಗೌಡ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಬೆಂಗಳೂರು ಉತ್ತರದ ಹಾಲಿ ಸಂಸದರಿಗೆ ಲೋಕಸಭೆ ಚುನಾವಣೆಯಲ್ಲಿ ಅದೇ ಸ್ಥಾನಕ್ಕೆ ಉಮೇದುವಾರಿಕೆಯನ್ನು ಬಿಜೆಪಿ ಪಕ್ಷ ನಿರಾಕರಿಸಿತು. ಇದು ಬಿಜೆಪಿಯಿಂದ ಅವರ ಸಂಭಾವ್ಯ ನಿರ್ಗಮನಕ್ಕೆ ಪ್ರಮುಖ ಅಂಶವಾಗಿದೆ ಎಂದು ನಂಬಲಾಗಿದೆ.

ಕಾಂಗ್ರೆಸ್ ನಾಯಕರು ತನ್ನನ್ನು ಸಂಪರ್ಕ ಮಾಡಿದ ವಿಚಾರ ಒಪ್ಪಿಕೊಂಡ ಗೌಡರು, ನನ್ನನ್ನ ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ನಿಜ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಮಾಧಾನಪಡಿಸಲು ಯತ್ನಿಸಿದರು. ಇವತ್ತು ನನ್ನ ಜನ್ಮದಿನ. ಆದುದರಿಂದ ನನ್ನ ನಿರ್ಧಾರಗಳನ್ನು ಬಹಿರಂಗ ಪಡಿಸುವ ಮೊದಲು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ಬೆಂಗಳೂರು ಉತ್ತರದಲ್ಲಿ ನಿಮಗೆ ಟಿಕೆಟ್‌ ಎಂದು ಹೇಳಿ ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಲಾಯಿತು. ಮನಸ್ಸಿನ ವಿಚಾರಗಳನ್ನು ಹಂಚಿಕೊಳ್ಳಲು ಇದು ಸಕಾಲ. ಅದಕ್ಕಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ಕುತೂಹಲ ಉಳಿಯುವುದಿಲ್ಲ. ರಾಜಕೀಯದಲ್ಲಿ ಏರುಪೇರು, ಸಹಜ. ಆದರೂ ತಿಳಿದೂ ತಿಳಿದೂ ಹೀಗೆ ಮಾಡಿರುವುದು ಬೇಸರವಾದದ್ದು ನಿಜ ಎಂದು ಸದಾನಂದ ಗೌಡರು ಒಪ್ಪಿಕೊಂಡರು.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಘೋಷಣೆ ಮಾಡಲಾಗಿದೆ. ಒಕ್ಕಲಿಗ ಸಮುದಾಯದಿಂದ ಬಂದ ಗೌಡರು ಮೊದಲ ನರೇಂದ್ರ ಮೋದಿ ಸರ್ಕಾರದ ಆರಂಭಿಕ ವರ್ಷಗಳಲ್ಲಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದರು. ಪಕ್ಷದ ಕಾರ್ಯವೈಖರಿ ಬಗ್ಗೆ ಅವರ ಇತ್ತೀಚಿನ ಟೀಕೆಗಳು ಮಹತ್ವದ ಚರ್ಚೆಗೆ ನಾಂದಿ ಹಾಡಿವೆ. ನಂತರ ಅವರು ಶೀಘ್ರದಲ್ಲೇ ಬಿಜೆಪಿಯಿಂದ ದೂರವಾಗಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments