Thursday, November 21, 2024
Homeಸುದ್ದಿಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ಸ್ವರ್ಗೈಕ್ಯ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ಸ್ವರ್ಗೈಕ್ಯ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ (93) ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನ ಹೊಂದಿದರು. ಪುತ್ತೂರು ಭಾಗದಲ್ಲಿ ಹಿಂದೂ ಸಮಾಜಕ್ಕಾಗಿ ಅಹರ್ನಿಶಿಯಾಗಿ ದುಡಿದವರಲ್ಲಿ ಶಿವಾನಂದ ನಟ್ಟೋಜ ಅವರು ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ.

ನಟ್ಟೋಜ ಶಿವಾನಂದ ರಾವ್ ಅವರು ವೆಂಕಟ ರಾವ್ ಹಾಗೂ ಕಲ್ಯಾಣ ಯಮ್ಮ ಅವರ ಪುತ್ರನಾಗಿ ಪುತ್ತೂರಿನಲ್ಲಿ 1932ರ ಜನವರಿ 3ರಂದು ಜನಿಸಿದ್ದರು. ಸಾಮಾಜಿಕ ಹಾಗೂ ರಾಜಕೀಯವಾಗಿ ಸಕ್ರೀಯರಾಗಿದ್ದು, ಪ್ರಗತಿಪರ ಕೃಷಿಕರೂ ಅಗಿದ್ದರು.

ವಿಶ್ವ ಹಿಂದೂ ಪರಿಷತ್‌ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮಾಜಿ ಶಾಸಕ ರಾಮ ಭಟ್ ಅವರ ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯವಾಗಿಯೂ ಸಾಕಷ್ಟು ಜವಾಬ್ದಾರಿ ನಿರ್ವಹಿಸಿದ್ದರು. ಪುತ್ತೂರು ಭಾಗದ ಹಿಂದೂ ನಾಯಕರಾಗಿ ಗುರುತಿಸಿಕೊಂಡಿದ್ದರು.

ರಾಮಜನ್ಮ ಭೂಮಿಗಾಗಿ ಹೋರಾಟ;
ರಾಮ ಮಂದಿರ ಹೋರಾಟದಲ್ಲೂ ಗುರುತಿಸಿಕೊಂಡಿದ್ದ ಇವರು, ಶ್ರೀ ರಾಮನಿಗೆ ಅಯೋಧ್ಯೆಯಲ್ಲಿಯೇ ಮಂದಿರ ನಿರ್ಮಾಣವಾಗಲೇಬೇಕೆಂಬ ದೃಢಸಂಕಲ್ಪವನ್ನು ಹೊತ್ತವರು. 1989ರ ಹೊತ್ತಿನಲ್ಲಿ ಶ್ರೀ ರಾಮ ಪೂಜನ ಸಮಿತಿ ಪುತ್ತೂರು ಪ್ರಖಂಡದ ಅಧ್ಯಕ್ಷರಾಗಿ ಪುತ್ತೂರಿನ ಬೀದಿ ಬೀದಿಗಳಲ್ಲಿ ಕೇರಿ ಕೇರಿಗಳಲ್ಲಿ ಜನಜಾಗೃತಿ ಮೂಡಿಸಿದ್ದರು.

ಹಳ್ಳಿಹಳ್ಳಿಗಳನ್ನು ಸುತ್ತಾಡಿ ರಾಮಮಂದಿರ ಹೋರಾಟಕ್ಕೆ ಜನರನ್ನು ಅಣ ಗೊಳಿಸಿ, ಶ್ರೀರಾಮಚಂದ್ರನ ಆದರ್ಶವನ್ನು ಪುತ್ತೂರಿನ ಮಣ್ಣಿನಲ್ಲಿ ಬಿತ್ತುವ ಪ್ರಯತ್ನ ದಶಕಗಳ ಕಾಲ ನಡೆಸಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ 1989 ಹಾಗೂ 1992ರಲ್ಲಿ ಎರಡು ಬಾರಿಯೂ ಕರಸೇವಕರಾಗಿ ಮುಂಚೂಣಿಯಲ್ಲಿ ನಿಂತು ಜನರಿಗೆ ಪ್ರೇರಣೆ ನೀಡಿದ್ದರು.


ಅಯೋಧ್ಯೆ ಹೋರಾಟದಲ್ಲಿ ಸೆರೆವಾಸ:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಹೋರಾಟದ ಸಂದರ್ಭ 400 ಮಂದಿಯ ತಂಡದಲ್ಲಿ ಪುತ್ತೂರಿನಿಂದ ಅಯೋಧ್ಯೆಗೆ ತೆರಳಿದ್ದರು. ಮಧ್ಯಪ್ರದೇಶದಲ್ಲಿ ತಂಡವನ್ನು ತಡೆದಿದ್ದು, 14 ದಿನಗಳ ಕಾಲ ಸೆರೆವಾಸವನ್ನು ಅನುಭವಿಸಿದ್ದರು. ಜೈಲಿನಲ್ಲಿರುವಾಗಲೇ ಶಿಲಾನ್ಯಾಸ ಕಾರ್ಯ ನಡೆದಿದ್ದು, ಅದನ್ನು ಟಿವಿಯಲ್ಲಿ ಅವರು ವೀಕ್ಷಿಸಿದ್ದರು.

ಈ ಶಿಲಾನ್ಯಾಸದ ವೇಳೆ ಆಡ್ವಾಣಿಯವರು ಪುತ್ತೂರಿನ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದನ್ನು ಇತ್ತೀಚೆಗೆ ರಾಮಮಂದಿರ ಉದ್ಘಾಟನೆಯ ಸಂದರ್ಭ ಶಿವಾನಂದ ನಟ್ಟೋಜ ಅವರು ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿದ್ದರು.

ಪುತ್ತೂರಿನಲ್ಲಿ ಅಂಬಿಕಾ ಎನ್ನುವ ‘ಮಾದರಿ’ ಶಿಕ್ಷಣ ಸಂಸ್ಥೆಯ ನಿರ್ಮಾಣದ ಹಿಂದಿರುವ ಶಕ್ತಿಯಾಗಿರುವ ಇವರು, ಧರ್ಮ, ದೇಶ, ದೇವರಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು, ದೇಶದ ಭಾವಿ ಪ್ರಜೆಗಳೂ ಹೀಗೆಯೇ ಬೆಳೆಯಬೇಕೆಂಬ ಆಶಯವನ್ನು ಹೊಂದಿದ್ದರು.
ಮೃತರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ನಾಲ್ವರು ಪುತ್ರಿರನ್ನು ಅಗಲಿದ್ದಾರೆ.
ನಿಧನದ ಹಿನ್ನೆಲೆಯಲ್ಲಿ ಗೌರವಾರ್ಥ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments