Saturday, September 21, 2024
Homeಸುದ್ದಿ'ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು' ಸಂಸ್ಮರಣಾ ಗ್ರಂಥ ಬಿಡುಗಡೆ

‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಸಂಸ್ಮರಣಾ ಗ್ರಂಥ ಬಿಡುಗಡೆ

ದೇರಾಜೆ ಸೀತಾರಾಮಯ್ಯನವರು ಓರ್ವ ಅಪರೂಪದ ಕಲಾವಿದ. ಭಾವನಾತ್ಮಕ ಮತ್ತು ಮಾನವೀಯ ನೆಲಗಟ್ಟಿನಲ್ಲಿ ಯಾವುದೇ ಪಾತ್ರಕ್ಕೂ ಅರ್ಥ ಮಾತಾಡುವ ಸಾಮರ್ಥ್ಯ ಹೊಂದಿದ್ದ ಶ್ರೇಷ್ಠ ಸಾಹಿತಿ ಕಲಾವಿದ.

ಅವರೂ ನಮ್ಮ ಮಠದ ಶಿಷ್ಯರಾಗಿ, ಅವರಿಗೆ ನಮ್ಮ ಮಠದ ಉಪ್ಪಿನ ಋಣ ಇದೆ. 1972ರಲ್ಲಿಯೇ ಸಾರ್ವಜನಿಕವಾಗಿ ಅರ್ಥ ಹೇಳುವುದನ್ನು ನಿಲ್ಲಿಸಿದ್ದರೂ ನಮ್ಮ ಮಠದಲ್ಲಿ ಮಾತ್ರ ಕೊನೆವರೆಗೂ ಹೇಳಿದ್ದಾರೆ.

ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀಯವರ ಆಪ್ತ ಶಿಷ್ಯ ಆಗಿದ್ದವರು ದೇರಾಜೆಯವರು. ಅವರ ಕುರಿತ ಗ್ರಂಥ ನಮ್ಮ ಮಠದಲ್ಲಿ ಆಗುತ್ತಿರುವುದು ನಮಗೆ ಎಲ್ಲರಿಗೂ ಬಹಳ ಸಂತಸದ ವಿಚಾರ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ದಗೊಂಡ ‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಸಂಸ್ಮರಣಾ ಗ್ರಂಥದ ಲೋಕಾರ್ಪಣೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.

ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಹಯೋಗದಲ್ಲಿ ದಿನಾಂಕ 14.10.2023, ಮಂಗಳವಾರದಂದು ಶ್ರೀ ಮಠದಲ್ಲಿ ಈ ಸ್ಮರಣೀಯ ಕಾರ್ಯಕ್ರಮ ಸಂಪನ್ನಗೊಂಡಿತು. ಇದರ ಜೊತೆಗೆ ದ್ವಿತೀಯ ಮುದ್ರಣ ಕಂಡ ‘ರಸಋಷಿ’ ಎನ್ನುವ ದೇರಾಜೆ ಅಭಿನಂದನಾ ಗ್ರಂಥದ ಬಿಡುಗಡೆಯೂ ಇದೇ ಸಂದರ್ಭದಲ್ಲಿ ಶ್ರೀಗಳು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ರವರು ವಹಿಸಿ ಕೊಂಡಿದ್ದರು. ದೇರಾಜೆಯವರು ಜ್ಞಾನಪೀಠ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಯೋಗ್ಯರಾಗಿದ್ದವರು. ಅವರ ಅರ್ಥಗಾರಿಕೆ ವಿಶಿಷ್ಟ ಮತ್ತು ವಿಭಿನ್ನ ಎಂದು ಅವರು ನುಡಿದರು.

ದೇರಾಜೆ ಸಂಸ್ಮರಣಾ ಭಾಷಣವನ್ನು ಹಿರಿಯ ಅರ್ಥದಾರಿ, ದೇರಾಜೆ ಶಿಷ್ಯ ಶ್ರೀ ಉಡ್ವೇಕೋಡಿ ಸುಬ್ಬಪ್ಪಯ್ಯ ಮಾಡಿದರು. ಗ್ರಂಥದ ಕುರಿತಾಗಿ ಸಮಿತಿಯ ಶ್ರೀ ಸೇರಾಜೆ ಗೋಪಾಲಕೃಷ್ಣ ಭಟ್ ಮತ್ತು ಶ್ರೀಕರ ಭಟ್ ಮರಾಟೆ ಮಾತಾಡಿದರು. ಗ್ರಂಥ ರಚನಾ ಕಾರ್ಯದಲ್ಲಿ ಸಹಕರಿಸಿದ ಜಯರಾಮ ಅಳಿಕೆ, ಕೊಕ್ಕಡ ವೆಂಕಟರಮಣ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಲಾವಿದ ಹರೀಶ ಬಳoತಿಮೊಗರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ದೇರಾಜೆ ಮೊಮ್ಮಗ ಶ್ರೀ ರಾಧಾಕೃಷ್ಣ ಕಲ್ಚರ್ ಸ್ವಾಗತಿಸಿದರು ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಾಮಕೃಷ್ಣ ಮಯ್ಯ ಅವರೂ ಎಲ್ಲರನ್ನು ವಂದಿಸಿದರು. ದೇರಾಜೇಯವರ ಮರಿಮಗಳು ಕುಮಾರಿ ನೀಹಾರಿಕ ದೇರಾಜೆ ಪ್ರಾರ್ಥಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಶ್ರೀ ದಿವಾಕರ ಹೆಗಡೆ ಅವರಿಂದ ಸೀತಾoತರಂಗ ಎಂಬ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ ಮತ್ತು ಮದ್ದಳೆಯಲ್ಲಿ ಶ್ರೀ ಎ. ಪಿ. ಪಾಠಕ್ ಅವರು ಸಹಕರಿಸಿದರು. ಈ ಕಾರ್ಯಕ್ರಮ ಬಹಳ ಹೃದ್ಯವಾಗಿ ಮೂಡಿ ಬಂದಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments