Saturday, November 23, 2024
HomeUncategorizedಅಜೆಕಾರು ಕಲಾಭಿಮಾನಿ ಬಳಗದ 22 ರ ಕಲಾ ಸಂಭ್ರಮಸಾಧಕರಿಗೆ ಯಕ್ಷ ರಕ್ಷೆ – ಮಾನ, ಸಮ್ಮಾನ

ಅಜೆಕಾರು ಕಲಾಭಿಮಾನಿ ಬಳಗದ 22 ರ ಕಲಾ ಸಂಭ್ರಮ
ಸಾಧಕರಿಗೆ ಯಕ್ಷ ರಕ್ಷೆ – ಮಾನ, ಸಮ್ಮಾನ

ಮುಂಬಯಿಯ ಸಾಂಸ್ಕೃತಿಕ ರಂಗದಲ್ಲಿ ಭದ್ರವಾದ ಹೆಜ್ಜೆಯನ್ನಿಟ್ಟು ಸಾಗಿದ ಅಜೆಕಾರು ಕಲಾಭಿಮಾನಿ ಬಳಗಕ್ಕೀಗ ಬರೋಬ್ಬರಿ 22 ರ ತಾರುಣ್ಯ. ಕಲಾ ಸಂಘಟಕ – ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ದಣಿವರಿಯದ ಕೃತುಶಕ್ತಿಯಿಂದ ಮಹಾರಾಷ್ಟçದ ಮಣ್ಣಿನಲ್ಲಿ ಕರಾವಳಿಯ ಯಕ್ಷಗಾನವೆಂಬ ಕಲಾದ್ರುವ ಬೆಳೆದು, ಟಿಸಿಲೊಡೆದು, ಕೊಂಬೆ-ರೆಂಬೆಗಳನ್ನು ಚಾಚಿ ವಿಶಾಲವಾಗಿ ಹರಡಿಕೊಂಡಿರುವುದು ಪ್ರಜ್ಞಾವಂತರೆಲ್ಲ ಹುಬ್ಬೇರಿಸುವಂತೆ ಮಾಡಿದ ಒಂದು ಅಪರೂಪದ ವಿದ್ಯಮಾನ.

ಊರಿನ ಸಿದ್ಧ-ಪ್ರಸಿದ್ಧ ಕಲಾವಿದರೊಂದಿಗೆ ಮುಂಬಯಿಯಲ್ಲೇ ಹುಟ್ಟಿ ಬೆಳೆದ ಅನೇಕ ಯುವಕ-ಯುವತಿಯರನ್ನು ಯಕ್ಷಗಾನ ರಂಗದಲ್ಲಿ ಪಳಗಿಸಿ ಮುಂದಿನ ತಲೆಮಾರಿಗೂ ಅದನ್ನು ದಾಟಿಸುವ ಬಾಲಕೃಷ್ಣ ಶೆಟ್ಟರ ಈ ಪ್ರಯತ್ನಕ್ಕೆ ನೀರೆರೆದು ಪೋಷಿಸುತ್ತಿರುವವರು ಮಹಾನಗರದ ಸಹೃದಯ ಕಲಾಭಿಮಾನಿಗಳು ಮತ್ತು ಪೋಷಕ ಸಂಸ್ಥೆಗಳು


ಅಜೆಕಾರು ಕಲಾಭಿಮಾನಿ ಬಳಗವು ಇದೀಗ ತನ್ನ 22 ವರ್ಷಗಳ ಮಹಾ ಅಭಿಯಾನವನ್ನು ಪೂರೈಸಿ ದ್ವಿವಿಂಶತಿ ಕಲಾಸಂಭ್ರಮಕ್ಕೆ ಅಣಿಯಾಗಿದೆ. ಇದೇ ಸೆಪ್ಟೆಂಬರ 10, 2023 ರಂದು ಭಾನುವಾರ ಮಧ್ಯಾಹ್ನ ಗಂಟೆ 2.00 ರಿಂದ ಮುಂಬಯಿ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಜರಗುವ ಇಪ್ಪತ್ತೆರಡನೇಯ ವಾರ್ಷಿಕೋತ್ಸವದಲ್ಲಿ ‘ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ, ಯಕ್ಷ ರಕ್ಷಾ ಪ್ರಶಸ್ತಿ ಪ್ರದಾನ ಮತ್ತು ‘ಆರುವ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮಗಳನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಒಂಭತ್ತು ಮಂದಿ ಸಾಧಕರಿಗೆ ವಿವಿಧ ನೆಲೆಗಳಲ್ಲಿ ಪ್ರಶಸ್ತಿ ಮತ್ತು ಸಮ್ಮಾನಗಳ ‘ಯಕ್ಷ ರಕ್ಷೆ’ ನೀಡಲಾಗುತ್ತಿದೆ.

ಸಿ.ಎ. ಸದಾಶಿವ ಶೆಟ್ಟಿ ಕಡಂದಲೆ

ಮೂಲತಃ ಕಾರ್ಕಳ ತಾಲೂಕಿನ ಕಡಂದಲೆಯವರಾದ ಸದಾಶಿವ ಶೆಟ್ಟರು ಎಳವೆಯಲ್ಲೇ ಮುಂಬಯಿ ಸೇರಿ ಯಂಗ್‌ಮೆನ್ಸ್ ರಾತ್ರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಶನ್ ಪೂರೈಸಿದರು. ಮುಂಬೈ ವಿಶ್ವವಿದ್ಯಾನಿಲಯಕ್ಕೆ ಸೇರಿದ ಎನ್. ಎಂ. ಕಾಲೇಜಿನಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದರು. ಪ್ರತಿಷ್ಠಿತ ಲೆಕ್ಕಪರಿಶೋಧಕರ ಸಂಸ್ಥೆಯಾದ ಸೇರಿಕೊಂಡ ಅವರು ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಹೊಂದಿದ ಪ್ರತಿಭಾವಂತರು.


ಆರಂಭದಲ್ಲಿ ಕೆಲಕಾಲ ಬ್ಯಾಂಕೊAದರಲ್ಲಿ ದುಡಿದ ಸದಾಶಿವ ಶೆಟ್ಟರು ಬಳಿಕ ದಾದರ್ ಮತ್ತು ಥಾಣೆಗಳಲ್ಲಿ ತಮ್ಮದೇ ಸ್ವಂತ ಕಚೇರಿ ತೆರೆದು ಸ್ವತಂತ್ರವಾಗಿ ಲೆಕ್ಕಪರಿಶೋಧನಾ ವೃತ್ತಿಯನ್ನು ಕೈಗೊಂಡರು. ವಿವಿಧ ವ್ಯಕ್ತಿಗಳು, ಪಾಲುದಾರಿಕೆ ಸಂಸ್ಥೆಗಳು, ಪ್ರಸಿದ್ಧ ಕಂಪೆನಿಗಳ ಆಡಿಟ್ ಸೇವೆಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಪ್ರಿಯರಾದರು. ಇದರೊಂದಿಗೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಲಾಪೋಷಕರಾಗಿ, ಹವ್ಯಾಸಿ ಯಕ್ಷಗಾನ ವೇಷಧಾರಿಯಾಗಿ ಎಲ್ಲರ ಪ್ರೀತಿ-ವಿಶ್ವಾಸಗಳಿಗೆ ಅವರು ಪಾತ್ರರು.


ಮುಂಬೈಯ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರಾಗಿ ಮತ್ತು ಗೌರವ ಕೋಶಾಧಿಕಾರಿಯಾಗಿ, ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಫಾರಮ್‌ನ ಮಾಜಿ ಅಧ್ಯಕ್ಷರಾಗಿ, ಮುಂಬೈ ಬಂಟರ ಸಂಘದ ಉನ್ನತ ಶಿಕ್ಷಣ ಯೋಜನೆಯ ಗೌರವ ಕೋಶಾಧಿಕಾರಿಯಾಗಿ, ಬಂಟರ ಸಂಘದ ಟ್ರಸ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ, ಸೇವಾ ಭಾರತಿಯ ನಿರ್ದೇಶಕರಾಗಿ ಮತ್ತು ಖಜಾಂಜಿಯಾಗಿ, ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸದಸ್ಯರಾಗಿ, ಶಿವ ಹೆರಿಟೇಜ್ ಹೋಟೆಲ್ಸ್ ಪ್ರೈವೆಟ್ ಲಿಮಿಟಿಡ್‌ನ ನಿರ್ದೇಶಕರಾಗಿ ಹೀಗೆ ಹಲವಾರು ಸಂಘಸಂಸ್ಥೆಗಳಲ್ಲಿ ಅವರ ಸೇವೆ ಸಂದಿದೆ. ಪ್ರಸ್ತುತ ಬಳಗವು ಅವರಿಗೆ ‘ಗೌರವ ಯಕ್ಷ ರಕ್ಷಾ ಪ್ರಶಸ್ತಿ’ ನೀಡಿ ಸತ್ಕರಿಸುತ್ತಿದೆ.

ಕಲಾ ಜಗತ್ತು ವಿಜಯಕುಮಾರ್ ಶೆಟ್ಟಿ

ಮುಂಬಯಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದ ತೋನ್ಸೆ ವಿಜಯಕುಮಾರ್ ಶೆಟ್ಟಿಯವರು ಉಡುಪಿ ಬಳಿ ಕೋಡ್ಡಬ್ಬು ದೈವ ಹುಟ್ಟಿ ಬೆಳೆದ ಕೋಡಿ ಕಂಡಾಳ ಕ್ಷೇತ್ರದ ಕೊಡಂಗೆ ಬನ್ನಾರ್‌ರ ವಂಶಸ್ಥರು. ಎಳವೆಯಲ್ಲೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ ಮತ್ತು ತೋನ್ಸೆ ಜಯಂತ ಕುಮಾರ್‌ರಿಂದ ಯಕ್ಷಗಾನ ಹಾಗೂ ಗೋಪಾಲಕೃಷ್ಣ ರಾವ್ ಅವರಿಂದ ನಾಟಕರಂಗದ ಎಲ್ಲಾ ವಿಭಾಗಗಳಲ್ಲಿ ಪರಿಣತರಾದರು.

1975 ರಲ್ಲಿ ಅವರು ಬರೆದ ‘ವಸುಂಧರಾ’ ನಾಟಕ ನೂರಾರು ಪ್ರಯೋಗಗಳನ್ನು ಕಂಡಿತ್ತು. 1978 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಮುಂಬಯಿ ಸೇರಿದ ಬಳಿಕ ಅವರ ರಂಗಭೂಮಿ ಚಟುವಟಿಕೆ ವಿಶಾಲ ಹರವನ್ನು ಪಡೆಯಿತು. ‘ಕಲಾ ಜಗತ್ತು ಮುಂಬಯಿ’ ಸಂಸ್ಥೆಯನ್ನು ಹುಟ್ಟುಹಾಕಿ (1979) ಅದರ ಮೂಲಕ ವಿವಿಧ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ವಿಸ್ತರಿಸಿ ನೂರಾರು ಕಲಾವಿದರನ್ನು ಸೃಷ್ಟಿಸಿದ ರಂಗ ಮಾಂತ್ರಿಕರವರು.


ಓರ್ವ ಪ್ರತಿಭಾವಂತ ಸಾಹತಿ-ನಾಟಕಕಾರರಾಗಿ ಅವರು ಬರೆದ ಎಚ್ಚಮ ನಾಯಕ, ನೀರ್ ಕಡ್ತುಂಡ, ಏರ್ ಅಪರಾಧಿ..?, ಶಬ್ದವೇಧಿ, ಬೂತೊದ ಇಲ್ಲ್, ಈ ನಲಿಕೆದಾಯೆಗ್, ಊರ‍್ದ ಮಾರಿ, ಶರಶಯ್ಯೆ, ಗಿಡಪ್ಪುನಕ್ಲುಲಾ ಬಲ್ಪುನಕ್ಲುಲಾ, ಪಗರಿದ ಮಂಚಾವು, ಮೋಕ್ಷ, ಪಾಪೊದ ಪುದೆ, ಕೋಡೆ ಅಂಚ ಇನಿ ಇಂಚ, ಗುಬ್ಬಚ್ಚಿ, ಬದಿ, ಮೋಕೆದ ಜೋಕುಲು, ತೆಡಿಲ್, ಬರ್ಸ, ಬೊಲ್ಲ, ಮಾರಿಗೊಂಜಿ ಕುರಿ, ತೂ ತುಡರ್, ಒವುಲಾವು, ಈ ಬಾಲೆ ನಮ್ಮವು, ಪತ್ತಾದ್ ಪದ್ರಾಡ್, ಅಮ್ಮ ಚಾವಡಿಡ್ ಅಪ್ಪೆ ಸೀತೆ, ಬೋಂಬುಯೇ ಬೋಂಬು, ಜೋಕ್ಲು ದೇವೆರ್, ಕೊರೋನಾ ಒಂಜಿ ಕಣನರ‍್ದ ಕಥೆ ಇತ್ಯಾದಿ ತುಳು-ಕನ್ನಡ ನಾಟಕಗಳು ದೇಶ-ವಿದೇಶಗಳಲ್ಲಿ 3000 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡಿವೆ ಪ್ರಶಸ್ತಿಗಳನ್ನು ಬಾಚಿಕೊಂಡಿವೆ;


‘ಕಲಾಜಗತ್ತು ಚಿಣ್ಣರ ಬಿಂಬ’ ವಿಜಯಕುಮಾರ್ ಶೆಟ್ಟಿಯವರ ಕಲ್ಪನೆಯ ಕೂಸು. ಮುಂಬಯಿಯಲ್ಲಿ ಹುಟ್ಟಿ ಬೆಳೆದ ತುಳುವರ ಮಕ್ಕಳಿಗಾಗಿ ತುಳುಭಾಷೆ-ಸಂಸ್ಕೃತಿಯನ್ನು ಪರಿಚಯಿಸುವ ನೂರಾರು ಕಾರ್ಯಕ್ರಮಗಳನ್ನು ಸಂಯೋಜಿಸಿ, ಹಾಡುಗಳನ್ನು ಬರೆದು ಮಕ್ಕಳಿಂದಲೇ ಪ್ರಸ್ತುತಗೊಳಿಸಿದ್ದು ಅವರ ಹೆಚ್ಚುಗಾರಿಕೆ. ‘ಕಲಾಜಗತ್ತು ಸರಿಗಮಪದನಿ’, ‘ಕಲಾಜಗತ್ತು ಅಮ್ಮ ಚಾವಡಿ’, ‘ಕಲಾಜಗತ್ತು ಸಾಹಿತ್ಯ ಸಮಿತಿ’ ಮುಂತಾದ ಸಂಘ ಸಂಸ್ಥೆಗಳ ಮೂಲಕ ವಿವಿಧ ಸ್ತರದ ಕಾರ್ಯಕ್ರಮಗಳನ್ನು ನೀಡಿದ್ದು ಅವರ ಸೃಜನಶೀಲತೆಗೆ ದ್ಯೋತಕ. 2008 ರಲ್ಲಿ ‘ಬೊಂಬಾಯಿಡ್ ತುಳುನಾಡ್’ ನಿರ್ಮಿಸಿ ಕಂಬಳ, ಬಯಲು ನಾಟಕ, ಬಯಲಾಟ, ಹೊಲ, ಹಟ್ಟಿ, ಗುತ್ತಿನ ಮನೆಗಳನ್ನು ಸಾಕ್ಷಾತ್ಕರಿಸಿದ್ದಾರೆ.

2019 ರಲ್ಲಿ ಕಾಂದಿವಲಿ ಪೋಯಿಂಸರ್ನ ಕ್ರೀಡಾಂಗಣದಲ್ಲಿ ಮತ್ತೊಮ್ಮೆ 3 ದಿನದ ‘ಮುಂಬೈಡ್ ತುಳುನಾಡ್’ ನಿರ್ಮಿಸಿ ಮರಾಠಿ ನೆಲದಲ್ಲಿ ತುಳುನಾಡನ್ನು ಮರು ಸೃಷ್ಟಿಸಿದ್ದು ಅವರ ಭಗೀರಥ ಪ್ರಯತ್ನಕ್ಕೆ ಸಾಕ್ಷಿ. ತಮ್ಮ 60ನೇ ಹುಟ್ಟು ಹಬ್ಬದಲ್ಲಿ 60 ಕೃತಿಗಳ, 60 ಭಿನ್ನ ವಯೋಮಿತಿಯ, 60 ಭಿನ್ನ ವೇಷಭೂಷಣಗಳ ಪಾತ್ರಾಭಿನಯಗಳನ್ನು ನಿರಂತರ 14 ಗಂಟೆಗಳ ಕಾಲ ಎಡೆಬಿಡದೆ ನಿರ್ವಹಿಸಿ ‘ಲಿಮ್ಕಾ ಬುಕ್ ರಾಷ್ಟಿçÃಯ ದಾಖಲೆ’ ಮಾಡಿದ್ದು ವಿಜಯಣ್ಣನ ಕಲಾಜೀವನದ ಮೈಲಿಗಲ್ಲು. ‘ಪತ್ತನಾಜೆ’ ತುಳು ಚಲನಚಿತ್ರದ ಮೂಲಕ ಚಿತ್ರ ಜಗತ್ತನ್ನು ಪ್ರವೇಶಿಸಿ ಯಶಸ್ಸು ಗಳಿಸಿದ್ದು ಅವರ ಇನ್ನೊಂದು ಸಾಧನೆ. ಪ್ರಶಸ್ತಿ ವಿಜೇತ ‘ಪಾಡ್ದನ’ ತುಳು ಸಿನಿಮಾಕ್ಕೆ ಕಥೆ-ಸಂಭಾಷಣೆಯನ್ನು ಅವರೇ ಬರೆದಿದ್ದಾರೆ.


ಸುಮಾರು ನಾಲ್ಕೂವರೆ ದಶಕಗಳ ತಮ್ಮ ಕಲಾ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2008), ಮಹಾರಾಷ್ಟç ಡೋಂಬಿವಿಲ್ಕರ್ ಪ್ರಶಸ್ತಿ, ಉದಯವಾಣ ಪತ್ರಿಕೆಯ ಐಕಾನ್ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದ ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳನ್ನು ವಿಜಯಣ್ಣ ಪಡೆದಿದ್ದಾರೆ. 2000 ಇಸವಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿ ಪೂರ್ಣಾವಧಿ ರಂಗಭೂಮಿಯಲ್ಲೇ ತೊಡಗಿಕೊಂಡ ಅವರು ಬ್ಯಾಂಕಿನಿಂದ ಪೆನ್‌ಶನ್ ಪಡೆದು ಸುಖ ಜೀವನ ನಡೆಸುತ್ತಿರುವ ಅಜಾತಶತ್ರುವೆನಿಸಿದ್ದಾರೆ. ಧರ್ಮಪತ್ನಿ ಲಕ್ಷ್ಮಿ; ಮಕ್ಕಳಾದ ದಿವ್ಯಾ ಮತ್ತು ರಮ್ಯಾ, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಹೊಂದಿರುವ ಅವರದು ಒಂದು ಸಮೃದ್ಧ ಕುಟುಂಬ.


ತೋನ್ಸೆ ವಿಜಯಕುಮಾರ್ ಶೆಟ್ಟರಿಗೆ ಅಜೆಕಾರು ಕಲಾಭಿಮಾನಿ ಬಳಗದಿಂದ ದಿ| ಸಂಪಾ ಎಸ್. ಶೆಟ್ಟಿ ಸ್ಮರಣಾರ್ಥ ಕೊಡ ಮಾಡುವ ‘ಮಾತೃಶ್ರೀ ಯಕ್ಷರಕ್ಷಾ ಪ್ರಶಸ್ತಿ’ಯೊಂದಿಗೆ ‘ರಂಗ ದಿವಾಕರ’ ಬಿರುದು ನೀಡಿ ಸನ್ಮಾನಿಸಲಾಗುವುದು.

ಶಶಿಕಾಂತ ಶೆಟ್ಟಿ ಕಾರ್ಕಳ

ಹೆಸರಾಂತ ಯಕ್ಷಗಾನ ಕಲಾವಿದರಿಗಾಗಿಯೇ ವರ್ಷಂಪ್ರತಿ ನೀಡುವ ‘ಯಕ್ಷ ರಕ್ಷಾ ಪ್ರಶಸ್ತಿ – 2023’ ಕ್ಕೆ ಈ ಬಾರಿ ಆಯ್ಕೆಯಾದವರು ತೆಂಕು-ಬಡಗಿನ ಪ್ರಮುಖ ಸ್ತ್ರೀ ಪಾತ್ರಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ. ಕುರುಹಿನ ಶೆಟ್ಟಿ ಸಮಾಜದ ದಿ| ದರ್ಣಪ್ಪ ಶೆಟ್ಟಿ, ಲಲಿತಾ ದಂಪತಿಯ ಮೂರನೇ ಪುತ್ರನಾಗಿ 1980 ಜನವರಿ 8 ರಂದು ಜನಿಸಿದ ಶಶಿಕಾಂತ ಶೆಟ್ಟಿ ತಮ್ಮ ಪ್ರೌಢ ಶಾಲಾ ವಿದ್ಯಾಭ್ಯಾಸದ ಬಳಿಕ ಯಕ್ಷಗಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಸತೀಶ್ ಎಂ. ಕಾರ್ಕಳ ಅವರಿಂದ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಆಭ್ಯಸಿಸಿ, ಬಡಗುತಿಟ್ಟಿನ ಕುಣಿತಾಭಿನಯಗಳನ್ನು ನೋಡಿಯೇ ಕಲಿತು ಉಭಯ ತಿಟ್ಟುಗಳಲ್ಲೂ ಪರಿಣತಿ ಸಾಧಿಸಿದರು. ಟೈಲರಿಂಗ್ ವೃತ್ತಿ ಮಾಡುತ್ತಾ ತೆಂಕಿನ ಸದಾಶಿವ ಮಹಾಗಣಪತಿ ಸುರತ್ಕಲ್, ಸಸಿಹಿತ್ಲು ಭಗವತಿ, ಬಪ್ಪನಾಡು ದುರ್ಗಾಪರಮೇಶ್ವರಿ, ಕರ್ನಾಟಕ ಮೇಳಗಳಲ್ಲಿ ಹವ್ಯಾಸಿ ವೇಷಧಾರಿಯಾಗಿದ್ದ ಅವರು ಮುಂದೆ ಬಡಗಿನ ಮಂದಾರ್ತಿ (4) ಹಾಗೂ ಸಾಲಿಗ್ರಾಮ (21) ಮೇಳಗಳಲ್ಲಿ ಒಟ್ಟು 25 ವರ್ಷಗಳ ತಿರುಗಾಟವನ್ನು ಪೂರೈಸಿದ್ದಾರೆ. ಅದರಲ್ಲೂ ಒಂದೇ ಟೆಂಟ್‌ಮೇಳದಲ್ಲಿ ನಿರಂತರ ಪ್ರಧಾನ ಸ್ತಿçà ಪಾತ್ರಧಾರಿಯಾಗಿ 21 ವರ್ಷ ಸೇವೆ ಸಲ್ಲಿಸಿದ ದಾಖಲೆ ಅವರದು.


‘ಯಕ್ಷ ಚಂದ್ರಿಕೆ’ ಬಿರುದಾಂಕಿತ ಶಶಿಕಾಂತ ಶೆಟ್ಟಿ ಕಾರ್ಕಳ ಅವರ ಕಲಾಯಾನದಲ್ಲಿ ಛಾಪು ಮೂಡಿಸಿದ ಪಾತ್ರಗಳೆಂದರೆ ದ್ರೌಪದಿ, ಅಂಬೆ, ಜ್ವಾಲೆ, ಸೀತೆ, ಚಂದ್ರಮತಿ, ಗೌರಿ, ಮಹಿಷ ಮರ್ದಿನಿ, ಸತ್ಯಭಾಮೆ, ರುಕ್ಮಿಣ , ಈಶ್ವರಿ, ಶಿವಗಾಮಿ, ಚಂದ್ರಮುಖಿ ಮೊದಲಾದವುಗಳು. ಸ್ತ್ರೀ ಪಾತ್ರದಷ್ಟೇ ಸಮರ್ಥವಾಗಿ ವಿವಿಧ ಧೀರೋದ್ಧಾತ್ತ, ಧೀರ ಲಲಿತ ಪುರುಷ ಪಾತ್ರಗಳನ್ನೂ ಅವರು ನಿರ್ವಹಿಸುತ್ತಾರೆ. ಶಲ್ಯ, ವಾಲಿ, ಸುಗ್ರೀವ, ರಾಮ, ಅಶ್ವತ್ಥಾಮ, ಪರಂಧಾಮದ ಕೃಷ್ಣ ಇತ್ಯಾದಿ ಪ್ರಮುಖವಾದುವುಗಳು. ಪತ್ನಿ ದೇವಿಕಾ, ಮಕ್ಕಳಾದ ಶಿವರಂಜನ್ ಮತ್ತು ಪ್ರಿಯದರ್ಶನ್‌ರೊಂದಿಗೆ ಶಶಿಕಾಂತ್ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

ಸಾಧಕ ಯಕ್ಷ ರಕ್ಷಾ ಪ್ರಶಸ್ತಿಗೆ ಭಾಜನರು :

ವಾಸುದೇವ ಶೆಟ್ಟಿ ಮಾರ್ನಾಡ್

ಜೈನಕಾಶಿ ಮೂಡಬಿದಿರೆಯ ಸಮೀಪದ ‘ಮಾರ್ನಾಡು’ ಎಂಬ ಗ್ರಾಮೀಣ ಪ್ರದೇಶದಲ್ಲಿ ಪೊನ್ನಪ್ಪ ಶೆಟ್ಟಿ – ಸರಸ್ವತಿ ಶೆಟ್ಟಿ ದಂಪತಿಗೆ ಜನಿಸಿದ ವಾಸುದೇವ ಶೆಟ್ಟರಿಗೆ ಕಲಾಸಂಸ್ಕಾರ ಬಾಲ್ಯದಿಂದಲೇ ಒದಗಿ ಬಂತು. ತಾಯ್ನಾಡಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ತನ್ನ ಹನ್ನೆರಡನೇ ವಯಸ್ಸಿಗೆ ಮುಂಬಯಿ ಮಹಾನಗರ ಸೇರಿ ರಾತ್ರಿ ಶಾಲೆಯಲ್ಲಿ ವ್ಯಾಸಂಗವನ್ನು ಮುಂದುವರಿಸುವುದರೊಂದಿಗೆ ದುಡಿಮೆಯ ದಾರಿ ಕಂಡುಕೊಂಡ ವಾಸುದೇವರಿಗೆ ಯಕ್ಷಗಾನ ಹವ್ಯಾಸವಾಯಿತು.


ಸಿದ್ಧಾರ್ಥ ಕಾಲೇಜಿನಲ್ಲಿ ಕಲಿಯುತ್ತಿರುವಾಗ ರಂಗಸ್ಥಳವೇರಿದ ಅವರು ಸ್ವಪ್ರಯತ್ನದಿಂದಲೇ ಯಕ್ಷಗಾನ ಕಲಾವಿದರಾಗಿ ರೂಪುಗೊಂಡರು. ಕಟೀಲು ಮಾಲಿಂಗ ನಾಯ್ಕರು ಅವರಿಗೆ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟ ಗುರುಗಳು. ಮುಂಬಯಿಯ ಶ್ರೀ ಗುರುನಾರಾಯಣ ಮಂಡಳಿಯಲ್ಲಿ ಅವರದು ನಾಲ್ಕು ದಶಕಗಳ ಸಾರ್ಥಕ ಸೇವೆ. ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಕಲಾ ವೇದಿಕೆಯಲ್ಲಿ ಅವರು ಪ್ರಮುಖ ಕಲಾವಿದರು. ಶ್ರೀರಾಮ, ಲಕ್ಷ್ಮಣ ವಿಷ್ಣು, ಕೃಷ್ಣ, ಬ್ರಹ್ಮ, ಪರಶುರಾಮ, ಸುಧನ್ವ, ಅಭಿಮನ್ಯು, ಬಭ್ರುವಾಹನ, ರಕ್ತಬೀಜ, ಮಾರ್ತಾಂಡತೇಜ ಮುಂತಾದ ವಿಭಿನ್ನ ಸ್ವಭಾವದ ಪಾತ್ರಗಳಲ್ಲಿ ಮಿಂಚಿದ್ದಾರೆ.


ವಿವಿಧ ಕಲಾಸಂಘಟನೆಗಳಲ್ಲಿ ಸಕ್ರಿಯರಾಗಿರುವ ವಾಸುದೇವ ಶೆಟ್ಟರು ನಾಟಕ, ಯಕ್ಷಗಾನ, ತಾಳಮದ್ದಳೆ ಕೂಟಗಳ ಮೂಲಕ ಮುಂಬಯಿಯ ಹವ್ಯಾಸಿ ರಂಗಭೂಮಿಯಲ್ಲಿ ಜನಪ್ರಿಯರು. ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಸಂಘಟಿಸಿ ಕಲಾ ಸಂಘಟಕರಾಗಿಯೂ ಪ್ರಸಿದ್ಧರು. 2009 ರಲ್ಲಿ ‘ಕ್ರಿಸ್ಟಲ್ ಹಾಸ್ಪಿಟಾಲಿಟಿ ಸರ್ವಿಸಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ವ್ಯವಹಾರದಲ್ಲೂ ತೊಡಗಿಕೊಂಡಿದ್ದಾರೆ. ಪತ್ನಿ ಮತ್ತು ಈರ್ವರು ಪುತ್ರರನ್ನು ಪಡೆದಿರುವ ಅವರದು ಸಂತೃಪ್ತ ಸಂಸಾರ.

ಕೆಮ್ಮಣ್ಣು ಮುದ್ದು ಅಂಚನ್

ಕಾರ್ಕಳ ತಾಲೂಕಿನ ನಿಟ್ಟೆ ಕೆಮ್ಮಣ್ಣು ಅಂಬೋಡಿಮಾರ್ ಮನೆ ದಿ| ಕಾಡ್ಯ ಪೂಜಾರಿ - ದಿ| ಲಿಂಗಮ್ಮ ದಂಪತಿಗೆ 1956 ಮೇ 15 ರಂದು ಜನಿಸಿದ ಮುದ್ದು ಅಂಚನ್ ಕೆಮ್ಮಣ್ಣು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಕಲಿತು ಮುಂಬಯಿ ಮಹಾನಗರಕ್ಕೆ ಕಾಲಿಟ್ಟರು. ಇಲ್ಲಿನ ಮದರ್ ಇಂಡಿಯಾ ರಾತ್ರಿ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ, ಕನ್ನಡ ಭವನ ಜ್ಯೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. 
ಬಾಲ್ಯದಿಂದಲೇ ಯಕ್ಷಗಾನದತ್ತ ಒಲವಿದ್ದ ಅವರು ಮಜೂರು ಶ್ರೀಪತಿ ಭಟ್ ಅವರ ಮಾರ್ಗದರ್ಶನ ಪಡೆದರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ರಾವಣ, ಶುಂಭ, ರಕ್ತಬೀಜ, ಭೀಮ, ಅರ್ಜುನ, ವಿಕ್ರಮ, ಪೆರುಮಳ, ಚೆನ್ನಯ, ಬೂದಾಬಾರೆ ಮುಂತಾದ ಪಾತ್ರಗಳಲ್ಲಿ ಮಿಂಚಿದರು. ಹಾಸ್ಯ ಪಾತ್ರದಲ್ಲಿ ಅವರಿಗೆ ವಿಶೇಷ ಒಲವು. ಮುಂದೆ ಭಾಗವತಿಕೆ ಅವರ ಹವ್ಯಾಸವಾಯಿತು. ಶ್ರೀ ದತ್ತಾತ್ರೇಯ ಮೂಕಾಂಬಿಕಾ ಯಕ್ಷಗಾನ ಮಂಡಳಿಯಲ್ಲಿ ಸುದೀರ್ಘ 14 ವರ್ಷ ಹಾಗೂ ಶ್ರೀ ಗೀತಾಂಬಿಕಾ ಮಂಡಳಿಯಲ್ಲಿ 3 ವರ್ಷ ಸೇವೆಗೈದು ಪ್ರಸ್ತುತ 12 ವರ್ಷಗಳಿಂದ ಶ್ರೀ ಗುರುನಾರಾಯಣ ಮಂಡಳಿಯಲ್ಲಿ ಪ್ರಧಾನ ಭಾಗವತರಾಗಿದ್ದಾರೆ. 

ತುಳುಕೂಟ ಐರೋಲಿ ತುಳು ಕಲಾವೇದಿಕೆಯ ಗುರುಗಳಾಗಿ ಉದಯೋನ್ಮುಖರಿಗೆ ಯಕ್ಷಗಾನ ತರಬೇತಿ ನೀಡಿದ ಶ್ರೇಯಸ್ಸು ಮುದ್ದು ಅಂಚನ್ ಅವರದು. ಶ್ರೀ ಗುರುನಾರಾಯಣ ಯಕ್ಷ ಕಲಾ ಪ್ರಶಸ್ತಿ – 2022 ಪುರಸ್ಕೃತರಾದ ಅವರು ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟç ಘಟಕ, ತುಳುಕೂಟ ಐರೋಲಿ, ಬಿಲ್ಲವರ ಅಸೋಶಿಯೇಶನ್ ಅಂಧೇರಿ ಮುಂತಾದ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಪತ್ನಿ ಶಾರದ, ಪುತ್ರ ಅನಂತೇಶ್, ಪುತ್ರಿ ಅಪರ್ಣ, ಅಳಿಯ ಸರಿನ್, ಮೊಮ್ಮಗ ಅಂಶ್ ಇವರನ್ನೊಳಗೊಂಡ ಸಂತೃಪ್ತ ಸಂಸಾರ ಮುದ್ದು ಅವರದು.   

ವಿಶ್ವನಾಥ ಅಮೀನ್ ನಿಡ್ಡೋಡಿ

ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿಯಲ್ಲಿ 1977 ಅಕ್ಟೋಬರ್ 18 ರಂದು ಜನಿಸಿದ ವಿಶ್ವನಾಥ ಅಮೀನ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ಬಳಿಕ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪೂರೈಸಿದರು. ಮುಂಬಯಿ ಮಹಾನಗರ ಸೇರಿದ ಅವರು ಪತ್ರಿಕೋದ್ಯಮ ವ್ಲತ್ತಿಯಲ್ಲಿ ತೊಡಗಿಸಿಕೊಂಡು ರಾಜಕೀಯ ವಿಶ್ಲೇಷಣೆ ಮತ್ತು ಅಂಕಣ ಬರಹಗಳ ಮೂಲಕ ಓದುಗರ ಗಮನಸೆಳೆದರು.


ಕಳೆದ 18 ವರ್ಷಗಳಿಂದ ಮುಂಬಯಿಯ ಜನಪ್ರಿಯ ದಿನಪತ್ರಿಕೆ ಕರ್ನಾಟಕ ಮಲ್ಲದಲ್ಲಿ ಪತ್ರಕರ್ತರಾಗಿ ದುಡಿಯುತ್ತಿರುವ ವಿಶ್ವನಾಥ ಅಮೀನ್ ಪ್ರಸ್ತುತ ಅದರ ಮುಖ್ಯ ಉಪಸಂಪಾದಕರಾಗಿದ್ದಾರೆ. ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಒಲವು ಗಳಿಸಿರುವ ಅವರು ವಿವಿಧ ಸಂಘ ಸಂಸ್ಥೆಗಳೊAದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.
ಚೆಂಬೂರಿನ ಶ್ರೀ ಸುಬ್ರಹ್ಮಣ್ಯ ಮಠದ ‘ತುಳುರತ್ನ’ ಪ್ರಶಸ್ತಿ ಪಡೆದಿರುವ ಅಮೀನ್ ಅವರು ಇನ್ನೂ ಹಲವು ಗೌರವ ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ.

ಡಾ| ಮೀನಾಕ್ಷಿ ಶ್ರೀಯಾನ್

ಗುರು ಮಹಾಬಲ ಸುವರ್ಣ ಹೆಜಮಾಡಿ ಮತ್ತು ಸುಶೀಲಾ ಎಂ. ಸುವರ್ಣ ಮುಲ್ಕಿ ಅವರ ಸುಪುತ್ರಿಯಾಗಿ 1974ರಲ್ಲಿ ಜನಿಸಿದ ಗುರು ಡಾ| ಮೀನಾಕ್ಷಿ ರಾಜು ಶ್ರೀಯಾನ್ ಅಂತಾರಾಷ್ಟಿಯ ಖ್ಯಾತಿಯ ಭರತನಾಟ್ಯ ಕಲಾವಿದೆ. ತನ್ನ ತಂದೆ ಸ್ಥಾಪಿಸಿದ ಅರುಣೋದಯ ಕಲಾನಿಕೇತನ ನೃತ್ಯ ಶಾಲೆಯ ಮೂಲಕ ನೂರಾರು ಶಿಷ್ಯರನ್ನು ರೂಪಿಸಿದ ಪ್ರಸಿದ್ಧ ನೃತ್ಯ ನಿರ್ದೇಶಕಿ. ಹಲವು ಐತಿಹಾಸಿಕ ಪೌರಾಣ ಕ ಮತ್ತು ಸಾಮಾಜಿಕ ನೃತ್ಯ ರೂಪಕಗಳನ್ನು ಅವರು ನಿರ್ದೇಶಿಸಿ ಪ್ರಸ್ತುತ ಪಡಿಸಿದ್ದಾರೆ.

ಇಂಗ್ಲೆಂಡ್‌, ಅಮೇರಿಕಾ, ದುಬಾಯಿ ಶ್ರೀಲಂಕಾ, ಕೆನಡಾ, ಪ್ಯಾರಿಸ್, ಜರ್ಮನಿ, ಸಿಂಗಾಪುರ, ಬೆಹರಿನ್, ಕತಾರ್, ಮಾಲ್ಡೀವ್ಸ್, ಮಲೇಶ್ಯಾ ಸೇರಿದಂತೆ ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಕಥಕ್, ಮೋಹಿನಿಯಾಟ್ಟಂ ಮುಂತಾದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಜತೆಗೆ ಜಾನಪದ ಮತ್ತು ಪಾಶ್ಚಾತ್ಯ ಶೈಲಿಯ ನೃತ್ಯಗಳನ್ನೂ ಅವರು ರೂಢಿಸಿಕೊಂಡಿದ್ದಾರೆ.


ನಾಟ್ಯ ಸರಸ್ವತಿ, ಗ್ಲೋಬಲ್ ಮ್ಯಾನ್ ಅವಾರ್ಡ್, ಕರ್ನಾಟಕ ಸ್ವರ್ಣರತ್ನ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ, ಸಮಾಜ ರತ್ನ, ಬಾಬಾ ಸಾಹೇಬ್ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ, ಇಂದಿರಾ ಪ್ರಿಯದರ್ಶಿನಿ ಇತ್ಯಾದಿ ಪ್ರಶಸ್ತಿಗಳನ್ನು ದೇಶ ವಿದೇಶಗಳಲ್ಲಿ ಅವರು ಗಳಿಸಿದ್ದಾರೆ. 2019 ರಲ್ಲಿ ಗಿನ್ನೆಸ್ ಬುಕ್ ಪ್ರವೇಶಿಸಿ ವಿಶ್ವ ದಾಖಲೆ ಮಾಡಿದ್ದಾರೆ. 2022 ರಲ್ಲಿ ತಮ್ಮ ತಂಡದೊAದಿಗೆ ಇಟಲಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಅವರದು. 2023 ಏಪ್ರಿಲ್ 2 ರಂದು ‘ಭಾರತ ವಿಭೂಷಣ’ ಉಪಾಧಿಯಿಂದ ಪುರಸ್ಕೃತರಾದ ಸಾಧಕಿ ಡಾ| ಮೀನಾಕ್ಷಿ ಪ್ರಸ್ತುತ ಹಲವಾರು ಶೋಷಿತ ಹಾಗೂ ಸಂತ್ರಸ್ತ ಮಕ್ಕಳಿಗಾಗಿ ನೃತ್ಯ ಕಾರ್ಯಾಗಾರಗಳನ್ನು ಏರ್ಪಡಿಸಿ ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಪ್ರವೀಣ್ ಆರ್.ಶೆಟ್ಟಿ ಎಕ್ಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಪರಿಸರದ ಎಕ್ಕಾರು ಗ್ರಾಮದಲ್ಲಿ ರಘುನಾಥ ಶೆಟ್ಟಿ – ನಳಿನಿ ದಂಪತಿಗೆ ಜನಿಸಿದ ಪ್ರವೀಣ್ ಆರ್. ಶೆಟ್ಟಿ ಯಕ್ಷಗಾನದ ಸರ್ವಾಂಗಗಳಲ್ಲೂ ಪಳಗಿದ ಪ್ರತಿಭಾವಂತ ಕಲಾವಿದ. ಕಟೀಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಅವರು ಮುಖ್ಯ ಶಿಕ್ಷಕರಾಗಿದ್ದ ಪುಚ್ಚಕೆರೆ ಕೃಷ್ಣ ಭಟ್ಟರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಕಲಿತು ಶ್ರೀ ಭ್ರಮರಾಂಬಿಕೆಯ ಸನ್ನಿಧಿಯಲ್ಲಿ ಗೆಜ್ಜೆಕಟ್ಟಿದ್ದರು. ಕೊರ್ಗಿ ವೆಂಕಟೇಶ ಉಪಾಧ್ಯಾಯರಿಂದ ಅರ್ಥಗಾರಿಕೆ ಮತ್ತು ಕಟೀಲು ಮುರಳೀಧರ ಭಟ್ಟರಿಂದ ಅಭಿನಯ, ಬಣ್ಣಗಾರಿಕೆ, ಚೆಂಡೆ-ಮದ್ದಳೆ ವಾದನಗಳಲ್ಲಿ ಪರಿಣತಿ ಗಳಿಸಿದರು.


ಬದುಕಿನ ದಾರಿಯನ್ನರಸಿ 1985 ರಲ್ಲಿ ಮುಂಬಯಿ ಸೇರಿದ ಪ್ರವೀಣ್ ಶೆಟ್ಟರು ವಾಣಿಜ್ಯ ಪದವೀಧರರಾಗಿ ಖಾಸಗಿ ಕಂಪೆನಿ ಯೊಂದರಲ್ಲಿ ಉದ್ಯೋಗ ಪಡೆದರು. ಹಾಗೆಯೇ ಶ್ರೀ ಗುರುನಾರಾಯಣ ಮಂಡಳಿಯನ್ನು ಸೇರಿ ತಮ್ಮ ಯಕ್ಷಗಾನದ ಹವ್ಯಾಸವನ್ನು ಮುಂದುವರಿಸಿದರು. ಸ್ತ್ರೀ ವೇಷ, ಪುಂಡುವೇಷ, ಹಾಸ್ಯ, ಬಣ್ಣ, ರಾಜವೇಷಗಳನ್ನು ಸಮರ್ಥವಾಗಿ ನಿರ್ವಹಿಸಿ ಖ್ಯಾತರಾದರು. ಇದರೊಂದಿಗೆ ಚೆಂಡೆ, ಮದ್ದಳೆ, ಚಕ್ರತಾಳಗಳಲ್ಲೂ ಪ್ರವೀಣರೆನಿಸಿದರು. ಏತನ್ಮಧ್ಯೆ ಊರಿಗೆ ಹೋಗಿ ಕಟೀಲು, ಬಪ್ಪನಾಡು, ಸುಂಕದಕಟ್ಟೆ, ಮಂಡ್ಕೂರು ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಸೇವೆಗೈದರು.
ಮುಂಬಯಿ ಶ್ರೀ ಗೀತಾಂಬಿಕಾ ಅಸಲ್ಪ, ಶ್ರೀ ದುರ್ಗಾಪರಮೇಶ್ವರಿ ಸಾಕಿನಾಕ, ಬಂಟ ಯಕ್ಷಕಲಾ ವೇದಿಕೆ, ಅಜೆಕಾರು ಕಲಾಭಿಮಾನಿ ಬಳಗ, ಶ್ರೀ ಭ್ರಾಮರಿ ಯಕ್ಷಕಲಾನಿಲಯ, ಯಕ್ಷಮಿತ್ರ ಬಳಗ ಮೀರಾರೋಡ್, ಜನಪ್ರಿಯ ಯಕ್ಷಗಾನ ಮಂಡಳಿ ಮುಂತಾದವುಗಳಲ್ಲಿ ಸೇವೆ ಸಲ್ಲಿಸಿದರು. ಶನಿಗ್ರಂಥ ಪಾರಾಯಣದಲ್ಲೂ ಅವರು ಜನಪ್ರಿಯರು. ಕಲಾಜಗತ್ತು ಚಿಣ್ಣರ ಬಿಂಬದಲ್ಲಿ ಚೆಂಡೆ-ಮದ್ದಳೆ ವಾದಕರಾಗಿ ಸಹಕರಿಸಿದರು. ಅವರ ಕಲಾ ಸೇವೆಯನ್ನು ಗುರುತಿಸಿ ಚತುರ ಕಲಾ ಪ್ರಶಸ್ತಿ, ಇನ್ನ ಕುರ್ಕಿಲಬೆಟ್ಟು ಬಾಳಿಕೆ ದಿ| ವಾಸು ಬಾಬು ಶೆಟ್ಟಿ ಪ್ರಶಸ್ತಿ-2018 ಮತ್ತಿತರ ಗೌರವ ಸಮ್ಮಾನಗಳು ಲಭಿಸಿವೆ.
ಪ್ರಸ್ತುತ ಬಾಬಾಜಿ ಶಿವರಾಯ ಶಿಪ್ಪ್ಟಿಂಗ್ ಕಂಪೆನಿಯಲ್ಲಿ ಉದ್ಯೋಗಸ್ಥರಾಗಿರುವ ಪ್ರವೀಣ್ ಶೆಟ್ಟರು ಪತ್ನಿ ಶರ್ಮಿಳಾ ಶೆಟ್ಟಿ ಮತ್ತು ಪುತ್ರ ದೇವರಾಜ್‌ರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.

ಹೇಮಲತಾ ದಿನೇಶ್ ಶೆಟ್ಟಿಯವರಿಗೆ ‘ಯಕ್ಷ ನಿಧಿ’:

ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ಪ್ರಾರಂಭವಾದ ದಿನದಿಂದಲೂ ಬಳಗದ ಜೊತೆಯಲ್ಲಿದ್ದು ಓರ್ವ ಸಕ್ರಿಯ ಕಾರ್ಯಕರ್ತನಾಗಿ, ಸಂಚಾಲಕರೊAದಿಗೆ ಸಹಾಯಕರಾಗಿದ್ದು ವರ್ಷದ ಹಿಂದೆ (16.11.2022) ನಮ್ಮನ್ನಗಲಿರುವ ದಿನೇಶ್ ಶೆಟ್ಟಿ ವಿಕ್ರೋಲಿ ಯಕ್ಷಗಾನದ ಹಾಸ್ಯ ಹಾಗೂ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಊರಿನ ಕಲಾವಿದರು ಮುಂಬಯಿಗೆ ಬಂದಾಗ ಅವರ ಬೇಕು ಬೇಡಗಳಿಗೆ ಸ್ಪಂದಿಸಿ ತನು-ಮನಗಳ ಸಹಕಾರ ನೀಡುತ್ತಿದ್ದ ಹೃದಯವಂತರು. ಅವರ ಸೇವೆಯನ್ನು ಗಮನಿಸಿ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಅವರ ಧರ್ಮಪತ್ನಿ ಶ್ರೀಮತಿ ಹೇಮಲತಾ ದಿನೇಶ್ ಶೆಟ್ಟಿಯವರಿಗೆ ‘ಅಜೆಕಾರು ಯಕ್ಷ ಸಹಾಯ ನಿಧಿ’ ನೀಡಿ ಪುರಸ್ಕರಿಸಲಾಗುತ್ತಿದೆ.


ಕಾರ್ಕಳ ತಾಲೂಕು ಮೀಯಾರು ಗ್ರಾಮದ ಕೊಳಕೆಬೆಟ್ಟು ಮನೆಯಲ್ಲಿ ಸುಂದರ ಶೆಟ್ಟಿ ಮತ್ತು ವನಜ ಶೆಟ್ಟಿ ದಂಪತಿಗೆ 1971 ಮಾರ್ಚ್ 16 ರಂದು ಜನಿಸಿರುವ ಹೇಮಲತಾ ಅವರು 2002 ರಲ್ಲಿ ದಿನೇಶ್ ಶೆಟ್ಟಿಯವರ ಕೈ ಹಿಡಿದ ಸದ್ಗೃಹಿಣ . ಇವರಿಗೆ ಈರ್ವರು ಹೆಣ್ಮಕ್ಕಳಿದ್ದಾರೆ. ಹಿರಿಯಾಕೆ ಸ್ವಾತಿ ಶೆಟ್ಟಿ ಬಿ.ಕಾಂ. ಪದವೀಧರೆ, ಕಿರಿಯ ಪುತ್ರಿ ಶ್ರುತಿ ಶೆಟ್ಟಿ ಬಿ.ಕಾಂ. ಓದುತ್ತಿದ್ದಾರೆ. ಬಡ ಮಧ್ಯಮ ವರ್ಗದ ಈ ಕುಟುಂಬ ಪ್ರಸ್ತುತ ಊರಿನಲ್ಲಿ ಸಂಸ್ಕಾರಯುತ ಜೀವನ ನಡೆಸುತ್ತಿದ್ದಾರೆ.

ಅಜೆಕಾರು ಬಾಲಕೃಷ್ಣ ಶೆಟ್ಟಿ
ಕಳೆದ ಎರಡು ದಶಕಗಳಿಂದ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ತತ್ವವನ್ನನುಸರಿಸಿ ಅಜೆಕಾರು ಬಾಲಕೃಷ್ಣ ಶೆಟ್ಟರು ಮುಂಬಯಿಯ ದಾನಿಗಳಿಂದ ಪಡೆದ ಹಣವನ್ನು ಕಲಾವಿದರ ಶ್ರೇಯಸ್ಸಿಗಾಗಿ, ಗ್ರಂಥ ಪ್ರಕಟಣೆ ಮತ್ತು ಯಕ್ಷಗಾನ ಸಂಬಂಧಿ ಚಟುವಟಿಕೆಗಳಿಗಾಗಿ ವಿನಿಯೋಗಿಸುತ್ತಿದ್ದಾರೆ. ಈ ಬಾರಿಯೂ ಗೌರವ ಯಕ್ಷರಕ್ಷಾ ಪ್ರಶಸ್ತಿಯನ್ನು  ಹೊರತು ಪಡಿಸಿ ಇತರ ಪ್ರಶಸ್ತಿಗಳಿಗಾಗಿ ಸುಮಾರು 2 ಲಕ್ಷದಷ್ಟು ಮೊತ್ತವನ್ನು ಮೀಸಲಿರಿಸಿದ್ದಾರೆ. ಅದರಲ್ಲಿ ಯಕ್ಷರಕ್ಷಾ ಪ್ರಶಸ್ತಿ ಮತ್ತು ಯಕ್ಷ ಸಹಾಯ ನಿಧಿಗಾಗಿ ತಲಾ ರೂ.50,000/-, ಮಾತೃಶ್ರೀ ಪ್ರಶಸ್ತಿಗೆ ರೂ.15,000/-  ಮತ್ತು ಉಳಿದ ಸಾಧಕ ಯಕ್ಷರಕ್ಷಾ ಪ್ರಶಸ್ತಿಗಳಿಗಾಗಿ ತಲಾ ರೂ.10,000/- ನಗದು ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸಪ್ಟೆಂಬರ್ 10 ರಂದು ಮುಂಬಯಿ ಕುರ್ಲಾ ಬಂಟರ ಭವನದಲ್ಲಿ ಮಹಾನಗರದ ಗಣ್ಯ-ಮಾನ್ಯರ ಉಪಸ್ಥಿತಿಯೊಂದಿಗೆ ಅದ್ದೂರಿಯಾಗಿ ಜರಗಲಿದೆ. 
ಬರಹ: ಭಾಸ್ಕರ ರೈ ಕುಕ್ಕುವಳ್ಳಿ

ಭಾಸ್ಕರ್ ರೈ ಕುಕ್ಕುವಳ್ಳಿ, ‘ವಿದ್ಯಾ’, ಕದ್ರಿ ಕಂಬಳ ರಸ್ತೆ, ಬಿಜೈ, ಮಂಗಳೂರು – 575004
ಮೊಬೈಲ್‌. : 9449016616 ಇಮೇಲ್ : [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments