Friday, September 20, 2024
Homeಸುದ್ದಿಪ್ರಾತಃಸ್ಮರಣೀಯ ಖಳನಾಯಕ‌ : ವಿಠೋಬ ನಾಯಕ ವಂದಿಗೆ

ಪ್ರಾತಃಸ್ಮರಣೀಯ ಖಳನಾಯಕ‌ : ವಿಠೋಬ ನಾಯಕ ವಂದಿಗೆ

ಉತ್ತರ ಕನ್ನಡ ಜಿಲ್ಲೆಯ ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಮೆರೆದು – ಮಡಿದು ಮರೆಯಾದರೂ ಕಲೋಪಾಸಕರ ಅಂತರಂಗದಲ್ಲಿ ಚಿರಂಜೀವಿ ಸ್ಥಾನವನ್ನು ಶಾಶ್ವತವಾಗಿ ಪಡೆದುಕೊಂಡ ಕೆಲವೇ ಕೆಲವು ಪಾತ್ರಧಾರಿಗಳಲ್ಲಿ ಅಂಕೋಲಾದ ವಂದಿಗೆಯ ಸುಸಂಸ್ಕೃತ ರೈತಾಪಿ ಕುಟುಂಬದ ವಿಠೋಬ ಹಮ್ಮಣ್ಮ ನಾಯಕ ಒಬ್ಬರು.

ತನ್ನ ದ್ವಾದಶ ಪ್ರಾಯದಲ್ಲಿ ವಾಲಿಮೋಕ್ಷದ ಅಂಗದನ ಪಾತ್ರದೊಂದಿಗೆ ಯಕ್ಷಲೋಕಕ್ಕೆ ಚರಣಸ್ಪರ್ಶ ಮಾಡಿ ಇಂದಿಗೂ ಪ್ರಾತಃಸ್ಮರಣೀಯರಾಗಿರುವುದು ಅವರಿಗಿದ್ದ ಕಲಾಶ್ರದ್ಧೆಗೆ ಹಿಡಿದಿರುವ ಕಲಶಗನ್ನಡಿ. ತಮ್ಮೂರಿನಲ್ಲಿ ಹಿರಿಯರು ಮಾಡುವ ಬಯಲಾಟ ಹಾಗು ಮೇಳದವರ ಆಟಗಳನ್ನು ನೋಡುತ್ತಾ ಯಕ್ಷಗಾನದಲ್ಲಿ ಅತ್ಯುತ್ಸಾಹವನ್ನು ಬೆಳೆಸಿಕೊಂಡವರು. ಬಯಲಾಟದಲ್ಲೊಮ್ಮೆ ಶಬರನ ಪಾತ್ರವನ್ನು ಮಾಡಿ ಗಳಿಸಿದ ಜನಪ್ರೀಯತೆ ಅವರನ್ನು ಇನ್ನಷ್ಟು ಹುರಿದುಂಬಿಸಿತು.

‘ಹೈಸ್ಕೂಲ್ ಶಿಕ್ಷಕನಾಗಿದ್ದ ಹಿರಿಯಣ್ಣ ಅಕಾಲಿಕ ಮರಣ ಹೊಂದಿದ ಕಾರಣ ಪಿತ್ರಾರ್ಜಿತ ವ್ಯವಸಾಯ ಭೂಮಿಯನ್ನು ನಡೆಸುವ ಸಲುವಾಗಿ ತನ್ನ ಶೈಕ್ಷಣಿಕ ಜೀವನವನ್ನು ಆರನೇ ತರಗತಿಗೆ ಮೊಟಕುಗೊಳಿಸಿದೆ’ ಎಂದು ನೋವಿನಿಂದ ಹೇಳಿರುವ ವಿಚಾರವನ್ನು ಡಾ. ಆರ್. ಜಿ. ಗುಂದಿಯವರು ತಮ್ಮ “ರಂಗಸ್ಥಳದೊಳಗೊಬ್ಬ ರೌದ್ರಾವತಾರಿ” ಎನ್ನುವ ಲೇಖನದಲ್ಲಿ ಬರೆದಿದ್ದಾರೆ.

ವಿಠೋಬ ನಾಯಕರು, ತಮ್ಮ ಸಮಕಾಲೀನ ವಿದ್ಯಾವಂತ ಕಲಾವಿದರಾದ ವಿ. ಜೇ. ನಾಯಕ ಹಾಗು ಎಂ. ಎಂ. ನಾಯಕರಂತಹ ಪ್ರಜ್ಞಾವಂತ ಮುತ್ಸದ್ದಿಗಳಿಂದ ರಾಮಾಯಣ, ಮಹಾಭಾರತ ಮೊದಲಾದ ಪೌರಾಣಿಕ ಪುಸ್ತಕಗಳನ್ನು ಪಡೆದು ಓದಿ ಮಸ್ತಕದಲ್ಲೊಂದು ಪ್ರತಿಯನ್ನು ಇಟ್ಟುಕೊಂಡವರು. ಕಲಾವಿದನಿಗಿರಬೇಕಾದ ವಿಧೇಯತೆ, ಹಸಿವು, ಅರ್ಪಣಾ ಮನೋಭಾವ, ಸ್ವರೂಪ ಜ್ಞಾನ, ಭಾಷೆಯ ಮೇಲೆ ಪ್ರಭುತ್ವ, ಪ್ರತಿಭೆ, ಸ್ವರ ಸಾಮರ್ಥ್ಯ ಹಾಗು ಅಭಿನಯವೆಂಬ ಅಷ್ಠಾಂಗಗಳನ್ನು ಮೈಗೂಡಿಸಿಕೊಂಡ ಅದ್ಬುತ ಕಲಾವಿದರು. ಯಾವ ಶೃುತಿಗೂ ಹೊಂದುವ ಕಂಚಿನ ಕಂಠ ಮತ್ತು ಸದೃಢ ಮೈಕಟ್ಟು ವಿಠೋಬ ನಾಯಕರಿಗೆ ದೈವಿದತ್ತ ಕೊಡುಗೆಯೇ ಸರಿ.

ಇವರ ಭೀಮ, ಘಟೋತ್ಕಚ, ಶನಿ, ಯಮ, ದುಷ್ಟಬುದ್ಧಿ, ಕಾಲಜಂಗ, ರಾವಣ, ಜಮದಗ್ನಿ ಮುಂತಾದ ಖಳ ನಾಯಕನ ಪಾತ್ರಗಳು ‘ನ ಭೂತೋ, ನ ಭವಿಷ್ಯತಿ’. ಅನುಕರಣೆಗೆ ಎಟುಕದ, ಊಹೆಗೂ ಮೀರಿದ ಪಾತ್ರ ನಿರ್ವಹಣೆ. ಒಮ್ಮೆ ಇವರು ಹಿರಣ್ಯಕಶಿಪು ಪಾತ್ರವನ್ನು ಮಾಡಿದಾಗ ರಂಗದಲ್ಲಿ ಇವರು ವೀರಾವೇಶದಿಂದ ಮೆರೆಯುವ ಆರ್ಭಟಕ್ಕೆ ನರಸಿಂಹನ ಪಾತ್ರಧಾರಿ ರಂಗಪ್ರವೇಶ ಮಾಡಲೂ ಹೆದರಿದ್ದ ಎಂದು ಅಂದಿನ ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಕೇಳಿದ್ದೇನೆ. ಇದು ವಿಠೋಬ ನಾಯಕರ ಕಲಾನೈಪುಣ್ಯತೆಗೆ ಪುಷ್ಠಿ ನೀಡುವ ಸಂಗತಿ.

2011ರ ನವೆಂಬರ್ ನಲ್ಲಿ ಶೀಯುತರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ವಿಶೇಷವೆಂದರೆ ಬಡಗು ತಿಟ್ಟಿನ ಯಕ್ಷರಂಗದ ಹಾಸ್ಯಬ್ರಹ್ಮ ಎನಿಸಿಕೊಂಡ ಕುಂಜಾಲು ರಾಮಕೃಷ್ಣ ಅವರಿಗೂ ಅದೇ ವರ್ಷ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೇ ಅಂಕೋಲೆಯ ನುಡಿಜೇನು ಪತ್ರಿಕೆ, ವೆಂಕಟರಮಣ ನಾಯಕ ಹಿರೆಗುತ್ತಿ ಪ್ರತಿಷ್ಠಾನ, ನೀಲಕೋಡ ಯಕ್ಷರಾತ್ರಿ ಅಂಕೋಲಾ ಮತ್ತು ಹಲವಾರು ಊರಿನ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

ವಿಠೋಬ ನಾಯಕ ವಂದಿಗೆ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಇವರೊಂದು ವಿಶಿಷ್ಟ ಶಕ್ತಿ. ಸುದೀರ್ಘ 87 ವರ್ಷ 8 ತಿಂಗಳು 10 ದಿನದ ಇಹಲೋಕ ಯಾತ್ರೆಯನ್ನು ಮುಗಿಸಿ, ಪರಲೋಕವನ್ನು ಪ್ರವೇಶಿಸಿದರೂ ಸಹ ‘ಅಳಿವುದು ಕಾಯ, ಉಳಿವುದು ಕೀರ್ತಿ’ ಎನ್ನುವ ಮಾತಿಗೆ ನಿದರ್ಶನಪ್ರಾಯವಾಗಿ ಶಾಶ್ವತವಾಗಿ ಉಳಿದವರು.

ಇಂತಹ ಮಹಾನ್ ಚೇತನಕ್ಕೆ ಚಿರಶಾಂತಿ ದೊರೆತು, ಅವರ ಕುಟುಂಬಕ್ಕೆ ಮತ್ತು ಆತ್ಮೀಯ ವೃಂದಕ್ಕೆ ಶ್ರೀಯುತರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸುಜನ್ ನಾಯಕ, ಅಗಸೂರು.

ಲೇಖಕ: ಸುಜನ್ ನಾಯಕ, ಅಗಸೂರು.
6364260985

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments