ಯಕ್ಷರಂಗದ ಭೀಷ್ಮ, ತೆಂಕುತಿಟ್ಟಿನ ಮೇರು ಭಾಗವತ, ಬಲಿಪ ಶೈಲಿಯ ಅದ್ವಿತೀಯ ಕಲಾವಿದ, ಪರಂಪರೆಯ ಕೊಂಡಿ ಬಲಿಪ ನಾರಾಯಣ ಭಾಗವತರು ನಿಧನರಾಗಿದ್ದಾರೆ. ಇಂದು ಸಂಜೆ 6.30ಕ್ಕೆ ಸರಿಯಾಗಿ ಅವರು ಮೂಡಬಿದಿರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಮಾಹಿತಿಯಿದೆ. ಯಕ್ಷಗಾನದ ಭಾಗವತಿಕೆಯ ಬಗ್ಗೆ ಕರಾರುವಾಕ್ಕಾಗಿ ಹೀಗೆಯೇ ಎಂದು ಹೇಳಬಲ್ಲ ಕಲಾವಿದರನ್ನು ನಾವಿಂದು ಕಳೆದುಕೊಂಡಿದ್ದೇವೆ.
ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹಾಗೂ ಬಲಿಪ ಮನೆತನದ ಅಭಿಮಾನಿಗಳು ಹಾಗೂ ಯಕ್ಷಗಾನದ ಅಭಿಮಾನಿಗಳನ್ನು ಅವರಿಂದು ಅಗಲಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ. ಬಲಿಪ ನಾರಾಯಣ ಭಾಗವತರ ನಿಧನದಿಂದ ತೆಂಕುತಿಟ್ಟು ಭಾಗವತಿಕೆಯ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಮಧ್ಯರಾತ್ರಿ 1.30 ಘಂಟೆಗೆ ಸರಿಯಾಗಿ ಅವರ ಸ್ವಗೃಹದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಬಲಿಪ ನಾರಾಯಣ ಭಾಗವತರು ನಡೆದುಬಂದ ಹಾದಿ:
ಹೆಸರು: ಬಲಿಪ ನಾರಾಯಣ ಭಾಗವತರು
ಪತ್ನಿ: ದಿ। ಜಯಲಕ್ಷ್ಮಿ
ಜನನ: 19.03.1938
ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ
ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ
ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ
ಅನುಭವ: 55 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ.
ಮಕ್ಕಳು: ನಾಲ್ಕು ಜನ ಗಂಡುಮಕ್ಕಳು (ಬಲಿಪ ಮಾಧವ ಭಟ್ಟ, ಕಟೀಲು ಮೇಳದ ಭಾಗವತ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಕಟೀಲು ಮೇಳದಲ್ಲಿ ಭಾಗವತರಾಗಿದ್ದ ದಿ| ಬಲಿಪ ಪ್ರಸಾದ ಭಟ್ಟ)
ರಚಿಸಿದ ಪ್ರಸಂಗಗಳು: 35ಕ್ಕೂ ಮಿಕ್ಕಿ
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಸುಮಾರು 200 ಕ್ಕೂ ಹೆಚ್ಚು. ಅದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ 2010, ಆಳ್ವಾಸ್ ನುಡಿಸಿರಿ 2010, ಕರ್ನಾಟಕ ಸಂಘ ದುಬೈ 1988, ಶ್ರೀ ಎಡನೀರು ಮಠ 1994, ಕರಾವಳಿ ಯಕ್ಷಗಾನ ಸಮ್ಮೇಳನ 2000, ಕರ್ನಾಟಕ ಜನಪದ ಪರಿಷತ್ತು ಬೆಂಗಳೂರು 2002, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು 2004, ಕೇರಳ ಸಂಗೀತ ನಾಟಕ ಅಕಾಡೆಮಿ ತಿರುವನಂತಪುರ 2007, ಕರ್ನಾಟಕ ಜಾನಪದ ಕಲಾ ಅಧ್ಯಯನ ಕೇಂದ್ರ ಉಡುಪಿ 2008, ಕಲ್ಕೂರ ಪ್ರತಿಷ್ಠಾನ 2015, ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಇನ್ನೂ ಹಲವಾರು.
ಯಕ್ಷಗಾನ ಕಂಡ ಮಹಾನ್ ಕಲಾವಿದ ಬಲಿಪ ನಾರಾಯಣ ಭಾಗವತರಿಗೆ ಎಲ್ಲಾ ಯಕ್ಷಗಾನ ಅಭಿಮಾನಿಗಳ ಪರವಾಗಿ ಗೌರವಪೂರ್ವಕ ಶ್ರದ್ಧಾಂಜಲಿ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು