Monday, September 30, 2024
Homeಸುದ್ದಿಅಂಬಲಪಾಡಿ ಯಕ್ಷಗಾನ ಮಂಡಳಿಯ 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಅಂಬಲಪಾಡಿ ಯಕ್ಷಗಾನ ಮಂಡಳಿಯ 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ : ಶ್ರೀ ಲಕ್ಷ್ಮೀಜನಾರ್ದನಯಕ್ಷಗಾನ ಕಲಾಮಂಡಳಿ (ರಿ.) ಅಂಬಲಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಅಂಬಲಪಾಡಿ ಕ೦ಬ್ಳಕಟ್ಟ ಶ್ರೀ ಜನಾರ್ದನ ಮಂಟಪದಲ್ಲಿ 15-01-2023 ರಂದು 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು.

ಈ ಸಂದರ್ಭದಲ್ಲಿ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ನಿಟ್ಟೂರು ಶೀನಪ್ಪ ಸುವರ್ಣ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೋಟ ರಾಜಶೇಖರ್ ಹಂದೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಆರ್ಗೋಡು ಮೋಹನ್‌ದಾಸ್ ಶೆಣೈ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಾಯಕ ನಿರ್ದೇಶಕ ಹಾಗೂ ಖ್ಯಾತ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾಯರ ಪುತ್ರ ಶ್ರೀ ಶ್ರೀಧರ ಕೆ.ರಾವ್‌ ಅವರು ಮಾತನಾಡಿ ಅಂಬಲಪಾಡಿ ಮಂಡಳಿಯು ಕಳೆದ 65 ವರ್ಷಗಳಿಂದ ಸಾಂಪ್ರದಾಯಿಕ ಯಕ್ಷಗಾನದ ಉಳಿವು-ಬೆಳವಣಿಗೆಗಾಗಿ ತನ್ನನ್ನು ತೊಡಗಿಸಿಕೊಂಡ ಹೆಮ್ಮೆಯ ಸಂಸ್ಥೆಯಾಗಿದೆ. ಉಳಿದ ಹವ್ಯಾಸಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಮಾದರಿಯಾಗಿದೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭ್ಯಾಗತರಾದ ಡಾ.ರಾಜೇಶ್ ನಾವುಡ ಜಿ. ವಿ.ಮತ್ತು ಶ್ರೀ ಭವ್ಯಕುಮಾರ್ ಶುಭಾಶಂಸನೆಗೈದರು.ಮ೦ಡಳಿಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಕುಮಾರ್ ವರದಿ ವಾಚಿಸಿದರು.

ಸಮ್ಮಾನಿತರ ಮತ್ತು ಅತಿಥಿಗಳ ಪರಿಚಯವನ್ನು ಮಂಡಳಿಯ ಹಿರಿಯ ಸದಸ್ಯರಾದ ಮುರಲಿ ಕಡೆಕಾರ್ ಮಾಡಿದರು. ಕೋಶಾಧಿಕಾರಿ ಎ.ನಟರಾಜ ಉಪಾಧ್ಯಾಯ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಎ.ಪ್ರವೀಣ್‌ ಉಪಾಧ್ಯ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಮಾಯಾಪುರಿ-ವೀರಮಣಿ ಕಾಳಗ ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments