Saturday, September 21, 2024
Homeಸುದ್ದಿಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ - "ಸಮಾಜ ಸೇವೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು": ಸೀತಾರಾಮ...

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವಾರ್ಷಿಕೋತ್ಸವ – “ಸಮಾಜ ಸೇವೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು”: ಸೀತಾರಾಮ ಕೆದಿಲಾಯ

ನದಿಯೊಂದು ತನ್ನ ಹರಿವಿನುದ್ದಕ್ಕೂ ತಾನಾಗಿಯೇ ದಾರಿಯನ್ನು ಮಾಡಿಕೊಳ್ಳುತ್ತಾ ಅಡೆತಡೆಗಳನ್ನು ನಿವಾರಿಸಿಕೊಂಡು ಪರೋಪಕಾರವನ್ನು ಮಾಡುತ್ತಾ ತನ್ನ ಗುರಿಯನ್ನು ಸೇರುತ್ತದೆ. ಇದರಿಂದಾಗಿ ನದಿ ಪೂಜಾ ಯೋಗ್ಯತೆಯನ್ನು ಪಡೆಯುತ್ತದೆ. ಈ  ಆದರ್ಶದಂತೆ  ಮನುಷ್ಯನ ಜೀವನ ಕೂಡ ಅರ್ಥಪೂರ್ಣವಾಗಿ ನಡೆದರೆ ಸುಸ್ಥಿರ ಸಮಾಜದ ನಿರ್ಮಾಣವಾಗುತ್ತದೆ ಎಂದು ಹಿರಿಯ ಸಾಧಕ ಸೀತಾರಾಮ ಕೆದಿಲಾಯ ತಿಳಿಸಿದರು.

ಬಂಟ್ವಾಳ ರಥಬೀದಿಯ ಸ್ವರ್ಣಸಭಾದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟವಾಳ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸದಲ್ಲಿ  ಅವರು ಮಾತನಾಡಿದರು.

ಮುಖ್ಯ ಅತಿಥಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕಾರಾಮ ಪೂಜಾರಿ ಮಾತನಾಡಿ ಕೌಟುಂಬಿಕ ಜೀವನದ ಸಂಬಂಧಗಳು ಹದಗೆಟ್ಟಿರುವ ಈ ಸಂದರ್ಭದಲ್ಲಿ ಯುವ ಜನಾಂಗಕ್ಕೆ ಹಿರಿಯರ ಅನುಭವಗಳು  ಮಾರ್ಗದರ್ಶನವಾಗುವಂತೆ  ಸೂಕ್ತವಾದ ವೇದಿಕೆ ಅಲ್ಲಲ್ಲಿ ರೂಪುಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಬಂಟ್ವಾಳ ವಿ. ಎನ್. ಆರ್ ಗೋಲ್ಡ್ ಸಂಸ್ಥೆಯ ಮಾಲಕರಾದ ನಾಗೇಂದ್ರ ವಿ. ಬಾಳಿಗ ಮಾತನಾಡಿ ಸಮಾಜದಿಂದ ಪಡೆದ ಋಣವನ್ನು ಸಲ್ಲಿಸುವ ಹೊಣೆಗಾರಿಕೆಯಿಂದ ಸಮಾಜ ಸೇವೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಬಂಟ್ವಾಳದ ಹಿರಿಯ ವೈದ್ಯ ಡಾ .ವಸಂತ ಬಾಳಿಗ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಠಾನದ ಸದಸ್ಯರಾದ ಜಯಾನಂದ ಪೆರಾಜೆ ಅಭಿನಂದನಾ ನುಡಿಗಳನ್ನಾಡಿದರು. ಟ್ರಸ್ಟಿ ಜಯರಾಮ ಪೂಜಾರಿ ಬಂಟ್ವಾಳ ಮಾನಪತ್ರ ವಾಚಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ವಸಂತ ಬಾಳಿಗ ಮನುಕುಲದ ಸೇವೆಗೆ ಎಲ್ಲರೂ ಅಳಿಲಸೇವೆಯಂತೆ ಕೈಜೋಡಿಸಬೇಕೆಂದು ತಿಳಿಸಿದರು.

ಆರಂಭದಲ್ಲಿ ಶ್ರೀಮತಿ ರಮಣಿ ವಿ .ಬಾಳಿಗ ಬಂಟ್ವಾಳ ದೀಪ ಪ್ರಜ್ವಲನೆಯ ಮೂಲಕ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಸಂಚಾಲಕ ನಾರ್ಯ ಶ್ರೀನಿವಾಸ ಶೆಟ್ಟಿ ಮಾತನಾಡಿ ಪ್ರತಿಷ್ಠಾನದ ಘಟಕಗಳಲ್ಲಿ ಆಯಾ ಪರಿಸರದ ಹಿರಿಯರು ಸೇರಿಕೊಳ್ಳುವ ಮೂಲಕ ಸಂಘಟನೆಯನ್ನು ಬಲಿಷ್ಠ ಗೊಳಿಸಬೇಕೆಂದು ತಿಳಿಸಿದರು.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು ಸಹಯೋಗದಲ್ಲಿ ಶ್ರೀಮತಿ ಉಷಾಲತಾ ಮಂಚಿ ಇವರ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಆರ್ಥಿಕ ನೆರವನ್ನು ಚೆಕ್ ಮೂಲಕ ವಿತರಿಸಲಾಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆರ್ಚಾರ್ಯ ಗೇರುಕಟ್ಟೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಮಂಗಳೂರು ಮಂಗಳಾದೇವಿ ಘಟಕದ ಶಿವಕುಮಾರ್, ಬಂಟ್ವಾಳ ಘಟಕದ ಕಾಂತಾಡಿ ಸೀತಾರಾಮ ಶೆಟ್ಟಿ, ಪುತ್ತೂರು ಘಟಕದ ಜಿ. ಮಹಾಬಲ ರೈ ಒಳತ್ತಡ್ಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ. ವಿ ನಾರಾಯಣ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಭಟ್ ಕಯ್ಯೂರು ಪ್ರಾಸ್ತಾವಿಕ ನುಡಿಗಳಲ್ಲಿ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚೆಗೆ ನಿಧನರಾದ ಕಲಾವಿದ ಕುಂಬಳೆ ಸುಂದರ್ ರಾವ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎ.ಸಿ ಭಂಡಾರಿ , ಬಿ.ಭುಜಬಲಿ ಧರ್ಮಸ್ಥಳ , ಪುಳು ಈಶ್ವರ ಭಟ್ ,ಎಂ .ಜಯರಾಮ ಭಂಡಾರಿ ಧರ್ಮಸ್ಥಳ, ದುಗ್ಗಪ್ಪ .ಎನ್ ಪುತ್ತೂರು ವಸಂತ ಸುವರ್ಣ ಬೆಳ್ತಂಗಡಿ ,ಗಣೇಶ್ ಭಟ್ ಕುತ್ರೋಟ್ಟು ,ಬಾಲಕೃಷ್ಣ ಶೆಟ್ಟಿ ಮಂಗಳೂರು, ಭರತ್. ಕೆ ,ಗಣೇಶಾಚಾರ್ಯ ಜೆಪ್ಪು ಚಂದ್ರಶೇಖರ್ ಆಳ್ವ ಪಡುಮಲೆ, ಶ್ರೀಮತಿ ಸುಜಾತ ಆಳ್ವ ,ಶ್ರೀಮತಿ ಶಾಲಿನಿ ಶೆಟ್ಟಿ, ಶ್ರೀಮತಿ ಶೋಭಾಮಣಿ,ಶ್ರೀಮತಿ ವಾರಿಜಾ ಬೆಳ್ತಂಗಡಿ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಅನಾರು ಕೃಷ್ಣಶರ್ಮ ,  ಪ್ರೊ.ಮಧೂರು ಮೋಹನ ಕಲ್ಲೂರಾಯ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.

ಪ್ರೊ.ವೇದವ್ಯಾಸ ರಾಮಕುಂಜ ಪ್ರಾರ್ಥಿಸಿದರು. ಮಹಿಳಾ ಘಟಕದ ಸಂಚಾಲಕಿ ಶ್ರೀಮತಿ ವತ್ಸಲಾ ರಾಜ್ಞಿ ಸ್ವಾಗತಿಸಿ  ಸಹ ಸಂಚಾಲಕ ಭಾಸ್ಕರ್ ಬಾರ್ಯ ಧನ್ಯವಾದ ಅರ್ಪಿಸಿದರು. ಡಾ. ಮಹಾಲಿಂಗ ಭಟ್ ಬಿ.  ಯನ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments