Saturday, November 23, 2024
Homeಯಕ್ಷಗಾನಯಕ್ಷಗಾನದಲ್ಲಿ 'ನಾರದ'ನ ಪಾತ್ರ ಹಾಸ್ಯಗಾರರಿಗೇ ಯಾಕೆ? ಎಲ್ಲದರಲ್ಲೂ ಪ್ರಯೋಗ ಮಾಡುವ ನಾವು ಇಲ್ಲೂ ಒಂದು ಹೊಸ...

ಯಕ್ಷಗಾನದಲ್ಲಿ ‘ನಾರದ’ನ ಪಾತ್ರ ಹಾಸ್ಯಗಾರರಿಗೇ ಯಾಕೆ? ಎಲ್ಲದರಲ್ಲೂ ಪ್ರಯೋಗ ಮಾಡುವ ನಾವು ಇಲ್ಲೂ ಒಂದು ಹೊಸ ಪ್ರಯೋಗ ಯಾಕೆ ಮಾಡಬಾರದು?

ನಮ್ಮ ಪುರಾಣಲೋಕದಲ್ಲಿ ನಾರದನ ಪಾತ್ರ ಅತಿ ವಿಶಿಷ್ಟವಾದದ್ದು. ನಾರದ ಬ್ರಹ್ಮ ಮಾನಸಪುತ್ರ. ಅತಿ ಅಲ್ಪ ಸಮಯದಲ್ಲಿಯೇ ಲೋಕಸಂಚಾರವನ್ನು ಮುಗಿಸಬಲ್ಲ ಸಾಮರ್ಥ್ಯವಂತ. ಈತ ದೇವಋಷಿ.

ಆದರೆ ನಾವು ನೋಡುತ್ತಿರುವ ಕೆಲವು ಸಿನಿಮಾಗಳಲ್ಲಿ ಅಥವಾ ನಾಟಕಗಳಲ್ಲಿ ನಾರದನ ಪಾತ್ರವನ್ನು ಕೇವಲ ಹಾಸ್ಯಕ್ಕಾಗಿ ನಿಕೃಷ್ಟ ರೀತಿಯಲ್ಲಿ ಚಿತ್ರಿಸುತ್ತಿರುವುದನ್ನು ಕಾಣಬಹುದು. ಕೆಲವು ಪೌರಾಣಿಕ ಸಿನಿಮಾಗಳಲ್ಲಿ ನಾರದನ ಪಾತ್ರವನ್ನು ಹಾಸ್ಯದ ವಸ್ತುವನ್ನಾಗಿಸಿದ್ದಾರೆ. ಇನ್ನು ಟಿವಿ ಧಾರಾವಾಹಿಗಳಲ್ಲಿ ಕೂಡ ನಾರದನನ್ನು ವಿದೂಷಕನಂತೆ ಚಿತ್ರಿಸಿದ್ದಾರೆ.

ಯಕ್ಷಗಾನದಲ್ಲಿ ನಾರದನ ಪಾತ್ರವನ್ನು ಹಾಸ್ಯಗಾರರೇ ನಿರ್ವಹಿಸುತ್ತಾರೆ ಎಂಬುದು ಸರ್ವವಿದಿತ. ಅದಕ್ಕೆ ಅಪವಾದವೋ ಎಂಬಂತೆ ಹಾಸ್ಯಗಾರರ ಅನುಪಸ್ಥಿತಿಯಲ್ಲಿಯೋ ಅಥವಾ ಹಾಸ್ಯಗಾರನಿಗೆ ಇತರ ಪಾತ್ರಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿಯೂ ಕೆಲವೊಮ್ಮೆ ನಾರದನ ಪಾತ್ರವನ್ನು ಇತರ ಪಾತ್ರಧಾರಿಗಳು ನಿರ್ವಹಿಸುತ್ತಾರೆ ಎಂಬುದೂ ಸತ್ಯ. 

ಯಕ್ಷಗಾನದಲ್ಲಿಯೂ ಕೆಲವೊಮ್ಮೆ ನಾರದನ ಪಾತ್ರವು ಹಾಸ್ಯಾಸ್ಪದವಾಗಿದೆ. ಹಾಗೆಂದು ಯಕ್ಷಗಾನದಲ್ಲಿ ನಾರದನ ಪಾತ್ರವನ್ನು ಅತ್ಯುತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುವ ಹಾಸ್ಯಗಾರರು ನಮ್ಮಲ್ಲಿ ತುಂಬಾ ಮಂದಿ ಇದ್ದರು ಮತ್ತು ಈಗಲೂ ಇದ್ದಾರೆ. ಆದರೆ ಕೆಲವೊಮ್ಮೆಯಾದರೂ ನಾರದನ ಪಾತ್ರವು ಗೇಲಿಯ ವಸ್ತುವಾಗುವುದನ್ನು ನಾವು ಕಂಡಿರುವುದು ಸತ್ಯ.

ಇಲ್ಲಿಯೂ ನಾವು ಒಂದು ಪ್ರಯೋಗವನ್ನು ಮಾಡಿದರೆ ತಪ್ಪೇನಿದೆ? ಎಲ್ಲಾ ಕಡೆಯೂ ಪರಂಪರೆಯನ್ನು ಮುರಿದು ಸುಧಾರಣೆಯನ್ನು ತಂದಿದ್ದೇವೆ. “ನಾರದನ ಪಾತ್ರವು ಪರಂಪರೆಯಿಂದಲೇ ಹಾಸ್ಯಗಾರರಿಗೆ ಸೇರಿದ್ದು” ಎಂಬ ಕಟ್ಟುಕಟ್ಟಳೆಗೆ ಜೋತುಬೀಳದೆ ನಾರದನ ಪಾತ್ರವನ್ನು ಹಾಸ್ಯಗಾರರನ್ನು ಹೊರತುಪಡಿಸಿ ಇತರ ವೇಷಧಾರಿಗಳಿಗೆ ಕೊಡಬಹುದು.

ಯಾಕೆಂದರೆ ಹಾಸ್ಯಗಾರರಿಗೆ ಅವರ ವೃತ್ತಿಯಲ್ಲಿಯೂ (ಕಲೆ) ಅವರ ಸ್ವಭಾವದಲ್ಲಿಯೂ ಹಾಸ್ಯ ಇದ್ದೇ ಇರುತ್ತದೆ. ಹಾಸ್ಯ ಸ್ವಲ್ಪವಾದರೂ ಇಣುಕದೆ ಇರಲಾರದು.  ಆದುದರಿಂದ ಅವರನ್ನು ಹಾಸ್ಯ ಪಾತ್ರಗಳಿಗೆ ಹೆಚ್ಚಾಗಿ ಲಭ್ಯವಾಗುವಂತೆ ಮಾಡಿಕೊಂಡು ನಾರದನ ಪಾತ್ರವನ್ನು ಇತರ ಕಲಾವಿದರಲ್ಲಿ ಮಾಡಿಸುವ ಪ್ರಯತ್ನವನ್ನು ಮಾಡಬಹುದು.

ಯಾರೂ ಇದನ್ನು ವೈಯುಕ್ತಿಕ ಟೀಕೆಯೆಂದು ಭಾವಿಸದೆ ಕೇವಲ ಸಲಹೆ ಎಂದು ತಿಳಿಯಬೇಕಾಗಿ ವಿನಂತಿಸುವೆ. 

ಬರಹ: ಯಕ್ಷರಸಿಕ, ಮಂಗಳೂರು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments